ಅಂಕಣಗಳು

ವೈದ್ಯರ ದಿನ ಎಂದವರಿಗೆ ಲೆಕ್ಕಿಗರು ನೆನಪಾಗಲಿಲ್ಲವೇ?

Published On :

ದಿ. 25.6.14ರ ವಿಚಾರ ತೋರಣ ವಿಭಾಗದಲ್ಲಿ ಪ್ರಕಟವಾಗಿರುವ ರೋಹಿತ್ ಚಕ್ರತೀರ್ಥರವರ 'ಬಗೆ ಬಗೆಯ ವೇಷದಲ್ಲಿ ಭಿಕ್ಷುಕರ ಸಾಲು' ಲೇಖನವು ಬಹಳ ಅರ್ಥಪೂರ್ಣವಾಗಿದೆ.
ಹೌದು. ನಾವೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಭಿಕ್ಷುಕರೇ!
-ವೆಂಕಟೇಶ್ ಎನ್., ತುಮಕೂರು, ಮೊ. 98440 18074

ಜುಲೈ 1ರ ಕ.ಪ್ರ. ಹಲವು ವಿಶೇಷಗಳನ್ನೊಳಗೊಂಡು ಓದುಗರ ಕೈ ಸೇರಿದೆ. ಎರಡೆರಡು 'ಮಾಸ್ಟ್-ಹೆಡ್‌' ಹೊತ್ತು, ಎರಡು ಮುಖಪುಟಗಳು ಜಾಹೀರಾತುದಾರರನ್ನು ಖುಷಿಪಡಿಸುವುದರ ಜತೆ ಪತ್ರಿಕೆಗೂ ಉತ್ತಮ ಆದಾಯ ಒದಗಿಸಿದಂತಿದೆ. ಮಾತಿನ ಚತುರ ಎಂ.ಸಿ. ನಾಣಯ್ಯ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಒಂದು ಮತದಿಂದ ಸರ್ಕಾರ ಕಳೆದುಕೊಂಡು ಲೋಕಸಭೆಯಲ್ಲಾಡಿದ ಮಾತು, ಪ್ರಧಾನಿ ನರೇಂದ್ರ ಮೋದಿಯವರು ವಿಜ್ಞಾನಿ ಮಿತ್ರರನ್ನುದ್ದೇಶಿಸಿ ಮಾಡಿದ ಭಾಷಣ ನಿಜಕ್ಕೂ ಸ್ಫೂರ್ತಿದಾಯಕ. ಜುಲೈ 1, ಡಾಕ್ಟರ್ಸ್ ಡೇ ಪ್ರಸ್ತಾಪ ಮಾಡಿದ ಕ.ಪ್ರ. ಚಾರ್ಟರ್ಡ್ ಅಕೌಂಟೆಂಟ್ಸ್ ಡೇ ಮರೆತಿರುವುದೂ ವಿಶೇಷ. ಕಛೇರಿಗೆ ತಡವಾಗಿ ಬಂದ ಅಧಿಕಾರಿ, ಸಿಬ್ಬಂದಿಗಳಿಂದ ರಜಾ ಚೀಟಿ ಪಡೆದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್!
ಎಲ್ಲಕ್ಕೂ ಹೆಚ್ಚಾಗಿ ಆಕರ್ಷಿಸಿದ್ದು, ಟಾಯ್ಲೆಟ್ ಬಾಗಿಲ ಮೇಲೆ ಬರೆದ ಸಾಲು- ಕಿರುನಗೆಯನ್ನಲ್ಲ, ಜೋರಾಗಿ ನಗುವಂತೆ ಮಾಡಿತು. ಒಟ್ಟಾರೆ, ತಿಂಗಳ ಪ್ರಾರಂಭ ಚೆನ್ನಾಗಿದೆ ಅನ್ನಬಹುದೇನೋ?
-ಶಂಕರನಾರಾಯಣ ಭಟ್, ಮಾಡಗೇರಿ, ಹೊನ್ನಾವರ, ಮೊ. 9632 821920

ವರದಕ್ಷಿಣೆ ವಿರೋಧಿ ಪ್ರಕರಣ ದಾಖಲಾದ ತಕ್ಷಣ ಹಿಂದೆ-ಮುಂದೆ ಯೋಚಿಸದೇ ಗಂಡ ಮತ್ತವನ ಕುಟುಂಬದವರನ್ನು ಜೈಲಿಗೆ ಹಾಕುವ ಕ್ರಮ ನಿಲ್ಲಬೇಕು ಎಂದು ಸುಪ್ರೀಂಕೋರ್ಟ್ ಮಹತ್ವದ ನಿರ್ದೇಶನ ನೀಡಿದೆ. ದಾಂಪತ್ಯ ಕಲಹ, ಕೋರ್ಟ್ ಮೆಟ್ಟಿಲೇರುವಿಕೆ ಸಾಮಾನ್ಯ ಎನಿಸಿರುವ ಕಾಲಘಟ್ಟದಲ್ಲಿ ಜನಸಾಮಾನ್ಯರಿಗೆ ತೀರ ಮುಖ್ಯ ಎನಿಸಿರುವ ಸುದ್ದಿ ಇದು. ಅಲ್ಲದೇ ವರದಕ್ಷಿಣೆ ವಿರೋಧಿ ಕಾನೂನಿನ ದುರ್ಬಳಕೆಯಿಂದ ನೊಂದವರ ದೊಡ್ಡ ಸಮೂಹವೇ ದೇಶದಲ್ಲಿದೆ. ಇಂಥ ಸುದ್ದಿ ಪ್ರಮುಖವಾಗಿ ಪ್ರಕಟಿಸುವುದನ್ನು ಬಿಟ್ಟು ಆ ದಿನವೂ 'ಫೇಸ್‌ಬುಕ್‌ನಲ್ಲಿ ಮೋದಿ ಫೇಮಸ್ಸು' ಅಂತ ಭಜನೆ ಮಾಡಿದ್ದೀರಲ್ಲ! ನಿಮ್ಮ ಮೋದಿವ್ಯಾಧಿಗೆ ಸಂತಾಪ ಸೂಚಿಸುವುದನ್ನು ಬಿಟ್ಟು ಇನ್ನೇನು ಮಾಡಲು ಸಾಧ್ಯ?
-ಲೋಕೇಶ್, ಬೆಂಗಳೂರು

ಭಾನುವಾರದ (ಜೂನ್ 22) ವಿಚಾರ ತೋರಣದಲ್ಲಿನ ಚಿತ್ರಸಂತೆ ಗಮನಿಸಿದಾಗ ನನ್ನ ಮನ ಸೆಳೆದ ಚಿತ್ರ 'ಕ್ಯಾನ್ಸರ್ ಪೀಡಿತ ಬಾಲಕನನ್ನು ಖುಷಿಪಡಿಸಲು ವೈದ್ಯರು-ದಾದಿಯರು ಜೋಕರ್ ವೇಷ ಹಾಕಿದ್ದಾರೆ..'
ಆದರೆ ಇಲ್ಲಿ ಕೇಳಿ, ಇದು ಸ್ವಲ್ಪ ರಿವರ್ಸ್ ಆಗಿದೆ ಅಷ್ಟೆ. ಪ್ರಖ್ಯಾತ ನಿರ್ದೇಶಕ ಕೆ. ಬಾಲಚಂದರ್ 'ನೀರ್ ಕುಮಿಳಿ' ಎಂಬ ತಮಿಳು ಚಿತ್ರ ನಿರ್ಮಿಸಿದ್ದಾರೆ. ಹಾಸ್ಯನಟ ತಾಯ್ ನಾಗೇಶ್ ಇದರಲ್ಲಿ ಕ್ಯಾನ್ಸರ್ ರೋಗಿ. ತನಗೆ ಕ್ಯಾನ್ಸರ್ ಇರುವ ವಿಚಾರವೇ ತಿಳಿಯದ ಆತ ತನ್ನ ಹಾವಭಾವ, ಚೇಷ್ಟೆಗಳಿಂದ ವೈದ್ಯರು-ನರ್ಸ್‌ಗಳಿಗೆ ಕಾಟ ಕೊಡುತ್ತಾ ನಗಿಸುತ್ತಿರುತ್ತಾನೆ. ಕ್ಯಾನ್ಸರ್ ರೋಗಿ ತನ್ನ ಸಾವು ಖಚಿತ ಅಂತ ತಿಳಿದಾಗ ಆತನ ಮನಸ್ಥಿತಿ ಹೇಗಿರುತ್ತೆ ಅಂತ ಈ ಸಿನಿಮಾ ನಿರೂಪಿಸಿತು. ನಿಜ ಹೇಳಬೇಕೆಂದರೆ ವಿಚಾರ ತೋರಣ-ಅನುಭವ ಮಂಟಪಗಳ ಪುಟಗಳು ಭಾನುವಾರದ "ಹೈಲೈಟ್ಸ್‌" ಎಂದರೆ ತಪ್ಪಲ್ಲ.
-ಬಿ.ಎಸ್. ರಮೇಶ್,
ಬನಶಂಕರಿ, ಬೆಂಗಳೂರು, 99861 33976

ಗ್ರಾಮೀಣ ಜನತೆಯ ದೈನಂದಿನ ಬದುಕಿಗೆ ಮಾರಕವಾಗಿರುವ ಮುಗ್ಧ ಮಕ್ಕಳನ್ನು ಬಲಿ ಪಡೆಯುವ ಕೊಳವೆ ಬಾವಿ ಅವಶೇಷಗಳ ಕುರಿತು ಕನ್ನಡಪ್ರಭ ದಿಢೀರ್ ಸ್ಪಂದನೆ ಅಭಿನಂದನೀಯ. ರಾಜ್ಯಾದಾದ್ಯಂತ ವಿಫಲಗೊಂಡ ಕೊಳವೆ ಬಾವಿಗಳ ಭಗ್ನಾವಶೇಷಗಳು ಛಾಯಾ ಚಿತ್ರಗಳೊಂದಿಗೆ ಸುದ್ದಿಯನ್ನು ಸಂಗ್ರಹಿಸಿ-ಎರಡು ಪುಟಗಳಲ್ಲಿ ಪ್ರಕಟಿಸಿ ಜನಜಾಗೃತಿಯನ್ನುಂಟು ಮಾಡುವ ಪರಿ ಅಮೋಘ. ಇದು ನೈಜ ಪತ್ರಿಕಾ ಧರ್ಮ.
-ಕೋಟೇಶ್ವರ ಸೂರ್ಯನಾರಾಯಣರಾವ್
ಬಸವನಗುಡಿ. ಬೆಂಗಳೂರು., ದೂ. 266 24164

4.6.14ರ ಸಂಚಿಕೆಯ ವಿಚಾರ ತೋರಣ ಪುಟದಲ್ಲಿ ವಕ್ರತುಂಡೋಕ್ತಿಯನ್ನು ಓದಿ ನಾನು ಈ ರೀತಿ ಪ್ರತಿಕ್ರಿಯಿಸುತ್ತೇನೆ. ಪೂನಂ ಪಾಂಡೆಯವರಂತೆ ಪ್ರಚಾರಕ್ಕಾಗಿ ಬುದ್ಧಿಜೀವಿಗಳು ಬೌದ್ಧಿಕವಾಗಿ ಎಷ್ಟು ಬೇಕಾದರೂ ಬೆತ್ತಲಾಗುವಂತೆ- ಪ್ರಚಾರಕ್ಕಾಗಿ, ಮುದ್ರಣ ಹಾಗೂ ದೃಶ್ಯ ಮಾಧ್ಯಮದವರೂ ಸಹ ಅವರಿಬ್ಬರ ಮನಸ್ಥಿತಿಯನ್ನು ಪ್ರಚುರಪಡಿಸುವುದಕ್ಕಾಗಿ ಎಷ್ಟಾದರೂ ಬೆತ್ತಲಾಗುವಿರೋ ಹೇಗೆ? ನಾಳೆ ಪೂನಂ ಪಾಂಡೆ ತನ್ನನ್ನು ಬುದ್ಧಿಜೀವಿಗಳೊಡನೆ ಹೋಲಿಸಿದ್ದಕ್ಕಾಗಿ ನಿಮ್ಮ ಮೇಲೆ ಕೇಸ್ ಹಾಕಬಹುದಲ್ಲವೇ?
-ಎ.ಎಸ್. ಹಾಲಭಾವಿ

ನೀವು ಏನ್‌ಬರೆದ್ರೂ ಪ್ರಕಟಿಸ್ತೀವಿ. ಪ್ರಕಟಿಸ್ತೀವಿ ಅಂತ ಏನೇನೆಲ್ಲ ಬರೀಬೇಡಿ!
ನಿಮ್ಮ ಅನಿಸಿಕೆಗಳನ್ನು  ಗೋಡೆಗೆ ಛಾಪಿಸಲು: anisikeprabha@gmail.com
ಗೋಡೆಬರಹ ವಿಭಾಗ, ಕನ್ನಡಪ್ರಭ, ಎಕ್ಸ್‌ಪ್ರೆಸ್ ಕಟ್ಟಡ, ನಂ.1, ಕ್ವೀನ್ಸ್ ರಸ್ತೆ, ಬೆಂಗಳೂರು -1.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.