ನೇತಾಜಿ ಜನ್ಮದಿನದಲ್ಲೇಕೆ ಆವರಿಸಿದೆ ಸೂತಕದ ಛಾಯೆ?

ಗಣರಾಜ್ಯೋತ್ಸವ ದಿನಾಚರಣೆಯ ಔಚಿತ್ಯದ ಬಗೆಗೆ ಅರವಿಂದ ಕೇಜ್ರಿವಾಲ್ ಪ್ರಶ್ನಿಸಿರುವ ಬಗೆ ಆಮ್ ಆದ್ಮಿಯಲ್ಲಿ ದಿಗಿಲು ಹುಟ್ಟಿಸಿರುವಂತೆಯೇ ದಿಗ್ಭ್ರಮೆ ಮೂಡಿಸುವ ಘಟನೆಯೊಂದು ಜನವರಿ 23 ರಂದು ಜರುಗಿ ಹೋಗಿದೆ. ಸಂಸತ್ ಭವನದ ಆವರಣದಲ್ಲಿ, ಹೂ ಪಕಳೆಗಳು ಚಿಗಿತುಕೊಳ್ಳಲಾಗದಷ್ಟು ಚಳಿ ಅಥವಾ ದಾರಿದ್ರ್ಯ ವಕ್ಕರಿಸಿಬಿಟ್ಟಿದೆಯೋ ಗೊತ್ತಿಲ್ಲ. ಇಲ್ಲ ಸೆಂಟ್ರಲ್ ಹಾಲ್ ಕಡೆ ಬರುವ ದಾರಿಯಲ್ಲಿ ಯಾರಾದರೂ ಧರಣಿ ಕೂತು ದಾರಿ ಬಂದ್ ಮಾಡಿದ್ದರೋ ಏನೋ... ಒಟ್ಟಿನಲ್ಲಿ ಗಣತಂತ್ರದ ಸಮಾರಂಭದುದ್ದಕ್ಕೂ ಎದೆ ಬೀಗಿಸಿಕೊಂಡು ನಮ್ಮ ದೇಶದ ಶಕ್ತಿಯ ಅನಾವರಣ ಮಾಡುವ ಸಾರ್ವಭೌಮತೆಗೆ ರಣತಂತ್ರ ಹೆಣೆದ, ಸುಭಾಶ್ಚಂದ್ರ ಬೋಸರ ಜನ್ಮ ದಿನವನ್ನು ನೆನಪಿಸಲಾಗದಷ್ಟು ಕೃತಘ್ನರಾಗಿಬಿಟ್ಟಿದ್ದಾರೆ ನಮ್ಮ ಸಂಸದರು. ಹತ್ತಿದ ಏಣಿಯನ್ನು ಮುಲಾಜಿಲ್ಲದೆ ಒದೆಯುವ ನಮ್ಮ ಕೆಲ ರಾಜಕಾರಣಿಗಳ ಕೆಟ್ಟ ಚಾಳಿ ಮತ್ತೆ ಮುಂದುವರೆದಿದೆ. ತನ್ನ ಬದುಕಿನ ವಿದ್ವತ್ತು, ಕುಶಾಗ್ರಮತಿಯನ್ನು ದೇಶದ ಸ್ವಾತಂತ್ರ್ಯಜ್ಯೋತಿಗೆ ರಕ್ತ ತೈಲದಂತೆ ಎರೆದು ಸಂಸತ್ ಭವನದಲ್ಲಿ ಪುತ್ಥಳಿ ರೂಪದಲ್ಲಿ ನಿಂತಿರುವ ನೇತಾಜಿಗೆ ಜನ್ಮದಿನದ ಗೌರವ ಅರ್ಪಿಸಿದ್ದು, ಉಭಯ ಸದನಗಳನ್ನು ಸೇರಿಸಿ 775 ಜನ ಸಂಸದರಿರುವ ಸಂಸತ್ತಿನಲ್ಲಿ ಬಿಜೆಪಿಯ ಹಿರಿಯ ಮುತ್ಸದ್ದಿ ಲಾಲ್ ಕೃಷ್ಣ ಆಡ್ವಾಣಿ ಅವರೊಬ್ಬರೇ ಎಂದಾದರೆ ಇದಕ್ಕಿಂತ ನಾಚಿಕೆಗೇಡಿನ ವಿಷಯ ಮತ್ತೊಂದಿದೆಯೇ?
ಜನ್ಮದಿನಗಳಿಗೆ ಈ ದೇಶಕ್ಕೇನೂ ಬರವಿಲ್ಲ ಬಿಡಿ. ನೆಹರೂ, ಇಂದಿರಾಗಾಂಧಿ, ರಾಜೀವ್ ಗಾಂಧಿಯಂಥವರ ಜನ್ಮದಿನಗಳಿಗೆ, ಪುಣ್ಯತಿಥಿಗಳಿಗೆ ಸ್ಪರ್ಧೆಗೆ ಬಿದ್ದವರಂತೆ ಮುತ್ತಿಕೊಳ್ಳುವ, ರಾಷ್ಟ್ರಾದ್ಯಂತ ಹಣ್ಣು ಹಂಪಲು ಹಂಚುವ ಮೂಲಕ ಕೃಪಾಕಟಾಕ್ಷಕ್ಕೆ ಹಾತೊರೆಯುವ ನಾಯಕರುಗಳಿಗೆ ಕೈತುಂಬಾ ಸಂಬಳ ತಂದುಕೊಡುವ ಐ.ಸಿ.ಎಸ್ ಪದವಿಯನ್ನು ಧಿಕ್ಕರಿಸಿ ಆಂಗ್ಲರ ವಿರುದ್ಧ ಚಳವಳಿಗೆ ಧುಮುಕಿದ ಬೋಸರು ನೆನಪೇ ಆಗಲಿಲ್ಲ. ಹಾಗೆಂದು ನೇತಾಜಿಗೆ ಜನ್ಮದಿನದ ಪ್ರಯುಕ್ತ ಹೂ ಹಾಕಿಸಿಕೊಳ್ಳುವ ದರ್ದೇನೂ ಇಲ್ಲ ಬಿಡಿ. ಆದರೆ ಈ ಘನಂದಾರಿ ನಾಯಕರುಗಳೆಲ್ಲ ಸೇರಿ ಬೋಸ್ರಂತಹ ಅಪ್ರತಿಮ ಹೋರಾಟಗಾರನನ್ನು ತಿರುಗಿಯೂ ನೋಡದೆ ಅಸ್ಪೃಶ್ಯನನ್ನಾಗಿ ಮಾಡಿದರಲ್ಲ, ಅಧಿಕಾರದ ಮದ ಇವರಿಗೆ ಅದೆಷ್ಟು ತಲೆಗಡರಿರಬಹುದು? ಅಷ್ಟಕ್ಕೂ ಸುಭಾಶ್ ಚಂದ್ರ ಬೋಸ್ ಇತಿಹಾಸದುದ್ದಕ್ಕೂ ಬಹುಪರಾಕ್ ಹಾಕಿಸಿಕೊಳ್ಳದೇ ನತದೃಷ್ಟರಾಗಿಯೇ ಉಳಿದವರು, ಯಾಕೆಂದರೆ ನಮ್ಮ ಕೆಲ ನಾಯಕರು ನೇತಾಜಿಯನ್ನು ನಾಯಕನನ್ನಾಗಿ ಒಪ್ಪಿಕೊಳ್ಳುವ ಗುಣಗಳನ್ನು ಆಗ ಮೈಗೂಡಿಸಿಕೊಳ್ಳಲೇ ಇಲ್ಲ. "ಬೋಸ್ ಬಂದರೆ ನಾನೇ ಕತ್ತಿ ಹಿಡಿದು ಆತನನ್ನು ಓಡಿಸುತ್ತೇನೆ" ಎಂದಾಡಿದ ನೆಹರೂ ಸಂತಾನದ ಮನೆಯ ಕಸ ಬಳಿಯುವುದರಲ್ಲೇ ಇದಕ್ಕಿಂತ ಪರಮ ಸುಖ ಕಾಣಬಲ್ಲವರು ಯಾಕಾದರೂ ನೇತಾಜಿಯನ್ನು ನೆನಪಿಸಿಕೊಂಡಾರು ಹೇಳಿ?
ಇವರೆಲ್ಲ ಕ್ರಾಂತಿಕಾರಿ ವರ್ಗಕ್ಕೆ ಸೇರಿದವರು, ಇವರನ್ನೆಲ್ಲ ಹೊಗಳಿದರೆ ಏನು ದಕ್ಕುತ್ತದೆ ಎಂಬ ನಿಲುಮೆಯಡಿಯಲ್ಲಿ ಮಣಿಶಂಕರ್ ಅಯ್ಯರ್ರಂಥವರೂ ವೀರಸಾವರ್ಕರ್ರಂಥವರನ್ನು ಬಾಯಿಗೆ ಬಂದ ಹಾಗೆ ತೆಗಳುತ್ತಾರೆ. ಪ್ರಪಂಚದಲ್ಲಿ ಪುಸ್ತಕ ಪೆನ್ನುಗಳಿಂದ ವಂಚಿತನಾಗಿ ಜೈಲಿನ ಗೋಡೆಗಳ ಮೇಲೆ ಸಾಹಿತ್ಯ ಸೃಷ್ಟಿಸಿ, ಸ್ವಾತಂತ್ರ್ಯದ ಕೆಚ್ಚನ್ನು ಕೆತ್ತಿದ, ದೇಶಕ್ಕಾಗಿ ಕರಿನೀರ ಶಿಕ್ಷೆ ಅನುಭವಿಸಿದ ಸಾವರ್ಕರ್ರಂಥ ಹೋರಾಟಗಾರರ ಕುರುಹುಗಳು ಅಂಡಮಾನ್ ಜೈಲಿನಲ್ಲರಬಾರದು. ಅವರ ಸಾಹಿತ್ಯವಿರುವ ಜಾಗದಲ್ಲೆಲ್ಲಾ ಗಾಂಧೀಜಿ ವಿಚಾರಗಳನ್ನು ಹಾಕಿ ಎಂದು ಲಜ್ಜೆಗೇಡಿತನದ ಆದೇಶನೀಡಿ, ಸ್ವಾತಂತ್ರ್ಯ ಹೋರಾಟಗಾರರ ಮಧ್ಯೆ ಜಗಳ ಹಚ್ಚಿಕೊಡುವ ಈ ಜನರಿಂದ ಏನನ್ನು ನಿರೀಕ್ಷಿಸಲು ಸಾಧ್ಯ ಹೇಳಿ? ಹೇಳಿ ಕೇಳಿ ಇವರು ಇವತ್ತಿನ ಜನನಾಯಕರು. ಇವರಿಂದ ನೇತಾಜಿ ಬಗೆಗೆ ಒಂದು ಒಳ್ಳೆ ಮಾತು ಬರಲು ಸಾಧ್ಯವೇ?
ಹಾಗೆ ನೋಡಿದರೆ ನೇತಾಜಿ ಬಗೆಗಿನ ನಿರ್ಲಕ್ಷ್ಯ ಧೋರಣೆ ಇಂದು ನಿನ್ನೆಯದಲ್ಲ. ಗಾಂಧೀಜಿಯಂತಹ ನಾಯಕರೂ ಕೂಡ ಬೋಸ್ ಬೆಳವಣಿಗೆ ಸಹಿಸಲಾರದೆ 1938ರ ಕಾಂಗ್ರೆಸ್ ಅಧಿವೇಶನದಲ್ಲಿ ತಮ್ಮ ಪಟ್ಟ ಶಿಷ್ಯ ಪಟ್ಟಾಭಿರಾಮಯ್ಯನಂತಹವರನ್ನು ಸ್ಪರ್ಧೆಗಿಳಿಸಿ ಕೈಸುಟ್ಟುಕೊಂಡವರೇ. ಯಾವಾಗ ನೇತಾಜಿ ಕಾಂಗ್ರೆಸ್ನ ಅಧ್ಯಕ್ಷರಾಗಿ ಅಭೂತಪೂರ್ವ ಗೆಲುವು ಸಾಧಿಸಿ ಕಾಂಗ್ರೆಸ್ನಲ್ಲಿ ಅಮೂಲಾಗ್ರ ಬದಲಾವಣೆ ತರಹೊರಟು ನಾಯಕನಾಗಿ ಬೆಳೆದಾಗಲೆಲ್ಲ ವಿರೋಧಿ ಪಟಾಲಂನ ಕಣ್ಣು ಸಹಜವಾಗಿ ಕೆಂಪಗಾಗಿತ್ತು.
ಆದರೆ ತನ್ನತ್ತ ತೂರಿಬಂದ ಕಲ್ಲುಗಳನ್ನೇ ಯಶಸ್ಸಿನ ಮೆಟ್ಟಿಲಾಗಿರಿಸಿಕೊಂಡು ದೇಶಾದ್ಯಂತ ಏಕೆ, ವಿದೇಶಿ ಪತ್ರಿಕೆಗಳಾದ "ಮಾಂಚೆಸ್ಟರ್ ಗಾರ್ಡಿಯನ್"ಗಳಲ್ಲಿ ಭೇಷ್ ಅನ್ನಿಸಿಕೊಂಡ ಹಿರಿಮೆ ಇವರದಾಗಿತ್ತು. ಬ್ರಿಟಿಷರ ಮುಂದೆ ಹಲ್ಲು ಕಿರಿಯುತ್ತಾ ದೇಹಿ ಎಂದು ಕೈಯೊಡ್ಡಿ ನಿಲ್ಲುವ ಸ್ಥಿತಿಯನ್ನೇ, ರಕ್ತ ಕೊಡಿ ಸ್ವಾತಂತ್ರ್ಯ ಕೊಡುತ್ತೇನೆ ಎಂಬ ಸ್ಥಿತಿಗೆ ಪರಿವರ್ತಿಸಿದ ನಾಯಕನಿಗೆ ಸಾಲು ಸಾಲು ಸೋಲುಗಳನ್ನೇ ಕರುಣಿಸಿದ ಕೀರ್ತಿ ನಮ್ಮದು! ತತ್ಪರಿಣಾಮವೇ ನಮ್ಮ ಪಠ್ಯ ಪುಸ್ತಕಗಳು ಬೋಸರ ಬಗೆಗೆ, ಅವರ ತ್ಯಾಗ ಬಲಿದಾನದ ಬಗೆಗೆ ಸಮರ್ಪಕ ಮತ್ತು ಪರಿಪಕ್ವ ಮಾಹಿತಿ ಕೊಡುವುದೇ ಇಲ್ಲ. ಇನ್ನು ಸೈನಿಕರ ಕ್ಯಾಂಪ್ಗಳಲ್ಲಿ ಅವರ ಚಿತ್ರಪಟಗಳು ಕಾಣಿಸಲೇಬಾರದು ಎಂಬ ಅಘೋಷಿತ ಸೂಚನೆಯೇ ಇದ್ದಂತಿದೆ. ಇನ್ನು ಅಕಸ್ಮಾತ್ ಇಂತಹವರನ್ನು ಹೊಗಳಿ ಪುಷ್ಪನಮನ ಸಲ್ಲಿಸಿದರೆ, ನೇತಾಜಿಯ ಸೈನ್ಯ ಶಕ್ತಿಗೆ ಹೆದರಿ ಇಂಗ್ಲಿಷರು 2ನೇ ಮಹಾಯುದ್ದದ ತರುವಾಯ ಕಾಲ್ಕಿತ್ತರು ಎಂಬ ಸತ್ಯ ಗೊತ್ತಾಗಬಹುದು ಎಂಬ ಹೆದರಿಕೆಯೋ ಏನೋ? ಸೌಜನ್ಯಕ್ಕೂ ನಮ್ಮ ಸಂಸದರು ಆ ಕಡೆ ಮುಖ ಮಾಡಲಿಲ್ಲ.
ಆಶ್ಚರ್ಯವೆಂದರೆ ಪಶ್ಚಿಮ ಬಂಗಾಳ ನೇತಾಜಿಯವರ ಜನ್ಮಭೂಮಿ. ಅವರ ನೆಲದ ಸಂಸದರು ಅನೇಕರಿದ್ದಾರೆ. ಅದರಲ್ಲಿ ಬೋಸ್ರವರ ಸಿದ್ಧಾಂತ ಪ್ರಣೀತವಾದ "ಫಾರ್ವರ್ಡ್ ಬ್ಲಾಕ್" ಪಕ್ಷದವರೇ ಒಬ್ಬರು ನೇತಾಜಿ ಆದರ್ಶಗಳ ಕಥೆ ಹೇಳಿಕೊಂಡು ಸಂಸತ್ತಿನ ಕದ ತಟ್ಟಿದ್ದಾರೆ. ಆದರೆ ಅವರಿಗಾಗಲೀ ತೃಣಮೂಲ ಕಾಂಗ್ರೆಸ್ನವರಿಗಾಗಲೀ ಆ ಕಾರ್ಯಕ್ರಮದಲ್ಲಿ ಇರಬೇಕೆಂದು ಅನಿಸಲೇ ಇಲ್ಲ. ಅಕಸ್ಮಾತ್ ಈ ತರಹ ಪಾಲ್ಗೊಂಡು ಮಾಧ್ಯಮದಲ್ಲೇನಾದರೂ ಕಾಣಿಸಿಕೊಂಡರೆ ಕೋಮುವಾದಿಯಾಗಿ ಒಂದು ವರ್ಗದ, ಸಮುದಾಯದ ಅವಕೃಪೆಗೆ ಪಾತ್ರರಾಗಬಹುದೆಂಬ ಅಂಜಿಕೆ ಅವರನ್ನು ಆವರಿಸಿರಬಹುದು. ಅನೇಕ ಕಾಂಗ್ರೆಸ್ಸಿಗರ ಭಯವೂ ಇದೇ ಆಗಿಲ್ಲದಿಲ್ಲ, ಅಷ್ಟಕ್ಕೂ ಈಗೇನು ಪಶ್ಚಿಮ ಬಂಗಾಳದ ಬಗೆಗೆ ತಲೆದೂಗುವ ಸುದ್ದಿ ಬರುತ್ತಿದೆ ಎಂದುಕೊಂಡಿರಾ? ದಂಡ ತೆರಲು ಹಣವಿಲ್ಲದ ಯುವತಿಯ ಮೇಲೆ ಹದಿಮೂರು ಜನ ಅತ್ಯಾಚಾರ ನಡೆಸುವಂತೆ ನೀಡಿದ ಖಾಪ್ ಪಂಚಾಯತ್ನ ಅಮಾನವೀಯ ತೀರ್ಪು ಅಂತಾರಾಷ್ಟ್ರೀಯ ಮಾಧ್ಯಮಗಳಾದ ಗಾರ್ಡಿಯನ್, ದಿ ಟ್ರಿಬ್ಯೂನ್ಗಳಲ್ಲಿ ಮಂಗಳಾರತಿ ಮಾಡಿಸಿಕೊಂಡು ಇಡೀ ಭಾರತದ ಮಾನವನ್ನು ಮೂರುಕಾಸಿಗೆ ಹರಾಜು ಹಾಕುತ್ತಿದೆಯಲ್ಲ.. ಈ ಬಗ್ಗೆ ಸಂಸದರೇನೆನ್ನುತ್ತಾರೆ? ತನ್ನ ಐಎನ್ಎ ಸೇನೆಯಲ್ಲಿ ಝಾನ್ಸಿ ರೆಜಿಮೆಂಟ್ ಸ್ಥಾಪಿಸಿ ಮಹಿಳೆಯರನ್ನು ಕೂಡ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡವರನ್ನು ಮರೆತಿರಲ್ಲ, ನಿಮ್ಮನ್ನು ಯಾಕಾಗಿ ಕ್ಷಮಿಸಬೇಕು?
ಹೋಗಲಿ ಕಾರ್ಗಿಲ್ ದಶಮಾನೋತ್ಸವದ ಬಗೆಗಿನ ಅಸಡ್ಡೆ, ವೀರಸಾವರ್ಕರ್ ಬಗೆಗಿನ ವಿವಾದಾತ್ಮಕ ಹೇಳಿಕೆ, ಅಷ್ಟೇ ಏಕೆ ದೇಶಪ್ರೇಮದ ವಿಚಾರ ಬಂದಾಗಲೆಲ್ಲ ಧ್ವನಿ ಎತ್ತರಿಸಿ ಮತನಾಡುವ ಬಿ.ಜೆ.ಪಿಯೂ ಈ ಬಗ್ಗೆ ತಲೆಕೆಡಿಸಿಕೊಂಡಂತಿಲ್ಲ. ಬಿಸಿಸಿಐನ ಸಭೆಗಳಿಗೆಲ್ಲಾ ತಪ್ಪದೇ ಹಾಜರಿಹಾಕುವ, ಮಾತಿಗೆ ನಿಂತಾಗಲೆಲ್ಲ ಹಣಿಯುವ ಅರುಣ್ ಜೇಟ್ಲಿಗೂ ಬೋಸ್ ಮರೆತು ಹೋದಂತಿದೆ. ಪ್ರಧಾನಿ ಅಭ್ಯರ್ಥಿ ಘೋಷಣೆಯಾಗುವ ಮುನ್ನ ಅಡ್ವಾಣಿಯವರನ್ನು ಹೋದಲ್ಲೆಲ್ಲಾ ಹಿಂಬಾಲಿಸುತ್ತಿದ್ದ ಬಿ.ಜೆ.ಪಿ ರಾಷ್ಟ್ರಾಧ್ಯಕ್ಷ ರಾಜ್ನಾಥ್ ಸಿಂಗ್, ಸುಷ್ಮಾಸ್ವರಾಜ್, ಅನಂತ್ಕುಮಾರ್ಗೆಲ್ಲ ಸಮಾರಂಭದಲ್ಲಿ ಪಾಲ್ಗೊಳ್ಳಬೇಕೆಂದು ಅನಿಸಿಲ್ಲವೆಂದು ತೋರುತ್ತದೆ. ಪ್ರಾಯಶಃ ಇವರೆಲ್ಲ ಲಾಭನಷ್ಟದ ಲೆಕ್ಕಾಚಾರದ ಮತಬೇಟೆಯಲ್ಲಿ ಮುಳುಗಿರಲೂಬಹುದು. ಹಾಗೆಲ್ಲ ಲಾಭನಷ್ಟದ ಲೆಕ್ಕಾಚಾರಕ್ಕಿಳಿದಿದ್ದರೆ ಅಡ್ವಾಣಿ ಯಾವತ್ತೋ ಪ್ರಧಾನಿಯೂ ಆಗಿಬಿಡುತ್ತಿದ್ದರು ಎಂಬುದೂ ಸುಳ್ಳಲ್ಲ. ಕಾಟಾಚಾರಕ್ಕೆ ಸಂಸದ್ ಭವನದಲ್ಲಿ ಇಂತಹ ಆಚರಣೆಗಳನ್ನು ದಯಮಾಡಿ ಮಾಡದಿರಿ.
ಅವು ನಗೆಪಾಟಲಿಗಷ್ಟೇ ಅಲ್ಲ, ಇತಿಹಾಸದಿಂದ ನ್ಯಾಯ ದೊರಕದ ರೋಷವನ್ನು ಇನ್ನಷ್ಟು ಹೆಚ್ಚಿಸುತ್ತದೆ. ತಲೆಮರೆಸಿಕೊಂಡು, ಅಹೋರಾತ್ರಿ ಪಟ್ಟುಗಳನ್ನು ಹೆಣೆಯುತ್ತಾ ದೇಶ ವಿದೇಶಗಳಲ್ಲಿ ಅಪಮಾನ ಸಹಿಸಿ ದೈನೇಸಿ ಬದುಕು ನಡೆಸಿದವರಿಗೆಲ್ಲ ಕಸುಬಿಲ್ಲ ಎಂಬಂತೆ ಬಿಂಬಿಸುತ್ತಲೇ ಅಣಕ ಮಾಡುವುದು ನಿಲ್ಲಲಿ. ಅಷ್ಟಕ್ಕೂ ಕಷ್ಟಕಾಲ ಬಂದಾಗ ಮಾತ್ರ ಜನ ಸೈನಿಕ ಮತ್ತು ದೇವರನ್ನು ನೆನಪಿಸುತ್ತಾನೆ ಎಂಬ ಜನರಲ್ ಕಾರ್ಯಪ್ಪರ ಮಾತು ಸುಳ್ಳಾಗಲಿಲ್ಲ.
- ಶಿವಪ್ರಸಾದ್ ಸುರ್ಯ
ಉಜಿರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


