ಅಂಕಣಗಳು

ಜ್ಞಾನಪೀಠಕ್ಕೆ ಜೋತು ಬೀಳದೆ ಕನ್ನಡ ಕಟ್ಟುವ ಕೆಲಸವಾಗದೇ?

ಜ್ಞಾನಪೀಠಕ್ಕೆ ಜೋತು ಬೀಳದೆ ಕನ್ನಡ ಕಟ್ಟುವ ಕೆಲಸವಾಗದೇ?
Published On :

ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಶಾಲೆಯ ಗೋಡೆಯನ್ನು ಅಲಂಕರಿಸಿರುವ ಕನ್ನಡದ ಪ್ರಮುಖ ಸಾಹಿತಿಗಳು. ಜ್ಞಾನಪೀಠವೇ ಸರ್ವಶ್ರೇಷ್ಠ ಎಂಬುದಕ್ಕೆ ಹೊರತಾದ ಮಾದರಿ.                       (ಚಿತ್ರಕೃಪೆ: ಚಂದ್ರಶೇಖರ ದಾಮ್ಲೆ)

ದಿನಾಂಕ 08.02.2013 ರಂದು ಕೊಪ್ಪಳದಲ್ಲಿ ಕನ್ನಡದ ಖ್ಯಾತ ಕಾದಂಬರಿಕಾರರಾದ ಕುಂ. ವೀರಭದ್ರಪ್ಪನವರು ಮಾತನಾಡುತ್ತಾ ಜ್ಞಾನಪೀಠ ಪುರಸ್ಕೃತರಲ್ಲಿ ಹಲವರ ಮೌಲ್ಯಗಳ ವಿರುದ್ಧ ಕೆರಳಿದ್ದು ಕನ್ನಡ ಸಾಹಿತ್ಯ ಲೋಕದ ಸತ್ಯದ ವಿಚಾರವೇ ಹೌದು. ನಾಡಿನ ಭಾಷೆ ಸಂಸ್ಕೃತಿ ಸತ್ಯ ಇತಿಹಾಸವನ್ನು ನೂರಾರು ವರ್ಷಗಳಿಗೆ ಕೊಂಡೊಯ್ಯಬೇಕಾದ ಗುರುತರ ಜವಾಬ್ದಾರಿ ಹೊಂದಿರುವ ಕನ್ನಡ ಸಾರಸ್ವತ ಲೋಕದ ಪುತ್ರರು ಸರ್ಕಾರದ ಗೋತ್ರಗಳಂತಾಗುತ್ತಿದ್ದಾರೆ. ಇವರ ಖ್ಯಾತಿಗಳನ್ನು ನಿರ್ಧರಿಸಬೇಕಾದ ಕನ್ನಡ ಓದುಗರು ಇವರನ್ನು ಎಂದೋ ಹಿಂದಕ್ಕೆ ನೂಕಿದ್ದಾರೆ. ಇಂತಹವರು ಸರ್ಕಾರದ ಕೃಪಾಕಟಾಕ್ಷ ಪಡೆದು ಬರೀ ಫೋಟೋ ಸೇರಿಹೋಗಿದ್ದಾರಷ್ಟೆ. ಇತ್ತೀಚೆಗೆ ಕನ್ನಡದ ಸಾರಸ್ವತ ಲೋಕವು ಸರ್ಕಾರದ ಅಧೀನದಲ್ಲಿ ಸಾಗುತ್ತಾ ಹೊಲಸೆದ್ದು ಹೋಗುತ್ತಿದೆ.
'ಇಂದೂ ಮುಂದು ಎಂದೆಂದೂ ಕನ್ನಡಿಗರು, ವೀರಕನ್ನಡಿಗರು ಸದಾ ಸ್ಮರಿಸಬೇಕಾದದ್ದು' ಕನ್ನಡ ಕುಲಪುರೋಹಿತ ಎಂದೆನಿಸಿರುವ ಕರ್ನಾಟಕದ ಸಮಗ್ರ ಇತಿಹಾಸವನ್ನು ಸಂಗ್ರಹಿಸಿಕೊಟ್ಟ ಕರ್ನಾಟಕ ಗತವೈಭ ಬರೆದ ಆಲೂರು ವೆಂಕಟರಾಯರನ್ನು. ಅವರು ತಮ್ಮ ಕರ್ನಾಟಕ ಗತವೈಭವದಲ್ಲಿ (1914) ಒಂದು ಸಾಲನ್ನು ಹೇಳಿದ್ದಾರೆ ನಮ್ಮ ಆಶಾವೃಕ್ಷವನ್ನು ಕೊಳೆಯಿಸಿಬಿಡುವಂತಹ ಹುಳುಗಳನ್ನು ಕೊಲ್ಲಲು ನಮ್ಮ ಇತಿಹಾಸವೇ ಮದ್ದು ಎಂದು.
ಕನ್ನಡದ ಜ್ಞಾನಪೀಠ ಪುರಸ್ಕೃತರಲ್ಲಿ ಇಬ್ಬರ ನಡೆಗಳು ಆಗೀಗ ಚರ್ಚೆಗೆ ಗ್ರಾಸವಾಗುತ್ತಲೇ ಬಂದಿವೆ. ಇವರುಗಳಿಗೆ ಪಠ್ಯದಲ್ಲಿ ಈ ದೇಶದ ಹೆಮ್ಮೆಯ ಭಗವದ್ಗೀತೆಯನ್ನು ಅಳವಡಿಸಿ ಸನ್ಮಾರ್ಗದಲ್ಲಿ ಮಕ್ಕಳನ್ನು ಸುಶಿಕ್ಷಿತಗೊಳಸಿದರೆ ಸಹಿಸಲಸಾಧ್ಯ. ಸರ್ಕಾರಿ ಕಚೇರಿಗಳಲ್ಲಿ ಹಿಂದೂ ಧಾರ್ಮಿಕ ಹಬ್ಬ ಆಚರಿಸುವುದು ತಪ್ಪು, ಶಾಲಾ ಮಕ್ಕಳಿಗೆ ಶೈಕ್ಷಣಿಕ ಪ್ರವಾಸದಲ್ಲಿ ಜಾತಿಭೇದಭಾವ ಏರ್ಪಡಿಸುವುದು ಸರಿ. ರಾಷ್ಟ್ರೀಯ ಹಬ್ಬಗಳಲ್ಲಿ ಗಾಂಧೀಜಿಯೊಂದಿಗೆ ಭಾರತಮಾತೆಯ ಪಟವಿಟ್ಟು ಪೂಜಿಸುವುದು ತಪ್ಪು, ವಂದೇಮಾತರಂ ಹಾಡಿದರೆ ಮೈಲಿಗೆ. ಅಲ್ಲೇ ಡ್ರಾ ಅಲ್ಲೇ ಬಹುಮಾನವೆಂಬಂತೆ ದೇಶದ್ರೋಹಿಯ ಬಗ್ಗೆ ಆಧುನಿಕ ಕಾಲ್ಪನಿಕ ಪುಸ್ತಕ ಬರೆದು ಪ್ರಶಸ್ತಿ ಗಿಟ್ಟಿಸುವುದು ಸರಿ. ಗೋವು ಸತ್ತು ಹೆಣವಾದನಂತರಕ್ಕಿಂತಲೂ ಅದರ ಜೀವಿತಾವಧಿಯ ಲಾಭ ಹೆಚ್ಚು. ಆದರೆ ಇವರಿಗೆ ಗೋಹತ್ಯೆ ಮಾತ್ರ ತಡೆಯಬಾರದು. ಕ್ಷೀರಭಾಗ್ಯ ಮಾತ್ರ ಜಾರಿಯಾಗಬೇಕು. ಒಂದೆಡೆ ಹಿಂದೂಗಳನ್ನು ಕೊಲ್ಲುತ್ತಿರುವ ಭಯೋತ್ಪಾಧನೆ ಮತ್ತೊಂದೆಡೆ ಹಿಂದೂ ಧರ್ಮವನ್ನೇ ಕೊಲ್ಲುತ್ತಿರುವ ಸೌಮ್ಯಮತಾಂತರ. ಇವೆರಡಕ್ಕೂ ಕನಿಷ್ಠ ಧಿಕ್ಕಾರವನ್ನೂ ಹಾಕಲಾಗದ ಸರ್ಕಾರಿ ಪೋಷಿತ, ಅನುದಾನಿತ, ಪಿಂಚಣಿ ಆಕೃತಿಗಳು. ನೈತಿಕತೆ ಇಲ್ಲದ ಜೀವನ ಆತ್ಮಹತ್ಯೆಗೆ ಸಮಾನ ಎಂಬ ಮಾತಿದೆ. ಇವರುಗಳನ್ನು ಕನ್ನಡದ ಕಬ್ಬಿಗ ಎನ್ನುವುದಕ್ಕಿಂತಲೂ ಕೊಬ್ಬಿಗ ಎಂದರೆ ಅದು ಖಂಡಿತವಾಗಿಯೂ ಕುಚೋದ್ಯವಲ್ಲ.  
ಇನ್ನು ಪ್ರತಿವರ್ಷ ನಡೆಸಲಾಗುವ ಕನ್ನಡ ಸಾಹಿತ್ಯ ಸಮ್ಮೇಳನವು ಅಡ್ಡಪಲ್ಲಕ್ಕಿ ಉತ್ಸವದಂತೆ ಆಗುತ್ತಿದೆ. ಸಮ್ಮೇಳನಾಧ್ಯಕ್ಷರ ಆಯ್ಕೆಯ ವಿಚಾರವು ರಾಜಕೀಯಕ್ಕಿಂತಲೂ ಹೀನಾಯವಾಗಿ ಅಸಂಬದ್ಧ ವಾದವಿವಾದಗಳ ಸಂತೆಯಾಗುತ್ತಿದೆ. ಇದರ ಅವಾಂತರ ಮತ್ತು ಅಪಮಾನಗಳನ್ನು ಕಂಡು ಮನನೊಂದ 83ರ ಹಿರಿಯ ಜೀವಿ ಡಾ. ಚಿದಾನಂದ ಮೂರ್ತಿಗಳು ತಮ್ಮನ್ನು ಸಮ್ಮೇಳನಾಧ್ಯಕ್ಷರ ಆಯ್ಕೆಯ ಪಟ್ಟಿಗೆ ಎಂದಿಗೂ ಸೇರಿಸಬಾರದೆಂದು ಎಚ್ಚರಿಕೆ ನೀಡಿದ್ದಾರೆ. ಆದರೆ ಇವತ್ತಿಗೂ ಅವರ ಕನ್ನಡ ಮತ್ತು ಸಂಸ್ಕೃತಿಯ ಉಳಿವಿನ ಹಾದಿಯಾಗಿನ ಸಂಶೋಧನೆ ಇಂದಿಗೂ ಚಿಗುರೊಡೆದು ಸತ್ಯ ಇತಿಹಾಸವನ್ನು ಸಾರುವಂತೆ ಪ್ರೇರೇಪಿಸುತ್ತಿದೆ.  
 ಫೋಟೋ ಸೇರಿರುವ ಕೆಲವು ಪೀಠಸ್ಥರಿಗಿಂತ, ಲಾಬಿಗಳಿಗಿಂತ ಬಿ.ಎಂ.ಟಿ.ಸಿ ಬಸ್ ನಿರ್ವಾಹಕರನೇಕರು ಮತ್ತು ಆಟೋ ಚಾಲಕರು, ಸರ್ಕಾರಿ ನೌಕರರು ಅನೇಕ ವರ್ಷಗಳಿಂದ ಕನ್ನಡ ಅಂಕಿಗಳನ್ನೇ ಬಳಸುತ್ತಾ, ಅಚ್ಚ ಕನ್ನಡವನ್ನೇ ಮಾತನಾಡುತ್ತಾ, ತಮ್ಮ ಬಸ್‌ಗಳಲ್ಲಿ  ಆಟೋಗಳಲ್ಲಿ ಕಚೇರಿಗಳಲ್ಲಿ ಕನ್ನಡ ಇತಿಹಾಸ ಪುರುಷರನ್ನು ಮೆರೆಸುತ್ತಾ ತಮ್ಮ ಭಾಷಾಭಿಮಾನವನ್ನು ಪ್ರದರ್ಶಿಸುವ ಸಾಮಾನ್ಯನೇ ನಿಜವಾದ ಕನ್ನಡಿಗ ಎನಿಸುತ್ತಾನೆ. ಇಂತವರನ್ನು ಹುರಿದುಂಬಿಸಬೇಕಾದ ಅಗತ್ಯತೆ ಇದೆ.
ಇಂದು ಕನ್ನಡ ಸಾಹಿತ್ಯ ಸಮ್ಮೇಳದ ಆಚರಣೆಯ ಸ್ವರೂಪವನ್ನೇ ಬದಲಿಸಬೇಕಾದ ಅವಶ್ಯಕತೆ ಇದೆ. ಎಂದೋ ಮರೆತು ಹೋದ ನಿವೃತ್ತ ಸಾಹಿತಿಗಳನ್ನು ಮೆರವಣಿಗೆ ಮಾಡುವುದಕ್ಕಿಂತ ಇತ್ತೀಚೆಗೆ ವರ್ಷವೊಂದರಲ್ಲಿ ಯಾವ ಸಾಹಿತಿಯ ಕನ್ನಡ ಪುಸ್ತಕ ಹೆಚ್ಚು ಓದುಗರನ್ನು ಸೆಳೆದಿದೆ, ಯಾವ ಸಾಮಾನ್ಯ ಕನ್ನಡಿಗನೊಬ್ಬ ಕನ್ನಡ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ್ದಾನೆ, ಯಾವ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಸಂಪೂರ್ಣವಾಗಿ ಕನ್ನಡದಲ್ಲಿ ಕಲಿತು ಭಾಷೆಯನ್ನು ಮೆರೆಸಿದ್ದಾನೋ ಅಂತಹ ಯುವ ಕನ್ನಡಿಗರಿಗೆ ನೆರವಾಗುವ ಕೆಲಸವಾಗಲಿ. ನೇರ ಸರ್ಕಾರಿ ಉದ್ಯೋಗವನ್ನು, ಸಹಾಯ ಧನವನ್ನು ನೀಡಿ ಇಂತಹ ಉದಯೋನ್ಮುಖ ಕನ್ನಡಿಗರನ್ನು ಸನ್ಮಾನಿಸಿ ಮುಂಬರುವ ಇತರೆ ವಿದ್ಯಾರ್ಥಿಗಳಿಗೆ ಮಾದರಿಯಾಗಿ ತೋರಿಸಿ, ಕನ್ನಡ ಕಲಿತರೆ ಉಜ್ವಲ ಭವಿಷ್ಯ ಇದೆ ಎಂಬ ಸಂದೇಶವನ್ನು ಸಮ್ಮೇಳನದ ಮೂಲಕ ಸಾರಿದರೆ ಹೆಚ್ಚು ಅರ್ಥಪೂರ್ಣವಾಗಿರುತ್ತದೆ. ಕರ್ನಾಟಕದಲ್ಲಿ ಕನ್ನಡಿಗನಿಗೆ ಬೆಲೆ ಎಂಬಂತಾಗಿ ಕನ್ನಡ ಸಾಹಿತ್ಯ ನದಿಯು ಹರಿದು ಮುಂದಕ್ಕೆ ಸಾಗುತ್ತದೆ. ಇಂತಹ ಕಾರ್ಯಕ್ರಮಕ್ಕೆ ಸರ್ಕಾರವೂ ಸ್ಪಂದಿಸಬೇಕಿದೆ. ಈ ನಿಟ್ಟಿನಲ್ಲಿ ಕುಂವೀಯವರ ಆಕ್ರೋಶವು ಕನ್ನಡಿಗರ ಧನಿಯಾಗಿ ಹೊರಹೊಮ್ಮಿದೆ. ಆದ್ದರಿಂದ ಕನ್ನಡಿಗರಿಗೆ ಫೋಟೋ ಸೇರುವ ಸಾಹಿತಿಗಳಿಗಿಂತ ಪಾಠದಲ್ಲಿ ಸೇರಬೇಕಾದ ಸಾಹಿತ್ಯದ ಅವಶ್ಯಕತೆ ಇದೆ.

-ದೇ. ವಿ. ಮಹೇಶ್ವರ ಹಂಪಿ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.