ಅವನು ಕುಡಿದಿದ್ದಕ್ಕೆ ನಾನೇಕೆ ಬೆಲೆ ತೆರಲಮ್ಮಾ?

ಮೊನ್ನೆ ರಾತ್ರಿ ನ್ಯೂ ಇಯರ್ ಪಾರ್ಟಿ ಮುಗಿದಿದೆ. ಹೊಸವರ್ಷವನ್ನು...
ಅವನು ಕುಡಿದಿದ್ದಕ್ಕೆ ನಾನೇಕೆ ಬೆಲೆ ತೆರಲಮ್ಮಾ?
Updated on: 

-ಅಮ್ಮಾ, ಹೆಮ್ಮೆಯಿದೆ, ನಿನ್ನ ಮಾತಿಗೆ ಚ್ಯುತಿ ತರಲಿಲ್ಲ ನಾನು ಎಂದು. ಇವತ್ತೊಂದಿನ ಕುಡಿ ಏನಾಗಲ್ಲ ಎಂದರು. ಕುಡಿದಾಕ್ಷಣ ಗಾಡಿ ಓಡಿಸುವುದಕ್ಕೆ ಕಷ್ಟವಾಗುತ್ತೆ ಅನ್ನೋದೆಲ್ಲ ಸುಳ್ಳು  ಎಂದು ಪುಸಲಾಯಿಸಿದರು. ಅವೆಲ್ಲದರ ನಡುವೆಯೂ 'ಯಾವತ್ತೂ ಕುಡಿದು ಗಾಡಿ ಓಡಿಸಬೇಡ ಮಗನೇ' ಎಂಬ ನಿನ್ನ ಮಾತುಗಳೇ ಹಿತವೆನಿಸಿ ಕಾಡಿದವು.

ಮೊನ್ನೆ ರಾತ್ರಿ ನ್ಯೂ ಇಯರ್ ಪಾರ್ಟಿ ಮುಗಿದಿದೆ. ಹೊಸವರ್ಷವನ್ನು ಸಂಭ್ರಮದಿಂದ ಸ್ವಾಗತಿಸುವುದು ತಪ್ಪೇನೂ ಅಲ್ಲ. ಆದರೆ ನಮ್ಮೊಳಗೊಂದು ಉನ್ಮಾದವನ್ನು ತುಂಬಿಕೊಳ್ಳುವುದಕ್ಕೆ ಅದು ನೆಪವಾಗಿಬಿಡುತ್ತದೆ. ಮರುದಿನ ಪತ್ರಿಕೆ ಬಿಡಿಸಿದರೆ ಹೊಸವರ್ಷದ ಉನ್ಮತ್ತ ಆಚರಣೆಗಳಿಗೆ ಸಂಬಂಧಿಸಿದ ಅವಘಡಗಳು ವರದಿಯಾಗಿರುತ್ತವೆ. ನಶೆಯಲ್ಲಿ ಹೆಣ್ಮಕ್ಕಳ ಮೇಲೆ ಬಿದ್ದಿದ್ದು, ಚುಡಾಯಿಸಿದ್ದು ಹಾಗೂ ಕುಡಿದು ಗಾಡಿ ಓಡಿಸಿ ಅಪಘಾತಗಳಿಗೆ ಕಾರಣವಾಗಿದ್ದು ಹೀಗೆ ಆತಂಕಗಳ ಅಲೆ ಬಿಚ್ಚಿಕೊಳ್ಳುತ್ತದೆ. ಹೆಚ್ಚಿನ ಅವಘಡಗಳಿಗೆ ಕಾರಣ ಡಿಸೆಂಬರ್ 31ರ ರಾತ್ರಿಗೆ ಶುರುವಾಗುವ ಮಿತಿಮೀರಿದ ಕುಡಿತ. ಹಾಗಂತ ಕುಡಿದು ಗಾಡಿ ಓಡಿಸುವ ವಿದ್ಯಮಾನ ಹೊಸವರ್ಷದ ಸ್ವಾಗತದ ರಾತ್ರಿಗಷ್ಟೇ ಸೀಮಿತವಾದ ವಿದ್ಯಮಾನವೇನೂ ಅಲ್ಲ. ಆದರೆ ಅವತ್ತಿನ ದಿನ ಕುಡಿತದ ವಿರಾಟ್‌ರೂಪ.
'ನಮ್ಮ ದುಡ್ಡು, ನಾವು ಕುಡಿತೀವಿ. ಕುಡಿದು ಆರೋಗ್ಯ ಕೆಡಿಸಿಕೊಳ್ಳಬೇಡಿ ಎಂಬ ಹಳಸಲು ಉಪದೇಶದ ಅವಶ್ಯ ನಮಗೇನಿಲ್ಲ. ಹೊಸವರ್ಷದ ನಮ್ಮ ಖುಷಿಯನ್ನು ನಮಗೆ ಥ್ರಿಲ್ ಕೊಡುವ ಮಾರ್ಗದಲ್ಲಿ ಆಚರಿಸುತ್ತೇವೆ. ನಿಮಗೆ ಇಷ್ಟವಿಲ್ಲದಿದ್ದರೆ ನೀವು ಸೆಲಿಬ್ರೇಟ್ ಮಾಡ್ಬೇಡಿ' ಅಂತ ಸಿಟ್ಟಾಗುವವರಿಗೆ ಹೇಳಬೇಕಾದ ಕತೆಯೊಂದು ಇಲ್ಲಿದೆ. ಇಂಟರ್ನೆಟ್‌ನಲ್ಲಿ ಪದ್ಯರೂಪದಲ್ಲಿ ಸಿಕ್ಕ ಈ ತುಣುಕು ಎಂಥವರನ್ನೂ ಒಂದು ಸಲ ಕದಲಿಸಿಬಿಡುವಂಥದ್ದು.
ಆ ಹುಡುಗ ಮಾತಿಗಾರಂಭಿಸಿದ್ದಾನೆ. ಆತ ತನ್ನಮ್ಮನಿಗೆ ಹೇಳಬೇಕು ಅಂತ ಶುರುಮಾಡಿದ್ದಾನೆ. ಆದರೆ ಅವನ ಮಾತುಗಳು ಶಬ್ದವಾಗದೇ ಉಳಿದಿವೆ. ಕಾರಣ, ಆತ ಮರಣಶಯ್ಯೆಯಲ್ಲಿದ್ದಾನೆ.
ಅಮ್ಮಾ... ನಾನು ಪಾರ್ಟಿಗೆ ಹೋಗಿದ್ದೆ. ಹೆದರಬೇಡಮ್ಮ, ನಿನ್ನ ಮಾತುಗಳನ್ನು ನೆನಪಿಟ್ಟುಕೊಂಡೇ ಅಲ್ಲಿಗೆ ಹೋಗಿದ್ದೆ. ಹೀಗಾಗಿ ಅಪ್ಪಿತಪ್ಪಿಯೂ ಮದ್ಯದ ಸಹವಾಸಕ್ಕೆ ಹೋಗಲಿಲ್ಲ. ಕುಡಿಬೇಡ ಮಗನೇ ಎಂಬ ನಿನ್ನ ಹಿತವಾದ ಮಾತು ನನ್ನ ಎದೆಯಲ್ಲಿ ಅಚ್ಚೊತ್ತಿತ್ತು. ಹಾಗೆಂದೇ ಎಲ್ಲರ ಜತೆ ನಿಂತು ಸಂಭ್ರಮಕ್ಕೆ ಮುಖ ಎತ್ತರಿಸಿದ ನಾನು, ಏನಾದರೂ ತೆಗೆದುಕೊಳ್ಳಬೇಕಲ್ಲ ಎಂಬ ಕಾರಣಕ್ಕೆ ಸೋಡಾ ಕುಡಿದೆ.
ಅಮ್ಮಾ, ನಂಗೆ ತುಂಬಾ ಹೆಮ್ಮೆಯಿದೆ. ನಿನ್ನ ಮಾತಿಗೆ ಚ್ಯುತಿ ತರಲಿಲ್ಲ ನಾನು ಎಂಬ ಕಾರಣಕ್ಕೆ. ಇವತ್ತೊಂದಿನ ಕುಡಿ ಏನಾಗಲ್ಲ ಎಂದು ಸ್ನೇಹಿತರೆಲ್ಲ ಒತ್ತಾಯಪಡಿಸಿದರು. ಕುಡಿದಾಕ್ಷಣ ಗಾಡಿ ಓಡಿಸುವುದಕ್ಕೆ ಕಷ್ಟವಾಗುತ್ತೆ ಅನ್ನೋದೆಲ್ಲ ಸುಳ್ಳು ಕಣೋ ಎಂದು ಪುಸಲಾಯಿಸಿದರು. ಅವೆಲ್ಲ ಆಮಿಷಗಳ ನಡುವೆಯೂ ನನಗೆ 'ಯಾವತ್ತೂ ಕುಡಿದು ಗಾಡಿ ಓಡಿಸಬೇಡ ಮಗನೇ' ಎಂಬ ನಿನ್ನ ಮಾತುಗಳೇ ಹಿತವೆನಿಸಿ ಕಾಡಿದವು. ಅಮ್ಮಾ.. ನೀನು ಯಾವತ್ತೂ ನಿಜದ ದಾರಿಯನ್ನೇ ತೋರುತ್ತಿ. ಹೀಗಾಗಿ ಮದ್ಯ ಸೇವಿಸದೇ ನಾನು ಆ ಪಾರ್ಟಿಯನ್ನು ಮುಗಿಸಿದೆ ಎಂಬ ಬಗ್ಗೆ ನನಗೆ ಹೆಮ್ಮೆಯಿದೆ. ಎಲ್ಲರೂ ಅತ್ತಿತ್ತ ಚದುರಿದಾಗ ನಾನು ಬಹಳ ಹೆಮ್ಮೆಯಿಂದ ಕಾರು ಹೊಕ್ಕು ಸ್ಟಾರ್ಟ್ ಮಾಡಿದೆ. ಅವತ್ತು ಬೇರೆಯವರ ಕತೆ ಏನೋ ಗೊತ್ತಿಲ್ಲ, ಆದರೆ ನನ್ನಮ್ಮ ನನ್ನನ್ನು ಎಚ್ಚರಿಕೆಯಿಂದ ಬೆಳೆಸಿದ್ದಾರಾದ್ದರಿಂದ ನಶಾರಹಿತವಾಗಿ ಸುರಕ್ಷಿತವಾಗಿ ಮನೆ ಸೇರುತ್ತೇನೆಂಬ ವಿಶ್ವಾಸದಲ್ಲಿ ಹೊರಟೆ.
ಸ್ವಲ್ಪ ಹೊತ್ತಿನಲ್ಲೇ ಯಾವುದೋ ಹಸ್ತವೊಂದು ರಪ್ಪನೇ ಹೊಡೆದಂತೆ ನಾನು ಕಾರಿನಿಂದ ಚಿಮ್ಮಿ ಬಿದ್ದೆ. ಎದುರುಬದಿಯಿಂದ ರಭಸವಾಗಿ ಬಂದ ಕಾರಿನವನಿಗೆ ನಾನು ಬರುತ್ತಿರುವುದೇ ಕಾಣಲಿಲ್ಲ! ಜನ ಸುತ್ತುವರೆದಿದ್ದಾರೆ. ರಕ್ತದ ಮಡುವಿನಲ್ಲಿ ನಾನಿದ್ದೇನೆ. 'ಎದುರುಬದಿಯಿಂದ ಬಂದ ಕಾರಿನವ ಸಿಕ್ಕಾಪಟ್ಟೆ ಡ್ರಿಂಕ್ಸ್ ತಗೊಂಡಿದ್ದ ' ಎಂಬ ಪೊಲೀಸನ ಮಾತು ಕೇಳುತ್ತಿದೆ. ಕುಡಿದಿದ್ದು ಅವನು, ಬೆಲೆ ತೆರುತ್ತಿರುವುದು ನಾನು! ಯಾಕಮ್ಮಾ... ಯಾಕಮ್ಮಾ ನನ್ನ ಬದುಕು ಬಲೂನಿನಂತೆ ಒಡೆದುಹೋಯಿತು?
ಈಗ ನಾನು ಆಸ್ಪತ್ರೆಯಲ್ಲಿದ್ದೇನೆ. ನನ್ನ ಸುತ್ತಲಿರುವ ವೈದ್ಯರು, 'ಇವನನ್ನು ಉಳಿಸಿಕೊಳ್ಳುವುದು ಕಷ್ಟ' ಎನ್ನುತ್ತಿದ್ದಾರೆ. ಜೀವ ಹೋಗುವುದರೊಳಗೆ ನೀನು ಬಳಿ ಬಂದರೆ ಸಾಕು. ಒಂದೇ ಒಂದು ಮಾತು ಹೇಳಬೇಕಮ್ಮ... ಆಣೆ ಮಾಡಿ ಹೇಳ್ತೀನಿ, ನಾನು ಕುಡಿದಿರಲಿಲ್ಲ. ಯಾಕಮ್ಮಾ ಜನ ಕುಡಿದು ಗಾಡಿ ಓಡಿಸುತ್ತಾರೆ? ಅದು ಜೀವದ ಪ್ರಶ್ನೆ ಅಲ್ಲವಾ? ಅವರದ್ದಲ್ಲ, ಉಳಿದವರದ್ದು. ಯಾತನೆ ನನ್ನನ್ನು ಚೂರಿಯಂತೆ ಇರಿಯುತ್ತಿದೆ. ನನಗೆ ತಂದು ಗುದ್ದಿದ ಮನುಷ್ಯ ಓಡಾಡುತ್ತಲೇ ಇದ್ದಾನೆ. ನನ್ನನ್ನು ನೋಡುತ್ತ ಇರುವುದು ಬಿಟ್ಟರೆ ಅವನಿಗೆ ಮಾಡಲೇನೂ ಉಳಿದಿಲ್ಲ. ಇದು ನ್ಯಾಯವಾ?
ಅಮ್ಮ... ತಮ್ಮನಿಗೆ ಅಳಬೇಡ ಎಂದು ಹೇಳು. ಅಪ್ಪನಿಗೂ ಧೈರ್ಯ ತುಂಬು. 'ನಾನೊಬ್ಬ ಒಳ್ಳೆ ಹುಡುಗ' ಎಂಬ ಪ್ರಶಂಸೆಯೊಂದಿಗೆ ಸ್ವರ್ಗಕ್ಕೆ ಕಳುಹಿಸಿಕೊಡಿ. ನೆನಪಿಸಿಕೊಂಡಾಗಲೆಲ್ಲ ನಾನು ನಿನ್ನ ಸಾನಿಧ್ಯದಲ್ಲಿರುತ್ತೇನೆ ಅಂದುಕೋ ಅಮ್ಮಾ.. ನನ್ನದಿನ್ನೇನು ಕೆಲಕ್ಷಣಗಳ ಗುಟುಕು ಜೀವ. ಹೋಗುವ ಮುಂಚೆ ಉಳಿದಿರುವ ಪ್ರಶ್ನೆಯೊಂದೇ ಅಮ್ಮಾ.... 'ನಾನೇನೂ ಕುಡಿದು ಗಾಡಿ ಓಡಿಸಿಲ್ಲ. ಆದರೆ ಸಾಯುತ್ತಿರುವುದೇಕೆ?'
ಐವೈಫ್ ಹೇಗಿರುತ್ತದೆ?
ಐಫೋನ್, ಐಪ್ಯಾಡ್, ಇಪಾಡ್‌ಗಳನ್ನು ರೂಪಿಸಿದ ಸ್ವೀವ್ ಜಾಬ್ಸ್ ಒಂದು ವೇಳೆ ಐವೈಫ್‌ನ್ನು ಮಾರುಕಟ್ಟೆಗೆ ಬಿಟ್ಟರೆ ಅದು ಹೇಗೆ ಇರುತ್ತಿತ್ತು? ಹೀಗೊಂದು ಕಲ್ಪನೆ.
ಅದರ ಡಿಸೈನ್ ಅತ್ಯಂತ ಸುಂದರ, ಸ್ಲಿಮ್, ಬುದ್ಧಿವಂತ. ವಿಧೇಯವಾಗಿರುತ್ತಿತ್ತು. ಅದನ್ನು ಖರೀದಿಸಿದ ಗಂಡಸನ್ನು ಸಂದೇಹದಿಂದ ನೋಡುತ್ತಿರಲಿಲ್ಲ. ಹೇಳಿದ್ದೆಲ್ಲವನ್ನೂ ಮಾಡುತ್ತಿತ್ತು. ಸ್ವಲ್ಪವೂ ಕಿರಿಕಿರಿ ಕೊಡುತ್ತಿರಲಿಲ್ಲ. ಬ್ಯಾಟರಿ ಬೇಗ ಬತ್ತಿ ಹೋಗುತ್ತಿರಲಿಲ್ಲ. ಇವೆಲ್ಲಕ್ಕಿಂತ ಮುಖ್ಯವಾಗಿ ಮ್ಯೂಟ್ ಬಟನ್ ಇದೆ. ಸಮಸ್ಯೆಯೇನೆಂದರೆ 2060ರ ತನಕ ಬುಕಿಂಗ್ ಫುಲ್ ಆಗಿದೆ!
ಕಾಲ ಬದಲಾದಾಗ!
ದಿಲ್ಲಿಯಲ್ಲಿ ಮರ್ಸಿಡಿಸ್ ಕಾರೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆಯಿತು. ಸ್ಕೂಟರ್ ಸವಾರ ಹಾಗೂ ಕಾರ್ ಡ್ರೈವರ್ ಮಧ್ಯೆ ಮಾತಿನ ಚಕಮಕಿಯ ಒಂದು ಕಲ್ಪಿತ ಸಂಭಾಷಣೆ.
ಕಾರಿನ ಡ್ರೈವರ್- 'ಮಗನೇ, ನಾನು ಯಾರು ಗೊತ್ತಾ? ನನ್ನ ಅಪ್ಪ ಪೊಲೀಸ್ ಕಮಿಷನರ್. ಹೆಚ್ಚು ಆವಾಜ್ ಹಾಕಬೇಡ, ಒದ್ದು ಒಳ ಹಾಕಿಸುತ್ತೇನೆ ಹಾಂ...!'
ಸ್ಕೂಟರ್ ಸವಾರ-'ಭಾಯ್ ನಾನು ಯಾರು ಗೊತ್ತಾ? ದಿಲ್ಲಿಯ ನೂತನ ಮುಖ್ಯಮಂತ್ರಿ'
ಓಶೋ ಹಾಗೂ ರಾತ್ರಿ ಶಾಲೆ
ಓಶೋ ರಜನೀಶ ನೆನಪಿನಲ್ಲಿ ಅವೆಷ್ಟು ಕತೆ, ಉಪಕತೆ, ದೃಷ್ಟಾಂತ, ಹಾಸ್ಯ ಪ್ರಸಂಗಗಳಿದ್ದವು. ಅದನ್ನು ಅವರು ಸಂದರ್ಭಕ್ಕೆ ಸರಿಯಾಗಿ ಉಪಯೋಗಿಸುತ್ತಿದ್ದರು. ಅವರು ಒಂದು ಗಂಟೆ ಉಪನ್ಯಾಸ ನೀಡಿದರೆ, ಕನಿಷ್ಠ ಹತ್ತು ಕತೆಗಳನ್ನು ಹೇಳಿರುತ್ತಿದ್ದರು. ಕತೆ, ದೃಷ್ಟಾಂತಗಳೇ ಅವರ ಉಪನ್ಯಾಸವಾಗಿರುತ್ತಿದ್ದವು. ಈ ಕಾರಣದಿಂದ ಅವರ ಮಾತು ಎಲ್ಲರನ್ನೂ ಆಕರ್ಷಿಸುತ್ತಿತ್ತು.
ಮೊರಾರ್ಜಿ ದೇಸಾಯಿಯವರು ರಾತ್ರಿ ಶಾಲಾ, ಕಾಲೇಜನ್ನು ಆರಂಭಿಸುವ ಪ್ರಸ್ತಾಪವನ್ನಿಟ್ಟಾಗ ಪ್ರತಿಕ್ರಿಯೆ ಕೋರಿ ಪತ್ರಕರ್ತರು ಓಶೋ ಅಭಿಪ್ರಾಯ ಬಯಸಿದರು. 'ಮೊರಾರ್ಜಿ ಈ ಯೋಚನೆ ಸರಿ ಅಲ್ಲ. ವಿದ್ಯೆ ಹೇಳಿಕೊಡುವವರು ಹಾಗೂ ಕಲಿಯುವವರು ರಾತ್ರಿ ವೇಳೆ ದಣಿದಿರುತ್ತಾರೆ. ದಣಿದ ಮನಸ್ಸು ಹೊಸ ಸಂಗತಿಗಳನ್ನು ಕಲಿಯಲು ನಿರಾಕರಿಸುತ್ತದೆ ' ಎಂದರು ಓಶೋ. ಅದಕ್ಕೆ ಪತ್ರಕರ್ತರು 'ಅದೇಗೆ ಹೇಳ್ತೀರಾ? ಯಾವಾಗ ಬೇಕಾದರೂ ಹೊಸ ಸಂಗತಿಗಳನ್ನು ಕಲಿಯಬಹುದಲ್ಲ?' ಎಂದರು. 'ನಾನು ಆ ಅರ್ಥದಲ್ಲಿ ಹೇಳಿಲ್ಲ. ಮನಸ್ಸು ಪ್ರಫುಲ್ಲಿತವಿದ್ದಾಗ ಹೊಸ ವಿಷಯ ಹೇಳಿದರೆ ಬಹುಬೇಗ ಅರ್ಥವಾಗುತ್ತದೆ. ಈ ಕಾರಣದಿಂದ ರಾತ್ರಿ ಶಾಲೆ ಯೋಚನೆ ಒಳ್ಳೆಯದಲ್ಲ ಎಂದು ಹೇಳಿದೆ' ಎಂದು ಸಮಜಾಯಿಷಿ ನೀಡಿದರು ಓಶೋ.
ಇಷ್ಟಾದರೂ ಪತ್ರಕರ್ತರು ಬಿಡಲಿಲ್ಲ. ಈ ವಿಷಯದ ಬಗ್ಗೆ ಕುಕ್ಕಿ ಕುಕ್ಕಿ ಪ್ರಶ್ನೆಗಳನ್ನು ಹರಿಯಬಿಟ್ಟರು. ಹೇಳುವಷ್ಟು ಹೇಳಿದ ಬಳಿಕ ಓಶೋ ಒಂದು ಪೋಲಿ ಪ್ರಸಂಗವನ್ನು ಹೇಳಿದರು.
ಒಮ್ಮೆ ಅಲೋಕನಾಥ್ ಮೇಷ್ಟ್ರು ರಾತ್ರಿ ಶಾಲೆಯಲ್ಲಿ ಪಾಠ ಮಾಡುತ್ತಾ ವಿದ್ಯಾರ್ಥಿಗಳಿಗೆ ಪ್ರಶ್ನೆಗಳನ್ನು ಕೇಳುತ್ತಿದ್ದರು. 'ರೋನಾಲ್ಡ್ ರೇಗನ್ ಯಾರು ಗೊತ್ತಾ? ಅಂತ ಕೇಳಿದರು. ಅದಕ್ಕೆ ವಿದ್ಯಾರ್ಥಿಗಳು 'ಸಾರ್. ಅವರು ಯಾರು ಅಂತ ಗೊತ್ತಿಲ್ಲ' ಎಂದರು. 'ವಿದ್ಯಾರ್ಥಿಗಳೇ, ಅವರು ಅಮೆರಿಕದ ಅಧ್ಯಕ್ಷರು' ಎಂದು ಮೇಷ್ಟ್ರು ಹೇಳಿದಾಗ ವಿದ್ಯಾರ್ಥಿಗಳು ಹಾಂ ಎಂದು ತಲೆದೂಗಿದರು.
ಅಲೋಕನಾಥ್ ಮೇಷ್ಟ್ರ ಮುಂದಿನ ಪ್ರಶ್ನೆ 'ವಿದ್ಯಾರ್ಥಿಗಳೇ, ಮಾರ್ಗರೆಟ್ ಥ್ಯಾಚರ್ ಯಾರು ಗೊತ್ತಾ?' ಯಾವ ವಿದ್ಯಾರ್ಥಿಗೂ ಉತ್ತರ ಗೊತ್ತಿರಲಿಲ್ಲ. ಆಗ ಅಲೋಕನಾಥ್ ಮೇಷ್ಟ್ರು 'ವಿದ್ಯಾರ್ಥಿಗಳೇ, ಮಾರ್ಗರೆಟ್ ಥ್ಯಾಚರ್ ಬ್ರಿಟನ್‌ನ ಪ್ರಧಾನಿ' ಎಂದರು. ವಿದ್ಯಾರ್ಥಿಗಳು ಹಾಂ ಎಂದು ತಲೆದೂಗಿದರು.
ಮೇಷ್ಟ್ರು ಮುಂದಿನ ಪ್ರಶ್ನೆ ಕೇಳುವ ಮೊದಲು ಮಹಾತರಲೆ ವಿದ್ಯಾರ್ಥಿಯೊಬ್ಬ  ಎದ್ದು ನಿಂತು 'ಮೇಷ್ಟ್ರೇ, ಕೇಷ್ಟು ಉಪಾಧ್ಯಾಯರು ಯಾರು ಗೊತ್ತಾ?' ಎಂದು ಕೇಳಿದ.
ಅಲೋಕನಾಥ್ ಮೇಷ್ಟ್ರು 'ಕೇಷ್ಟು ಉಪಾಧ್ಯಾಯಾನಾ? ಯಾರವನು? ಗೊತ್ತಾಗ್ತಾ ಇಲ್ವಲ್ಲ... ಕೇಷ್ಟು?... ಉಪಾಧ್ಯಾಯ?... ಕೇಷ್ಟು...? ಇಲ್ಲ ಅವರು ಯಾರೆಂಬುದು ಗೊತ್ತಿಲ್ಲ' ಎಂದರು. ಅದಕ್ಕೆ ಆ ವಿದ್ಯಾರ್ಥಿ ಹೇಳಿದ- 'ನೀವು ರಾತ್ರಿ ಇಲ್ಲಿ ಪಾಠ ಮಾಡುತ್ತಿರುವಾಗ, ನಿಮ್ಮ ಮನೆಯಲ್ಲಿ ನಿಮ್ಮ ಪತ್ನಿಯೊಂದಿಗೆ ಇರ್ತಾರಲ್ಲ... ಡೇ ಸ್ಕೂಲ್ ಮೇಷ್ಟ್ರು ಅವರೇ ಕೇಷ್ಟು ಉಪಾಧ್ಯಾಯರು.'
ಪತ್ರಕರ್ತರು ಬಿದ್ದೂ ಬಿದ್ದು ನಕ್ಕರು. ಪತ್ರಿಕಾಗೋಷ್ಠಿ ಮುಗಿದು ಹೋಯಿತು. ಪತ್ರಕರ್ತರು ಹೊರಡಲು ಅನುವಾದಾಗ ಅವರನ್ನು ಕರೆದು ಓಶೋ ಹೇಳಿದರು-'ಈ ಸುದ್ದಿಗೆ Os‌h‌o s‌c‌re​ws n‌i‌g‌ht s‌c‌h‌o‌ol  ಅಂತ ಶೀರ್ಷಿಕೆ ಕೊಡಿ'.

- ವಿಶ್ವೇಶ್ವರ ಭಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com