ಅಂಕಣಗಳು

ಭಟ್ಕಳನನ್ನು ಸಮರ್ಥಿಸಿಕೊಳ್ಳುವವರು ಭಾರತೀಯರು ಹೇಗಾದಾರು?

ಭಟ್ಕಳನನ್ನು ಸಮರ್ಥಿಸಿಕೊಳ್ಳುವವರು ಭಾರತೀಯರು ಹೇಗಾದಾರು?
Published On :

ಭಟ್ಕಳ್ ಬಂಧನದ ಸುದ್ದಿ ಹರಡುತ್ತಿದ್ದಂತೆ, ಮಾಧ್ಯಮದ ಮುಂದೆ ರಾಜಾರೋಷವಾಗಿ, ತನ್ನ ಮಗನನ್ನು ಪೊಲೀಸರು ಎನ್ಕೌಂಟರ್‌ನಲ್ಲಿ ಕೊಂದು ಹಾಕಿದ್ದರು ಎಂದುಕೊಂಡಿದ್ದೆ, ಆತ ಬದುಕಿರುವುದು ಸಂತಸದ ಸಂಗತಿ. ನಮಗೆ ನ್ಯಾಯಾಲಯದ ಮೇಲೆ ನಂಬಿಕೆ ಇದೆ ಎನ್ನುವುದು ಆತನ ತಂದೆಯ ಹೇಳಿಕೆ. ಎಷ್ಟೊಂದು ಉಡಾಫೆಯಾಗಿದೆ ನೋಡಿ! ಹುಟ್ಟಿದ ಮಗು ದೇಶ ಭಕ್ತನಾಗಲಿ ಎಂದು ಭಾರತೀಯರು ಹಾಲುಣಿಸುತ್ತಾರೆ, ನಿಮ್ಮ ಮಗ ದೇಶಕ್ಕೆ ವಿಷ ಉಣಿಸಿದಾಗ ಅದು ಪ್ರಮಾದವೆಂದು ನಿಮಗನಿಸಲಿಲ್ಲವೇ? ಆತ ಅಮಾಯಕರನ್ನು ಬಲಿತೆಗೆದುಕೊಂಡಿದ್ದು, ನಿಮಗೆ ಸಂತಸ ಪಡುವ ಸಂಗತಿಯೇ? ಆತ ಅಮಾಯಕನೇ ಆಗಿದ್ದರೆ, ಆತನನ್ನು ಎನ್ಕೌಂಟರ್‌ನಲ್ಲಿ ಪೊಲೀಸರು ಕೊಂದಿದ್ದರು ಎಂದು ಭಾವಿಸಿದ್ದೇಕೆ? ಭಾರತದ ಪರಮಾಧಿಕಾರದ ವಿರುದ್ಧ ಸಂಚು ಮಾಡಿದವನನ್ನು ಸಹಿಸಿಕೊಳ್ಳುವ ನೀವು ಭಾರತೀಯರೇ? ಆತ ಭಾರತಾಂಬೆಯ ಸೀರೆ ಕಳಚ ಹೊರಟಿದ್ದಕ್ಕೆ ನಿಮ್ಮ ಸಮ್ಮತಿಯಿದೆಯೇ? ಆ ಸೀರೆ ನಿಮ್ಮ ಮನೆಯವರದ್ದೇ ಆಗಿದ್ದಿದ್ದರೆ ನೀವು ಸಹಿಸಿಕೊಳ್ಳುವಿರಾ?
ಇನ್ನು ಭಾರತದಲ್ಲಿ ತಂದೆ ತಾಯಿ ದೇವರಿಗಿಂತ ಗುರುವಿಗೆ ಶ್ರೇಷ್ಟ ಸ್ಥಾನ ನೀಡಲಾಗಿದೆ. ಅಂತಹ ಜವಾಬ್ದಾರಿಯುತ ಗುರು ಸ್ಥಾನದಲ್ಲಿರುವ ನೀವು(ಝರೀನಾಕೊಲ್) ಆತನ ಬಗ್ಗೆ ಈ ಮಾದರಿಯ ಹೇಳಿಕೆ ನೀಡುವುದೇ? ಆತ ಬಾಲ್ಯದಲ್ಲಿ ಸಜ್ಜನನೇ ಆಗಿದ್ದಿರಬಹುದು, ಆದರೆ ಪ್ರಸ್ತುತ ಆತನ ಮೇಲಿರುವ ಅಪರಾಧಗಳ ಸಂಖ್ಯೆ ಎಷ್ಟು? ಆತನ ವಿರುದ್ಧ  ಇರುವ ಅಪರಾಧಗಳ ಪರಿಣಾಮವೇನು? ಸ್ವತಃ ಆತನೇ ತನ್ನ ತಪ್ಪು ಒಪ್ಪಿಕೊಂಡಿದ್ದಾನೆ. ಅಂತಹದರಲ್ಲಿ ಆತನ ಕುರಿತು ನೀವು ನೀಡುವ ಹೇಳಿಕೆ ಸಕ್ರಮವೇ? ಆತ ಎಸೆದ ಬಾಂಬ್‌ಗೆ ನಿಮ್ಮ ಮನೆಯ ಮಕ್ಕಳು ಬಲಿಯಾಗಿದ್ದಿದ್ದರೆ, ನೀವು ಆಗಲೂ ಇದೇ ಹೇಳಿಕೆ ನೀಡುತ್ತಿದ್ದಿರಾ? ರಾಷ್ಟ್ರದ ಸಂವಿಧಾನ, ನ್ಯಾಯಾಂಗದ ವಿರುದ್ಧ ಮಸಲತ್ತು ಮಾಡಿದವನ ಪರವಾಗಿ ನಿಲ್ಲುವ ನೀವು ಯಾರಿಗೆ ಮಾದರಿಯಾಗಬಲ್ಲಿರಿ? ನಿಮ್ಮಿಂದ ಕಲಿತ ಮಕ್ಕಳು ದೇಶ ಭಕ್ತರಾಗಲು ಸಾಧ್ಯವೇ? 214 ಭಾರತೀಯರ ಪ್ರಾಣ ತೆಗೆದ, ಸುಮಾರು 40 ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಭಾಗಿಯಾದ ದೇಶದ 12 ರಾಜ್ಯಗಳಿಗೆ ಅಪರಾಧ ಪ್ರಕರಣಗಳಲ್ಲಿ ಬೇಕಾದ, ಪರೋಕ್ಷವಾಗಿ 1 ಸಾವಿರ ಜನರ ಪ್ರಾಣಹಾನಿಗೆ ಕಾರಣವಾದ, ಇಂಡಿಯನ್ ಮುಜಾಹಿದ್ದೀನ್ ಎಂಬ ಸಂಘಟನೆಯನ್ನು ಕಟ್ಟಿದ, ಈ ಹಿಂದೆ ಎರಡು ಬಾರಿ ಬಂಧನಕ್ಕೊಳಪಟ್ಟು, ತಾನು ಭಟ್ಕಳ್ ಅಲ್ಲ ಎಂದು ಪೊಲೀಸರಿಗೆ, ಭಾರತದ ನ್ಯಾಯಾಂಗ ವ್ಯವಸ್ಥೆಗೆ ಮೋಸ ಮಾಡಿದವನ ಸಮರ್ಥನೆಯೇ?
ಆತನ ವಿರುದ್ಧವಿರುವ ಪ್ರಮುಖ ಪ್ರಕರಣಗಳನ್ನೇ ನೋಡಿ: 2006 ಜುಲೈ- ಮುಂಬೈ ರೈಲು ಸ್ಫೋಟ, 2007 ನವೆಂಬರ್ 23- ಉತ್ತರ ಪ್ರದೇಶದಲ್ಲಿ ಆರು ಕಡೆ ಸರಣಿ ಬಾಂಬ್ ಸ್ಫೋಟ 15 ಸಾವು, 2008 ಮೇ 13- ರಾಜಸ್ತಾನದ ರಾಜಧಾನಿ ಜೈಪುರದಲ್ಲಿ 15 ನಿಮಿಷದಲ್ಲಿ ಒಂಬತ್ತು ಕಡೆ ಬಾಂಬ್ ಸ್ಫೋಟ, 60 ಸಾವು, 200 ಕ್ಕೂ ಹೆಚ್ಚು ಮಂದಿಗೆ ಗಾಯ, 2008 ಜುಲೈ 25- ಬೆಂಗಳೂರಿನಲ್ಲಿ 9 ಕಡೆ ಸ್ಫೋಟ, 2 ಸಾವು, 20 ಮಂದಿಗೆ ಗಾಯ, 2008 ಜುಲೈ 26 ಗುಜರಾತ್‌ನ ಅಹಮದಾಬಾದನಲ್ಲಿ 70 ನಿಮಿಷದಲ್ಲಿ 21 ಕಡೆ ಬಾಂಬ್ ಸ್ಫೋಟ, 56 ಮಂದಿ ದುರ್ಮರಣ, 200 ಕ್ಕೂ ಹೆಚ್ಚು ಜನರಿಗೆ ಗಾಯ, 2008 ಸೆಪ್ಟೆಂಬರ್ 13- ನವದೆಹಲಿಯಲ್ಲಿ 5 ಕಡೆ ಬಾಂಬ್ ಸ್ಫೋಟ, 30 ಸಾವು , 100 ಮಂದಿಗೆ ಗಾಯ, 2010 ಫೆಬ್ರವರಿ 13- ಮಹಾರಾಷ್ಟ್ರದ ಪುಣೆಯ ಜರ್ಮನ್ ಬೇಕರಿ ಸ್ಫೋಟ, 17 ಸಾವು, 60 ಕ್ಕೂ ಹೆಚ್ಚು ಜನರಿಗೆ ಗಾಯ, 2010- ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸ್ಫೋಟ, 2011 ಜುಲೈ 13- ಮುಂಬೈನ ಮೂರು ಕಡೆ ಬಾಂಬ್ ಸ್ಫೋಟ, 26 ಸಾವು 136 ಕ್ಕೂ ಹೆಚ್ಚು ಜನರಿಗೆ ಗಾಯ, 2011 ಸೆಪ್ಟೆಂಬರ್ 7- ದೆಹಲಿಯ ಹೈಕೋರ್ಟ್ ಹೊರಭಾಗದಲ್ಲಿ ಬಾಂಬ್ ಸ್ಫೋಟ, 12 ಸಾವು ಇಷ್ಟೇ ಅಲ್ಲದೆ ಭಟ್ಕಳನಿಂದ ಸಂವಿಧಾನದ 14 ನೇ ವಿಧಿ( ಕಾನೂನಿನ ಮುಂದೆ ಎಲ್ಲರೂ ಸಮಾನರು), 19 ನೇ ವಿಧಿ( ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು, 25-28 ನೇ ವಿಧಿ (ಧಾರ್ಮಿಕ ಹಕ್ಕು ಹಾಗೂ ಕ್ರಿಮಿನಲ್ ನಿಯಮಗಳ ಉಲ್ಲಂಘನೆಯಾಗಿವೆ.)
ಶ್ರೀಶ್ರೀಶ್ರೀ
ಈತ ಕಸಬ್, ಅಫ್ಜಲ್‌ಗಿಂತಲೂ ಕ್ರೂರಿ ಎನ್ನುವುದರಲ್ಲಿ ಸಂಶಯವಿಲ್ಲ. ಈ ಮಣ್ಣಿನ ವಾಸನೆ ಅರಿಯದ, ಈ ನಾಡಿನ ಜಾತ್ಯತೀತ ನಿಲುವು ತಿಳಿಯದ, ಜನರ ಮನೋಧರ್ಮದ ಮಿಡಿತ ಗುರುತಿಸದ, ಈ ರಾಷ್ಟ್ರದ ಶಾಂತಿ ಧ್ಯೇಯದ ಕುರುಹು ಗುರುತಿಸದ ಕಸಬ್, ಅಫ್ಜಲ್ ಗುರುನಂತಹ ಅಂತಾರಾಷ್ಟ್ರೀಯ ಭಯೋತ್ಪಾದಕರು, ಭಾರತದ ಮೇಲೆ ದಾಳಿ ನಡೆಸುವುದು ಸಹಜವೆನಿಸುತ್ತದೆ. ಆದರೆ ಈ ಮಣ್ಣಿನ ಮಗನಾದ ನೀನು, ಈ ತಾಯಿಯ ಒಡಲ ಬಗೆದಿದ್ದನ್ನು ಯಾವ ದೇವರು ತಾನೆ ಕ್ಷಮಿಸಿಯಾನು?
ಭಾರತ ಸಂವಿಧಾನವು 72 ನೇ ವಿಧಿಯಲ್ಲಿ ಅಮಾಯಕರು ಕಾರಣಾಂತರ ಶಿಕ್ಷೆಗೆ ಒಳಗಾಗಿದ್ದರೆ, ಅಂತಹವರ ರಕ್ಷಣೆಗೆ ಕ್ಷಮಾದಾನವೆಂಬ ನಿಯಮವನ್ನು ರೂಪಿಸಿದೆ. ರಾಷ್ಟ್ರಪತಿಗಳು ಈ ವಿಧಿಯ ಅನ್ವಯ ಹಾಗೂ 161 ನೇ ವಿಧಿಯ ಅನ್ವಯ ರಾಜ್ಯಪಾಲರು ಕ್ಷಮಾಧಾನವನ್ನು ನೀಡಬಹುದಾಗಿದೆ. ಆದರೆ ಅತ್ಯಾಚಾರಿಗಳು, ಕೊಲೆಗಡುಕರು, ಭಯೋತ್ಪಾದಕರು ಈ ವಿಧಿಯಡಿಯಲ್ಲಿ ಕ್ಷಮಾಧಾನಕ್ಕೆ ಅರ್ಜಿ ಸಲ್ಲಿಸುವುದರಲ್ಲಿ ಅರ್ಥವಿದೆಯೇ? ಇಂತಹ ಕ್ರೂರಿಗಳಿಗೆ ಕ್ಷಮಾದಾನ ನೀಡುವುದು ಸಂವಿಧಾನ ರಚನಾಕಾರರ ಆಶಯವಾಗಿತ್ತಾ?
ಯಾಸಿನ್ ಭಟ್ಕಳ್, ತುಂಡಾರಂತಹವರು ಕ್ಷಮಾದಾನಕ್ಕೆ ಅರ್ಜಿ ಸಲ್ಲಿಸುವ ಅವಕಾಶವಿರುವುದರಿಂದ ಈ ಕೂಡಲೇ ಈ ವಿಧಿಗೆ 368 ನೇ ವಿಧಿಯ ಅನ್ವಯ ತಿದ್ದುಪಡಿ ತರುವುದು ಔಚಿತ್ಯ. (ಇದು ಸಂಸತ್ತಿನ ಸಾಮಾನ್ಯ ತಿದ್ದುಪಡಿಯಲ್ಲಿ ಬರುತ್ತದೆ. ಅಂದರೆ ಉಭಯ ಸದನಗಳ 2-3 ರಷ್ಟು ಬಹುಮತ ಮಾತ್ರ.  ರಾಜ್ಯಗಳ ಅನುಮೋದನೆ ಬೇಕಾಗಿರುವುದಿಲ್ಲ.)
ಸಂವಿಧಾನದ ಎರಡನೇ ಭಾಗ 5-11 ನೇ ವಿಧಿಗಳು ಪೌರತ್ವದ ಬಗ್ಗೆ ತಿಳಿಸುತ್ತವೆ. ಈ ವಿಧಿಗಳಲ್ಲಿ ರಾಷ್ಟ್ರದ ಪರಮಾಧಿಕಾರದ ವಿರುದ್ಧ ಕಾರ್ಯಾಚರಣೆ ಕೈಗೊಳ್ಳುವವರ, ಪೌರತ್ವ ಕಸಿದುಕೊಳ್ಳುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ. ಯಾಸಿನ್‌ನ ಮೇಲಿನ ಆರೋಪಗಳು ರಾಷ್ಟ್ರದ ಪರಮಾಧಿಕಾರದ ಆಯಾಮಗಳನ್ನು ಶಿಥಿಲಗೊಳಿಸಿರುವುದನ್ನು ಪುಷ್ಟೀಕರಿಸುವುದರಿಂದ ಆತನ ಪೌರತ್ವ ಕಸಿದುಕೊಳ್ಳುವುದು ಸೂಕ್ತ. ಆತನನ್ನು ಬೆಂಬಲಿಸುವವರ ವಿರುದ್ಧ ಸುಪ್ರೀಂ ಕೋರ್ಟ್ ತನ್ನ ನ್ಯಾಯಿಕ ವಿಮರ್ಶಾಧಿಕಾರ ಹಾಗೂ ನ್ಯಾಯಿಕ ವಿವೇಚನಾಧಿಕಾರದ ಅನ್ವಯ(32 ನೇ ವಿಧಿ) ಮೊಕದ್ದಮೆಗಳನ್ನು ಸ್ವಯಂ ಪ್ರೇರಿತವಾಗಿ ಹೂಡಬಹುದಾಗಿದೆ. (ಅವರ ಪೌರತ್ವ ಕಸಿದುಕೊಳ್ಳಲು ಅವಕಾಶವಿದೆ.)
ಈತನ ವಿರುದ್ಧದ ಪ್ರಕರಣಗಳನ್ನು ವಿಶೇಷ ನ್ಯಾಯಾಲಯ ಘಟಕಗಳ ಮೂಲಕ ಅತ್ಯಂತ ಶೀಘ್ರವಾಗಿ ಮುಕ್ತಾಯಗೊಳಿಸಿ, ವಿಳಂಬಕ್ಕೆ ಅವಕಾಶವಿಲ್ಲದಂತೆ ಎಚ್ಚರ ವಹಿಸಿ, ಅತ್ಯಂತ ಶೀಘ್ರ ಕಾಲಘಟ್ಟದಲ್ಲಿ ಈತನಿಗೆ ಶಿಕ್ಷೆ ವಿಧಿಸುವ ಮೂಲಕ ಭಾರತದ ಆಂತರಿಕ ಪರಮಾಧಿಕಾರಕ್ಕೆ ಧಕ್ಕೆ ತರುತ್ತಿರುವ ಭಯೋತ್ಪಾದಕರು ಹಾಗೂ ಪಾಕಿಸ್ತಾನಕ್ಕೆ ಎಚ್ಚರಿಕೆಯ ಕರೆಗಂಟೆ ನೀಡಬೇಕಾದ ಅನಿವಾರ್ಯತೆ ಇದೆ. ಆ ಮೂಲಕ ಆತನಿಂದ ಹತರಾದ ಮುಗ್ಧ ಭಾರತೀಯರಿಗೆ ದ್ಯೋತಕ ಶ್ರದ್ಧ್ದಾಂಜಲಿ ಸಲ್ಲಿಸಬೇಕಾದ ಅನಿವಾರ್ಯತೆ ಇದೆ. ಸ್ಫೋಟಗಳು ನಡೆಯುತ್ತಲೇ ಇರುತ್ತವೆ ಆದರಲ್ಲಿ ಹೊಸತೇನಿದೆ ಎಂದು ಹೇಳುವ ಮೂಲಕ ಭಾರತದ ವಿರುದ್ಧ ಆಂದೋಲನ ಚಿರವಾಗಿರುತ್ತದೆ ಎಂಬ ಆಶಯ ವ್ಯಕ್ತಪಡಿಸುವ ದೇಶದ್ರೋಹಿಯ ಗಲ್ಲು ಶಿಕ್ಷೆ ನಿರೀಕ್ಷೆಯಲ್ಲಿದ್ದೇವೆ.


-ಸುಧಾಕರ ಹೊಸಳ್ಳಿ
ಕರ್ನಾಟಕ ರಾಜ್ಯ ಮುಕ್ತ ವಿವಿ
ಕಾರವಾರ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.