ಅಂಕಣಗಳು

ಮೂರು ದಶಕಗಳಾದರೂ ಅಸ್ತಿತ್ವಕ್ಕೆ ಬರದ ರೈಲ್ವೆ ವಿಭಾಗ

Published On :

ರೈಲ್ವೆ ಸಚಿವಾಲಯದ ಉನ್ನತ ಮಟ್ಟದ ಸಮಿತಿಯೊಂದು, ಹಣಕಾಸು ಹೊರೆಯ ನೆಪವೊಡ್ಡಿ ಗುಲ್ಬರ್ಗಾ ಮತ್ತು ಮಂಗಳೂರು ರೈಲ್ವೆ ವಿಭಾಗದ ಸ್ಥಾಪನೆಯನ್ನು ವಿರೋಧಿಸಿದ ಸುದ್ದಿ ಕೆಲವು ತಿಂಗಳುಗಳ ಹಿಂದೆ ಪತ್ರಿಕೆಗಳಲ್ಲಿ ವರದಿಯಾಗಿತ್ತು.
1984ರಲ್ಲಿ ರೇಲ್ವೆ ಇಲಾಖೆ ನೇಮಿಸಿದ್ದ ಹೆಚ್.ಸಿ. ಸರೀನ್ ಸಮಿತಿಯು ತನ್ನ ವರದಿಯಲ್ಲಿ, ಕರ್ನಾಟಕದ ಅತ್ಯಂತ ಹಿಂದುಳಿದ ಜಿಲ್ಲೆಯಾದ ಗುಲ್ಬರ್ಗಾದಲ್ಲಿ ರೈಲ್ವೆ ವಿಭಾಗವನ್ನು ಸ್ಥಾಪಿಸಬೇಕು ಎಂದು ಬಲವಾಗಿ ಶಿಫಾರಸು ಮಾಡಿತ್ತು. ಆದರೆ ಆ ಶಿಫಾರಸನ್ನು ಕಡೆಗಣಿಸಲಾಗುತ್ತಿರುವುದನ್ನು ನೋಡಿ ನಮಗೆ ಆಶ್ಚರ್ಯದ ಜೊತೆಗೆ ಆಘಾತವೂ ಆಗಿದೆ.
ಕೆಲವು ಉದಾಹರಣೆಗಳನ್ನು ನೋಡಿ: 1995ರಲ್ಲಿ ಮಹಾರಾಷ್ಟ್ರದ ಅಂದಿನ ರೈಲ್ವೆ ಸಚಿವ ಸುರೇಶ್ ಕಲ್ಮಾಡಿ ಕೇವಲ 65 ಕಿಲೋಮೀಟರ್ ಮಾರ್ಗಕ್ಕಾಗಿ ಪುಣೆಯಲ್ಲಿ ಒಂದು ರೈಲ್ವೆ ವಿಭಾಗವನ್ನು ಸ್ಥಾಪಿಸಿದರು. ಭಾರತದ ರೈಲ್ವೆ ಇತಿಹಾಸದಲ್ಲಿಯೇ ಇಷ್ಟೊಂದು ಚಿಕ್ಕ ಮಾರ್ಗಕ್ಕೆ ಎಂದಿಗೂ ರೈಲ್ವೆ ವಿಭಾಗ ಮಂಜೂರಾದ ಉದಾಹರಣೆಗಳಿರಲಿಲ್ಲ. ಇದಕ್ಕೆ ಕಾರಣವೆಂದರೆ, ಸುರೇಶ್ ಕಲ್ಮಾಡಿಯವರು ಪುಣೆ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಇನ್ನು 2008ರಲ್ಲಿ ತಮಿಳುನಾಡಿನ ಸೇಲಂನಲ್ಲಿ ರೈಲ್ವೆ ವಿಭಾಗ ಸ್ಥಾಪಿಸಲು ಅಂದಿನ ರೈಲ್ವೇ ಸಚಿವ ಲಾಲೂ ಪ್ರಸಾದ್ ಯಾದವ್ರಿಂದ ಫಟಾಫಟ್ ಅನುಮತಿ ದೊರೆಯಿತು. ಡಿಎಂಕೆಯಿಂದ ಬಂದ ರಾಜಕೀಯ ಒತ್ತಡವೇ ಈ ನಿರ್ಧಾರ ಕೈಗೊಳ್ಳಲು ಕಾರಣ.
ಆದರೆ ಕರ್ನಾಟಕದೊಂದಿಗೆ ಮಾತ್ರ ಏಕೆ ಇಷ್ಟೊಂದು ಪಕ್ಷಪಾತ, ಮಲತಾಯಿ ಧೋರಣೆ? 2003ರ ವರೆಗೆ ನಾವು ದಕ್ಷಿಣ, ದಕ್ಷಿಣ ಕೇಂದ್ರ ಮತ್ತು ಕೇಂದ್ರ ರೈಲ್ವೆಯಿಂದ ತುಳಿತಕ್ಕೊಳಗಾಗುತ್ತಲೇ ಬಂದಿದ್ದೆವು. ಹುಬ್ಬಳ್ಳಿ ವಿಭಾಗ ಆಗ ಕೇಂದ್ರ ರೈಲ್ವೆಯ ಭಾಗವಾಗಿದ್ದರೆ, ಬೆಂಗಳೂರು ಮತ್ತು ಮೈಸೂರು ದಕ್ಷಿಣ ರೈಲ್ವೆಯ ಅಂಗವಾಗಿದ್ದವು. ಅಂದರೆ, ಇಡೀ ರಾಜ್ಯವನ್ನು ಮಹಾರಾಷ್ಟ್ರ, ತಮಿಳುನಾಡು, ಮತ್ತು ಆಂಧ್ರಪ್ರದೇಶದ ರೈಲ್ವೆ ವಲಯಗಳು ಆಳುತ್ತಿದ್ದವು. 2003ರಲ್ಲಿ ಹೊಸ ರೈಲ್ವೆ ವಲಯವಾದ ನೈಋತ್ಯ ರೈಲ್ವೆಯನ್ನು ಸ್ಥಾಪಿಸಲಾಯಿತು. ಅದರಲ್ಲಿ ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿ ವಿಭಾಗಗಳು ಸೇರಿಕೊಂಡವು.
ಆದಾಯ ವಿಭಾಗೀಯ ಕಚೇರಿಯಾಗಿ ಅಷ್ಟೇ ಅಲ್ಲದೆ, ಗುಲ್ಬರ್ಗಾ, ಕಳೆದ 8-9 ವರ್ಷಗಳಿಂದ ಎಲ್ಲಾ ವಲಯಗಳಲ್ಲೂ ವೇಗವಾಗಿ ಅಭಿವೃದ್ಧಿಯಾಗುತ್ತಿದೆ. ಇಎಸ್ಐಸಿ ಮೆಡಿಕಲ್ ಕಾಂಪ್ಲೆಕ್ಸ್ನ ಸ್ಥಾಪನೆ, ಸೆಂಟ್ರಲ್ ಯುನಿವರ್ಸಿಟಿ ಆಫ್ ಕರ್ನಾಟಕ(ಸಿಯುಕೆ), ಕರ್ನಾಟಕ ಹೈಕೋರ್ಟ್ನ ಕಾಯಂ ನ್ಯಾಯಾಪೀಠ, ನಿರ್ಮಾಣ ಹಂತದಲ್ಲಿರುವ ಟೆಕ್ಸ್ಟೈಲ್ ಪಾರ್ಕ್, ಗುಲ್ಬರ್ಗಾ ಮತ್ತು ಬಿಜಾಪುರದಲ್ಲಿ ಎರಡು ಎನ್ಟಿಪಿಸಿ ಘಟಕಗಳ ಸ್ಥಾಪನೆಯ ಪ್ರಸ್ತಾವನೆಯಷ್ಟೇ ಅಲ್ಲದೆ, ವಾಡಿ, ಶಹಬಾದ್, ಸೇಡಂ ಮತ್ತು ತಂದೂರ್ನಲ್ಲಿ 9 ದೊಡ್ಡ ಸಿಮೆಂಟ್ ಘಟಕಗಳಿವೆ.
ಸರೀನ್ ಸಮಿತಿಯ ವರದಿಯನ್ನು ಅನುಸರಿಸಿ, ತಮ್ಮ ಆಸೆಯನ್ನು ರೈಲ್ವೆ ಇಲಾಖೆ ಈಡೇರಿಸುತ್ತದೆ ಎಂದು ಹೈದ್ರಾಬಾದ್ ಕರ್ನಾಟಕದ ಜನರು ಕಳೆದ 3 ದಶಕಗಳಿಂದ ಶಾಂತವಾಗಿ ಕಾಯುತ್ತಾ ಕುಳಿತಿದ್ದಾರೆ. ಆದರೆ ಯಾವ ಬದಲಾವಣೆಗಳೂ ಇದುವರೆಗೂ ಆಗಿಲ್ಲ.
ಸದ್ಯಕ್ಕೆ, ಹೈದ್ರಾಬಾದ್ ಕರ್ನಾಟಕ ಭಾಗದ ಪ್ರಮುಖ ರೈಲ್ವೆ ನಿಲ್ದಾಣಗಳೆಂದರೆ, ರಾಯಚೂರು, ಹಲ್ಕಟ್ಟಾ, ಯಾದಗಿರಿ, ವಾಡಿ, ಶಹಬಾದ್, ಗುಲ್ಬರ್ಗಾ, ಸೇಡಂ, ಚಿತ್ತಾಪುರ್, ತಂದೂರ್ ಮತ್ತು ಬೀದರ್. ಇವೆಲ್ಲವೂ ಎರಡೂ ರೈಲ್ವೆ ವಲಯಗಳ (ಕೇಂದ್ರ ರೈಲ್ವೆ, ಮುಂಬೈ ಮತ್ತು ದಕ್ಷಿಣ ಕೇಂದ್ರ ರೈಲ್ವೆ, ಸಿಕಂದ್ರಾಬಾದ್) ಮತ್ತು ನಾಲ್ಕು ರೈಲ್ವೆ ವಿಭಾಗಗಳ(ಸೋಲಾಪುರ್ ಮತ್ತು ನಾಂದೇಡ್, ಕೇಂದ್ರ ರೈಲ್ವೆ, ಸಿಕಂದ್ರಾಬಾದ್ ಮತ್ತು ಗುಂತಕಲ್, ದಕ್ಷಿಣ ಕೇಂದ್ರ ರೈಲ್ವೆ) ಅಡಿಯಲ್ಲಿ ಬರುತ್ತವೆ. ಇದುವರೆಗೂ ಜನರ ಯಾವ ಬೇಡಿಕೆ ಮತ್ತು ಅವಶ್ಯಕತೆಯನ್ನು ಈಡೇರಿಸುವ ಕೆಲಸಗಳೂ ಆಗಿಲ್ಲ. ಹೊಸ ರೈಲುಗಳು ಹರಿದುಬಂದಿಲ್ಲ, ರೈಲ್ವೆ ವಿಸ್ತರಣೆಯಾಗಿಲ್ಲ, ಹೊಸ ಮಾರ್ಗಗಳ ಬೇಡಿಕೆ ಈಡೇರಿಲ್ಲ. ಇನ್ನು ಡಬಲಿಂಗ್ ಮತ್ತು ಎಲಕ್ಟ್ರಿಫಿಕೇಷನ್ ಮಾಡಬೇಕು, ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು, ಪ್ರಯಾಣಿಕರಿಗೆ ಅನುಕೂಲಮಾಡಿಕೊಡಬೇಕು ಎನ್ನುವ ಯಾವುದೇ ಕೂಗು ರೈಲ್ವೆ ಇಲಾಖೆಯ ಕಿವಿಗೆ ಬೀಳುತ್ತಿಲ್ಲ. ಈ ಕಾರಣಕ್ಕಾಗಿ ಜನರು ಮುಂಬೈ ಮತ್ತು ಸಿಕಂದ್ರಾಬಾದ್ನ ವಲಯ ಕಚೇರಿಗಳಿಗೆ ಅಥವಾ ಸಿಕಂದ್ರಾಬಾದ್, ಗುಂತಕಲ್, ನಾಂದೇಡ್ ಹಾಗೂ ಸೋಲಾಪುರ್ಗಳಿಗೆ ಅಲೆಯಬೇಕಾಗಿದೆ.
ಹೈದ್ರಾಬಾದ್ ಕರ್ನಾಟಕ ಭಾಗದಿಂದ(ಗುಲ್ಬರ್ಗಾ, ವಾಡಿ, ಶಹಬಾದ್, ಯಾದಗಿರಿ, ಸೇಡಂ, ಚಿತ್ತಾಪುರ್, ಬೀದರ್ ಮತ್ತು ರಾಯಚೂರು) ವಾರ್ಷಿಕವಾಗಿ ಹುಟ್ಟುತ್ತಿರುವ ಆದಾಯ ಸುಮಾರು 2,000 ಕೋಟಿ ರುಪಾಯಿಗಳಷ್ಟಿದೆ! ಸಿಮೆಂಟ್, ಆಹಾರ ಧಾನ್ಯಗಳು, ಶಹಬಾದ್ ಕಲ್ಲು, ಕಲ್ಲಿದ್ದಲ ಬೃಹತ್ ಮಟ್ಟದ ಸಾಗಣೆಯಿಂದಾಗಿ  ಕೇಂದ್ರ ಮತ್ತು ದಕ್ಷಿಣ ಕೇಂದ್ರ ರೈಲ್ವೆಗೆ ಅದ್ಭುತವಾಗಿ ಲಾಭವಾಗುತ್ತಿದೆ.
ಆದರೆ ಈ ವಲಯಗಳು ಮುಂಬೈ ಮತ್ತು ಸಿಕಂದ್ರಾಬಾದ್ನಲ್ಲಿರುವುದರಿಂದ, ಬಹುಪಾಲು ಆದಾಯವನ್ನೆಲ್ಲ ಮಹಾರಾಷ್ಟ್ರ ಮತ್ತು ಆಂದ್ರಪ್ರದೇಶದ ಅಭಿವೃದ್ಧಿಗೆ ಬಳಸಲಾಗುತ್ತಿದೆ. ಇದು ಅನೈತಿಕವಲ್ಲವೇ?
ಒಂದು ರೈಲ್ವೆ ವಿಭಾಗ ಸ್ಥಾಪನೆಯಾಯಿತೆಂದರೆ, ಅದು ಅಲ್ಲಿನ ಜನರಿಗೆ, ಪ್ರದೇಶಕ್ಕೆ, ವ್ಯಾಪಾರಕ್ಕೆ, ಉದ್ಯಮಗಳಿಗೆ ಮತ್ತು ಪ್ರವಾಸೋದ್ಯಮಕ್ಕೆ ಬಹಳ ಉಪಯೋಗಕಾರಿಯಾಗುತ್ತದೆ. ಸ್ಥಳೀಯ ಮತ್ತು ಗ್ರಾಮೀಣ ಆರ್ಥಿಕತೆಯನ್ನು ಹೆಚ್ಚಿಸಿ, ಉದ್ಯೋಗಾವಕಾಶಗಳನ್ನೂ ಸೃಷ್ಟಿಸುತ್ತದೆ. ಅಲ್ಲದೆ ಬಹಳಷ್ಟು ಹೂಡಿಕೆಯನ್ನು ಜೊತೆಗೆ ಹೊತ್ತು ತಂದು ಆ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣವಾಗುತ್ತದೆ.  ಹೈದ್ರಾಬಾದ್ ಕರ್ನಾಟಕದ ಜನರ ಇದುವರೆಗಿನ ಎರಡು ಪ್ರಮುಖ ಬೇಡಿಕೆಗಳೆಂದರೆ ಪರಿಚ್ಛೇದ 371 ಅನ್ನು ಅನುಷ್ಠಾನಕ್ಕೆ ತರಬೇಕು ಮತ್ತು ಗುಲ್ಬರ್ಗಾದಲ್ಲಿ ರೈಲ್ವೆ ವಿಭಾಗವನ್ನು ಸ್ಥಾಪಿಸಬೇಕು ಎನ್ನುವುದು. ಇವುಗಳಲ್ಲಿ ಒಂದೇ ಬೇಡಿಕೆ ಈಡೇರಿದೆ.
ಕೇಂದ್ರ ರೈಲ್ವೆ, ದಕ್ಷಿಣ ರೈಲ್ವೆ ಮತ್ತು ದಕ್ಷಿಣ ಕೇಂದ್ರ ರೈಲ್ವೆಗಳಿಗೆ ತಲಾ ಐದು ವಿಭಾಗಗಳಿವೆ. ಆದರೆ ನೈಋತ್ಯ ರೈಲ್ವೆಯಲ್ಲಿ ಮಾತ್ರ ಮೂರು ವಿಭಾಗಗಳಿವೆ(ಹುಬ್ಬಳ್ಳಿ, ಮೈಸೂರು ಮತ್ತು ಬೆಂಗಳೂರು). ಗುಲ್ಬರ್ಗಾ ಪ್ರದೇಶವನ್ನು ಆರ್ಥಿಕವಾಗಿ ಬಲಿಷ್ಠಗೊಳಿಸಲು ಅಲ್ಲಿ ವಿಭಾಗೀಯ ಕಚೇರಿಯನ್ನು ಸ್ಥಾಪಿಸಬೇಕು.
ಅಲ್ಲದೆ, ಗುಲ್ಗರ್ಬಾದಲ್ಲಿ ವಿಭಾಗವೊಂದನ್ನು ಸ್ಥಾಪಿಸುವುದು ರೈಲ್ವೆ ಇಲಾಖೆಗೇನು ಹೆಚ್ಚಿನ ಹೊರೆಯಾಗಲಾರದು. ಆದರೆ, ಲಾಭವಾಗುವುದಂತೂ ನಿಶ್ಚಿತ. ರೈಲ್ವೆ ಮಂಡಳಿ ಮತ್ತು ರೈಲ್ವೆ ಇಲಾಖೆಯ ಆಡಳಿತಾತ್ಮಕ ವೈಖರಿಯು ಸುಗಮವಾಗುವುದರೊಂದಿಗೆ, ಮೂಲಸೌಕರ್ಯಾಭಿವೃದ್ಧಿ, ಯೋಜನೆಗಳ ಅನುಷ್ಠಾನ, ದೂರುಗಳ ತ್ವರಿತ ನಿವಾರಣೆ, ಅಪಘಾತ ಸಂಬಂಧಿ ವಿಷಯಗಳಿಗೆ ಶೀಘ್ರ ಪರಿಹಾರ, ಸಮಯ ಹಾಗೂ ಹಣದ ಉಳಿತಾಯ ಮತ್ತು ಹೆಚ್ಚಿನ ಆದಾಯಕ್ಕೆ ಈ ಹೆಜ್ಜೆ ಕಾರಣವಾಗುತ್ತದೆ.
ಅವಕಾಶಗಳು ದಿನವೂ ಎದುರಾಗುವುದಿಲ್ಲ. ಆದರೆ ಎದುರಾದಾಗ ಮಾತ್ರ ಅವುಗಳನ್ನು ಕೈತಪ್ಪಿಹೋಗಲು ಬಿಡಬಾರದು. ಮಲ್ಲಿಕಾರ್ಜುನ ಖರ್ಗೆಯವರಿಗೆ ಈಗ ಅಧಿಕಾರವೂ ಇದೆ, ಅವಕಾಶವೂ ಇದೆ. ಹಾಗಾಗೇ ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಹೈದ್ರಾಬಾದ್ ಕರ್ನಾಟಕ ಭಾಗದ ಜನರ ಇಂಗಿತವನ್ನು ಈಡೇರಿಸುವ ಕೆಲಸವನ್ನು ಅವರು ಮಾಡಬೇಕು. ಅವರ ಮುಂದೆ ಬಹಳಷ್ಟು ಉದಾಹರಣೆಗಳಿವೆ. ರೈಲ್ವೆ ಇಲಾಖೆಯ ನೇತೃತ್ವ ವಹಿಸಿದ್ದ ರಾಮ್ ವಿಲಾಸ್ ಪಾಸ್ವಾನ್, ನಿತೀಶ್ ಕುಮಾರ್, ಮಮತಾ ಬ್ಯಾನರ್ಜಿ, ಲಾಲೂ ಪ್ರಸಾದ್ ಯಾದವ್, ರಾಜ್ಯ ರೈಲ್ವೆ ಸಚಿವರಾದ ವೇಲು, ಮುಕುಲ್ ರಾಯ್....ಹೀಗೆ, ಇವರೆಲ್ಲ ಮೊದಲ ಆದ್ಯತೆಯನ್ನು, ಬೃಹತ್ ಅನುದಾನವನ್ನು ತಮ್ಮ ರಾಜ್ಯಗಳ ಮತ್ತು ಪ್ರದೇಶಗಳ ಅಭಿವೃದ್ಧಿಗಾಗಿ ತಂದು ಕೊಟ್ಟಿದ್ದರು. ರಾಮ್ ವಿಲಾಸ್ ಪಾಸ್ವಾನ್ ಅವರಂತೂ  ಹೊಸ ಪೂರ್ವ ಕೇಂದ್ರ ರೈಲ್ವೆಯ ಕೇಂದ್ರ ಕಾರ್ಯಾಲಯವನ್ನು ಬಿಹಾರದ ಹಾಜಿಪುರ್ ಎಂಬಲ್ಲಿ ಸ್ಥಾಪಿಸಿದರು.
(ಹಾಜಿಪುರ ರಾಮ್ ವಿಲಾಸ್ ಪಾಸ್ವಾನ್ರ ಲೋಕಸಭಾ ಕ್ಷೇತ್ರವಾಗಿತ್ತು) ಪ್ರಸ್ತಾವಿತ ಹೊಸ ವಿಭಾಗದ ವ್ಯಾಪ್ತಿ: ಹೊಟಗಿ ಜಂಕ್ಷನ್-ಇಂಡಿ ರೋಡ್, ಹೊಟಗಿ ಜಂ - ಮಂತ್ರಾಲಯಂ ರೋಡ್, ಗುಲ್ಬರ್ಗಾ-ಬೀದರ್ ವಯಾ ಹುಮ್ನಾಬಾದ್( ನಿರ್ಮಾಣ ಹಂತದಲ್ಲಿರುವ ಹೊಸ ಲೈನ್), ಬೀದರ್-ಲಾತೂರ್, ಗದಗ್- ವಾಡಿ(ಪ್ರಸ್ತಾವಿತ ಹೊಸ ಲೈನ್), ಕೊಪ್ಪಳ- ರಾಯಚೂರು(ಮುನಿರಾಬಾದ್-ಮೆಹಬೂಬ್ನಗರದ ಭಾಗ) ನಿರ್ಮಾಣ ಹಂತದಲ್ಲಿರುವ ಮಾರ್ಗ.
ಕೂಡಲೇ ರೈಲ್ವೆ ಸಚಿವರು ಈ ಭಾಗದಲ್ಲಿ ರೈಲ್ವೆ ವಿಭಾಗದ ಸ್ಥಾಪನೆಯನ್ನು ಘೋಷಿಸಬೇಕು ಮತ್ತು ಇಡೀ ಪ್ರಕ್ರಿಯೆ ಪೂರ್ಣಗೊಳಿಸುವುದಕ್ಕಾಗಿ ಅಧಿಕಾರಿಯೊಬ್ಬರನ್ನು ನೇಮಿಸಬೇಕು ಎಂದು ಕೇಳಿಕೊಳ್ಳುತ್ತೇವೆ.

 ಪ್ರಕಾಶ್ ಮಂಡೋತ್
ಸದಸ್ಯರು, ವಲಯ ರೈಲ್ವೆ ಪ್ರಯಾಣಿಕರ ಸಲಹಾ ಸಮಿತಿ, ನೈಋತ್ಯ ರೈಲ್ವೆ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.