ಅಂಕಣಗಳು

ವಿಶ್ವ ವ್ಯಾಪಾರ: ಸಂಪತ್ತಿಗೆ ಸವಾಲ್ ಅಂತು ಭಾರತ!

ವಿಶ್ವ ವ್ಯಾಪಾರ: ಸಂಪತ್ತಿಗೆ ಸವಾಲ್ ಅಂತು ಭಾರತ!
Published On :

ವಿಶ್ವವ್ಯಾಪಾರ ಸಂಘಟನೆ ಪ್ರಸ್ತಾವಿಸಿದ ಅಭಿವೃದ್ಧಿಶೀಲ ರಾಷ್ಟ್ರಗಳ ಸಬ್ಸಿಡಿ ಕಡಿತ ಒಪ್ಪಂದವನ್ನು ಮೊನ್ನೆ ಭಾರತ ವಿರೋಧಿಸಿತು. ಚೀನಾ ಸೇರಿದಂತೆ ಹಲವು ರಾಷ್ಟ್ರಗಳು ಭಾರತದ ಈ ನಿಲವನ್ನು ಬೆಂಬಲಿಸಿದವು. ಏನೀ ಕಸರತ್ತಿನ ಆಳನೋಟ?

ದಶಕದ ಹಿಂದೆ ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಕೋಫಿ ಅನ್ನಾನ್ ಅವರು ಜಾಗತೀಕರಣ ವ್ಯವಸ್ಥೆಯಲ್ಲಿನ ವ್ಯಾಪಾರ ಒಪ್ಪಂದಗಳ ಕುರಿತಂತೆ ಆಡಿದ ಕಟು ಮಾತುಗಳು ಹೀಗಿದ್ದವು- 'ಶ್ರೀಮಂತ ರಾಷ್ಟ್ರಗಳು ಮುಕ್ತ ಮಾರುಕಟ್ಟೆಯ ಬಗ್ಗೆ ಗುಣಗಾನ ಮಾಡುವುದು ಅಥವಾ ಆ ಕುರಿತು ಬಡರಾಷ್ಟ್ರಗಳಿಗೆ ಬೋಧನೆ ಮಾಡುವುದು ಕಪಟ ಆಚರಣೆಯಾಗಿದೆ. ಸ್ವತಃ ಶ್ರೀಮಂತ ರಾಷ್ಟ್ರಗಳು ಬಡರಾಷ್ಟ್ರಗಳಿಗೆ ತಮ್ಮ ಮಾರುಕಟ್ಟೆಯನ್ನು ತೆರದಿಡದಿದ್ದರೆ ಅಥವಾ ತೃತೀಯ ಜಗತ್ತಿನ ರಾಷ್ಟ್ರಗಳ ಮಾರುಕಟ್ಟೆಗೆ ರಿಯಾಯ್ತಿ ಹೊಂದಿದ ತಮ್ಮ ಸರಕು, ಸೇವೆ, ಸಾಮಾಗ್ರಿ, ಆಹಾರ ಪದಾರ್ಥಗಳನ್ನು ತಂದು ರಾಶಿ ಹಾಕಿದರೆ ಬಡರಾಷ್ಟ್ರಗಳು ಬದುಕುವುದು ಕಷ್ಟ. ಶ್ರೀಮಂತ ರಾಷ್ಟ್ರಗಳು ತಮ್ಮ ಉತ್ಪಾದನೆ ಮತ್ತು ಉಪಭೋಗದ ವಿಧಾನಗಳನ್ನು ಬದಲಾಯಿಸದೆ, ಜಾಗತಿಕ ಪರಿಸರವನ್ನು ರಕ್ಷಿಸಲು ಬಡರಾಷ್ಟ್ರಗಳಿಗೆ ಒತ್ತಾಯ ಮಾಡಿದರೆ ಅವುಗಳು ಕೇಳುವ ಸ್ಥ್ಥಿತಿಯಲ್ಲಿ ಇಲ್ಲ.'
ಇದೇ ಜುಲೈ 26 ರಂದು ಜಿನಿವಾ ನಗರದ ವಿಶ್ವವ್ಯಾಪಾರ ಸಂಘಟನೆಯ ಕೇಂದ್ರ ಕಚೇರಿಯಲ್ಲಿ ನಡೆದ 160 ಸದಸ್ಯ ರಾಷ್ಟ್ರಗಳ ಸಭೆಯಲ್ಲಿ ಭಾರತ ಮತ್ತೊಮ್ಮೆ ಆಹಾರ ಸಬ್ಸಿಡಿ ಕುರಿತ ಕೃಷಿ ಒಪ್ಪಂದಕ್ಕೆ ಸಹಿ ಹಾಕಲು ನಿರಾಕರಿಸುವುದರ ಮೂಲಕ ತನ್ನ ಪ್ರತಿಭಟನೆಯನ್ನು ವ್ಯಕ್ತಪಡಿಸಿದೆ. ಕಳೆದ ವರ್ಷ ಇಂಡೊನೇಷ್ಯದ ಬಾಲಿಯಲ್ಲಿ ನಡೆದ ಸದಸ್ಯ ರಾಷ್ಟ್ರಗಳ ವಾಣಿಜ್ಯ ಸಚಿವರ ಸಭೆಯಲ್ಲಿ ಹಿಂದಿನ ಯುಪಿಎ ಸರ್ಕಾರದಲ್ಲಿ ಕೇಂದ್ರ ವಾಣಿಜ್ಯ ಖಾತೆ ಸಚಿವರಾಗಿದ್ದ ಆನಂದ ಶರ್ಮ ಅವರು ಕೃಷಿ ಕುರಿತ ಹಲವು ಒಪ್ಪಂದಗಳ ಪುನರ್ ಪರಿಶೀಲನೆಗೆ ಒತ್ತಾಯಿಸಿದ್ದರು. ಈ ತಿಂಗಳ ಅಂತ್ಯದೊಳಗೆ ಎಲ್ಲಾ ರಾಷ್ಟ್ರಗಳ ಸಹಿ ಪಡೆದು ಡಿಸೆಂಬರ್ ಅಂತ್ಯಕ್ಕೆ ಕಾರ್ಯಸೂಚಿ ಮಾರ್ಗಸೂತ್ರಗಳನ್ನು ಸಿದ್ಧಪಡಿಸಿ ಮುಂದಿನ ಜನವರಿಯಿಂದ ಜಾರಿಗೆ ತರಲು ಹೊರಟಿದ್ದ ಅಮೆರಿಕ ಮತ್ತು ಮಿತ್ರ ಶ್ರೀಮಂತ ರಾಷ್ಟ್ರಗಳಿಗೆ ಕಳೆದ ಹದಿಮೂರು ವರ್ಷಗಳಿಂದ ಭಾರತ ತೋರುತ್ತಿರುವ ಪ್ರತಿರೋಧ ಮತ್ತು ಇದಕ್ಕೆ ವ್ಯಕ್ತವಾಗುತ್ತಿರುವ ತೃತೀಯ ಮತ್ತು ಅಭಿವೃದ್ಧಿ ಶೀಲ ರಾಷ್ಟ್ರಗಳ ಬೆಂಬಲ ನುಂಗಲಾರದ ಬಿಸಿತುಪ್ಪವಾಗಿದೆ. ಕಳೆದ ಶುಕ್ರವಾರ (ಜುಲೈ 25 ರಂದು) ನಡೆದ ಟ್ರೇಡ್ ಫೆಸಿಲಿಟೇಷನ್ ಅಗ್ರಿಮೆಂಟ್ ಅಂದರೆ ವಾಣಿಜ್ಯ ವ್ಯವಹಾರವನ್ನು ಸುಗುಮಗೊಳಿಸುವ ಒಪ್ಪಂದಕ್ಕೆ ಭಾರತ ಸಹಿ ಹಾಕಲು ಸ್ಪಷ್ಟವಾಗಿ ನಿರಾಕರಿಸಿದೆ. ದೇಶದ ಆಹಾರ ಭದ್ರತೆ, ಮತ್ತು ಕೃಷಿ ಚಟುವಟಿಕೆಗಳಿಗೆ ರೈತರಿಗೆ ನೀಡುತ್ತಿರುವ ಸಹಾಯಧನ ಹಾಗೂ ಕೃಷಿ ಉತ್ಪನ್ನಗಳಿಗೆ ನೀಡುತ್ತಿರುವ ಬೆಂಬಲ ಬೆಲೆಯನ್ನೂ ಒಳಗೊಂಡಂತೆ ಬಡವರಿಗೆ ಸಬ್ಸಿಡಿ ದರದಲ್ಲಿ ನ್ಯಾಯ ಬೆಲೆ ಅಂಗಡಿಗಳ ಮೂಲಕ ನೀಡುತ್ತಿರುವ ಆಹಾರ ಧಾನ್ಯಗಳಿಗೆ ಈ ಒಪ್ಪಂದ ಮುಳುವಾಗಲಿದೆ ಎಂಬುದು ಭಾರತದ ನಿಲುವು. ಇದು ಅಕ್ಷರಶಃ ಸತ್ಯ ಕೂಡ ಹೌದು.
ವಿಶ್ವ ವ್ಯಾಪಾರ ಸಂಘಟನೆ ಸಿದ್ಧಪಡಿಸಿರುವ ಕರಡು ಒಪ್ಪಂದದಲ್ಲಿ ಯಾವ ಕಾರಣಕ್ಕೂ ಸದಸ್ಯ ರಾಷ್ಟ್ರಗಳ ಒಟ್ಟು ಕೃಷಿ ಉತ್ಪಾದನೆಯ ಶೇಕಡ ಹತ್ತಕ್ಕಿಂತ ಹೆಚ್ಚು ಸಬ್ಸಿಡಿ ಮೊತ್ತ ಇರಬಾರದು ಎಂದು ಸೂಚಿಸಲಾಗಿದೆ. ಆದರೆ, ಅಮೆರಿಕ ಸೇರಿದಂತೆ ಶ್ರೀಮಂತ ರಾಷ್ಟ್ರಗಳು ಮತ್ತು ಐರೋಪ್ಯ ಒಕ್ಕೂಟದ ರಾಷ್ಟ್ರಗಳಲ್ಲಿ ರೈತರಿಗೆ ಕೃಷಿ ಸಬ್ಸಿಡಿ ನೀಡುವ ಬದಲು, ರಫ್ತು ಪ್ರೋತ್ಸಾಹ ಧನ ಎಂದು ನೀಡುವುದರ ಮೂಲಕ ಕೃಷಿ ಸಬ್ಸಿಡಿಯ ಒಪ್ಪಂದದ ಮೂಲ ರೂಪು ರೇಷೆಗಳನ್ನು ಉಲ್ಲಂಘಿಸಲಾಗಿದೆ. ಶ್ರೀಮಂತ ರಾಷ್ಟ್ರಗಳಲ್ಲಿ ಹಸು ಸಾಕಾಣಿಕೆಗೆ ನೀಡುತ್ತಿರುವ ಪ್ರೋತ್ಸಾಹ ಧನ ಮತ್ತು ಕೃಷಿ ಜಮೀನನ್ನು ಪಾಳು ಬಿಟ್ಟಿದ್ದಕ್ಕೆ ನೀಡುವ ಪರಿಹಾರ ಧನ ಇವೆಲ್ಲವನ್ನೂ ಒಪ್ಪಂದದ ವ್ಯಾಪ್ತಿಯಿಂದ ಹೊರಗಿಡಲಾಗಿದೆ.
ತಮ್ಮಲ್ಲಿರುವ ಆಧುನಿಕ ಕೃಷಿ ತಂತ್ರಜ್ಞಾನ ಮತ್ತು ಕುಲಾಂತರಿ ಬೆಳೆಗಳ ಮೂಲಕ ಅಪಾರ ಪ್ರಮಾಣದಲ್ಲಿ ಹತ್ತಿ, ಗೋಧಿ ಮತ್ತು ಮೆಕ್ಕೆಜೋಳ ಇವುಗಳನ್ನು ಬೆಳೆಯುತ್ತಿರುವ ಅಮೆರಿಕ, ಕೆನಡಾ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮುಂತಾದ ಶ್ರೀಮಂತ ರಾಷ್ಟ್ರಗಳಿಗೆ ತಮ್ಮ ಆಹಾರ ದಾಸ್ತಾನನ್ನು ತುರ್ತು ವಿಲೇವಾರಿ ಮಾಡಲು ಕಂಡುಕೊಂಡ ರಹದಾರಿಯೇ ಈ ಟಿಎಫ್‌ಎ ಅಥವಾ ವಾಣಿಜ್ಯ ಸುಗಮಗೊಳಿಸುವ ಒಪ್ಪಂದ.
ವಿಶ್ವವ್ಯಾಪಾರ ಸಂಘಟನೆಯ ನಿಯಾಮಾವಳಿ ಸಂಖ್ಯೆ ಒಂಬತ್ತನೆಯ ನಿಯಮದ ಪ್ರಕಾರ ಒಂದು ಸದಸ್ಯ ರಾಷ್ಟ್ರಕ್ಕೆ ಒಂದೇ ಮತ ಎಂಬ ನಿಯಮ ಜಾರಿಯಲ್ಲಿದೆ. ಆದರೆ, ಅಮೆರಿಕ ನೇತೃತ್ವದ ಶ್ರೀಮಂತ ರಾಷ್ಟ್ರಗಳ ಒಕ್ಕೂಟ ತಾನು ರೂಪಿಸುವ ನಿಯಮಗಳಿಗೆ ಸದಸ್ಯ ರಾಷ್ಟ್ರಗಳ ಅಭಿಪ್ರಾಯಗಳನ್ನು ಕೇಳಬೇಕೆಂಬ ಕನಿಷ್ಠ ವಿವೇಚನೆಯನ್ನು ಇಟ್ಟುಕೊಳ್ಳದೆ, ತಾನು ಸೃಷ್ಟಿಸಿಕೊಂಡಿರುವ ಸರ್ವಸಮ್ಮತಿ ಸೂತ್ರವನ್ನು ಸದಾ ಬಳಕೆ ಮಾಡಿಕೊಂಡು ಜಾರಿಗೆ ತರಲು ಪ್ರಯತ್ನಿಸುತ್ತಿದೆ. ಶ್ರೀಮಂತ ರಾಷ್ಟ್ರಗಳ ಮೈತ್ರಿ ಒಕ್ಕೂಟ ತೆಗೆದುಕೊಳ್ಳುವ ತೀರ್ಮಾನವೇ ವಿಶ್ವ ವ್ಯಾಪಾರ ಅಥವಾ ವಾಣಿಜ್ಯ ಸಂಘಟನೆಯ ತೀರ್ಮಾನವಾಗುತ್ತದೆ. ಈ ಕಾರಣಕ್ಕಾಗಿ 1996 ರಲ್ಲಿ ನಡೆದ 'ಸಿಂಗಾಪುರ ವಿಷಯಗಳು' ಕುರಿತ ಚರ್ಚೆ, 1999 ರಲ್ಲಿ ಸಿಯಾಟಲ್ ನಗರದಲ್ಲಿ ನಡೆದ ಬಂಡವಾಳ ಹೂಡಿಕೆ ಕುರಿತಾದ ಚರ್ಚೆಗಳು ಹಲವು ರೀತಿಯ ವಿರೋಧ, ಪ್ರತಿಭಟನೆಗೆ ಕಾರಣವಾಗಿ ನೆನಗುದಿಗೆ ಬಿದ್ದವು. 2001 ರಲ್ಲಿ ಕತಾರ್‌ನ ದೋಹಾ ನಗರದಲ್ಲಿ ನಡೆದ ಶೃಂಗ ಸಭೆಯಲ್ಲಿ ತಮ್ಮ ಅನುಕೂಲಕ್ಕೆ ತಕ್ಕಂತೆ ರೂಪಿಸಿದ್ದ ಅನೇಕ ವಾಣಿಜ್ಯ ಒಪ್ಪಂದಗಳಿಗೆ ಭಾರತ ಪ್ರಥಮ ಬಾರಿಗೆ ಪ್ರತಿಭಟನೆ ಸೂಚಿಸಿತು. ಈ ಸಭೆಯ ಸಂದರ್ಭದಲ್ಲಿ ನವಂಬರ್ 13 ರ ಮಧ್ಯರಾತ್ರಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ದೂರವಾಣಿ ಕರೆ ಮಾಡಿದ ಬ್ರಿಟನ್ ಪ್ರಧಾನಿ ಟೋನಿ ಬ್ಲೇರ್, ಶೃಂಗ ಸಭೆಯಲ್ಲಿ ಪಾಲ್ಗೊಂಡಿದ್ದ ಕೇಂದ್ರ ವಾಣಿಜ್ಯ ಸಚಿವ ಮುರಸೊಳಿ ಮಾರನ್ ಅವರಿಗೆ ಒತ್ತಡ ಹೇರಿ ಅವರ ಒಪ್ಪಿಗೆ ಪಡೆಯುವಲ್ಲಿ ಯಶಸ್ವಿಯಾದರು. ಇಂತಹದ್ದೇ ಒತ್ತಡ ತಂತ್ರವನ್ನು ವಿಶ್ವ ವ್ಯಾಪಾರ ಸಂಘಟನೆಯಲ್ಲಿ ಶ್ರೀಮಂತ ರಾಷ್ಟ್ರಗಳು ಗುಪ್ತವಾಗಿ ಜಾರಿಯಲ್ಲಿಟ್ಟಿವೆ.
ಈಗ ಮುಂದುಮಾಡಿರುವ ಪ್ರಸ್ತಾವದಲ್ಲೂ ಸುಂಕ, ಆಂತರಿಕ ಪ್ರೋತ್ಸಾಹ, ರಫ್ತು ಸಬ್ಸಿಡಿ ಮುಂತಾದ ವಿಷಯಗಳಿಗೆ ಪ್ರಾಧಾನ್ಯ ನೀಡಲಾಗಿದೆ. ನಿಜವಾಗಿ ಪ್ರಾಧಾನ್ಯ ನೀಡಬೇಕಾಗಿದ್ದ ಆಹಾರ ಭದ್ರತೆ, ಗ್ರಾಮೀಣಾಭಿವೃದ್ಧಿ ವಿಷಯಗಳ ಕುರಿತ ರಿಯಾಯಿತಿ ಹಾಗೂ ಬಡ ಮತ್ತು ಸಣ್ಣ ಕೃಷಿ ಕುಟುಂಬಗಳ ರಕ್ಷಣೆ ಕುರಿತು ವಿವರವಾದ ಮಾಹಿತಿಗಳಿಲ್ಲ. ಬಡರಾಷ್ಟ್ರಗಳನ್ನು ಕೃಷಿ ಸಬ್ಸಿಡಿಯಿಂದ ರಕ್ಷಿಸುವ ಬದಲು, ಶ್ರೀಮಂತರಾಷ್ಟ್ರಗಳು ನೀಡುತ್ತಿರುವ ಅಪಾರ ಪ್ರಮಾಣದ ಕೃಷಿ ಸಬ್ಸಿಡಿಯನ್ನು ರಕ್ಷಿಸುವ ಅಂಶಗಳು ಎದ್ದು ಕಾಣುತ್ತಿವೆ. ಶ್ರೀಮಂತ ರಾಷ್ಟ್ರಗಳು ಕೃಷಿಕರಿಗೆ ಒದಗಿಸುತ್ತಿರುವ ವಿಶೇಷ ತರಬೇತಿ, ಪರಿಸರ ಮತ್ತು ಮಣ್ಣಿನ ರಕ್ಷಣೆ, ಭೂಮಿಯನ್ನು ಕೃಷಿ ಚಟುವಟಿಕೆಗೆ ಒಳಪಡಿಸದಿದ್ದರೆ ಅದಕ್ಕಾಗಿ ನೀಡುವ ವಿಶೇಷ ಪರಿಹಾರವನ್ನು ಈಗಿನ ಒಪ್ಪಂದದಲ್ಲಿ ಸಬ್ಸಿಡಿ ಎಂದು ಪರಿಗಣಿಸಿಲ್ಲ.
ಭಾರತವು ಪ್ರಸ್ತುತ ಕೃಷಿ ಸಬ್ಸಿಡಿ ಮತ್ತು ಆಹಾರ ಧಾನ್ಯಗಳ ವಿತರಣೆ ಮತ್ತು ಬೆಂಬಲ ಬೆಲೆಗಾಗಿ ವಾರ್ಷಿಕವಾಗಿ ಸುಮಾರು ಒಂದೂವರೆ ಲಕ್ಷ ಕೋಟಿ ರುಪಾಯಿಗಳನ್ನು ವ್ಯಯಮಾಡುತ್ತಿದೆ. ಈಗಿನ ಒಪ್ಪಂದಕ್ಕೆ ಸಹಿ ಹಾಕಿದರೆ, ಭಾರತದ ಕೃಷಿ ಮತ್ತು ಆಹಾರ ಧಾನ್ಯಗಳ ಮೇಲಿನ ಸಬ್ಸಿಡಿಯ ಮೊತ್ತ ಹನ್ನೆರಡು ಸಾವಿರ ಕೋಟಿಯನ್ನು ದಾಟುವುದು ಕಷ್ಟವಾಗುತ್ತದೆ. ಈ ಕಾರಣಕ್ಕಾಗಿ ಅಸಮಾನತೆ ಮತ್ತು ಗೊಂದಲದ ಗೂಡಾಗಿರುವ ಕೃಷಿ ಒಪ್ಪಂದಕ್ಕೆ ಸಂಬಂಧಪಟ್ಟ ವ್ಯಾಪಾರ ಸುಗಮಗೊಳಿಸುವ ಒಪ್ಪಂದಕ್ಕೆ ಭಾರತ ಸೇರಿದಂತೆ ತೃತೀಯ ಜಗತ್ತಿನ ಬಡರಾಷ್ಟ್ರಗಳು, ಚೀನಾ ಮತ್ತು ಬ್ರೆಜಿಲ್ ಸಹಿ ಹಾಕಲು ನಿರಾಕರಿಸಿವೆ.

-ಡಾ. ಎನ್. ಜಗದೀಶ್ ಕೊಪ್ಪ
ಧಾರವಾಡ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.