ಐವಾನ್- ಎ- ಶಾಹಿ ಆವರಣದಲ್ಲಿ ಜಾದೂ ಮಾಡಿದ ಕೃಷ್ಣ ಚವಾಣ್

ಕಲ್ಲಿನ ಕಣಜ ಕಲಬುರ್ಗಿಯನ್ನು ಬಹುಮನಿ ಸುಲ್ತಾನರು ಆಳುತ್ತಿದ್ದ ಕಾಲ. ಕಲಬುರ್ಗಿಯನ್ನು ಗುಲ್ಬರ್ಗ ಎಂದು ಕರೆದು ಆಳ್ವಿಕೆ ನಡೆಸಿದರು. ಅವರ ಕಾಲದಲ್ಲಿ ನಿರ್ಮಿತವಾದ ಅನೇಕ ಐತಿಹಾಸಿಕ ಸ್ಮಾರಕಗಳನ್ನು ನಾವು ಗುಲ್ಬರ್ಗದಲ್ಲಿ ಕಾಣಬಹುದಾದ ಬಹುಮನಿ ಸಾಮ್ರಾಜ್ಯವು ತನ್ನ ಕೊನೆಯ ಕಾಲದಲ್ಲಿ ಹೋಳಾಗಿ ಶಾಹಿರಾಜ್ಯಗಳಾಗಿ ವಿಭಜಿಸಲ್ಪಟ್ಟಿತು. ವಿಭಜಿಸಲ್ಪಟ್ಟ ಶಾಹಿ ರಾಜ್ಯಗಳಲ್ಲಿ ಹೈದ್ರಾಬಾದಿನ ನಿಜಾಮ ಶಾಹಿಯೂ ಒಂದಾಗಿದೆ. ನಿಜಾಮರ ಕಾಲದಲ್ಲಿ ಆಳ್ವಿಕೆ ಮಾಡಿದ ಅರಸ ಉಸ್ಮಾನ್-ಅಲಿ-ಪಾಶಾ ಎಂಬುವವನು ಗುಲ್ಬರ್ಗದಲ್ಲಿ ಅತ್ಯದ್ಭುತವಾದ ಶೈಲಿಯಲ್ಲಿ ವಿಶ್ರಾಂತಿ ಗೃಹವನ್ನು ನಿರ್ಮಾಣ ಮಾಡಿದುದರಿಂದ ಈ ಕಟ್ಟಡಕ್ಕೆ ಐವಾನ್-ಎ-ಶಾಹಿ ಎಂದು ನಾಮಕರಣ ಮಾಡಲಾಯಿತು. ಐವಾನ-ಎ-ಶಾಹಿ ಎಂದರೆ ಶಾಹಿಸುಲ್ತಾನನ ಅರಮನೆ. ನಗರದ ಕೇಂದ್ರ ಭಾಗದಲ್ಲಿರುವ ಐವಾನ-ಎ-ಶಾಹಿ ಕಟ್ಟಡವು ತನ್ನದೇ ಆದ ವೈಶಿಷ್ಟ್ಯತೆಯಿಂದ ಕೂಡಿದೆ. ಈ ಕಟ್ಟಡದಲ್ಲಿ ವಿವಿಧ ವಿನ್ಯಾಸದ ಕೋಣೆಗಳಿದ್ದು ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಅತಿಥಿಗಳ ನಿರೀಕ್ಷಣಾ ಕೋಣೆ, ಅರಸ ಶೈಯ್ಯಾಗೃಹ, ಊಟದಕೋಣೆ, ಅಡಿಗೆ ಮನೆ, ವಿಶ್ರಾಂತಿಕೋಣೆ, ಅತಿಥಿ ಗೃಹ. ಇದನ್ನು ಕಪ್ಪು ಮತ್ತು ಬಿಳಿ ಕಲ್ಲುಗಳೊಂದಿಗೆ ನಿರ್ಮಿಸಲಾಗಿದೆ. ಕಟ್ಟಡದ ದ್ವಾರಗಳನ್ನು ಕಮಾನು ರೂಪದಲ್ಲಿ ನಿರ್ಮಿಸಲಾಗಿದೆ. ಇದು ನಗರದ ಅತ್ಯಂತ ಸುಂದರ ಕಟ್ಟಡ. ಇದರ ಪಕ್ಕದಲ್ಲಿಯೇ ಚಿಕ್ಕದಾದ ಸಮಾಖಾನ ನಿರ್ಮಿಸಲಾಗಿದೆ. ನಿಜಾಮ ಗುಲ್ಬರ್ಗಕ್ಕೆ ಬಂದಾಗ ಇಲ್ಲಿ ಪ್ರಾರ್ಥನೆ ಮಾಡುತ್ತಿದ್ದ. ಈ ಕಟ್ಟಡದ ಇನ್ನೊಂದು ವೈಶಿಷ್ಟ್ಯ ಏನೆಂದರೆ ಕಟ್ಟಡದವರೆಗೂ ನಿಜಾಮ ರೈಲು ಹಳಿಯನ್ನು ಹಾಕಿಸಿ ಹೈದ್ರಾಬಾದಿನಿಂದ ಗುಲ್ಬರ್ಗಕ್ಕೆ ಬರುವಾಗ ಸ್ವಂತ ರೈಲನ್ನು ಉಪಯೋಗಿಸುತ್ತಿದ್ದ! ಜಗತ್ತಿನಲ್ಲಿಯೇ ಅಂದಿನ ಕಾಲದಲ್ಲಿ ಸ್ವಂತ ರೈಲನ್ನು ಉಪಯೋಗಿಸಿದ ಹೆಗ್ಗಳಿಕೆಗೆ ಉಸ್ಮಾನ-ಅಲಿ-ಖಾನನಿಗಿದೆ.
1948ರಲ್ಲಿ ಗುಲ್ಬರ್ಗ ವಿಮೋಚನೆ ಪಡೆದ ನಂತರ ಈ ಕಟ್ಟಡ ವಿಭಾಗಾಧಿಕಾರಿಗಳ ನಿವಾಸವಾಗಿ ಮಾರ್ಪಟ್ಟು, ತದನಂತರ ವಿಭಾಗ ಅಧಿಕಾರಿಗಳ ಕಚೇರಿಯಾಗಿ ಉಪಯೋಗಿಸಲ್ಪಟ್ಟಿತ್ತು. ಸದ್ಯದಲ್ಲಿ ಸರ್ಕಾರದ ಅತಿ ಗಣ್ಯವ್ಯಕ್ತಿಗಳ ಅತಿಥಿ ಗೃಹವಾಗಿ ಬಳಸಲಾಗುತ್ತಿದೆ. ಈ ಕಟ್ಟಡದ ಆವರಣದಲ್ಲಿ ಒಂದು ಸುಂದರ ಕೈತೋಟವನ್ನು ನಿರ್ಮಿಸಿರುವುದರಿಂದ ಕಟ್ಟಡದ ಆಕರ್ಷಣೆ ಇಮ್ಮಡಿಯಾಗಿದೆ.
ಈ ಕಟ್ಟಡದ ಹಿಂಭಾಗದಲ್ಲಿ ಒಂದು ಬಾವಿ ಇತ್ತು. ಬೇಸಿಗೆ ಕಾಲದಲ್ಲಿ ಸುತ್ತಮುತ್ತಲಿನ ಕೊಳವೆಬಾವಿಗಳು ಬತ್ತಿಹೋದರೂ ಈ ಬಾವಿಯಲ್ಲಿ ಯಾವಾಗಲೂ ನೀರು ಲಭ್ಯವಿರುತ್ತಿತ್ತು. ಈ ಬಾವಿಯಿಂದ ಚರಂಡಿ ಮೂಲಕ ನೀರು ಪಂಪ್ ಹೌಸ್ನಿಂದ ಒಂದು ಈಜುಕೊಳಕ್ಕೆ ಬರುತ್ತಿತ್ತು. ಈ ಚರಂಡಿಯ ಎರಡೂ ಕಡೆಗೆ ಬಂಜರು ಭೂಮಿ ಇತ್ತು.
ಈ ಪಾರಂಪರಿಕ ಕಟ್ಟಡದ ಮುಂಭಾಗವನ್ನು ಜಿಲ್ಲಾ ಅತಿಥಿ ಗೃಹವನ್ನಾಗಿ ಪರಿವರ್ತಿಸಲಾಗಿದೆ ಹಾಗೂ ಇದರ ಹಿಂಭಾಗವನ್ನು ಪ್ರಾದೇಶಿಕ ಆಯುಕ್ತರ ನಿವಾಸವಾಗಿ ಬಳಸಲಾಗುತ್ತಿದೆ. ಇದರ ಸುತ್ತಮುತ್ತಲ ಪ್ರದೇಶ ಅರಣ್ಯದ ರೀತಿಯಲ್ಲಿ ಬೆಳೆದಿತ್ತು. ಗುಲ್ಬರ್ಗದಲ್ಲಿ ಪ್ರಥಮಬಾರಿ ಸಚಿವ ಸಂಪುಟ ಸಭೆಯನ್ನು ಏರ್ಪಡಿಸಬೇಕಾಗಿದ್ದಾಗ ಬಹಳ ವರ್ಷಗಳ ನಂತರ ಈ ಅತಿಥಿ ಗೃಹವನ್ನು ಸುಸಜ್ಜಿತ ರೂಪದಲ್ಲಿ ಅಭಿವೃದ್ಧಿಪಡಿಸಲು ಸರ್ಕಾರ ಅನುದಾನ ನೀಡಿತ್ತು. ಕೊಠಡಿಗಳ ಆಧುನೀಕರಣ ಇತ್ಯಾದಿಯನ್ನು ಮಾಡುವ ಜೊತೆಗೆ ಸುತ್ತಮುತ್ತಲಿನ ಪ್ರದೇಶವನ್ನು ಒಂದು ಉತ್ತಮ ಉದ್ಯಾನವಾಗಿ ಬೆಳೆಸಲು ತೀರ್ಮಾನಿಸಲಾಯಿತು. ಸುತ್ತಲೂ ಒಂದು ನಡಿಗೆ ರಸ್ತೆಯನ್ನು ನಿರ್ಮಿಸಲಾಯಿತು ಹಾಗೂ ಮುಂಭಾಗದಲ್ಲಿ ನಿಜಾಮರ ಕಾಲದ ಶೈಲಿಯಲ್ಲಿ ಒಂದು ಉದ್ಯಾನವನ್ನು ಸೃಷ್ಟಿಸಲಾಯಿತು. ಅದರ ಎರಡೂ ಬದಿಯಲ್ಲಿ ಹೂ ಮತ್ತು ನೆರಳು ನೀಡುವಂಥ ಮರಗಳನ್ನು ನೆಡಲಾಯಿತು. ಅತಿಥಿ ಗೃಹದ ಮುಂಭಾಗ ಒಂದು ದರ್ಬಾರ - ಆಮ್ವನ್ನು ಹಿಂದಿನ ಕಾಲದಲ್ಲಿ ನಿಜಾಮರು ಜನಸಾಮಾನ್ಯರನ್ನು ಭೇಟಿ ಮಾಡಲು ಉಪಯೋಗಿಸುತ್ತಿದ್ದರು. ಅತಿಥಿ ಗೃಹಕ್ಕೆ ಹೋಗುವ ಮುಖ್ಯ ರಸ್ತೆಯ ಎಡ ಮತ್ತು ಬಲಗಡೆ ಇರುವ ಉದ್ಯಾನವನ್ನು ಅಭಿವೃದ್ಧಿಪಡಿಸಲಾಯಿತು. ಅದರ ಉದ್ದೇಶ ಆ ಪಾರಂಪರಿಕ ಕಟ್ಟಡಕ್ಕೆ ಇರುವ ಇತಿಹಾಸವನ್ನು ಇನ್ನೊಮ್ಮೆ ಸೃಷ್ಟಿಸಿ ಈಗಿನ ಪೀಳಿಗೆಗೆ ಪರಿಚಯಿಸುವುದಾಗಿತ್ತು. ಆದುದರಿಂದ ಏಳು ಅಡಿ ಎತ್ತರದ ಹೂದಾನಿ ರೂಪದಲ್ಲಿ ಕಾರಂಜಿಯನ್ನು ಬೇರೆಬೇರೆ ವಿದ್ಯುದ್ದೀಪಗಳ ಜೊತೆಗೆ ಸ್ಥಳೀಯ ಶಿಲ್ಪಿಗಳ ಕೌಶಲ್ಯವನ್ನು ಉಪಯೋಗಿಸಿ ಫೈನ್ ಆರ್ಟ್ಸ್ ವಿಶ್ವವಿದ್ಯಾಲಯದ ಮುಖ್ಯಸ್ಥರಾದ ಪ್ರೊ. ಅದಾನಿ ಅವರ ಮಾರ್ಗದರ್ಶನದಲ್ಲಿ ಒಂದು ವಾರದ ಒಳಗೆ ನಿರ್ಮಿಸಲಾಯಿತು. ಅದೇ ರೀತಿ ಹೊರಹೋಗುವ ದ್ವಾರದ ಹತ್ತಿರ ಒಂದು ಬೃಹತ್ ಬಿಳಿ ಕುದುರೆಯ ಪ್ರತಿಮೆಯನ್ನು ಸಹ ನಿರ್ಮಿಸಲಾಯಿತು. ಈ ಕುದುರೆಯನ್ನು ಅಲಂಕರಿಸಲು ಚಂಢೀಗಡ್ ಪ್ರದೇಶದ ರಾಕ್ಗಾರ್ಡನ್ ಮಾದರಿಯಲ್ಲಿ ತ್ಯಾಜ್ಯ ವಸ್ತುಗಳಾದ ಟೈಲ್, ಬಳೆ, ಇತರೆ ಸುಮಾರು ವಸ್ತುಗಳನ್ನು ಬಹಳ ರಚನಾತ್ಮಕವಾಗಿ ಉಪಯೋಗಿಸಲಾಯಿತು.
ಮೂರನೆಯದಾಗಿ, ದೇವ ದೇವ ವನ, ಬೀದರ್ ಮಾದರಿಯಲ್ಲಿ ಒಂದು ಔಷಧ ಉದ್ಯಾನವನ್ನು ಸಹ ನಿರ್ಮಿಸಲಾಯಿತು. ಅದರಲ್ಲಿ ದಿನನಿತ್ಯ ಎದುರಾಗುವ ಆರೋಗ್ಯ ಸಮಸ್ಯೆಗಳನ್ನು ಬಗೆಹರಿಸಲು ನೂರಾರು ತಳಿಗಳನ್ನು ಅರಣ್ಯ ಇಲಾಖೆ ವತಿಯಿಂದ ಒದಗಿಸಲಾಯಿತು. ಒಟ್ಟಾರೆ ಹನ್ನೆರಡು ಎಕರೆ ಕ್ಷೇತ್ರದ ವ್ಯಾಪ್ತಿಯಲ್ಲಿ ನೀರು ಹಾಗೂ ಮಣ್ಣು ಸಂರಕ್ಷಣೆಯನ್ನು ಮಾಡಲು ಜಲಾನಯನ ಇಲಾಖೆ ವತಿಯಿಂದ ಒಂದು ಕ್ರಿಯಾ ಯೋಜನೆಯನ್ನು ಆಧರಿಸಿ ಕೆಲವು ಕಾಮಗಾರಿಗಳನ್ನು ತೆಗೆದುಕೊಂಡು ಈ ಸುಸಜ್ಜಿತ ಆವರಣವನ್ನು ಮುಖ್ಯಮಂತ್ರಿಗಳ ಮೂಲಕ ನಾಗರಿಕರಿಗೆ ಲೋಕಾರ್ಪಣೆ ಮಾಡಲಾಯಿತು.
ಐವಾನಿ ಶಾಹಿ ಪಕ್ಕಕ್ಕೆ ಒಂದು ಹೊಸ ಅತಿಥಿ ಗೃಹವನ್ನು ಲೋಕೋಪಯೋಗಿ ಇಲಾಖೆಯಿಂದ ನಿರ್ಮಿಸಲಾಗಿದ್ದು, ಅದರ ಮುಂಭಾಗದಲ್ಲಿ ಸುಮಾರು ಎರಡು ಎಕರೆ ಭೂಮಿ ಮರುಭೂಮಿಯಾಗಿ ಅಸಹ್ಯವಾಗಿ ಕಾಣುತ್ತಿತ್ತು. ಅತಿ ಕಡಿಮೆ ಸಮಯದಲ್ಲಿ ಈ ಜಾಗವನ್ನು ಸುಂದರವಾಗಿ ಪರಿವರ್ತಿಸಲು ನಾವು ಬೆಳಗಾವಿ ಜಿಲ್ಲೆಯ ಒಬ್ಬ ಪ್ರಸಿದ್ಧ ತೋಟಗಾರಿಕಾ ತಜ್ಞರಾದ ಕೃಷ್ಣ ಚವಾಣ್ರನ್ನು ಸಂಪರ್ಕಿಸಿದೆವು. ಅವರ ಸಕಾರಾತ್ಮಕ ಶೈಲಿಯನ್ನು ನಾನು ಬೆಳಗಾವಿ ಜಿಲ್ಲಾಧಿಕಾರಿಯಾಗಿ ವೀಕ್ಷಿಸಿದ್ದೆ. ವಿಶ್ವ ಕನ್ನಡ ಸಮ್ಮೇಳನಕ್ಕೆ ಪೂರ್ವಭಾವಿ ಸಿದ್ಧತೆಯನ್ನು ಮಾಡುವಾಗ ಅವರು ಸುಮಾರು ವಿಷಯಾಧಾರಿತ ಉದ್ಯಾನಗಳನ್ನು ಕೆಲವೇ ದಿನಗಳಲ್ಲಿ ನಿರ್ಮಿಸಿದರು. ಅವರು ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ಪದವಿ ಗಳಿಸಿ ಗ್ರಹಿಸಿ ಲ್ಯಾಂಡ್ಸ್ಕೇಪ್ ಕನ್ಸಲ್ಟಂಟ್ ಆಗಿ ದೇಶ-ವಿದೇಶದಲ್ಲಿ ತಮ್ಮ ಸೇವೆಯನ್ನು ನೀಡುತ್ತಿದ್ದರು. ಅವರು ಮೂಲತಃ ಬಂಜಾರ ಸಮುದಾಯಕ್ಕೆ ಸೇರಿದವರಾಗಿದ್ದು, ಬಿಜಾಪುರ ಜಿಲ್ಲೆಯ ಇಂಡಿ ಗ್ರಾಮದಲ್ಲಿ ಜನಿಸಿದವರು. ಅವರ ವಿಶೇಷತೆ ಏನೆಂದರೆ ಇಪ್ಪತ್ನಾಲ್ಕು ಗಂಟೆಯೊಳಗೆ ಒಂದು ಉದ್ಯಾನವನ್ನು ನಿರ್ಮಿಸುವುದು!
ಐವಾನಿ ಶಾಹಿ ಸ್ಥಳವನ್ನು ನೋಡಿದ ಮೇಲೆ ಅವರು ಅಲ್ಲಿ ಒಂದು ಜಪಾನ್ ಮಾದರಿಯ ಹೂದೋಟವನ್ನು ನಿರ್ಮಿಸಲು ಸಲಹೆ ನೀಡಿದರು. ಗುಲ್ಬರ್ಗ ನಾಗರಿಕರಿಗೆ ಒಂದು ಹೊಸ ಅನುಭವವಾಗಲಿ ಮತ್ತು ಬೇರೆ ದೇಶಗಳ ಸಂಸ್ಕೃತಿಯ ತುಸು ಪರಿಚಯ ಆಗಲಿ ಎಂಬ ಕಾರಣಕ್ಕೆ ಈ ರೀತಿ ಮಾಡಲಾಯಿತು. ಅಲ್ಲಿರುವ ಭೌಗೋಳಿಕ ಕ್ಷೇತ್ರವನ್ನು ಉಳಿಸಿಕೊಂಡು ಕೆಲವು ಕಡೆ ಎತ್ತರದ ಹುಲ್ಲಿನ ಮೈದಾನ ಮತ್ತು ಕೆಲವು ಕಡೆ ಜಲಪಾತ ಹಾಗೂ ಕೃತಕ ಪಕ್ಷಿಗಳ ಹಿಂಡು, ಮತ್ತೊಂದು ಕಡೆ ಪಗೋಡ ಮಾದರಿಯಲ್ಲಿ ಜನರು ಕುಳಿತುಕೊಂಡು ವಿಶ್ರಾಂತಿ ಪಡೆಯುವ ಸ್ಥಳವನ್ನು ನಿರ್ಮಿಸಲಾಯಿತು. ಎರಡೂವರೆ ಎಕರೆಯ ಕ್ಷೇತ್ರ ಹೊಂದಿರುವ ಈ ಉದ್ಯಾನದಲ್ಲಿ ಕಾಲುಗಳಿಗೆ ಉತ್ತಮ ಅಕ್ಯುಪ್ರೆಶರ್ನ್ನು ನೀಡಲು ಸಮುದ್ರದಲ್ಲಿ ದೊರೆಯುವ ನುಣುಪಾದ ಕಲ್ಲುಗಳಿಂದ ಒಂದು ಕಾಲುದಾರಿಯನ್ನು ನಿರ್ಮಿಸಲಾಯಿತು.
ಈ ಉದ್ಯಾನದಲ್ಲಿ ಪಾದರಕ್ಷೆಗಳನ್ನು ಧರಿಸಲು ನಿಷೇಧಿಸಲಾಯಿತು. ರಾತ್ರಿ ಹೊತ್ತು ಲ್ಯಾಂಟರ್ನ್/ಕಂದೀಲುಗಳನ್ನು ಅಳವಡಿಸಿ ಒಂದು ಹುಣ್ಣಿಮೆಯ ವಾತಾವರಣ ನಿರ್ಮಿಸಲಾಯಿತು. ಇದು ಸ್ಥಳೀಯರಿಗೆ ಅತ್ಯಂತ ಮನಮೋಹಕ ಹಾಗೂ ಹೃದಯಸ್ಪರ್ಶಿ ಅನುಭವದ ತಾಣವಾಯಿತು. ಸಂಪೂರ್ಣವಾಗಿ ಮರುಭೂಮಿಯಲ್ಲಿ ಹತ್ತರಿಂದ ಹದಿನೈದು ವರ್ಷದ ಅತಿ ವಿಶಿಷ್ಠ ಗಿಡಗಳನ್ನು ಹಾಗೂ ಹೂಗಳನ್ನು ಬೇರೆಬೇರೆ ನರ್ಸರಿಗಳಿಂದ ತರಿಸಿ ರಾತ್ರಿಹೊತ್ತು ನೆಟ್ಟು ಮರುದಿವಸ ನಮಗೆ ಜಪಾನೀಸ್ ಉದ್ಯಾನವನ್ನು ಒದಗಿಸಿಕೊಟ್ಟರು! ಈ ಮರಗಳು ಗುಲ್ಬರ್ಗ ತಾಪಮಾನಕ್ಕೆ ಬದುಕತ್ತವೋ, ಇಲ್ಲವೋ ಎಂಬ ಬಗ್ಗೆ ಎಲ್ಲರಿಗೂ ಸಂಶಯವಿತ್ತು. ಆದರೆ ಕೃಷ್ಣ ಚೌವಾಣರಿಗೆ ತೋಟಗಾರಿಕೆ ಬಗ್ಗೆ ಇರುವ ಜ್ಞಾನವನ್ನು ನಾವು ಸ್ಮರಿಸಬೇಕಾಗುತ್ತದೆ. ಏಕೆಂದರೆ ಒಂದು ಗಿಡಮರವೂ ಹಾಳಾಗದೇ ಈವರೆಗೂ ತುಂಬಾ ಚೆನ್ನಾಗಿ ಬೆಳೆದಿವೆ. ಸಸ್ಯಶಾಸ್ತ್ರದ ಕೆಲವು ವಿದ್ಯಾರ್ಥಿಗಳು ಇಲ್ಲಿ ಬಂದು ಸುಮಾರು ಐನೂರು ವಿವಿಧ ತಳಿಗಳು ಒಂದೇ ಉದ್ಯಾನದಲ್ಲಿ ಲಭ್ಯವಿವೆ ಎಂದು ತಮ್ಮ ಸಂಶೋಧನೆಯಲ್ಲಿ ದಾಖಲಿಸಿ ನಮಗೆ ಒಂದು ಪ್ರತಿಯನ್ನು ನೀಡಿದರು. ಅವರು ಆಯ್ಕೆ ಮಾಡಿದ ಮರಗಳಲ್ಲಿ ವಿಶೇಷವಾದದ್ದು ದೇವ ಕಣಿಗಲೆ. ಒಂದು ರೀತಿ ಆಧ್ಯಾತ್ಮಿಕ ವಾತಾವರಣವನ್ನು ಅದು ನಿರ್ಮಿಸಿತ್ತು. ಇದು ಜಪಾನಿನ ಝೆನ್ ಪೂರ್ವಕಲ್ಪನೆಯ ಮೇಲೆ ಆಧಾರಿತವಾಗಿರುತ್ತದೆ. ಅದೇ ರೀತಿ ಅರಳಿ ಮರಗಳು ಅತೀ ಹೆಚ್ಚು ಆಮ್ಲಜನಕವನ್ನು ನೀಡುವುದರಿಂದ ಜನ ಅಲ್ಲೀಗ ಪ್ರಾಣಾಯಾಮ ಮಾಡುತ್ತಿದ್ದಾರೆ. ಅತಿ ಮೃದುವಾದಂಥ ಮೆಕ್ಸಿಕನ್ ಹುಲ್ಲುಹಾಸಿನ ಮೇಲೆ ಮಕ್ಕಳು ಆಟವಾಡಿ ಖುಷಿಪಡುತ್ತಿದ್ದಾರೆ.
ಒಂದು ಪಾರಂಪಾರಿಕ ಸ್ಥಳವನ್ನು ಅಭಿವೃದ್ಧಿಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡುವುದಾಗಲೀ ಅಥವಾ ಅದನ್ನು ಪಾಳು ಬೀಳಲು ಬಿಟ್ಟು ಮುಂದಿನ ಪೀಳಿಗೆಗೆ ನಷ್ಟ ಮಾಡುವುದಾಗಲೀ ಇವೆರಡೂ ನಮ್ಮ ಕೈಯಲ್ಲಿಯೇ ಇದೆ ಅಲ್ಲವೇ?!
-ಶಾಲಿನಿ ರಜನೀಶ್, ಐಎಎಸ್
anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


