

'ಹೊಸ ವರ್ಷದ ಶುಭಾಶಯಗಳು' ಅಂದೆ.
'ನಿಮಗೂ ಶುಭಾಶಯಗಳು' ಎಂದರು ಯೋಗಿ ದುರ್ಲಭಜೀ.
'ನೀವು ಫೋನ್ ಮಾಡ್ತೀರಿ ಅಂದುಕೊಂಡಿದ್ದೆ. ಸಂತಸವಾಯಿತು. ಅಂದ ಹಾಗೆ, ಎಲ್ಲ ದಿನವೂ ಹೊಸ ವರ್ಷ ಅಂತೀವಿ. ಆದರೆ ಜಗತ್ತಿನಾದ್ಯಂತ ಈ ಒಂದು ದಿನ ಅದೆಷ್ಟು ಕಾತರ, ನಿರೀಕ್ಷೆ, ಆಕಾಂಕ್ಷೆಗಳು ಗರಿಗೆದರುತ್ತವೆ ಅಲ್ಲವಾ? ವರ್ಷವಿಡೀ ಒಳ್ಳೆಯದಾಗಲಿ ಎಂದು ಈ ದಿನ ಆಶಿಸುವುದಿದೆಯಲ್ಲ, ಜನರ ನಿರೀಕ್ಷೆಗಳು ಎಷ್ಟೊಂದು ಮುಗ್ಧ ಎಂದೆನಿಸುತ್ತದೆ. ಆದರೂ ಎಲ್ಲರ ಆಸೆಗಳು ಈಡೇರಲಿ' ಎಂದರು ಯೋಗೀಜೀ.
'ಡಿಸೆಂಬರ್ 31ರ ರಾತ್ರಿ ಹನ್ನೆರಡು ಗಂಟೆ ಆಗುವುದನ್ನೇ ಇಡೀ ಜಗತ್ತಿನಲ್ಲಿರುವವರೆಲ್ಲ ಉಸಿರು ಬಿಗಿಹಿಡಿದುಕೊಂಡು ಕಾಯುವುದಿದೆಯಲ್ಲ, ಅದು ನನಗೆ ಬಹಳ ತಮಾಷೆಯಾಗಿ ಕಾಣುತ್ತದೆ. ಇನ್ನೇನು ಹುಟ್ಟಲಿರುವ ಮಗುವಿಗೆ ತಂದೆ ಈ ಪರಿ ಕಾಯಲಿಕ್ಕಿಲ್ಲ. ಜನವರಿ ಒಂದರಂದು ಏಳುತ್ತಿದ್ದಂತೆ ಎಲ್ಲವೂ ಎಂದಿನಂತೆ ಮಾಮೂಲು. ವರ್ಷದಿಂದ ವರ್ಷಕ್ಕೆ ಮನುಷ್ಯ ಪ್ರಬುದ್ಧನಾಗುತ್ತಾನೆ, ತಿಳಿವಳಿಕೆ ಹೆಚ್ಚಾಗುತ್ತದೆ ಎಂಬುದೆಲ್ಲ ಶುದ್ಧ ಸುಳ್ಳು ಎಂಬುದು ಇದರಿಂದ ಗೊತ್ತಾಗುತ್ತದೆ. ಆದರೂ ನಾನು ಜನರ ಮುಗ್ಧತೆಯ ಪರ. ವರ್ಷದಲ್ಲಿ ಒಂದು ರಾತ್ರಿ, ಮುಗ್ಧರಾಗಿ ಕಳೆಯುವುದು ಅಪರಾಧವಲ್ಲ ಬಿಡಿ' ಎಂದರು ಯೋಗೀಜೀ. ಹೊಸ ವರ್ಷ ಆಚರಣೆಯನ್ನು ಟೀಕಿಸುತ್ತಲೇ, ಛೇಡಿಸುತ್ತಲೇ ಅವರು ಅದರ ಪರವಾಗಿ ನಿಂತಿದ್ದರು.
'ಯೋಗೀಜೀ, ಈ ವರ್ಷ ಹೊಸ ಸಾಹಸವೇನು? ಮುಂದಿನ ವರ್ಷದ ಈ ದಿನ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಎಷ್ಟಿರಬಹುದು?' ಎಂದು ತಮಾಷೆ ಮಾಡಿದೆ. ನಾಲ್ಕು ತಿಂಗಳ ಹಿಂದೆ ಅವರು ಸುಮಾರು ಐನೂರು ಕೋಟಿ ರೂ.ಯನ್ನು ತನ್ನದಲ್ಲ ಎಂಬಂತೆ ಸುಮ್ಮನೆ ಸಮಾಜ ಸೇವೆಗೆಂದು ಕೊಟ್ಟಿದ್ದು ಗೊತ್ತಿತ್ತು. ಕಳೆದ ಎರಡು ತಿಂಗಳಿಂದ ಅವರು ಮೌನವೃತದಲ್ಲಿರುವುದೂ ಗೊತ್ತಿತ್ತು. 'ಹಣವಿಲ್ಲದೇ ಬದುಕುವುದೇ ಹೆಚ್ಚು ರೋಚಕ ಎಂದೆನಿಸುತ್ತಿದೆ. ಬಡತನ ಕಲಿಸುವಷ್ಟು ಜೀವನ ಪಾಠಗಳನ್ನು ಶ್ರೀಮಂತಿಕೆ ಕಲಿಸುವುದಿಲ್ಲ. ನೆಮ್ಮದಿಯಿಂದ ಇರಲು ಹಣ ಮುಖ್ಯ ಅಲ್ಲ. ಹಣ ಇರುವ ಹಾಗೂ ಇಲ್ಲದಿರುವ ಸ್ಥಿತಿಗೆ ನಾನು ಒಗ್ಗಿಕೊಂಡಿದ್ದೇನೆ. ನನಗೆ ಅವೆರಡರ ನಡುವೆ ಹೆಚ್ಚು ಫರಕು ಕಾಣುವುದಿಲ್ಲ.' ಎಂದರು ಥೇಟು ಯೋಗಿಯಂತೆ.
'ಯೋಗೀಜಿ, ಬೇಕಾದಾಗ ನೂರಾರು ಕೋಟಿ ರೂ. ಸಂಪಾದಿಸುವ ವಿದ್ಯೆಯನ್ನು ಕರಗತ ಮಾಡಿಕೊಂಡಿದ್ದೀರಲ್ಲ. ಅದನ್ನು ನನಗೂ ಹೇಳಿಕೊಡಿ'. ಎಂದೆ.
'ಕೆಲ ವರ್ಷಗಳ ಹಿಂದೆ ನಾನು How to earn million dollars in one month' ಎಂಬ ಪುಸ್ತಕ ಓದಿದ್ದೆ. ಅದನ್ನು ಬರೆದ ಲೇಖಕನ ಬಗ್ಗೆ ಮರುಕ ಉಂಟಾಯಿತು. ಆ ಪುಸ್ತಕ ಮಾರಾಟದಿಂದ ಮಿಲಿಯನ್ ಡಾಲರ್ ಗಳಿಸಿದ್ದರೆ ಸಂತಸವಾಗುತ್ತಿತ್ತು. ಅದೂ ಇಲ್ಲ. ಹಾಗೆಲ್ಲ ಒಂದು ತಿಂಗಳಲ್ಲಿ ಅಷ್ಟೊಂದು ಹಣ ಗಳಿಸುವುದು ಸಾಧ್ಯವಾಗಿದ್ದರೆ, ಈ ಜಗತ್ತಿನಲ್ಲಿ ಬಡವರೇ ಇರುತ್ತಿರಲಿಲ್ಲ' ಎಂದರು ಯೋಗೀಜಿ.
'ಅದ್ಸರಿ ಯೋಗೀಜೀ. ಆದರೆ ನೀವು ನನ್ನ ಪ್ರಶ್ನೆಗೆ ಉತ್ತರ ಕೊಟ್ಟಿಲ್ಲ' ಅಂದೆ. ಜೋರಾಗಿ ನಕ್ಕರು.
ಮಾತಿನ ನಡುವೆ ಯೋಗೀಜೀ, 'ನಮಗ್ಯಾರಿಗೂ ಏನು ಬೇಕೆಂಬುದು ಗೊತ್ತಿಲ್ಲ. ಅದೇ ನಮ್ಮ ಸಮಸ್ಯೆ' ಎಂದರು. ಈ ಮಾತಿಗೆ ಅವರು ಹೇಳಿದ ಒಂದು ಪ್ರಸಂಗ ಸ್ವಾರಸ್ಯಕರವಾಗಿತ್ತು.
ಒಮ್ಮೆ ಜಾರ್ಜ್ ಬರ್ನಾರ್ಡ್ ಷಾ ಲಂಡನ್ನಿಂದ ಯಾವುದೋ ಊರಿಗೆ ರೈಲಿನಲ್ಲಿ ಹೋಗುತ್ತಿದ್ದರು. ಟಿಕೆಟ್ ಕಲೆಕ್ಟರ್ ಆಗಮಿಸುತ್ತಿದ್ದಂತೆ, ಬರ್ನಾರ್ಡ್ ಷಾ ಟಿಕೆಟ್ಗಾಗಿ ಕೋಟು, ಶರ್ಟ್, ಪ್ಯಾಂಟಿನ ಜೇಬನ್ನು ತಡಕಾಡತೊಡಗಿದರು. ಅದು ಸಿಗದಿದ್ದಾಗ ಸೂಟ್ಕೇಸನ್ನು ತೆರೆದರು. ಟಿಕೆಟ್ನ್ನು ಎಲ್ಲಿ ಇಟ್ಟಿರಬಹುದೆಂದು ತಲೆಕೆರೆದುಕೊಂಡು ಪುನಃ ಕೋಟಿನ ಎಲ್ಲ ಜೇಬುಗಳನ್ನು ಶೋಧಿಸಲಾರಂಭಿಸಿದರು. ಬರ್ನಾರ್ಡ್ ಷಾ ಅವರ ತಾಕಲಾಟವನ್ನು ಗಮನಿಸುತ್ತಿದ್ದ ಟಿಕೆಟ್ ಕಲೆಕ್ಟರ್, 'ಸಾರ್, ನೀವು ಯಾರೆಂಬುದು ಗೊತ್ತು. ನೀವು ಲೋಕಪ್ರಸಿದ್ಧರು. ನಿಮ್ಮಂಥ ಗಣ್ಯ ವ್ಯಕ್ತಿಗಳು ಟಿಕೆಟ್ ಇಲ್ಲದೇ ಪ್ರಯಾಣಿಸುವುದಿಲ್ಲ ಎಂಬುದೂ ಗೊತ್ತು. ಟಿಕೆಟ್ ಎಲ್ಲೋ ಇರುತ್ತದೆ ಬಿಡಿ. ಎಲ್ಲಿಟ್ಟಿದ್ದೀರೆಂಬುದು ನಿಮಗೆ ಗೊತ್ತಿರಲಿಕ್ಕಿಲ್ಲ. ದಯವಿಟ್ಟು ಗಾಬರಿಯಾಗಬೇಡಿ. ಟಿಕೆಟ್ ಸಿಕ್ಕಿದ ನಂತರ ಕೊಡಿ. ಒಂದು ವೇಳೆ ಅದು ಸಿಗದಿದ್ದರೆ ಚಿಂತೆಬೇಡ. ಪರವಾಗಿಲ್ಲ. ಆರಾಮವಾಗಿ ಕುಳಿತುಕೊಳ್ಳಿ.' ಎಂದು ಸಮಾಧಾನ ಹೇಳಿದ.
ಅದಕ್ಕೆ ಬರ್ನಾರ್ಡ್ ಷಾ ಟಿಕೆಟ್ ಕಲೆಕ್ಟರ್ಗೆ ಹೇಳಿದರು-'ನಿಮಗೆ ನನ್ನ ಸಮಸ್ಯೆ ಅರ್ಥವಾಗುತ್ತಿಲ್ಲ. ನಾನು ನಿಮಗೆ ತೋರಿಸುವುದಕ್ಕಾಗಿ ಟಿಕೆಟ್ಗೆ ಹುಡುಕಾಡುತ್ತಿಲ್ಲ. ಆದರೆ ಟಿಕೆಟ್ ಇಲ್ಲದೇ ನಾನು ಪ್ರಯಾಣ ಮಾಡುವಂತಿಲ್ಲ. ಕಾರಣ ನೀವು ಆಕ್ಷೇಪ ವ್ಯಕ್ತಪಡಿಸುತ್ತೀರಿ ಎಂದಲ್ಲ. ನಾನು ಎಲ್ಲಿಗೆ ಹೊರಟಿದ್ದೇನೆಂಬುದು ನನಗೆ ಗೊತ್ತಿಲ್ಲ. ಈ ಕಾರಣಕ್ಕಾಗಿ ಟಿಕೆಟ್ ಬೇಕೇ ಬೇಕು. ಟಿಕೆಟ್ ಸಿಗದಿದ್ದರೆ ನಾನು ಎಲ್ಲಿಗೆ ಹೋಗಬೇಕೆಂಬುದೇ ತಿಳಿಯುವುದಿಲ್ಲ. ನಾನು ನಿಮಗೆ ತೋರಿಸುವುದಕ್ಕಾಗಿ ಟಿಕೆಟ್ಗೆ ಹುಡುಕಾಡುತ್ತಿದ್ದೇನೆಂದು ತಿಳಿದಿರೇನು? ಟಿಕೆಟ್ ಸಿಗದ ಸಂದರ್ಭದಲ್ಲಿ ನಾನು ಎಲ್ಲಿಗೆ ಹೋಗಲು ನಿರ್ಧರಿಸಿದ್ದೆ ಎಂಬುದನ್ನು ಹೇಳುತ್ತೀರಾ?'
ಟಿಕೆಟ್ ಕಲೆಕ್ಟರ್ ತಬ್ಬಿಬ್ಬಾಗಿ ಹೋದ. 'ಅಲ್ಲ, ನಾನು ನಿಮಗೆ ಸಹಾಯ ಮಾಡಬೇಕೆಂದು ನೋಡಿದರೆ, ನೀವು ಈ ರೀತಿ ವಿಚಿತ್ರವಾಗಿ ವರ್ತಿಸುತ್ತೀರಲ್ಲ. ಅದಿರಲಿ. ಈಗ ಒಂದು ಕೆಲಸ ಮಾಡಿ. ಈ ರೈಲು ಈಗ ಹೊರಟಿದೆ. ಮಧ್ಯದಲ್ಲಿ ನಿಲ್ಲಿಸುವುದು ಅಸಾಧ್ಯ. ಆದ್ದರಿಂದ ರೈಲು ನಿಲ್ದಾಣ ತಲುಪುವವರೆಗೂ ಯೋಚಿಸಿ ಹೇಳಿ. ಅಲ್ಲಿ ತನಕ ಗೊತ್ತಾಗದಿದ್ದರೆ, ರೈಲು ನಿಲ್ದಾಣದಲ್ಲಿ ಕುಳಿತು ಯೋಚಿಸಿ. ನೀವು ಯಾವ ಊರಿಗೆ ಹೋಗಲು ಬಯಸಿದ್ದೀರಿ ಎಂಬುದನ್ನು ನಾನು ಹೇಗೆ ಹೇಳಲಿ?'
ಆ ಮಾತಿಗೆ ತಲೆದೂಗಿದ ಬರ್ನಾರ್ಡ್ ಷಾ ರೈಲಿನಲ್ಲಿ ಕುಳಿತು ಪ್ರಯಾಣ ಮುಂದುವರಿಸಿದರು. ಅವರಿಗೆ ಏನನಿಸಿತೋ ಏನೋ? ಟಿಕೆಟ್ ಕಲೆಕ್ಟರ್ನನ್ನು ಕರೆದು, 'ಒಂದು ವೇಳೆ ರೈಲು ನಿಲ್ದಾಣ ತಲುಪಿದ ನಂತರವೂ ನಾನು ಯಾವ ಊರಿಗೆ ಹೋಗಬೇಕೆಂದಿದ್ದೆ ಎಂಬುದು ಹೊಳೆಯದಿದ್ದರೆ ಏನು ಮಾಡಲಿ?' ಎಂದು ಕೇಳಿದರು. 'ವಾಪಸ್ ಇದೇ ರೈಲಿನಲ್ಲಿ ಹೋಗಿ. ಎಲ್ಲಿಂದ ಬಂದಿದ್ದೀರೋ ಅಲ್ಲಿಗೆ ಹೋಗುತ್ತೀರಿ. ಆದರೆ ಎಲ್ಲಿಗೆ ಹೋಗಲು ನಿರ್ಧರಿಸಿದ್ದೀರೋ ಅಲ್ಲಿಗೆ ಹೋಗಬೇಕೆಂದರೆ, ನಿಮಗೆ ಆ ಊರಿನ ಹೆಸರು ನೆನಪಾಗಬೇಕು. ರೈಲು ವಾಪಸ್ ಹೋಗಲು ಇನ್ನೂ ಸಾಕಷ್ಟು ಸಮಯವಿದೆ. ಅಲ್ಲಿ ತನಕ ಯೋಚಿಸುತ್ತಲೇ ಇರಿ. ನೀವು ಸರಿಯಾದ ದಿಕ್ಕಿನಲ್ಲಿ ಹೋಗುತ್ತಿದ್ದೀರಿ (ಯೋಚಿಸುತ್ತಿದ್ದೀರಿ) ಎಂದು ನನಗನಿಸುತ್ತಿದೆ.' ಎಂದ ಟಿಕೆಟ್ ಕಲೆಕ್ಟರ್. ಮುಂದೆ ಏನಾಯಿತು? ಬರ್ನಾರ್ಡ್ ಷಾ ತಲುಪಬೇಕಾದ ಊರನ್ನು ತಲುಪಿದರಾ? ಅದೇ ರೈಲಿನಲ್ಲಿ ಎಷ್ಟು ಸಲ ಅತ್ತಿಂದಿತ್ತ, ಇತ್ತಿಂದಿತ್ತ ಚಲಿಸಿದರು? ಈ ಯಾವ ಸಂಗತಿಗಳೂ ಗೊತ್ತಾಗಲಿಲ್ಲ.
ಯೋಗಿ ದುರ್ಲರ್ಭಜೀ ಹೇಳಿದರು-'ನಾವೂ ಒಂಥರಾ ಬರ್ನಾರ್ಡ್ ಷಾನಂತೆ. ಟಿಕೆಟ್ ಖರೀದಿಸಿದ್ದೇವೆ. ಆದರೆ ಎಲ್ಲಿಗೆ ಹೋಗಬೇಕೆಂಬುದು ಗೊತ್ತಿಲ್ಲ. ನಮಗೆ ಏನು ಬೇಕೆಂಬುದು ಗೊತ್ತಿಲ್ಲ. ನಮಗೂ ಪ್ರಾಮಾಣಿಕ ಅಂತ ಕರೆಯಿಸಿಕೊಳ್ಳುವ ಆಸೆಯಿದೆ. ಆದರೆ ಲಂಚ, ಎಂಜಲು ಕಾಸಿಗೆ ಕೈಯೊಡ್ಡುತ್ತೇವೆ. ನಾನೂ ಸಾಧಕನಾಗಬೇಕು, ಶ್ರೀಮಂತನಾಗಬೇಕು ಎಂದು ಬಯಸುತ್ತೇವೆ. ಆದರೆ ಲಾಟರಿ ಹೊಡೆಯಲಿ ಎಂದು ನಿರೀಕ್ಷಿಸುತ್ತೇವೆ ಅಥವಾ ಬೇಗನೆ ಹಣ ಮಾಡುವ ವಾಮಮಾರ್ಗ ಅನುಸರಿಸುತ್ತೇವೆ. ಸಿನಿಮಾ ನಟರಂತೆ ಒಳ್ಳೆಯ ಫಿಗರ್ ಹೊಂದಬೇಕೆಂದು ಆಸೆಪಡುತ್ತೇವೆ. ಆದರೆ ಊಟಕ್ಕೆ ಕುಳಿತಾಗ ಗಡದ್ದಾಗಿ ತಿನ್ನುತ್ತೇವೆ. ನಮ್ಮ ಮನೆಯನ್ನು ಚೆನ್ನಾಗಿಟ್ಟುಕೊಳ್ಳುತ್ತೇವೆ. ಆದರೆ ಬೀದಿ, ವಠಾರವನ್ನು ಹೊಲಸು ಮಾಡುತ್ತೇವೆ. ಮಾತೃಭಾಷೆ ನಶಿಸುತ್ತಿದೆಯೆಂದು ಕಳವಳ ವ್ಯಕ್ತಪಡಿಸುತ್ತೇವೆ. ಆದರೆ ನಮ್ಮ ಮಕ್ಕಳನ್ನು ಇಂಗ್ಲೀಷ್ ಮಾಧ್ಯಮ ಶಾಲೆಗೆ ಕಳಿಸಿ, ಅವರ ಬಾಯಲ್ಲಿ ಇಂಗ್ಲೀಷ್ ನುಲಿಯುವುದನ್ನು ಕಂಡು ಸಂತಸಪಡುತ್ತೇವೆ. ದೇಶಕ್ಕಾಗಿ ಪ್ರಾಣ ಕೊಡುವ ಶಿವಾಜಿಯಂಥವರು ಹುಟ್ಟಬೇಕು ಎಂದು ಆಶಿಸುತ್ತೇವೆ. ಆದರೆ ಆತ ಪಕ್ಕದ ಮನೆಯಲ್ಲಿ ಹುಟ್ಟಲಿ ಅಂದುಕೊಳ್ಳುತ್ತೇವೆ. ಕಾರಿನ ಹಾರ್ನ್ ಕರ್ಕಶ ಎಂದು ಬೈದುಕೊಳ್ಳುತ್ತೇವೆ. ನಾವು ಸ್ಟೇರಿಂಗ್ ಹಿಂದೆ ಕುಳಿತಾಗ ಹಾರ್ನನ್ನು ಅದುಮಿ ಹಿಡಿದುಕೊಂಡಿರುತ್ತೇವೆ. ಈ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆಯೆಂದು ಹುಯಿಲೆಬ್ಬಿಸುತ್ತೇವೆ. ಮುಂದೆ ಹೊಸ ಸರ್ಕಾರ ಅಧಿಕಾರಕ್ಕೆ ಬಂದಾಗ ಭ್ರಷ್ಟಾಚಾರದಲ್ಲಿ ಹಿಂದಿನ ಸರ್ಕಾರವನ್ನು ಮೀರಿಸುತ್ತದೆ. ನಮ್ಮ ನಡವಳಿಕೆಗಳೇ ಹೀಗೆ. ಹೇಳುವುದೊಂದು, ಮಾಡುವುದು ಇನ್ನೊಂದು. ಈಗ ಹೇಳಿ ನಮಗೂ, ರೈಲಿನಲ್ಲಿ ಕುಳಿತ ಬರ್ನಾರ್ಡ್ ಷಾ ಅವರಿಗೂ ಏನು ವ್ಯತ್ಯಾಸವಿದೆ? ನಮಗೆ ಏನು ಬೇಕೆಂಬುದು ತಿಳಿದಿಲ್ಲ. ತಿಳಿದಿದ್ದರೆ ಈ ರೀತಿ ವರ್ತಿಸುತ್ತಿರಲಿಲ್ಲ. ಒಂದು ವೇಳೆ ಸ್ವಚ್ಛ ನಗರ, ಶುದ್ಧಗಾಳಿ, ನೀರು ಬೇಕೆಂದಿದ್ದರೆ, ನಾವು ನಮ್ಮ ಪರಿಸರವನ್ನು ಇಷ್ಟು ಹೊಲಸು ಎಬ್ಬಿಸುತ್ತಿದ್ದೆವಾ? ನಮಗೆ ನಮ್ಮನ್ನು ಆಳುವವರು ಯೋಗ್ಯರಿರಬೇಕು ಅಂತಿದ್ದರೆ ಲಫಂಗರು, ಕೊಲೆಗಡುಕರು, ಭ್ರಷ್ಟರನ್ನು ನಮ್ಮ ಪ್ರತಿನಿಧಿಗಳನ್ನಾಗಿ ಆರಿಸುತ್ತಿದ್ದೆವಾ? ನಮಗೆ ಸಲ್ಮಾನ್ ಖಾನ್ ಥರಾ ಕಾಣಬೇಕು. ಆದರೆ ಮೈ ತುಂಬಾ ಬಟ್ಟೆ ಹಾಕಿಕೊಳ್ಳಬೇಕು ಅಂದ್ರೆ ಹೇಗೆ? ಬಟ್ಟೆ ಹಾಗೂ ಸಲ್ಮಾನ್ ಪರಸ್ಪರ ವಿರುದ್ಧ ಪದಗಳು ಎಂಬುದು ಅರ್ಥವಾಗುವುದಿಲ್ಲ. ನಮ್ಮ ಈ ಸಮಸ್ಯೆಗಳಿಗೆ ಈ ವೈರುಧ್ಯಗಳೇ ಕಾರಣ. ನಮ್ಮ ದ್ವಂದ್ವವೇ ನಮ್ಮನ್ನು ಕಿತ್ತು ತಿನ್ನುತ್ತಿರುವುದು. ಹೆಜ್ಜೆ ಹೆಜ್ಜೆಗೂ ರಾಜಿ ಮಾಡಿಕೊಳ್ಳುತ್ತೇವೆ. ಕಾನೂನು ಉಲ್ಲಂಘಿಸುವ ಪ್ರಸಂಗ ಬಂದರೆ ಸುರಕ್ಷಿತ ಮಾರ್ಗವನ್ನು ಅನುಸರಿಸುತ್ತೇವೆ. ಶ್ರಾದ್ಧದ ದಿನ ಉಪವಾಸಕ್ಕೆ ಅನ್ನ ತಿನ್ನಬಾರದೆಂದು ನಿಯಮ ರೂಪಿಸಿ, ಅಂಬೊಡೆ, ಕಡುಬು, ಹೋಳಿಗೆ, ಶಿರಾ ಮಾಡಿಸಿಕೊಂಡು ಬಾಳೆಲೆಯನ್ನು ಸಪಾಟು ಮಾಡಿ ಎದ್ದು ಬರುತ್ತೇವೆ.'
ಯೋಗೀಜೀ ಒಂದು ಕ್ಷಣ ಮಾತು ನಿಲ್ಲಿಸಿದರು.
ಪುನಃ ಸಾವರಿಸಿಕೊಂಡು ಮುಂದುವರಿಸಿದರು-'ಜಗತ್ತಿನ ಯಾವ ದೇಶದಲ್ಲೂ ಇಂಥ ನೈತಿಕ ದಿವಾಳಿತನ ಇಲ್ಲ. ಈ ದೇಶದಲ್ಲಿ ಏನು ಬೇಕಾದರೂ ಮಾಡಬಹುದು. ಮಾಡಿ ಗೆದ್ದು ಬರಬಹುದು. ಹಣ, ಅಧಿಕಾರವಿದ್ದರೆ ಎಂಥ ನೀಚ ಕೆಲಸವನ್ನಾದರೂ ಮಾಡಿ ಜಯಿಸಿಕೊಂಡು ಬರಬಹುದು. ಸಿಂಗಾಪುರದಂಥ ದೇಶದಲ್ಲಿ ಬೀದಿಯಲ್ಲಿ ಮಲಮೂತ್ರ ವಿಸರ್ಜಿಸುವುದನ್ನು ಕಲ್ಪಿಸಿಕೊಳ್ಳುವುದಕ್ಕೂ ಅಸಾಧ್ಯ. ಎಂಥ ವಿಚಿತ್ರ ಅಂದ್ರೆ ನಮ್ಮ ದೇಶದಲ್ಲಿ ಅದು ಸಹಜ, ಸರ್ವೇ ಸಾಮಾನ್ಯ. ರಾಷ್ಟ್ರಪತಿ ಭವನದ ಮುಂದೆ ನಿಂತು ಮೂತ್ರ ವಿಸರ್ಜಿಸಬಹುದು. ಇಂಥ ಸ್ವಾತಂತ್ರ್ಯ ಜಗತ್ತಿನ ಯಾವ ದೇಶದಲ್ಲಿದೆ? ಸಿಂಗಾಪುರದಲ್ಲಿ ಎಂಜಲು ಉಗುಳಿದರೂ ಶಿಕ್ಷೆ ತಪ್ಪಿದ್ದಲ್ಲ. ಕೆಲ ವರ್ಷಗಳ ಹಿಂದೆ, ನನ್ನ ಸ್ನೇಹಿತರೊಬ್ಬರು ಅನಾರೋಗ್ಯದಿಂದ ಸಿಂಗಾಪುರದ ಬೀದಿಯಲ್ಲಿ ವಾಂತಿ ಮಾಡಿಕೊಂಡರು. ಕ್ಷಣಾರ್ಧದಲ್ಲಿ ಪೊಲೀಸರು ಬಂದು ನನ್ನ ಸ್ನೇಹಿತರಿಂದಲೇ ಅದನ್ನು ಸ್ವಚ್ಛಗೊಳಿಸಿದರು. ಆನಂತರ ಅನಾರೋಗ್ಯಪೀಡಿತ ನನ್ನ ಸ್ನೇಹಿತನಿಗೆ ವೈದ್ಯಕೀಯ ನೆರವು ಕೊಡಿಸಿದರೆನ್ನಿ. ನಮ್ಮ ಬಸ್ಸು, ರೈಲಿನಲ್ಲಿ ಸಂಚರಿಸುವಾಗ ಅಲ್ಲಲ್ಲಿ ವಾಂತಿ ಮಾಡಿಕೊಂಡಿರುವುದು ಕಾಣಿಸುತ್ತದೆ. ಆದರೆ ವಾರವಾದರೂ ಯಾರೂ ತೊಳೆದು ಸ್ವಚ್ಛಗೊಳಿಸುವುದಿಲ್ಲ. ನಮ್ಮಲ್ಲಿ ಹೊಣೆಗಾರಿಕೆಯೂ ಇಲ್ಲ, ಉತ್ತರದಾಯಿತ್ವವೂ ಇಲ್ಲ. ಅದಕ್ಕಿಂತ ಹೆಚ್ಚಾಗಿ ಹೇಳಬೇಕೆಂದರೆ ಸಾರ್ವಜನಿಕವಾಗಿ ಮರ್ಯಾದೆ, ನಾಚಿಕೆ ಬಿಟ್ಟವರೆಂದರೆ ಭಾರತೀಯರು. ನಾನು ಹೀಗೆ ಹೇಳಿದಾಗ ಅನೇಕರಿಗೆ ಬೇಸರವಾಗುತ್ತದೆ. ಕೆಲವರು ನನ್ನ ಜತೆ ಜಗಳ ಕಾದಿದ್ದಾರೆ. ಪರವಾಗಿಲ್ಲ. ಯಾರು ಬೇಸರ ಮಾಡಿಕೊಂಡಿದ್ದಾರೋ, ಜಗಳ ಕಾದಿದ್ದಾರೋ, ಅಂಥವರು ಬೀದಿಯಲ್ಲಿ ನಿಂತು ಉಚ್ಚೆ ಹೊಯ್ಯುವುದನ್ನು, ಪಾನ್ ಅಗೆದು ದಾರಿಯಲ್ಲಿ ಉಗುಳುವುದನ್ನು, ಕಾರಿನಲ್ಲಿ ಚಿಪ್ಸ್ ತಿಂದು ಪ್ಯಾಕೆಟ್ರಸ್ತೆಗೆ ಎಸೆಯುವುದನ್ನು ನಾನು ನೋಡಿದ್ದೇನೆ. ಆದರೆ ಭಾರತೀಯರಿಗೆ ಸಾರ್ವಜನಿಕ ಮರ್ಯಾದೆಯಿಲ್ಲ ಅಂದ್ರೆ ಸಂಕಟವಾಗುತ್ತದೆ. ಆದರೆ ರಸ್ತೆಯಲ್ಲಿ ಎಂಜಲು ಉಗುಳುವಾಗ ಸಂಕಟ ಆಗುವುದಿಲ್ಲ. ಸಾರ್ವಜನಿಕ ಸ್ವಚ್ಛತೆಗೆ ಭಂಗ ತರುತ್ತಿದ್ದೇವೆಂಬ ಸಣ್ಣ ಬೇಸರವೂ ಆಗುವುದಿಲ್ಲ. ಇಲ್ಲಿ ಹೊಲಸು ಮಾಡಬೇಡ ಎಂದು ನಾವು ಯಾರನ್ನೂ ಗದರುವುದಿಲ್ಲ. ಕಾರಣ ನಾಳೆ ನಾನು ಹೀಗೆ ಮಾಡಿದಾಗ ಮತ್ತ್ಯಾರೋ ಬಂದು ನನ್ನನ್ನು ಹೀಗೆ ಗದರಿದರೆ ಎಂಬ ಆತಂಕ. ಹೀಗಾಗಿ ಎಲ್ಲಿ ಬೇಕಾದರೂ ಹೊಲಸು ಮಾಡಲು ಪರವಾನಗಿ ಪಡೆದವರೆಂದರೆ ಭಾರತೀಯರು. ಹಾಗೆಂದು ವಿದೇಶಗಳಿಗೆ ಹೋದಾಗ ಇದೇ ಜನ ವರ್ತಿಸುವುದನ್ನು ಕಂಡರೆ ಇವರು ಅವರೇನಾ ಎಂಬ ಸಂದೇಹ ಮೂಡುತ್ತದೆ. ಅಷ್ಟು ಕ್ಲೀನು. ಅವರ ಆಡಂಬರ, ಕಾನೂನು ಪಾಲನೆ ನೋಡಬೇಕು. ಇದನ್ನು ನಾನು
Prostitutionisation of Public Life ಅಂತ ಕರೆಯುತ್ತೇನೆ. ಬೀದಿಯಲ್ಲಿ ಹಾದರ ಮಾಡಿ ಮನೆಗೆ ಬಂದು ಶುದ್ಧ ಗರತಿಯಂತೆ ಫೋಸು ನೀಡುವ ಮೆಂಟಾಲಿಟಿ. ಇದು ಅನೇಕರಿಗೆ ಇಷ್ಟವಾಗೊಲ್ಲ. ಯೋಗೀಜೀ ನಿಮ್ಮ ಬಾಯಿಂದ ಇಂಥ ಮಾತುಗಳಾ? ಅಂತಾರೆ. ಅಲ್ಲ ಸ್ವಾಮಿ, ನೀವು ಮಾಡುವುದು ಇದಕ್ಕಿಂತ ನೀಚ ಕೆಲಸ. ಕಾರಣ ಯಾವ ಹೆಂಗಸೂ ಬಯಸಿ ಆ ವೃತ್ತಿಗಿಳಿಯುವುದಿಲ್ಲ. ಪರಿಸ್ಥಿತಿಯ ಅನಿವಾರ್ಯತೆ, ಒತ್ತಡಗಳಿಂದ ಆ ಕೆಲಸಕ್ಕೆ ಮುಂದಾಗುತ್ತಾಳೆ. ಆದರೆ ನಿಮಗೆ ಯಾರ ಒತ್ತಡ, ಎಂಥ ಅನಿವಾರ್ಯತೆ? ಹೇಳಿ, ನಾವು ನಮ್ಮ ಸಾರ್ವಜನಿಕ ಜೀವನವನ್ನು ವೇಶ್ಯಾಗಾರಿಕೆಯನ್ನಾಗಿ ಮಾಡಿಲ್ಲವಾ? ಈ ಪದ ಪ್ರಯೋಗ ಮಾಡಿದಾಗ ಆಗುವ ಬೇಸರ, ಸ್ವತಃ ಅಂಥ ಕೆಲಸವನ್ನು ಮಾಡುವಾಗ ಆಗುವುದಿಲ್ಲ ಏಕೆ?'
ನಾನು ಮಾತು ಮಾತಿಗೆ ಹೂಂ...ಹೂಂ ಅನ್ನುತ್ತಿದೆ. ಅವರು ಹೇಳುತ್ತಿದ್ದುದರಲ್ಲಿ ಯಾವ ತಪ್ಪೂ ಇರಲಿಲ್ಲ. ಆದರೆ ಯೋಗೀಜೀ ಎಂದಿಗಿಂತ ಹೆಚ್ಚು ಖಡಕ್ ಆಗಿದ್ದರು. ಅವರ ಮಾತಿನಲ್ಲಿ ಸಾತ್ವಿಕ ಸಿಟ್ಟಿತ್ತು. ಇವನ್ನೆಲ್ಲ ಎಷ್ಟು ದಿನ ಅಂತ ನೋಡಿ ಸಹಿಸಿಕೊಳ್ಳುವುದು ಎಂಬ ಅಸಹನೆಯಿತ್ತು.
'ನಾವು ನಮ್ಮ ನಗರವನ್ನು ಇಟ್ಟುಕೊಂಡಿರುವ ರೀತಿ ನೋಡಿದರೆ ನಮ್ಮ ದೇಶದ ಭವಿಷ್ಯ ಇನ್ನು ಎಷ್ಟು ವರ್ಷ ಎನಿಸುತ್ತದೆ. ನಾವು ವಾಸಿಸುವ ನಗರ ಕೊಳೆಗೇರಿಗಳಿಗಿಂತ ಹೇಗೆ ಭಿನ್ನ? ನನಗಂತೂ ಎಲ್ಲಾ ನಗರಗಳೂ ಉಸಿರುಗಟ್ಟಿ ಸಾಯುತ್ತಿರುವಂತೆ ಭಾಸವಾಗುತ್ತಿದೆ. ನಾವೇನಾದರೂ ಸ್ಮಶಾನದಲ್ಲಿ ಜೀವಿಸುತ್ತಿದ್ದೇವಾ ಎಂಬ ಆತಂಕ ಕಾಡುತ್ತದೆ. ಆದರೆ ಇದ್ದುದರಲ್ಲಿ ಸ್ಮಶಾನವೇ ವಾಸಿ. ಕಾರಣ ಅಲ್ಲಿ ಮೌನವಿದೆ. ನಗರಕ್ಕಿಂತ ಹೆಚ್ಚು ಸ್ವಚ್ಛವಿದೆ. ಸತ್ತವರ್ಯೂರೂ ಎದ್ದುಬರೋಲ್ಲ ಎಂಬ ಖಾತ್ರಿಯಿದೆ. ಆದರೆ ನಗರದಲ್ಲಿ ಹಾಗಲ್ಲ. ದುರಂತ ಅಂದ್ರೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಪ್ರಳಯವಾದರೆ ಯಾರೂ ಬದುಕಿರೋಲ್ಲ, ಎಲ್ಲರೂ ಸಾಯಲಿ, ನಾನೊಬ್ಬನೇ ಬದುಕಿ ಏನು ಮಾಡಲಿ ಎಂಬುದು ಎಲ್ಲರ ಯೋಚನೆಯಾದರೆ ಯಾರು ಏನು ಮಾಡಬಹುದು? ಹೀಗಾಗಿ ಎಲ್ಲರೂ ಸಾಮೂಹಿಕ ಸಾವಿಗೆ ಮಾನಸಿಕವಾಗಿ ಸಿದ್ಧರಾಗುತ್ತಿರಬಹುದಾ ಎಂದೂ ಅನಿಸುತ್ತದೆ. ನಾನು ಸಿನಿಕನಾಗಿ ಹೀಗೆ ಹೇಳುತ್ತಿಲ್ಲ. ಹೀಗೆ ಹೇಳುವಾಗ ಹೆಚ್ಚು ವಾಸ್ತವವಾದಿಯಾಗಿದ್ದೇನೋ ಎಂದೆನಿಸುತ್ತದೆ. ಹೊಸ ವರ್ಷಕ್ಕೆ ಕಾಲಿಡುತ್ತಿರುವಾಗ ಸಂತಸದ ಜತೆಗೆ ಈ ಎಚ್ಚರ ಇಲ್ಲದಿದ್ದರೆ ನಾವು ದಿನದಿಂದ ದಿನಕ್ಕೆ ಅಧಃಪತನಕ್ಕಿಳಿಯುತ್ತೇವೆ.' ಎಂದರು ಯೋಗೀಜೀ.
'ಯೋಗೀಜೀ, ನಾವು ಅಷ್ಟು ಬೇಗ ಬದಲಾಗುತ್ತೇವೆ ಎಂಬ ಆಸೆ ಇಟ್ಟುಕೊಳ್ಳಬೇಡಿ. ಕಾರಣ ಇಂದಿನ ಈ ಸ್ಥಿತಿಗೆ ಬರಲು ನಾವು ಆರು ಸಾವಿರ ವರ್ಷ ತೆಗೆದುಕೊಂಡಿದ್ದೇವೆ' ಎಂದು ಹೇಳೋಣ ಅಂದುಕೊಂಡೆ. ಆದರೆ ನಾನು ನಿರಾಶಾವಾದಿ ಎಂದು ಬಿಂಬಿಸಿಕೊಳ್ಳಲು ಮನಸ್ಸಾಗಲಿಲ್ಲ.
- ವಿಶ್ವೇಶ್ವರ ಭಟ್
vbhat@me.com