ಕನ್ನಡದ ಎಮ್ಮೆಯ ಆರ್ತ ಪ್ರಾರ್ಥನ್ಙೆ
ಮುಂದಿನ ಎಮ್ಮೆಜನ್ಮ ಏನಾದ್ರೂ ಇದ್ರೆ ನಾನು ಉತ್ತರ ಪ್ರದೇಶದ ಪುಣ್ಯಭೂಮಿಯಲ್ಲೇ ಹುಟ್ಟಬೇಕು ಹಾಗೂ ಉತ್ತರ ಪ್ರದೇಶದ ಸಮಾಜವಾದಿ ಧುರೀಣ ಅಜಮ್ ಖಾನ್ನ ಕೊಟ್ಟಿಗೆಯನ್ನೇ ಸೇರಬೇಕು ಅಂದಿದೆ ಕನ್ನಡದ ಎಮ್ಮೆ!
ವಾಂ.... ಆಂಂವ್.....
ನಾನು ಕನ್ನಡದ ಎಮ್ಮೆ. ಇಲ್ಲಿಲ್ಲ, ಸ್ಪೆಲ್ಲಿಂಗ್ ಮಿಸ್ಟೇಕ್ ಏನೂ ಇಲ್ಲಾರಿ! ಕನ್ನಡದ 'ಉಟ್ಟು ಓರಾಟಗಾರ'ನ್ಯಾರೋ ತಾನು ಕನ್ನಡದ ಹೆಮ್ಮೆ ಎಂದು ಹೇಳುವುದಕ್ಕೆ ಬದಲಾಗಿ ಎಮ್ಮೆ ಎಂದು ಹೇಳುತ್ತಿದ್ದಾನೆ ಅಂದುಕೊಳ್ಳುವುದು ಬೇಡ. ನಿಜಕ್ಕೂ ಕನ್ನಡದ ಎಮ್ಮೆಯೇ ಮಾತಾಡುತ್ತಿರುವುದು. ಥೋ... ಡಿಗ್ರಿ ಎಮ್ಎ ಅಲ್ಲಾ ಮಾರಾಯ್ರೆ, ಕೊಟ್ಟಿಗೆ ಎಮ್ಮೆಯೇ ಮಾತಾಡ್ತಿರೋದು.
ಅರೇ... ಎಮ್ಮೆಗೆ ಮಾತು ಹೆಂಗೆ ಬಂತು? ಇಷ್ಟೆಲ್ಲ ಚೌಕಾಶಿ ಮಾಡುವ ಬುದ್ಧಿ ಹೇಗೆ ಬಂತು? ಅಂತೆಲ್ಲ, ನಿಮಗೆ ಮಾತ್ರ ಬುದ್ಧಿ ಇರೋವ್ರ ಥರ ಯೋಚನೆ ಮಾಡ್ತ ಕುಳಿತುಕೊಳ್ಳದೇ, ರಾಹುಲ್ ಗಾಂಧಿಯವರ ಥರ 'ಸೆಂಟ್ರಲ್ ಕ್ವೆಶ್ಚನ್' ಏನು ಅಂತ ನೇರವಾಗಿ ಗಮನಹರಿಸಿ.
ನಾನು ಡಿಸೈಡ್ ಮಾಡಿ ಬಿಟ್ಟಿದೀನ್ರಿ. ಮುಂದಿನ ಎಮ್ಮೆಜನ್ಮ ಏನಾದ್ರೂ ಇದ್ರೆ ನಾನು ಉತ್ತರ ಪ್ರದೇಶದ ಪುಣ್ಯಭೂಮಿಯಲ್ಲೇ ಹುಟ್ಟಬೇಕು ಹಾಗೂ ಉತ್ತರ ಪ್ರದೇಶದ ಸಮಾಜವಾದಿ ಧುರೀಣ ಅಜಮ್ ಖಾನ್ನ ಕೊಟ್ಟಿಗೆಯನ್ನೇ ಸೇರಬೇಕು ಅಂತ! ಈ ಕರ್ನಾಟಕ, ದಕ್ಷಿಣ ಭಾರತದ ಬವಣೆಯೇ ಸಾಕು. ಇಲ್ಲಿ ಎಮ್ಮೆ ಅಂದರೆ ಅಷ್ಟಕ್ಕಷ್ಟೆ. ಸಾಕಲ್ಲ ಅಂತೇನಲ್ಲ. ಆದ್ರೂ ಒಂದೇ ಕೊಟ್ಟಿಗೆಯಲ್ಲಿ ದನಕ್ಕಿರುವ ಮರ್ಯಾದೆ ನಮಗಿಲ್ಲ. ನಾವೂ ಹಾಲು ಕೊಡೋ ಜಾತಿ. ಆದರೆ ನಮ್ಮ ಮೇಲಿನ ಜನಾಂಗೀಯ (ದನಾಂಗೀಯ?) ತಾರತಮ್ಯಕ್ಕೆ ಮಾತ್ರ ಕೊನೆಯಿಲ್ಲ. ಹಸುಗಳಿಗೆಲ್ಲ ತುಂಗೆ, ಕಪಿಲೆ, ಬೆಳ್ಳಿ, ಗಂಗೆ ಅಂತೆಲ್ಲ ಹೆಸರು-ಗೌರವ. ನಾವು ಕೊಟ್ಟಿಗೆಯಲ್ಲಿ ಎಷ್ಟೇ ಸಂಖ್ಯೆಯಲ್ಲಿದ್ದರೂ ಸಾರಾಸಗಟಾಗಿ 'ಎಮ್ಮೆಗೊಡ್ಡು' ಅಂತಲೇ ಕರೆಸಿಕೊಳ್ಳುತ್ತೇವೆ. ಈ ಮನುಜರು ತಮ್ಮ ಆಲಸೀತನವನ್ನು ದೂಷಿಸುವಾಗಲೂ ನಮ್ಮ ಹೆಸರನ್ನೇ ಪುಕ್ಕಟೆ ಕೆಡಿಸುತ್ತಾರೆ. 'ಒಳ್ಳೇ ಎಮ್ಮೆಗೊಡ್ಡಿನ ಥರ ಬಿದ್ಕೊಂಡಿದೀಯಲ್ಲೋ...' 'ಅವನಿಗೆ ಏನೂ ತಾಗೋದೆ ಇಲ್ಲ, ಎಮ್ಮೆಚರ್ಮ', 'ಮಹಾ ಬುದ್ಧು ಮಾರಾಯಾ ಅವ್ನು, ಏನ್ ಹೇಳಿದ್ರೂ ಎಮ್ಮೆ ಮೈಮೇಲೆ ಮಳೆ ಹೊಯ್ದಂಗೆ'... ಹೀಗೆ ಕಂಡಕಂಡವರೆಲ್ಲ ನಮ್ಮ ಜನ್ಮ ಜಾಲಾಡುವುದರಲ್ಲೇ ಮಜ ತೆಗೆದುಕೊಳ್ಳುತ್ತಾರೆ.
ಈಗ ನಮ್ಮ ಎಮ್ಮೆ ಸಮೂಹಕ್ಕೊಬ್ಬ ಧೀಮಂತ ನಾಯಕ ಸಿಕ್ಕಿದ್ದಾನೆ ಎಂದು ಹೇಳುವುದಕ್ಕೆ ಗರ್ವವಾಗುತ್ತದೆ. ಉತ್ತರ ಪ್ರದೇಶದ ಸಮಾಜವಾದಿ ಮುಖಂಡ ಅಜಮ್ ಖಾನನೇ ನಮ್ಮ ಧೀರಾದಿಧೀರ ನೇತಾರ. ಆತ ಎಮ್ಮೆಗಳೂ ನಮ್ಮಂತೆಯೇ ಅಂದುಕೊಂಡಿದ್ದಾನೋ ಅಥವಾ ತಾನೂ ಎಮ್ಮೆಗಳ ಲೆವಲ್ನವನು ಎಂಬ ಹೆಮ್ಮೆಯಲ್ಲಿದ್ದಾನೋ ನಮಗದು ಬೇಕಿಲ್ಲ. ಆದರೆ ಅವನ ರಾಜ್ಯದಲ್ಲಿ ಮನುಷ್ಯರಿಗಿರುವ ಕಿಮ್ಮತ್ತು- ಸುರಕ್ಷತೆಗಿಂತ ನಮ್ಮನ್ನು ಒಂದು ಪಟ್ಟು ಮೇಲಿರಿಸಿ ನಮ್ಮೆಲ್ಲರ ಮನ ಗೆದ್ದಿರುವುದಂತೂ ದಿಟ. ನಿಮಗೆ ಕತೆ ಗೊತ್ತಿಲ್ಲದಿದ್ದರೆ ಕೇಳಿಸಿಕೊಳ್ಳಿ. ಉ.ಪ್ರ.ದ ಪ್ರಭಾವಿ ರಾಜಕಾರಣಿಯಾದ ಅಜಮ್ ಖಾನರ ಫಾರ್ಮ್ಹೌಸ್ನಿಂದ ಮೊನ್ನೆ ಅವರ ಏಳು ಎಮ್ಮೆಗಳು ಕಾಣೆಯಾಗಿಬಿಡುತ್ತವೆ. ನಮ್ಮವರಾದರೆ ಕೆಲಸಕ್ಕೆ ಬರದ ಜ್ಯೋತಿಷಿಗಳ ಬಳಿ ಅಂಜನ ಹಚ್ಚಿಸಿ ಎಮ್ಮೆ ಮುಂಡೇವು ಹೋಗಿದ್ದೆಲ್ಲಿಗೆ ಅಂತ ಕೇಳುತ್ತಿದ್ದರು. ವಾರ ಕಳೆದರೂ ಸಿಗದಿದ್ದರೆ ಲೋಕಲ್ ಪೇಪರ್ನಲ್ಲಿ 'ಎಮ್ಮೆ ಕಳೆದಿದೆ' ಅಂತೊಂದು ಜಾಹೀರಾತು ಕೊಡುತ್ತಿದ್ದರು. ಆದರೆ ನಮ್ದೂಕಿ ಅಜಮ್ ಖಾನ್ದು ಸ್ಟೈಲೇ ಬೇರೆ ಕಣ್ರೀ. ಎಮ್ಮೆ ಕಳೆದಿದ್ದು ಗೊತ್ತಾಗುತ್ತಲೇ ಸುಪರಿಂಟೆಂಡೆಂಟ್ ಆಫ್ ಪೊಲೀಸ್ ಸದ್ನಾ ಗೋಸ್ವಾಮಿ ನೇತೃತ್ವದಲ್ಲಿ ಎಮ್ಮೆಗಳನ್ನು ಹುಡುಕುವುದಕ್ಕೆ ನುರಿತ ಪೊಲೀಸ್ ತಂಡವೊಂದು ಕಾರ್ಯಾಚರಣೆಗೆ ಧುಮುಕಿತು! ಕರ್ತವ್ಯ ಲೋಪದ ಆಧಾರದಲ್ಲಿ ಮೂವರು ಪೊಲೀಸರನ್ನು ಮನೆಗೆ ಕಳುಹಿಸಲಾಯಿತು. ಮೂಸು ನಾಯಿಗಳು ಎಮ್ಮೆ ಹುಡುಕಾಟಕ್ಕೆ ರಂಗಕ್ಕಿಳಿದವು. ಅಜಮ್ ಖಾನರ ಕ್ಷೇತ್ರವಾದ ರಾಮ್ಪುರದಲ್ಲಿ ಅಂಥದೊಂದು ಪೊಲೀಸು ಕಾರ್ಯಾಚರಣೆ ಇತಿಹಾಸದಲ್ಲೇ ನಡೆದಿರಲಿಲ್ಲ. ಕಳ್ಳತನಗಳಾದಾಗ, ಮಹಿಳೆಯರ ಮೇಲೆ ಅತ್ಯಾಚಾರಗಳಾದಾಗ, ಕೊಲೆಗಳಾದಾಗ ಯಾವತ್ತೂ ಪೊಲೀಸರ ಮೇಲೆ ಇಂಥ ಒತ್ತಡ ಬಿದ್ದಿದ್ದಿಲ್ಲ. ಏಳು ಎಮ್ಮೆಗಳ ಮೇಲೆ ಅಜಮ್ ಖಾನ್ ಮೆರೆದ ಪ್ರೀತಿ, ಸುವರ್ಣಾಕ್ಷರಗಳಲ್ಲಿ ಬರೆದಿಡುವಂಥದ್ದು. ನಮಗೇಕೊ ಈ ಅಜಮ್ ಖಾನ್ ಬರೀ ಮನುಷ್ಯನಲ್ಲ, ನಮ್ಮ ಕುಟುಂಬಸ್ಥ ಎನ್ನಿಸುತ್ತಿದೆ!
ಹತ್ತಿರದ ಕಸಾಯಿಖಾನೆಗಳ ಸಿಸಿಟಿವಿ ದೃಶ್ಯಗಳನ್ನೆಲ್ಲ ತರಿಸಿಕೊಂಡು ಎಮ್ಮೆಗಳ ಸುರಕ್ಷತೆ ಖಾತ್ರಿ ಮಾಡಿಕೊಂಡ. ಮುಜಪ್ಫರನಗರದ ದಂಗೆಗೆ ಸಿಕ್ಕ ಮಂದಿ ಚಳಿಯಲ್ಲಿ ಸತ್ತರೇನಾಯ್ತು, ತನ್ನ ಏಳು ಎಮ್ಮೆಗಳು ಪತ್ತೆಯಾಗುವವರೆಗೆ ಸರ್ಕಾರಿ ಯಂತ್ರದ ಮಂದಿಯನ್ನು ಅಂಡು ತುರಿಸಿಕೊಳ್ಳುವುದಕ್ಕೂ ಬಿಡದಂತೆ ನೋಡಿಕೊಂಡ ಅಜಮ್ಖಾನ್.
ನನ್ನನ್ನೂ ಅಜಂಖಾನ್ನ ಕೊಟ್ಟಿಗೆಯ ಕರುವಾಗಿಸು ದೇವರೇ...
-ಅಶ್ವಹೃದಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

