ಸ್ತ್ರೀ ಸುರಕ್ಷತೆಗೆ ಶೌಚಾಲಯ ವ್ಯವಸ್ಥೆಯೇ ಮುನ್ನುಡಿ

ನಮ್ಮಲ್ಲಿ ಇಂದಿಗೂ ಬಯಲು ಶೌಚಾಲಯ ಪದ್ಧತಿ ಕಡಿಮೆಯಾಗಿಲ್ಲ. ನಮ್ಮ ಬಯಲು ಸೀಮೆಯ ಬಹುತೇಕ ಭಾಗಗಳಲ್ಲಿ ಇಂದಿಗೂ ಶೌಚಾಲಯ ಬಳಕೆ ಸರಿಯಾಗಿ ಅನುಷ್ಠಾನಗೊಂಡಿಲ್ಲ. ನಮ್ಮಲ್ಲಷ್ಟೇ ಅಲ್ಲ, ಭಾರತದ ಗ್ರಾಮೀಣ ಭಾಗದ 65 ಪ್ರತಿಶತ ಜನರು ಇಂದಿಗೂ ಬಯಲು ಶೌಚಕ್ಕೆ ಹೋಗುವ ಅನಿವಾರ್ಯತೆಯಲ್ಲೇ ಸಿಲುಕಿದ್ದಾರೆ. ಶೌಚಾಲಯಗಳಿರುವವರ ಮನೆಯಲ್ಲೂ ಅದರ ಬಳಕೆ, ಪ್ರಯೋಜನದ ಬಗ್ಗೆ ಹೆಚ್ಚು ಅರಿವಿರುವುದಿಲ್ಲ. ಮನೆಯಲ್ಲಿರುವ ಟಾಯ್ಲೆಟ್ ಕೆಲವರ ಪ್ರಕಾರ ರೋಗ ರುಜಿನಗಳಿಗೆ ಒಳಗಾಗಿ ಎದ್ದು ನಡೆದಾಡಲಾಗದಿರುವವರಿಗೆ ಮಾತ್ರ!
ಮಹಿಳೆಯರಂತೂ ಶೌಚಾಲಯಗಳ ಕೊರತೆಯಿಂದಾಗಿ ಅನುಭವಿಸುವ ಕಷ್ಟ ಅಷ್ಟಿಷ್ಟಲ್ಲ. ಭಾರತದಲ್ಲಿ ಸುಮಾರು 300 ಮಿಲಿಯನ್ ಮಹಿಳೆಯರು, ಹುಡುಗಿಯರು ಇಂದು ಬಯಲು ಶೌಚಾಲಯವನ್ನು ಅವಲಂಬಿಸಿದ್ದಾರೆ. ಗ್ರಾಮಗಳಲ್ಲಿ ಸಾರ್ವಜನಿಕ ಶೌಚಾಲಯಗಳಿದ್ದರೂ ಅವು ಬಳಸುವ ಸ್ಥಿತಿಯಲ್ಲಂತೂ ಇರುವುದಿಲ್ಲ. ಹಾಗಾಗೇ ಅವರು ಮುಜುಗರದಿಂದ ತಪ್ಪಿಸಿಕೊಳ್ಳಲು ಬೆಳಕು ಹರಿಯುವ ಮುನ್ನ ಅಥವಾ ರಾತ್ರಿಯ ವೇಳೆಯಲ್ಲೇ ಶೌಚಕ್ಕಾಗಿ ಬಯಲಕಡೆಗೆ ತೆರಳುತ್ತಾರೆ. ಆ ಕತ್ತಲಲ್ಲಿ ವಿಷಜಂತುಗಳು ಮತ್ತು ಕ್ರಿಮಿಕೀಟಗಳಷ್ಟೇ ಅಲ್ಲದೆ, ಕಾಮುಕರ ಕಾಟವೂ ಅವರಿಗೆ ಎದುರಾಗುವ ಅಪಾಯವಿದ್ದೇ ಇರುತ್ತದೆ. ಅವರ ಮೇಲೆ ಕಲ್ಲು ಎಸೆಯುವುದು, ಅಸಹ್ಯವಾಗಿ ಡೈಲಾಗ್ ಹೊಡೆಯುವುದು, ಅಪಹರಿಸುವುದು, ಅತ್ಯಾಚಾರ ಎಸಗುವುದು ಹೀಗೆ ಪುಂಡರ ಇನ್ನೂ ಅನೇಕ ಬಗೆಯ ತಾಪತ್ರಯಗಳ ನಡುವೆ ಮಹಿಳೆಯರು ಅಭದ್ರರಾಗುತ್ತಾ ಹೋಗುತ್ತಿದ್ದಾರೆ.
ಬಹುತೇಕ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣಗಳು ಇಂಥ ಸಮಯದಲ್ಲೇ ಘಟಿಸುತ್ತವೆ. ಈಚೆಗೆ ಉತ್ತರ ಪ್ರದೇಶದ ಬದೌನ್ ಎನ್ನುವ ಗ್ರಾಮದಲ್ಲಿ ಇಬ್ಬರು ದಲಿತ ಹುಡುಗಿಯರ ಮೇಲೆ ನಡೆದ ಅತ್ಯಾಚಾರ, ಅವರು ರಾತ್ರಿ ವೇಳೆ ಬಹಿರ್ದೆಸೆಗೆ ಹೊರಟಾಗ ಸಂಭವಿಸಿತು ಎನ್ನಲಾಗುತ್ತಿದೆ.
ಬಿಹಾರದ ಪೋಲಿಸ್ ಅಧಿಕಾರಿಯೊಬ್ಬರು ಪ್ರತಿ ಮನೆಗಳಲ್ಲೂ ಶೌಚಾಲಯ ವ್ಯವಸ್ಥೆಯಿದ್ದಿದ್ದರೆ ತಮ್ಮ ರಾಜ್ಯದಲ್ಲಿ ಕಳೆದ ವರ್ಷ ಸುಮಾರು 400 ಮಹಿಳೆಯರು ಅತ್ಯಾಚಾರಕ್ಕೆ ಸಿಲುಕುವುದು ತಪ್ಪುತ್ತಿತ್ತು ಎಂದಿರುವ ಸುದ್ದಿ ಬಿ.ಬಿ.ಸಿ.ಯಲ್ಲಿ ವರದಿಯಾಗಿದೆ. ಹಾಗೆಯೇ ದೆಹಲಿಯ ಕೆಲ ಕೊಳಗೇರಿಗಳಲ್ಲಿ ಮಾಡಲಾದ ಅಧ್ಯಯನದ ವರದಿಯಂತೆ ಅನೇಕ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರಗಳು ಜರುಗಿದ್ದು ಇಲ್ಲವೇ ಅವರು ಕಣ್ಮರೆಯಾಗಿ ಹೋದದ್ದು ಹೀಗೆ ಬಯಲು ಶೌಚಕ್ಕೆ ತೆರಳಿದಾಗಲೇ. ಗ್ರಾಮೀಣ ಭಾಗದ ಮಹಿಳೆಯರು ಶೌಚಕ್ಕಾಗಿ ಅಸುರಕ್ಷಿತವಾದ ಬಯಲನ್ನು ಅವಲಂಬಿಸಬೇಕಿರುವುದು ನಿಜಕ್ಕೂ ದುರ್ದೈವದ ಸಂಗತಿ.
ಜೊತೆಗೆ ಆರೋಗ್ಯದ ವಿಷಯದಲ್ಲೂ ಬಯಲು ಶೌಚಾಲಯ ಅಪಾಯಕಾರಿ ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆ. ಎಲ್ಲೆಂದರಲ್ಲಿ ಶೌಚ ಮಾಡುವುದು ಅನೇಕ ಬಗೆಯ ರೋಗಗಳ ಹುಟ್ಟಿಗೆ ಕಾರಣವಾಗುತ್ತದೆ. ಬಯಲು ಶೌಚಾಲಯ ಪದ್ಧತಿ ಹೆಚ್ಚಿರುವ ಪ್ರದೇಶಗಳಲ್ಲಿನ ಮಕ್ಕಳು ಕೆಲ ರೋಗಾಣುಗಳಿಗೆ ತುತ್ತಾಗಿ ಅವರ ದೈಹಿಕ ಬೆಳವಣಿಗೆ ಕೂಡಾ ಸರಿಯಾದ ರೀತಿಯಲ್ಲಿ ಆಗುವುದಿಲ್ಲ ಎನ್ನುತ್ತದದು. ಭಾರತದ ಕೊಳಗೇರಿಗಳನ್ನು ನೋಡಿದರೆ ಈ ಮಾತು ಸತ್ಯವೆನಿಸದೇ ಇರದು. 'ಸುಲಭ ಇಂಟರನ್ಯಾಶನಲ್'ನ ಡಾ. ಬಿಂದೇಶ್ವರ ಪಾಠಕ್ ಹೇಳುವ ಹಾಗೆ ಈ ಬಯಲು ಶೌಚಾಲಯದ ಸ್ಥಿತಿ ಭಾರತದ ಮಟ್ಟಿಗಂತೂ ಅತ್ಯಂತ ಅಪಾಯಕಾರಿಯಾದುದು. ಭಾರತದಲ್ಲಿ 43 ಪ್ರತಿಶತ ಜನರು ಅತ್ಯಂತ ಸ್ವಚ್ಛ ಮತ್ತು ಸುರಕ್ಷಿತವಾದ ಶೌಚಾಲಯಗಳನ್ನು ಬಳಸುತ್ತಾರೆ ಎಂದು ಹೇಳಿದರೂ ಅದು ವಸ್ತುನಿಷ್ಟ ಮಾಹಿತಿಯಲ್ಲ. ಇಂದು ಅನೇಕ ಸಾರ್ವಜನಿಕ ಶೌಚಾಲಯಗಳು ಗಬ್ಬೆದ್ದು ಹೋಗಿವೆ. ಅಲ್ಲೆಲ್ಲ ಸರಿಯಾದ ನೀರಿನ ಸೌಕರ್ಯವಿರುವುದಿಲ್ಲ. ಬಾಗಿಲುಗಳು ಮುರಿದು ಹೋಗಿರುತ್ತವೆ. ಶೌಚಾಲಯಗಳನ್ನು ಸ್ವಚ್ಚ ಗೊಳಿಸುವವರಿರುವುದಿಲ್ಲ...ಹೀಗಾಗಿ ಭಾರತದ ಮಟ್ಟಿಗೆ ಹೇಳುವುದಾದರೆ ಕೇವಲ 30 ಪ್ರತಿಶತ ಜನ ಮಾತ್ರ ಸ್ವಚ್ಛ ಮತ್ತು ವ್ಯವಸ್ಥಿತವಾಗಿರುವ ಶೌಚಾಲಯವನ್ನು ಬಳಸುತ್ತಾರೆ ಎನ್ನುವುದು ಪಾಠಕ್ ಅವರ ಅಭಿಪ್ರಾಯ.
ನಮ್ಮ ದೇಶದಲ್ಲಿ ಅದಾಗಲೇ ಬಯಲು ಶೌಚಾಲಯಗಳು ತಂದೊಡ್ಡುವ ಸಮಸ್ಯೆಗಳ ಬಗ್ಗೆ ಸಣ್ಣಗೆ ತಿಳಿವಳಿಕೆ ಮೂಡುತ್ತಿದೆಯಾದರೂ ಮಧ್ಯಪ್ರದೇಶ, ಉತ್ತರ ಪ್ರದೇಶ, ಬಿಹಾರ, ಆಂಧ್ರಪ್ರದೇಶ ಮುಂತಾದ ರಾಜ್ಯಗಳಲ್ಲಿ ಈ ವಿಷಯವಾಗಿ ಇನ್ನೂ ಸಾಕಷ್ಟು ಕೆಲಸಗಳಾಗಬೇಕಿದೆ. 2011ರ ಜನಗಣತಿಯಂತೆ ನಮ್ಮ ದೇಶದ ನಗರ ಪ್ರದೇಶಗಳಲ್ಲಿಯೂ ಸುಮಾರು 12 ಪ್ರತಿಶತ ಜನ ಬಯಲು ಶೌಚಾಲಯಕ್ಕೆ ತೆರಳುವವರಿದ್ದಾರೆ. ಇದಲ್ಲದೇ ಸುಮಾರು 8 ಪ್ರತಿಶತ ಜನ ಸಾರ್ವಜನಿಕ ಶೌಚಾಲಯಗಳನ್ನು, ಇಲ್ಲವೇ ಹಣ ಕೊಟ್ಟು ಬಳಸುವ ಸುಲಭ ಶೌಚಾಲಯಗಳನ್ನು ಅವಲಂಬಿಸಿರುವುದಿದೆ. ಆದರೆ ಈ ಚಿತ್ರಣ ಸಣ್ಣ ನಗರಗಳಲ್ಲಿ ಅಂದರೆ 1 ಲಕ್ಷಕ್ಕಿಂತಲೂ ಕಡಿಮೆ ಜನಸಂಖ್ಯೆ ಇರುವ ನಗರಗಳಲ್ಲಿ ಇನ್ನಷ್ಟು ಭೀಕರವಾಗಿದೆ. ಅಲ್ಲಿ ಸುಮಾರು 22 ಪ್ರತಿಶತಜನ ಈಗಲೂ ಬಯಲು ಶೌಚಾಲಯವನ್ನು ಅವಲಂಬಿಸಿರುವುದಿದೆ. ಗ್ರಾಮೀಣ ಪ್ರದೇಶಗಳೊಂದಿಗೆ ಹೋಲಿಸಿದರೆ ಈ ಪ್ರಮಾಣ ಕಡಿಮೆಯೆನಿಸಿದರೂ ಅಲ್ಲಿಯ ಜನದಟ್ಟಣೆ ಮತ್ತು ವಾತಾನುಕೂಲದ ತೊಂದರೆಯಿಂದ ನಗರ ಪ್ರದೇಶಗಳಲ್ಲಿ ಅದು ಇನ್ನಷ್ಟು ಆರೋಗ್ಯದ ಸಮಸ್ಯೆಗಳನ್ನು ಹುಟ್ಟು ಹಾಕುವದಂತೂ ಹೌದು.
ವಿಶ್ವಬ್ಯಾಂಕಿನ ವರದಿಯಂತೆ ಭಾರತದಲ್ಲಿ ಇಂದಿಗೂ ಸುಮಾರು 600 ಮಿಲಿಯನ್ ಜನರು ಬಯಲು ಶೌಚಾಲಯಗಳನ್ನು ಅವಲಂಬಿಸಿದ್ದಾರೆ. ಅಂದರೆ ಹೆಚ್ಚೂ ಕಡಿಮೆ ದೇಶದ ಅರ್ಧದಷ್ಟು ಜನಸಂಖ್ಯೆ ಒಂದಲ್ಲಾ ಒಂದು ಕಾರಣಕ್ಕಾಗಿ ಬಯಲು ಶೌಚಾಲಯವನ್ನೇ ಅವಲಂಬಿಸಿದೆ. ಹಾಗಾಗೇ ಶೌಚಾಲಯಗಳ ನಿರ್ಮಾಣ ಯುದ್ದೋಪಾದಿಯಲ್ಲಿ ನಡೆಯಬೇಕಿದೆ. ಮಹಿಳೆಯರ ಅಭದ್ರತೆಗೆ ಕಾರಣವಾಗಿರುವ, ಆರೋಗ್ಯಕ್ಕೆ ಮಾರಕವಾಗಿರುವ ಈ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳಲೇಬೇಕಿದೆ. ಶೌಚಾಲಯಗಳನ್ನು ಕಟ್ಟಿ ಕೊಡುವುದರ ಜೊತೆಗೆ, ಅವುಗಳ ನಿರ್ವಹಣೆಗೆ ಮೂಲ ಸೌಕರ್ಯಗಳನ್ನು ಒದಗಿಸುವುದರತ್ತಲೂ ಸರ್ಕಾರ ಕೆಲಸ ಮಾಡಬೇಕು. ಸ್ವಚ್ಛತೆಯ ಕೊರತೆಯೇ ರೋಗಪೀಡಿತ(ಎಲ್ಲಾ ರೀತಿಯಿಂದಲೂ) ಸಮಾಜಕ್ಕೆ ಕಾರಣವಾಗುತ್ತಿದೆ ಎನ್ನುವುದನ್ನು ಅರಿತುಕೊಳ್ಳಬೇಕಿದೆ.
- ಡಾ.ಎಸ್.ಬಿ.ಜೋಗುರಧಾರವಾಡ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


