ಅಂಕಣಗಳು

ವಿಜಯ ಯಾತ್ರೆಯೇಕೆ ಶೋಕಯಾತ್ರೆಯಾಯಿತು?

Published On :

ವಿಜಯ ಯಾತ್ರೆಯ ತಯಾರಿಯ ಉತ್ಸವ ಅಚಾನಕ್ಕಾಗಿ ಹೃದಯ ವಿದ್ರಾವಕ ಶೋಕ ಯಾತ್ರೆಯಾಗಿ ಬದಲಾಗುವುದು ಜೀವನದ ಕಠೋರ ಸತ್ಯಗಳಲ್ಲೊಂದು. ಅಂಥ ಸತ್ಯ ಗೋಪಿನಾಥ್ ಮುಂಡೆಯವರ ನಿಧನದಿಂದ ಮತ್ತೊಮ್ಮೆ ಪ್ರಕಟವಾಗಿದೆ. ಅವರು ದೆಹಲಿಯಿಂದ ಮುಂಬೈ ಸನಿಹದ ತಮ್ಮ ಚುನಾವಣಾ ಕ್ಷೇತ್ರದಲ್ಲಿ ವಿಜಯ ಯಾತ್ರೆಯಲ್ಲಿ ಭಾಗವಹಿಸಲು ತೆರಳಬೇಕಾಗಿತ್ತು.  ಗೋಪಿನಾಥ್ ಸಾರ್ವಜನಿಕ ಜೀವನದಲ್ಲಿ ಮೊದಲು ಹೆಜ್ಜೆ ಇಟ್ಟದ್ದುರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಅಖಿಲಾಭಾರತೀಯ ವಿದ್ಯಾರ್ಥಿ ಪರಿಷತ್‌ನ ಮೂಲಕವೇ. ತುರ್ತುಪರಿಸ್ಥಿತಿಯ ಸಮಯದಲ್ಲಿ 19 ತಿಂಗಳು ಕಾರಾಗೃಹವಾಸವನ್ನನುಭವಿಸಿದ ಹೋರಾಟಗಾರರವರು. ಮಹಾರಾಷ್ಟ್ರ ಭಾರತೀಯ ಜನತಾ ಯುವಾ ಮೋರ್ಚಾದ ಅಧ್ಯಕ್ಷ, ವಿಧಾನಸಭೆಯ ವಿಪಕ್ಷ ನಾಯಕ ಮತ್ತು ಪ್ರದೇಶ ಬಿಜೆಪಿಯ ಅಧ್ಯಕ್ಷರಾಗಿಯೂ ಅವರು ದುಡಿದಿದ್ದರು.  ಬಂಜಾರ ಎಂಬ ಅತ್ಯಂತ ಹಿಂದುಳಿದ ಸಮುದಾಯದಿಂದ ಬಂದ ಗೋಪಿನಾಥ್, ಬುಡಕಟ್ಟು ಸಮಾಜ, ಅನುಸೂಚಿತ ಜಾತಿಗಳು ಮತ್ತು ರೈತ ವರ್ಗಗಳಲ್ಲೆಲ್ಲ ಸಮಾನ ರೂಪದಲ್ಲಿ ಜನಪ್ರಿಯರಾಗಿದ್ದರು. ಅನೇಕ ಬಾರಿ 100-200 ರೈತ ಪ್ರತಿನಿಧಿಗಳನ್ನು ಕರೆಸಿ, ಅವರಿಗೆಲ್ಲ ಸಂಸತ್ ಭವನವನ್ನು ತೋರಿಸುತ್ತಾ ಚರ್ಚೆ ಮಾಡುತ್ತಿದ್ದರು. ಅಷ್ಟೇ ಸಹಜವಾಗಿಯೇ ಜಪಾನ್, ಚೀನಾದ ಪ್ರತಿನಿಧಿಗಳನ್ನು ಬಿಜೆಪಿಯ ಕಾರ್ಯಲಯದಲ್ಲಿ ಕೂರಿಸಿಕೊಂಡೂ ಮಾತನಾಡುತ್ತಿದ್ದರು.
ಮರದಡಿ ಕುಳಿತು ಶಿಕ್ಷಣ ಪಡೆದ ಗೋಪಿನಾಥ್, ಮುಂದೆ ಕೇಂದ್ರೀಯ ಗ್ರಾಮೀಣ ವಿಕಾಸ ಮಂತ್ರಿ ಪದವಿ ಪಡೆದರೆಂದರೆ, ಅದರ ಹಿಂದೆ ಅವರ ಪರಿಶ್ರಮವೆಷ್ಟಿರಬೇಕೋ ಯೋಚಿಸಿ? ಮಹಾರಾಷ್ಟ್ರದ ಮಣ್ಣಿನ ಮಗನಾಗಿ, ಬಡ ರೈತರು ಮತ್ತು ಹಿಂದುಳಿದ ವರ್ಗಗಳ ರಾಷ್ಟ್ರೀಯ ಧ್ವನಿಯಾಗಿ ದುಡಿದ ಗೋಪಿನಾಥ್ ಅವರ ಜೀವನ ಸಂಘರ್ಷ ಮತ್ತು ಸಾಹಸಗಳ ಮಿಶ್ರಣವಾಗಿತ್ತು. ಅವರು ಯಾರಿಗೂ ತಲೆಬಾಗಿದವರಲ್ಲ, ಲುಕ್ಸಾನಾದರೂ ಒಪ್ಪಂದಗಳಿಗೆ 'ಒಲ್ಲೆ' ಎನ್ನುವ ಕಠಿಣ ಗುಣವನ್ನು ಬೆಳೆಸಿಕೊಂಡಿದ್ದರು. ತಮ್ಮ ನಡೆಗಳಿಂದ ಎಷ್ಟೇ ವಿವಾದವೆದ್ದರೂ ಯಾವುದು ಸರಿಯೆನಿಸಿತೋ ಅದನ್ನೇ ಮಾಡಿ ರಾಜಕಾರಣದಲ್ಲಿ 'ನ್ಯಾಯಾಧೀಶ'ರಂತಿದ್ದರು. ಗೋಪಿನಾಥ್ ಯಾವಾಗಲೂ ಒಂದು ಮಾತು ಹೇಳುತ್ತಿದ್ದರು, "ಒಂದು ವೇಳೆ ಕಾಲು ನೆಲದ ಮೇಲಿದ್ದರೆ, ಜನತೆಯ ಸ್ನೇಹ ಮತ್ತು ಬೆಂಬಲವಿದ್ದರೆ, ನಮ್ಮ ಶಕ್ತಿಯ ಮೇಲೆ ನಮಗೆ ನಂಬಿಕೆಯಿದ್ದರೆ, ನಿಸ್ಸಂಶಯವಾಗಿಯೂ ಭವಿಷ್ಯ ನಮ್ಮ ಮುಷ್ಠಿಯಲ್ಲೇ ಇರುತ್ತದೆ".
ನನನ
 ವಿಧಿಯ ಆಟ, ವಿಡಂಬನೆ ಹೇಗಿದೆಯೋ ನೋಡಿ. ಗೋಪಿನಾಥ್ ಮುಂಡೆಯವರ ಜೀವದ ಗೆಳೆಯನಾಗಿದ್ದ, ಭಾವ ಪ್ರಮೋದ್ ಮಹಾಜನ್ ಕೂಡ ಅಕಾಲ ಮೃತ್ಯುವಿಗೆ ತುತ್ತಾದರು. ಪ್ರಮೋದ್ ಅವರ ಮರಣಾನಂತರ ಮಹಾಜನ್ ಕುಟುಂಬದ ದೇಖರೇಖಿಯನ್ನು ನೋಡಿಕೊಂಡವರು ಗೋಪಿನಾಥ್ ಮುಂಡೆ. ರಾಹುಲ್ ಮತ್ತು ಪೂನಮ್‌ರ ಎಲ್ಲಾ ಸುಖ-ದುಃಖಗಳಲ್ಲಿ ಭಾಗಿಯಾಗಿದ್ದರು ಗೋಪಿನಾಥ್. ಅಂತೆಯೇ ತಮ್ಮ ಮಕ್ಕಳನ್ನೂ ಅತ್ಯಂತ ಅಕ್ಕರೆಯಿಂದ ಬೆಳೆಸಿದವರು. ಅವರ ಮೂವರು ಪುತ್ರಿಯರಾದ ಪಂಕಜ(ಶಾಸಕಿ), ಪ್ರತಿಮಾ(ಡಾಕ್ಟರ್) ಮತ್ತು ಯಶಸ್ರಿ(ಕಾನೂನು ವಿದ್ಯಾರ್ಥಿ) ದೊಡ್ಡ ಎತ್ತರಕ್ಕೆ ಬೆಳೆದಿದ್ದಾರೆ. ತಮ್ಮ ಕುಟುಂಬದವರೆಡೆ ತೋರಿದ ಆತ್ಮೀಯತೆಯನ್ನೇ ಅವರು ಸಾವಿರಾರು ಕಾರ್ಯಕರ್ತರನ್ನು ತಮ್ಮ ಜೊತೆಗೆ ಕೊಂಡೊಯ್ಯುವಾಗಲೂ ತೋರಿಸಿದ್ದಾರೆ. ಪ್ರಮೋದ್ ಮಹಾಜನ್ ಮತ್ತು ಗೋಪಿನಾಥ್ ಮುಂಡೆ ಜೋಡಿ ಅಪ್ರತಿಮ ಮತ್ತು ಅತ್ಯಂತ ಪ್ರಭಾವಶಾಲಿಯಾಗಿತ್ತು. ಬಾಳಾ ಸಾಹೇಬ್ ಠಾಕ್ರೆಯೊಂದಿಗೆ ಗೋಪಿನಾಥ್-ಮಹಾಜನ್ ಅಂತರಂಗದ ಭಾಂಧವ್ಯವನ್ನು ಹೊಂದಿದ್ದರು.  ಮಹಾರಾಷ್ಟ್ರದಲ್ಲಿ ಮರಾಠ ರಾಜನೀತಿ ಯಶವಂತ್ ರಾವ್ ಚೌಹಾಣ್‌ರಂಥ ನಾಯಕರ ಕಾಲದಲ್ಲೇ ಸ್ಥಾಪಿತವಾಗಿತ್ತು. ಆ ಸಮಯದಲ್ಲಿ ಕಾಂಗ್ರೆಸ್ ಸನಿಹ ಸುಳಿಯುವುದಕ್ಕೂ ಬಿಜೆಪಿಗೆ ಸಾಧ್ಯವಿಲ್ಲ ಎನ್ನಲಾಗುತ್ತಿತ್ತು. ಆದರೆ ಬೇರು ಮಟ್ಟದಿಂದ ಬಂದ ಸಾಹಸಿ ಗೋಪಿನಾಥ್ ಮುಂಡೆ ಅದೇ ಮಹಾರಾಷ್ಟ್ರದಲ್ಲಿ ಬಿಜೆಪಿಯಿಂದ ಉಪಮುಖ್ಯಮಂತ್ರಿಯಾದರು.  ದೆಹಲಿ ರಾಜಕೀಯದ ಗಾಳಿಯಲ್ಲಿ ಹಣದ ಮದ, ಅಧಿಕಾರದಿಂದ ಹುಟ್ಟಿದ ಅಹಂಕಾರ ಮತ್ತು ಅಸಭ್ಯತೆಗಳ ಧೂಳು ತುಂಬಿಕೊಂಡಿರುತ್ತದೆ. ಈ ಧೂಳು ತುಂಬಿದ ಗಾಳಿ ದೆಹಲಿಯ ರಸ್ತೆಗಳಲ್ಲೂ ವ್ಯಾಪಿಸಿರುವುದರಿಂದ, ಅಲ್ಲಿನ ವಾಹನಗಳಿಗೂ ನಿಯಮಗಳನ್ನು ಉಲ್ಲಂಘಿಸುವ, ಕೆಂಪುದೀಪಗಳನ್ನು ಕಡೆಗಣಿಸಿ ಇನ್ನೊಬ್ಬರ ಹಾದಿಯಲ್ಲಿ ನುಗ್ಗುವ ಅಭ್ಯಾಸವಾಗಿಬಿಟ್ಟಿದೆ. ಗ್ರಾಮೀಣ ವಿಕಾಸ ಮಂತ್ರಿಯಾದ ಗೋಪಿನಾಥ್‌ರನ್ನು ದೆಹಲಿಗರ ಆ ಗುಣ ಬಲಿತೆಗೆದುಕೊಂಡಿದೆ. ವಿಜಯೋತ್ಸವದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಮಣ್ಣಿನ ಮಗನನ್ನು ಭಾರತ ಕಳೆದುಕೊಂಡಿದೆ.

-ತರುಣ್ ವಿಜಯ್
tarun.vijay@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.