

ನಾನು ಚಿಕ್ಕವನಿದ್ದಾಗ ಅಮ್ಮ ಐದು ರುಪಾಯಿ ಕೊಟ್ಟು ಅಂಗಡಿಗೆ ಹೋಗಿ ಎರಡು ಕೆಜಿ ಅಕ್ಕಿ, ಒಂದು ಕೆಜಿ ಎಣ್ಣೆ ತೆಗೆದುಕೊಂಡು ಬಾ ಅಂತಿದ್ದರು. ನಾನು ಅಷ್ಟೇ ಹಣದಲ್ಲಿ ಚಾಕಲೇಟ್. ಬಿಸ್ಕೀಟ್ ಬಾಕ್ಸ್, ನೋಟ್ಬುಕ್, ಪೆನ್ನು, ಪೆನ್ಸಿಲ್, ಇರೇಸರ್, ಕಂಪಾಸ್ಬಾಕ್ಸ್ ಎಲ್ಲವನ್ನೂ ತರುತ್ತಿದ್ದೆ.
ಇಬ್ಬರು ವಯಸ್ಸಾದವರು ಭೇಟಿಯಾದಾಗ 'ಕಾಲ ಕೆಟ್ಟು ಹೋಯ್ತು, ನಮ್ಮ ಕಾಲದಲ್ಲಿ ಹೀಗಿರಲಿಲ್ಲ. ಆಗ ಎಷ್ಟು ಚೆನ್ನಾಗಿತ್ತು' ಎಂದು ಮುಲುಗುವುದು, ಮೆಲುಕು ಹಾಕುವುದು ಸಹಜ. ನಾವು ಚಿಕ್ಕಂದಿನಿಂದಲೂ ವಯಸ್ಸಾದವರು ಹೀಗೆ ಹೇಳುವುದನ್ನು ಕೇಳಿದ್ದೇವೆ. ಪ್ರಾಯಶಃ ನಮಗೆ ವಯಸ್ಸಾದಾಗ ನಾವೂ ಇದೇ ರೀತಿ ಗೊಣಗಬಹುದು. ಇದು ಕಾಲದ ದೋಷವೊ, ವಯಸ್ಸಿನ ದೋಷವೊ ಗೊತ್ತಿಲ್ಲ.
ಸಿದ್ದವನಹಳ್ಳಿ ಕೃಷ್ಣಶರ್ಮ ಅವರು 1968ರಲ್ಲಿ 'ಕನ್ನಡಪ್ರಭ' ಪತ್ರಿಕೆಯಲ್ಲಿ ಒಂದು ಲೇಖನ ಬರೆದಿದ್ದರು. 'ಕನ್ನಡ ಪತ್ರಿಕೆಗಳು ಭಾಷೆಯನ್ನು ವಿರೂಪಗೊಳಿಸುತ್ತಿವೆ. ತಮಗೆ ಬೇಕಾದಂತೆ ಪದಗಳನ್ನು ಟಂಕಿಸುತ್ತಿವೆ. ವ್ಯಾಕರಣಕ್ಕೆ ಅಸಡ್ಡೆ ತೋರುತ್ತಿವೆ. ಕನ್ನಡ ವ್ಯಾಕರಣ ಗೊತ್ತಿಲ್ಲದಿರುವವರೆಲ್ಲ ಪತ್ರಿಕೆ ಸೇರುತ್ತಿದ್ದಾರೆ. ಮುಂದೊಂದು ದಿನ ಇದು ಘೋರ ಅನಾಹುತಕ್ಕೆ ಆಸ್ಪದ ಕಲ್ಪಿಸಬಹುದು. ಈ ನಿಟ್ಟಿನಲ್ಲಿ ಗಮನಹರಿಸಬೇಕು' ಎಂದು 'ಸಂಪಾದಕರಿಗೆ ಪತ್ರ' ವಿಭಾಗದಲ್ಲಿ ಬರೆದಿದ್ದರು. 'ನಮ್ಮ ಕಾಲದಲ್ಲಿ ಪತ್ರಿಕಾಭಾಷೆ ಬಹಳ ಚೆನ್ನಾಗಿತ್ತು. ಈಗ ಹಾಳಾಗಿ ಹೋಗುತ್ತಿದೆ' ಎಂಬ ಆಶಯ ಆ ಪತ್ರದಲ್ಲಿತ್ತು.
ಎಪ್ಪತ್ತು-ಎಂಬತ್ತು ವರ್ಷ ದಾಟಿದವರು ಮಾತಿನ ಮಧ್ಯೆ, 'ಆ ಬ್ರಿಟಿಷರ ಆಳ್ವಿಕೆಯೇ ಚೆನ್ನಾಗಿತ್ತು. ಈಗ ಕಾಲ ಕೆಟ್ಟು ಹೋಯಿತು. ಅವರೇ ಇದ್ದಿದ್ದರೆ ಚೆನ್ನಾಗಿರುತ್ತಿತ್ತೇನೋ?' ಎಂದು ಅನಿಸುತ್ತದೆಂದು ಹೇಳುವುದನ್ನು ಕೇಳುತ್ತಿರುತ್ತೇವೆ. 'ನಿಮ್ಮದು ಚೆನ್ನಾಗಿಲ್ಲ, ನಮ್ಮ ಕಾಲವೇ ಚೆನ್ನಾಗಿತ್ತು' ಎಂದು ಪರೋಕ್ಷವಾಗಿ ಹೇಳುವ ಇರಾದೆಯೂ ಈ ಮಾತಿನ ಹಿಂದೆ ಇದ್ದಿರಬಹುದು. ಈ ಭಾವ ಎಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೆ ಮನ್ನಾ ಡೇ, ಮುಖೇಶ್, ರಫಿ, ಕಿಶೋರ್ ಹಾಡುಗಳು ಎಲ್ಲರ ಮನೆಯಲ್ಲಿ, ಕಾರಿನಲ್ಲಿ ನುಲಿಯುತ್ತಲೇ ಇರುತ್ತವೆ. 'ಕಾಲ ಕೆಟ್ಟುಹೋಯಿತು ಈಗ' ಎಂದು ಗಾಢವಾಗಿ ಅನಿಸಿದಷ್ಟೂ ಈ ಹಾಡುಗಳೆಲ್ಲ ಹೆಚ್ಚು ಹೆಚ್ಚು ಆಪ್ಯಾಯವಾಗುತ್ತಾ ಹೋಗುತ್ತವೆ.
ಇದು ಎಂಥ ವಿಚಿತ್ರ ಕಾಯಿಲೆಯೆಂದರೆ, 'ಈಗ ಕಾಲ ಕೆಟ್ಟು ಹೋಯ್ತು' ಎಂದು ಗೊಣಗುತ್ತಿರುತ್ತಾರಲ್ಲ. ಅವರೂ ತಮ್ಮ ಯೌವನದಲ್ಲಿ, ವಯಸ್ಸಾದವರು ಹಾಗೆ ಹೇಳುವುದನ್ನು ಕೇಳಿಸಿಕೊಂಡಿರುತ್ತಾರೆ. ಅಷ್ಟೇ ಅಲ್ಲ, ಕಾಲ ಕೆಟ್ಟು ಹೋಗಿಲ್ಲ ಎಂದು ವಾದವನ್ನೂ ಮಾಡಿರುತ್ತಾರೆ. ನಿಮ್ಮ ಯೌವನದಲ್ಲಿ ಕಾಲ ಎಷ್ಟು ಚೆನ್ನಾಗಿತ್ತು ಎಂಬುದು ನಮಗೆ ಗೊತ್ತಿಲ್ಲವಾ? ಎಂದು ಕೇಳದೇ ಬಿಡುವುದಿಲ್ಲ. ಈ ಮಾತಿನ ಹಿಂದೆ ಹಳೆಯದನ್ನು ಮೆಚ್ಚುವ, ಹೊಸತನ್ನು ತಕ್ಷಣ ಸ್ವೀಕರಿಸಲು ಸಾಧ್ಯವಾಗದ, ಹಳೆಯದನ್ನು ಬಿಟ್ಟುಕೊಡದ ಒಂದು ರೀತಿಯ ಇಬ್ಬಿಂದಿತನ ಇಣುಕುತ್ತಲೇ ಇರುವುದನ್ನು ಗಮನಿಸಬಹುದು.
ಖ್ಯಾತ ಸಾಹಿತಿ, ನಾಟಕಕಾರ, ವಾಗ್ಮಿ ಬರ್ನಾರ್ಡ್ ಷಾ ಐವತ್ತು ದಾಟುವ ತನಕ 'ನಮ್ಮ ಕಾಲದಲ್ಲಿ ಹೀಗಿರಲಿಲ್ಲ, ಈಗ ಕಾಲ ಕೆಟ್ಟುಹೋಯ್ತು' ಎಂಬ ಮಾತನ್ನು ಕೇಳಿದರೆ, 'ಹೌದೌದು ನಿಮ್ಮ ಕಾಲದಲ್ಲಿ ಹೀಗಿರಲಿಲ್ಲ. ಬಹಳ ಚೆನ್ನಾಗಿತ್ತು. ಆದರೆ ಕೆಡಿಸಿದ್ದು ನೀವೇ' ಎಂದು ತಿರುಗೇಟು ಕೊಡುತ್ತಿದ್ದರಂತೆ.
ಯಾರೇ ಆಗಲಿ ಮಾತಿನ ಆರಂಭದಲ್ಲಿ "When I Was Sixty, When I Was in London...' ಎಂದು ಹೇಳಿದರೆ ಒಂದು ಸಂಗತಿಯಂತೂ ಸ್ಪಷ್ಟ. ಅದೇನೆಂದರೆ ಅವರಿಗೆ ವಯಸ್ಸಾಗಿದೆ. ಹೀಗೆ ಹೇಳುವ ಜನರ ಮುಂದಿನ ಡೈಲಾಗೇ 'ಈಗ ಕಾಲ ಕೆಟ್ಟು ಹೋಯ್ತು. ನಾವು ಯುವಕರಾಗಿದ್ದಾಗ ಹೇಗಿತ್ತು ಗೊತ್ತಾ? ಆ ಕಾಲ ಎಷ್ಟು ಚೆನ್ನಾಗಿತ್ತು! ಈಗ ಅವೆಲ್ಲ ಬರೀ ನೆನಪು.'
ಇಲ್ಲಿ ಒಂದು ಪ್ರಸಂಗ ನೆನಪಿಗೆ ಬರುತ್ತದೆ. 'ಈಗ ಕಾಲ ಕೆಟ್ಟು ಹೋಯ್ತು...' ಧಾಟಿಯಲ್ಲಿ ವಯಸ್ಸಾದವರೊಬ್ಬರು ಮಾತು ಶುರುಮಾಡಿದರಂತೆ. ಅದಕ್ಕೆ ಮತ್ತೊಬ್ಬರು 'ಹೇಗೆ ಹೇಳ್ತೀರಾ ಕಾಲ ಕೆಟ್ಟು ಹೋಗಿದೆ ಅಂತ?' ಎಂದು ಕೇಳಿದರಂತೆ. ಅದಕ್ಕೆ ವಯಸ್ಸಾದವರು ಹೇಳಿದರಂತೆ- 'ನಾನು ಚಿಕ್ಕವನಿದ್ದಾಗ ಅಮ್ಮ ಐದು ರುಪಾಯಿ ಕೊಟ್ಟು ಅಂಗಡಿಗೆ ಹೋಗಿ ಎರಡು ಕೆಜಿ ಅಕ್ಕಿ, ಒಂದು ಕೆಜಿ ಎಣ್ಣೆ ತೆಗೆದುಕೊಂಡು ಬಾ ಅಂತಿದ್ದರು. ನಾನು ಅಷ್ಟೇ ಹಣದಲ್ಲಿ ಚಾಕಲೇಟ್. ಬಿಸ್ಕೀಟ್ ಬಾಕ್ಸ್, ನೋಟ್ಬುಕ್, ಪೆನ್ನು, ಪೆನ್ಸಿಲ್, ಇರೇಸರ್, ಕಂಪಾಸ್ಬಾಕ್ಸ್ ಎಲ್ಲವನ್ನೂ ತರುತ್ತಿದ್ದೆ. ಈಗ ಕಾಲ ಕೆಟ್ಟುಹೋಗಿದೆ. ಎಲ್ಲ ಅಂಗಡಿಗಳಲ್ಲೂ ಸೆಕ್ಯುರಿಟಿ ಕೆಮರಾ ಹಾಕಿಬಿಟ್ಟಿದ್ದಾರೆ.'
ಈಗೇನು ಮಾಡಲಿ?
ಕೋಲ್ಯ ಮತ್ತು ಆತನ ಗೆಳೆಯ ಬೇಟೆಯಾಡುವುದಕ್ಕೆಂದು ವೀರಾವೇಶದಿಂದ ಕಾಡಿಗೆ ಹೋದರು. ಎಷ್ಟು ಅಲೆದರೂ ಒಂದೇ ಒಂದು ಪ್ರಾಣಿಯೂ ಅವರ ಕಣ್ಣಿಗೆ ಬೀಳಲಿಲ್ಲ. ಕತ್ತಲಾಯಿತು. ಕೊನೆಗೆ ಸಾಕಾಗಿ, ಇನ್ನೇನು ವಾಪಸ್ ಹೊರಡಬೇಕು ಎನ್ನುವಷ್ಟರಲ್ಲಿ ಪಕ್ಕದ ಪೊದೆಯೊಂದರಿಂದ ಹುಲಿಯೊಂದು ಜೋರಾಗಿ ಗರ್ಜಿಸಿತು. ಗಾಬರಿಯಿಂದ ಕೋಲ್ಯನ ಗೆಳೆಯ ಮೂರ್ಛೆ ಹೋಗಿ ಮಕಾಡೆ ಮಲಗಿಬಿಟ್ಟ. ಕೋಲ್ಯ ಉಗುಳುನುಂಗುವುದಕ್ಕೂ ಸಾಧ್ಯವಾಗದಷ್ಟು ಹೆದರಿಬಿಟ್ಟ. ಆದರೂ ತುಸು ಸಮಯದ ನಂತರ ಹೇಗೋ ಧೈರ್ಯ ತಂದುಕೊಂಡು, ಹೆದರುತ್ತಾ ಮೊಬೈಲ್ನಿಂದ ಪೊಲೀಸ್ ಸ್ಟೇಷನ್ನಿಗೆ ಫೋನ್ ಮಾಡಿ ಮೆಲ್ಲಗೆ ಉಸುರಿದ, "ಸರ್ ನನ್ನ ಫ್ರೆಂಡ್ ಸತ್ತುಹೋಗಿದ್ದಾನೆ ಅನಿಸ್ತಾ ಇದೆ. ಏನು ಮಾಡ್ಬೇಕೋ ಗೊತ್ತಾಗ್ತಾ ಇಲ್ಲ. ಇಲ್ಲೇ ಹತ್ತಿರದಲ್ಲಿ ಹುಲಿ ಸದ್ದು ಕೇಳಿಸ್ತಾ ಇದೆ. ಏನು ಮಾಡ್ಲೋ ಗೊತ್ತಾಗ್ತಾ ಇಲ್ಲ ಸರ್." "ಹೆದರಬೇಡಿ ಸರ್. ಏನೂ ಆಗೋದಿಲ್ಲ. ಮೊದಲು ಅವರು ಸತ್ತಿದ್ದಾರೋ ಇಲ್ವೋ ಅನ್ನೋದನ್ನು ಖಾತರಿ ಪಡಿಸಿಕೊಳ್ಳಿ" ಎಂದು ಶಾಂತವಾಗಿ ಹೇಳಿತು ಆಕಡೆಯ ದನಿ. ಒಂದು ನಿಮಿಷ ಮೌನದ ನಂತರ ಜೋರಾಗಿ ಗುಂಡಿನ ಸದ್ದು ಕೇಳಿಸಿತು. ಕೋಲ್ಯ ಮತ್ತೆ ಫೋನಿನಲ್ಲಿ ಉಸುರಿದ, "ಸತ್ತ ಸರ್. ಈಗ ಏನು ಮಾಡ್ಲಿ?!'
ಮನಸ್ಸಿದ್ದಲ್ಲಿ ಮಾರ್ಗ
ಊರ ಹೊರಗಿನ ಹೊಲದಲ್ಲಿ ವಾಸವಾಗಿದ್ದ ವೃದ್ಧನೊಬ್ಬ ಜೈಲಿನಲ್ಲಿದ್ದ ತನ್ನ ಮಗನಿಗೆ ಪತ್ರ ಬರೆದ: "ಮುಪ್ಪಿನಲ್ಲಿ ನನಗೆ ದುಡಿಯಲು ಕಷ್ಟವಾಗುತ್ತಿದೆ. ಈ ವರ್ಷ ಹೊಲದಲ್ಲಿ ಆಲೂಗಡ್ಡೆ ಬೆಳಯಬೇಕು ಎಂದುಕೊಂಡಿದ್ದೇನೆ. ಆದರೆ ನೆಲ ತೋಡುವಷ್ಟು ಶಕ್ತಿ ಈಗ ನನ್ನ ತೋಳುಗಳಿಗಿಲ್ಲ. ನೀನು ನನ್ನ ಜೊತೆಗಿದ್ದಿದ್ದರೆ ಚೆನ್ನಾಗಿರುತ್ತಿತ್ತು." ಕೆಲವೇ ದಿನಗಳಲ್ಲಿ ಆ ವೃದ್ಧನಿಗೆ ಮಗನಿಂದ ಟೆಲಿಗ್ರಾಮ್ ಬಂದಿತು: "ಅಪ್ಪಾ, ಅಪ್ಪಿತಪ್ಪಿಯೂ ನೆಲ ತೋಡುವುದಕ್ಕೆ ಹೋದೀಯ ಹುಷಾರ್! ಅಲ್ಲಿ ನಾನು ಬಂದೂಕುಗಳನ್ನು ಬಚ್ಚಿಟ್ಟಿದ್ದೇನೆ!!"
ಮರುದಿನ ನಸುಕಿನಲ್ಲೇ ಆ ಹೊಲಕ್ಕೆ ನುಗ್ಗಿದ ಪೊಲೀಸರು ನೆಲ ತೋಡುತ್ತಾ ಬಂದೂಕು ಹುಡುಕಲು ಶುರುಮಾಡಿದರು. ಆದರೆ ಅಲ್ಲೇನೂ ಸಿಗಲೇ ಇಲ್ಲ. ಕೆಲವು ದಿನಗಳ ನಂತರ ಮಗನಿಂದ ಮತ್ತೊಂದು ಪತ್ರ ಬಂದಿತು: "ನನ್ನ ಕೈಲಾದ ಸಹಾಯ ಮಾಡಿದ್ದೇನೆ ಅಪ್ಪ. ಈಗ ಆರಾಮಾಗಿ ಆಲೂಗಡ್ಡೆ ಬೆಳಸು!"
ನೀತಿ: ನೀವು ಎಲ್ಲೇ ಇರಿ, ಎಂಥ ಪರಿಸ್ಥಿತಿಯಲ್ಲಿಯೇ ಇರಿ. ಏನಾದರೊಂದು ಕೆಲಸವನ್ನು ಮಾಡಲೇಬೇಕೆಂದು ಗಟ್ಟಿ ಮನಸ್ಸಿನಿಂದ ನಿರ್ಧರಿಸಿದಾಗ, ಮಾರ್ಗಗಳೂ ಸಿಗುತ್ತಾ ಹೋಗುತ್ತವೆ.
ಕೊನೆಯ ದಿನ
ವ್ಯಕ್ತಿತ್ವ ವಿಕಸನದ ಗುರು, ಲೇಖಕ ರಾಬಿನ್ ಶರ್ಮಾರ ಮಾತುಗಳು ಜೀವನವನ್ನು ನೋಡುವ ದೃಷ್ಟಿಕೋನವನ್ನು ಬದಲಾಯಿಸುತ್ತವೆ. "ಮನಸ್ಸೂ ಕೂಡ ಮೈಯಂತೆ. ಹಾಗೆಯೇ ಬಿಟ್ಟರೆ ಅದೂ ಕೂಡ ಜಿಡ್ಡುಗಟ್ಟಿಹೋಗುತ್ತದೆ. ಮೈಯಿಗೆ ಸ್ನಾನದಂತೆ, ಮನಸ್ಸಿಗೆ ಗುಣಾತ್ಮಕ ಸಂದೇಶವೆಂಬ ಸ್ನಾನದ ಅವಶ್ಯಕತೆಯಿರುತ್ತದೆ" ಎನ್ನುತ್ತಾರವರು. ಇತ್ತೀಚೆಗೆ ಅವರು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದ ಸಾಲುಗಳು...
"ಮನುಷ್ಯನಾಗಿ ಹುಟ್ಟಿದ ಮೇಲೆ ಹತ್ತು ಮಂದಿ ಮೆಚ್ಚುವಂತೆ ಬದುಕಬೇಕು ಎಂಬುದು ನನ್ನ ವಾದ ಮತ್ತು ಸಿದ್ಧಾಂತ. ಮೆಚ್ಚಲೇಬೇಕು ಎಂದರೆ, ಸಾಧ್ಯವಾದಷ್ಟು ಒಳ್ಳೆಯ ಕೆಲಸಗಳನ್ನು ಮಾಡಬೇಕು. ಒಳ್ಳೆಯ ಕೆಲಸ ಮಾಡಬೇಕು ಎಂದರೆ 'ನಾಳೆಗೆ ಬದುಕಿರುತ್ತೇನೆ ಎಂಬ ಯಾವ ಗ್ಯಾರಂಟಿಯೂ ಇಲ್ಲ. ಇವತ್ತೇ ನನ್ನ ಬದುಕಿನ ಕೊನೆಯ ದಿನ' ಎಂದು ಮನಸ್ಸಿಗೆ ಹೇಳಿಕೊಳ್ಳಬೇಕು. ನಾಳೆ ಎನ್ನುವುದೇ ಸುಳ್ಳು ಎನ್ನುವ ಖಚಿತ ಸಂದೇಶ ಮನಸ್ಸಿಗೆ ತಲುಪಿಬಿಟ್ಟರೆ, ಏನಾದರೂ ಒಳ್ಳೆಯ ಕೆಲಸ ಮಾಡಬೇಕು ಎಂಬ ಆಸೆ ಜೊತೆಯಾಗುತ್ತದೆ. ಇವತ್ತೇ ಜೀವಿತಾವಧಿಯ ಕಡೆಯ ದಿನ ಅಂದುಕೊಂಡೇ ಬದುಕಿ. ಎಲ್ಲವನ್ನೂ ವಿಶಾಲ ಮನಸ್ಸಿನಿಂದ ನೋಡಿ. ಹತ್ತು ಮಂದಿಗೆ ಒಳ್ಳೆಯದಾಗುತ್ತದೆ ಎಂದರೆ, ತೀರಾ ಅನಿವಾರ್ಯವಾಗಿ ಒಂದು ಸುಳ್ಳು ಹೇಳುವುದಕ್ಕೂ ಸಿದ್ಧರಾಗಿ."
ಮೀನಿಗೂ ನೀರಿಗೂ ಏನು ಸಂಬಂಧ?
ಪಾರ್ಕಿನಲ್ಲಿ ವಾಕಿಂಗ್ ಮಾಡುತ್ತಿದ್ದ ಯುವಕನೊಬ್ಬನ ದೃಷ್ಟಿ ಬೆಂಚ್ ಒಂದರ ಮೇಲೆ ನಿಂತಿದ್ದ ಮುದುಕನತ್ತ ಹೋಯಿತು. ಆ ಮುದುಕ ತನ್ನೆದುರಿನ ಹುಲ್ಲಿನ ಮೇಲೆ ಗಾಳ ಹಾಕುವವನಂತೆ ನಟಿಸತೊಡಗಿದ. ಇದನ್ನು ನೋಡಿದ ಆ ಯುವಕ ಕೇಳಿದ: "ಅಜ್ಜ, ಏನು ಮಾಡ್ತಾ ಇದೀಯಾ?"
"ಕಾಣಿಸ್ತಾ ಇಲ್ವಾ? ಗಾಳ ಹಾಕಿ ಮೀನು ಹಿಡೀತಾ ಇದ್ದೀನಿ" ಎಂದಷ್ಟೇ ಹೇಳಿ ಮತ್ತೆ ಮುದುಕ ತನ್ನ ಕೆಲಸ ಶುರು ಮಾಡಿದ.
'ಅಲ್ಲ, ಇಲ್ಲಿ ನೀರೇ ಇಲ್ಲ. ಇನ್ನು ಮೀನು ಹೇಗೆ ಹಿಡೀತೀರಾ?!" ಎಂದು ನಗುತ್ತಾ ಆ ಯುವಕ ಕೇಳಿದ.
"ನೀರಿಗೂ ಮೀನಿಗೂ ಏನು ಸಂಬಂಧ?" ಎಂದ ಸಿಟ್ಟಿನಿಂದಲೇ ಮುದುಕ ಹುಲ್ಲಿನ ಮೇಲೆ ಮತ್ತೆ ಗಾಳ ಹಾಕಿದ.
ಮುದುಕನಿಗೆ ತಲೆ ಸರಿ ಇಲ್ಲ ಎನ್ನುವುದು ಯುವಕನಿಗೆ ಅರ್ಥವಾಯಿತು. ಕೂಡಲೇ ಆತನ ಬಳಿ ತೆರಳಿ ಕೈಗೆ ನೂರು ರುಪಾಯಿ ಇಟ್ಟು ಆ ಯುವಕ ಪ್ರೀತಿಯಿಂದ ಕೇಳಿದ, "ಬೆಳಗ್ಗೆಯಿಂದ ಎಷ್ಟು ಮೀನು ಹಿಡಿದ್ರಿ ?"
ಮುದುಕ ಒಂದು ಕ್ಷಣ ಇವನನ್ನೇ ದೃಷ್ಟಿಸಿ, ನಂತರ ಹೇಳಿದ: "ನಿನ್ನನ್ನೂ ಸೇರಿಸಿ ಆರು!!"
- ವಿಶ್ವೇಶ್ವರ ಭಟ್