ಅಂಕಣಗಳು

ಕರಾಳ ದಿನಗಳ ಕಂಡವರಿಗಷ್ಟೇ 'ಒಳ್ಳೆ ದಿನ'ಗಳ ಅರ್ಥ ಗೊತ್ತು

ಕರಾಳ ದಿನಗಳ ಕಂಡವರಿಗಷ್ಟೇ 'ಒಳ್ಳೆ ದಿನ'ಗಳ ಅರ್ಥ  ಗೊತ್ತು
Published On :

"ಹೋಗೋ ಶಾಲೆಗೆ...." ಎಂದು ಹೇಳಿ ಪೊಲೀಸನೊಬ್ಬ ನನಗೆ ಹಿಂಭಾಗಕ್ಕೆ ರಪ್ಪನೆ ಲಾಠಿ ಬೀಸಿದ್ದ. 'ಇಂದಿರಾಗಾಂಧಿಗೆ ಧಿಕ್ಕಾರ' ಎಂದು ಕೂಗಿದ್ದ ನಾನು ತಿರುಗಿಯೂ ನೋಡದೆ ಮನೆಗೆ ಓಡಿದ್ದೆ. ಈ ಘಟನೆ ನಡೆದದ್ದು 1975ರ ಆಗಸ್ಟ್ ತಿಂಗಳಿನಲ್ಲಿ. ಅದು ಸರ್ವಾಧಿಕಾರಿ ಇಂದಿರಾಗಾಂಧಿ ದೇಶಕ್ಕೆ ತುರ್ತು ಪರಿಸ್ಥಿತಿ ಹೇರಿ ತನ್ನ ರಾಜಕೀಯ ವಿರೋಧಿಗಳೆಲ್ಲರನ್ನೂ ಕತ್ತಲೆ ಕೋಣೆಗೆ ತಳ್ಳುತ್ತಿದ್ದ ಕಾಲ. ನನ್ನ ಅಣ್ಣ ನನ್ನೂರಿನಲ್ಲಿ ಜನಸಂಘದ ನಾಯಕ. ಪೊಲೀಸರು ಆತನನ್ನು ಬಂಧಿಸಿ ಠಾಣೆಗೆ ನಡೆಸಿಕೊಂಡೇ ಹೋಗುತ್ತಿದ್ದರು. ಹಿಂಬಾಲಿಸುತ್ತಿದ್ದವರು ಬೆರಳೆಣಿಕೆಯಷ್ಟು ಜನ ಇದ್ದರು. ನಾನು ಆ ಗುಂಪಿನಲ್ಲಿದ್ದೆ. ಆಗಿನ್ನು ಎಂಟನೇ ತರಗತಿ ಓದುತ್ತಿದ್ದೆ. ಗುಂಪಿನಲ್ಲಿದ್ದ ಒಬ್ಬ ನನ್ನ ಕಿವಿಯಲ್ಲಿ ಇಂದಿರಾ ಗಾಂಧಿಗೆ ಧಿಕ್ಕಾರ ಎಂದು ಕೂಗು ಎಂದ. ಇಂದಿರಾ ಗಾಂಧಿ ಯಾರು? ತುರ್ತು ಪರಿಸ್ಥಿತಿ ಅಂದರೆ ಏನು? ಅಣ್ಣನನ್ನು ಬಂಧಿಸಲಾಗಿದೆಯೇ? ಇದು ಯಾವುದು ಸ್ಪಷ್ಟವಾಗಿ ತಿಳಿಯದ ನಾನು ಇದೇನೋ ಮೆರವಣಿಗೆ ಎಂದು ಭಾವಿಸಿ ಧಿಕ್ಕಾರ ಕೂಗಿ ಲಾಠಿಯ ರುಚಿಯನ್ನು ಸವಿದಿದ್ದೆ. ಆದರೆ ಅಣ್ಣ ಮಾತ್ರ ಮನೆಗೆ ಬರಲಿಲ್ಲ. ಸರಿ ಸುಮಾರು ಒಂದೂವರೆ ವರ್ಷ ಮೀಸಾ ಕಾಯಿದೆಯಡಿ ಬೆಂಗಳೂರು ಜೈಲಿನಲ್ಲಿದ್ದರು. ಅದೇ ಜೈಲಿನಲ್ಲಿ ಲಾಲ್‌ಕೃಷ್ಣ ಆಡ್ವಾಣಿಯವರೂ ಇದ್ದರು.
ಜೈಲಿನಿಂದ ಹೊರಬಂದ ನನ್ನ ಅಣ್ಣ ಮತ್ತಷ್ಟು ಕಾಂಗ್ರೆಸ್ ವಿರೋಧಿಯಾದ. ಜನತಾ ಪಕ್ಷ ನಂತರ ಬಿ.ಜೆ.ಪಿ.ಯ ಮುಖಂಡನಾಗಿ ಆಗಿನ ಜಿಲ್ಲಾ ಪರಿಷತ್ತು ಮುಂತಾದ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುವುದು ಕಾಯಕವಾಗಿತ್ತು. ಕೊಡಗು- ಮಂಗಳೂರು ಕ್ಷೇತ್ರಗಳಲ್ಲಿ ಲೋಕಸಭೆಗೆ ಧನಂಜಯ ಕುಮಾರ್ ಸ್ಪರ್ಧಿಸಿದ್ದರು. ಕೇಂದ್ರದ ಮಂತ್ರಿ ಪ್ರಬಲ ಕಾಂಗ್ರೆಸ್ ನಾಯಕ ಜನಾರ್ಧನ ಪೂಜಾರಿ ವಿರುದ್ಧ ಸ್ಪರ್ಧೆ. ಚುನಾವಣೆಯಲ್ಲಿ ಎಲ್ಲರೂ ಬೆರಗುಗೊಳ್ಳುವಂತೆ ಧನಂಜಯ ಕುಮಾರ್ ಗೆದ್ದರು. ಇದು ಬಿ.ಜೆ.ಪಿ.ಯ ಗೆಲುವಾಗಿತ್ತು. ಕಾಂಗ್ರೆಸ್ಸಿನ ಸೋಲಾಗಿತ್ತು. ಆದರೆ ಬಿ.ಜೆ.ಪಿ. ಈ ಗೆಲುವನ್ನು ನೋಡುವ ಭಾಗ್ಯ ನನ್ನ ಅಣ್ಣನಿಗಿರಲಿಲ್ಲ. ನಂತರದ ದಿನಗಳಲ್ಲಿ ನನ್ನ ಅಣ್ಣನ ರಕ್ತ ಸಂಬಂಧಿಗಳು ಕೆಲವರು ತಮ್ಮ ಸ್ವಾರ್ಥಕ್ಕಾಗಿ ಕಾಂಗ್ರೆಸ್ ಪಕ್ಷ ಸೇರಿಕೊಂಡು ಅಣ್ಣನ ತತ್ವ ಸಿದ್ಧಾಂತ ಎಲ್ಲವನ್ನು ಅಣ್ಣನ ಸಮಾಧಿಯೊಂದಿಗೆ ಸಮಾಧಿ ಮಾಡಿಬಿಟ್ಟರು.
ಕೊಡಗು- ಮೈಸೂರು ಕ್ಷೇತ್ರದಲ್ಲಿ ಪ್ರತಾಪ ಸಿಂಹ ಬಿ.ಜೆ.ಪಿ. ಅಭ್ಯರ್ಥಿಯಾಗಿ ಕೊಡಗಿಗೆ ಬಂದಾಗ ಅವರೊಂದಿಗೆ ಚುನಾವಣಾ ಪ್ರಚಾರ ಸಭೆಗಳಲ್ಲಿ ನಾನು ಭಾಷಣ ಮಾಡುವಾಗಲೆಲ್ಲ ಈ ಘಟನೆ ನನ್ನನ್ನು ಪದೇ ಪದೇ ಕಾಡಿದೆ. ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಲಿದಾನಗೊಂಡ ಆತ್ಮಗಳ ವೀರ ಕಥನವನ್ನು ಓದಿಕೊಳ್ಳದ, ತುರ್ತು ಪರಿಸ್ಥಿತಿಯ ಕರಾಳ ನೆನಪುಗಳ ಈಚೆಗೆ ಹುಟ್ಟಿದ ಯುವ ಸಮುದಾಯ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಈ ಸಮುದಾಯ 'ನರೇಂದ್ರ ಮೋದಿ' ಎಂಬ ಅಲೆ ಎಬ್ಬಿಸಿದ್ದಾರೆ. ಇವರ ಆಸೆ ಮತ್ತು ಪ್ರಯತ್ನದ ಫಲವೇನೋ ಎಂಬಂತೆ ನರೇಂದ್ರ ಮೋದಿ ಪ್ರಧಾನಿಯಾಗಿ ಹತ್ತು ಹಲವು ನಿರೀಕ್ಷೆಗಳಿಗೆ ಉತ್ತರ ಹುಡುಕುವ ಪ್ರಾಮಾಣಿಕ ಪ್ರಯತ್ನದಲ್ಲಿದ್ದಾರೆ. ಓಟಿನ ಬೆಂಬಲ ಮಾತ್ರ ಅಲ್ಲ ಅವರ ಇಚ್ಛಾಶಕ್ತಿಗೆ ಕೊಡಬೇಕಾಗಿರುವ ಬೆಂಬಲದ ಅಗತ್ಯ ಇದೆ. ಇದಕ್ಕಾಗಿ ಚರಿತ್ರೆಯ ನೆನಪು ಅಷ್ಟೆ ಅಗತ್ಯವಿದೆ.
ನರೇಂದ್ರ ಮೋದಿ 'ಕಾಂಗ್ರೆಸ್ ಮುಕ್ತ ಭಾರತ' ನನ್ನ ಗುರಿ ಎಂದಿದ್ದರು. ಯಾಕೆ? ಈ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ ಮಾಡಬೇಕಿದೆ. ಭಾರತದ ಸ್ವಾತಂತ್ರ್ಯಕ್ಕಾಗಿ ಕ್ರಾಂತಿಯ ಕಹಳೆ ಊದಿ 50 ವರ್ಷ ಎರಡೆರಡು ಬಾರಿ ಜೀವಾವಧಿ ಶಿಕ್ಷೆ, ಕರಿ ನೀರಿನ ಶಿಕ್ಷೆ, ಕೈಕಾಲುಗಳಿಗೆ ಕಬ್ಬಿಣ ಸರಪಳಿ ಕಟ್ಟಿಸಿಕೊಂಡು ಕೊಬ್ಬರಿಯ ಗಾಣವನ್ನು ಎತ್ತಿನಂತೆ ದಿನಕ್ಕೆ 10 ಗಂಟೆ ಎಳೆಯುತ್ತಾ, ಸರಿಯಾದ ಆಹಾರವಿಲ್ಲದೆ ಕ್ಷಯ ರೋಗ ಬಡಿದವರಂತೆ, ಬಿಡುಗಡೆಯ ದಾರಿ ಇಲ್ಲದೇ, ಮಾತನಾಡಲು ಮನುಷ್ಯ ಸಹವಾಸ ಇಲ್ಲದೆ, ನೊಣ ಸೊಳ್ಳೆಗಳಿಂದ ಕಚ್ಚಿಸಿಕೊಂಡು ಅಂಡಮಾನಿನಲ್ಲಿ ರಣ ಶಿಕ್ಷೆ ಅನುಭವಿಸಿದವರು ವೀರ ಸಾವರ್ಕರ್. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರವೂ 'ಹಿಂದೂ ಮಹಾಸಭಾದ ಸದಸ್ಯ' ಎಂಬ ಒಂದೇ ಕಾರಣಕ್ಕೆ ಸಾರ್ವಕರ್ ಬದುಕಿನುದ್ದಕ್ಕೂ ಎತ್ತಿದ್ದ ಪ್ರಶ್ನೆಗಳಿಗೆ ಮಾನಸಿಕವಾಗಿ ಉತ್ತರ ಕೊಡಲಾಗದ ನೆಹರು ಅಧಿಕಾರದಲ್ಲಿದ್ದಾಗ, ಜೈಲಿಗೆ ತಳ್ಳಿ ದೈಹಿಕ ಕಿರುಕುಳ ಕೊಟ್ಟರು. ಇದರಿಂದಾಗಿಯೇ ಸಾವರ್ಕರರು ಆತ್ಮಾರ್ಪಣೆ ಮಾಡಿಕೊಳ್ಳಬೇಕಾಯಿತು. ಇಂತಹ ಮಹಾನ್ ಚೇತನದ ಜಯಂತಿಯಂದು ಸಂಸತ್ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ, ಆಡ್ವಾಣಿ ಸೇರಿದಂತೆ ಹಲವು ಮುಖಂಡರು ಸಾವರ್ಕರ್ ಫೋಟೋಗೆ ಪುಷ್ಪಾರ್ಚನೆ ಮಾಡಿದಾಗ ಹೃದಯ ತುಂಬಿಬಂತು. ಈ ದೃಶ್ಯವನ್ನು ಕಾಂಗ್ರೆಸ್ ಆಡಳಿತದಲ್ಲಿ ನಾನು ನೋಡೆ ಇಲ್ಲ. ಕಾಂಗ್ರೆಸ್ ಪಕ್ಷಕ್ಕೆ ಸಾವರ್ಕರ್ ಒಬ್ಬ ದೇಶ ಭಕ್ತನೇ ಅಲ್ಲ. ಭಾರತದ ಉಕ್ಕಿನ ಮನುಷ್ಯ ಸರ್ದಾರ್ ಪಟೇಲರಿಗೆ ವಂಚಿಸಿ ಅಧಿಕಾರ ಹಿಡಿದ ನೆಹರು ನಂತರ ಇವರ ಸಂಸ್ಕೃತಿ ಬಿತ್ತಿದ್ದ ಢೋಂಗಿ ಜಾತ್ಯತೀತ ಬೀಜ ಇಂದು ಹೆಮ್ಮರವಾಗಿ ಬೆಳೆದಿದೆ. 'ಹಿಂದು' ಎಂದವರೆಲ್ಲಾ ಕೋಮುವಾದಿಗಳು ರಾಷ್ಟ್ರದ್ರೋಹಿಗಳು ಆಗಿಹೋಗಿದ್ದಾರೆ. ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದ್ದ ವಂದೇ ಮಾತರಂ ಗೀತೆ ಪೂರ್ಣ ಹಾಡುವುದು ಘ್ಯಾಸಿಸಂ ಅಭಿವ್ಯಕ್ತಿಯಂತಾಗಿದೆ. ತನ್ನ ಆಪ್ತ ಮಿತ್ರ ಶೇಖ್ ಮೊಹಮ್ಮದ್ ಅಬ್ದುಲ್ಲರ ಮೂಲಕ ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ಹುಟ್ಟುಹಾಕಿ ಕಾಶ್ಮೀರಿ ಪಂಡಿತರನ್ನು ದೆಹಲಿಯ ಬಿದಿಗಳಲ್ಲಿ ಭಿಕ್ಷೆ ಎತ್ತುವಂತೆ ಮಾಡಿ, ಒಂದು ಕಾಲದಲ್ಲಿ ಧರೆಯ ಸ್ವರ್ಗ ಎನ್ನುತ್ತಿದ್ದ ಕಾಶ್ಮೀರ ಅಕ್ಷರಶಃ ನರಕವಾಗಿಬಿಟ್ಟಿದೆ. ನಾವುಗಳು ಕಾಶ್ಮೀರಕ್ಕೆ ಹೋಗಬೇಕಾದರೆ ಪರಕೀಯರಂತೆ ಹೋಗಬೇಕಾದ ಪರಿಸ್ಥಿತಿ ಬಂದು ಕಣ್ಣೀರಿಡುವಾಗ ಅದರಲ್ಲಿ ಕಾಂಗ್ರೆಸ್- ನೆಹರು ಬಿಂಬ ಕಾಣಿಸುತ್ತದೆ.
ಚೀನಾ ನಮ್ಮ ಗಡಿಯೊಳಗೆ ನುಗ್ಗಿ ಯುದ್ಧದ ಸಿದ್ಧತೆ ನಡೆಸುತ್ತಿದ್ದಾಗ ಹಿಂದಿ-ಚೀನಿ ಭಾಯ್ ಭಾಯ್ ಎಂದು ಹೇಡಿಗಳಂತೆ ಮುಲುಗುತ್ತಿದ್ದ ಪ್ರಧಾನಿ ನೆಹರು, ರಕ್ಷಣಾ ಮಂತ್ರಿ ಕಮ್ಯುನಿಷ್ಟ್ ರಾಜಕಾರಣಿ ಮೆನನ್‌ಗೆ ಜನರಲ್ ತಿಮ್ಮಯ್ಯ "ಈ ರಾಜಕಾರಣಿಗಳ ದಡ್ಡತನಕ್ಕೆ ನನ್ನ ಸಂತಾಪವಿದೆ. ಗಡಿಯೊಳಗೆ ನುಗ್ಗಿರುವ ಶತ್ರುಗಳಿಗೆ ಹಲ್ಲುಕಿರಿದು ಉತ್ತರ ಕೊಡುವುದಲ್ಲ. ಇದು ರಾಜಕಾರಣಿಗಳ ಕೆಲಸ, ಸೇನಾಧಿಪತಿಯದ್ದಲ್ಲ" ಎಂದು ರಾಜಿನಾಮೆ ಬಿಸಾಡಿದ್ದರು.
1962ರ ಈ ಯುದ್ಧದಲ್ಲಿ ಘನಘೋರ ಸೋಲಾಯಿತು. ತಿಮ್ಮಯ್ಯ ಅಂದದ್ದು ನಿಜವಾಯಿತು. ಎರಡನೇ ಪ್ರಪಂಚ ಯುದ್ಧದಲ್ಲಿ ಅಕ್ಷರಶಃ ಯುದ್ಧ ಭೂಮಿಯಲ್ಲಿ ಫೀಲ್ಡ್ ಕಮಾಂಡರ್ ಆಗಿ ಭಾಗವಹಿಸಿದ್ದ ಮೊದಲನೆಯ ಮತ್ತು ಏಕೈಕ ಭಾರತೀಯ ಸೇನಾಧಿಕಾರಿ. 1948ರಲ್ಲಿ ಪೂರ್ಣವಾದ ಸ್ವಾತಂತ್ರ್ಯವನ್ನು ನೆಹರು ಜನರಲ್ ತಿಮ್ಮಯ್ಯನವರಿಗೆ ಕೊಟ್ಟಿದ್ದರೆ ಪಾಕ್ ಆಕ್ರಮಿತ ಕಾಶ್ಮೀರವನ್ನು ಅನಾಮತ್ತಾಗಿ ಜಯಿಸಿ ಭಾರತದ ನಕ್ಷೆಗೆ ಸೇರಿಸಿಬಿಡುತ್ತಿದ್ದರು. ಆದರೆ ಶಾಂತಿಯ ದೂತ ಎಂಬ ನಕಲಿ ಪೋಸಿನ ನೆಹರು ಯುದ್ಧ ಸಾಕು ಎಂದು ಬಿಟ್ಟರು. ತಿಮ್ಮಯ್ಯ ಅಂದು ಕನಲಿ ಹೋಗಿದ್ದರು. 1965ರಲ್ಲಿ ಸೈಪ್ರಸ್ ಯುದ್ಧ ಭೂಮಿಯಲ್ಲಿ ಒಬ್ಬ ಯೋಧನಂತೆ ಮಿಲಿಟರಿ ಫೋಷಾಕು ಧರಿಸಿಕೊಂಡೆ ತೀರಿಕೊಂಡ ಕೊಡಗಿನ ಈ ವೀರ ಯೋಧ ಕಾಶ್ಮೀರ ಸಮಸ್ಯೆ ಇಲ್ಲದಂತೆ ಮಾಡುತ್ತಿದ್ದರು. ಆದರೆ ಇವರನ್ನು ಅಪಮಾನಿಸಿ ಇವರ ಕೈ ಕಟ್ಟಿದವರು ಇದೇ ಕಾಂಗ್ರೆಸ್- ಇದೇ ನೆಹರು! ಈ ಚರಿತ್ರೆ ನಮ್ಮ ಯುವ ಸಮುದಾಯಕ್ಕೆ ಗೊತ್ತಿರಬೇಕಲ್ಲವೇ? 1948ರ ಜನವರಿ 30 ರಂದು ಗಾಂಧಿ ಹತ್ಯೆಯ ನಂತರ ಫೆಬ್ರವರಿ ತಿಂಗಳಿನಲ್ಲಿ ಅಲಹಾಬಾದಿನ ತ್ರಿವೇಣಿ ಸಂಗಮದಲ್ಲಿ ನೆಹರು, ಪಟೆಲ್, ರಾಜೇಂದ್ರ ಪ್ರಸಾದ್ ಮುಂತಾದ ನಾಯಕರು ಗಾಂಧಿ ಅಸ್ತಿ ವಿಸರ್ಜನೆ ಮಾಡಿ ಶ್ರದ್ಧಾಂಜಲಿ ಸಭೆ ನಡೆಸಿದ್ದರು. ಈ ಸಭೆಯಲ್ಲಿ ನೆಹರು ಸಂಪುಟದ ರಫಿ ಅಹ್ಮದ್ ಕಿದ್ವಾಯಿ ಎಂಬವರು ಹೇಳಿದ್ದು "ಇಂದು ಗಾಂಧಿ ಮಾತ್ರ ಅಲ್ಲ ಗಾಂಧೀ ವಾದದ್ದೇ ಅಂತ್ಯ ಸಂಸ್ಕಾರವಾಗಿದೆ. ಕಾಂಗ್ರೆಸ್ ಸತ್ತಿದೆ". ಇಂದು ಕೂಡ ಇಂಥ ಧ್ವನಿ ಕಾಂಗ್ರೆಸ್ಸಿನಲ್ಲಿ ಅಲ್ಲಲ್ಲಿ ಬರುತ್ತಲೇ ಇದೆ. ಆದರೆ ಇದನ್ನು ನೆಹರು ಕಾಲದಿಂದ ಇಲ್ಲಿಯವರೆಗೆ ಆ ವಂಶದ ಅಡಿಯಾಳಿನಂತಿರುವ ಒಂದು ವರ್ಗ ಅಡಗಿಸುತ್ತಲೇ ಬಂದಿದೆ. ಈಗಲೂ ರಾಹುಲ್ ವಿಫಲವಾಗಿದ್ದರೂ ಇದೇ ಪರಿಸ್ಥಿತಿ ಮುಂದುವರಿದಿದೆ. ಈ ನೆಹರು ವಂಶದ ಕುಡಿಗಳನ್ನು ಬಿಟ್ಟು ಕಾಂಗ್ರೆಸ್ ಬೇರೆ ನಾಯಕರನ್ನು ಒಪ್ಪಿಕೊಳ್ಳುತ್ತಿಲ್ಲ. ಇದು ಸ್ವಾತಂತ್ರ್ಯಾ ನಂತರದ ಭಾರತದ ದುರಂತ ಕೂಡ ಹೌದು. ಇದುವರೆಗಿನ ಎಲ್ಲಾ ದುರಂತಗಳನ್ನು ಮೀರಿ ಸದೃಢ ಗೌರವಯುತ ಭಾರತವನ್ನು ಕಟ್ಟುವ ಕೆಲಸವನ್ನು ಮೋದಿ ಮಾಡಬೇಕಿದೆ. ನಮ್ಮೆಲ್ಲಾ ಯುವ ಸಮುದಾಯ ಗಟ್ಟಿ ಮನಸ್ಸಿನಲ್ಲಿ ಬೆಂಬಲಕ್ಕೆ ನಿಲ್ಲಬೇಕಿದೆ. ಇದೊಂದೇ ಕನಸು ಆಸೆ.  

-ಅಡ್ಡಂಡ ಕಾರ್ಯಪ್ಪ, ಕೊಡಗು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.