ಅಂಕಣಗಳು

ಕಾಣುವುದೆಂದು ವೇಗ, ಸ್ವಚ್ಛತೆ?

ಕಾಣುವುದೆಂದು ವೇಗ, ಸ್ವಚ್ಛತೆ?
Published On :

ಜಗತ್ತಿನಲ್ಲೇ ಅತ್ಯಂತ ಕಡಿಮೆ ದರದಲ್ಲಿ ರೈಲು ಸೌಲಭ್ಯವನ್ನು ಒದಗಿಸಿದ ದೇಶ ನಮ್ಮದು. ಹಾಗಂತ ತಿಂಗಳಿಗೆ 900 ಕೋಟಿ ರುಪಾಯಿ ನಷ್ಟ ಭರಿಸಬೇಕು ಎನ್ನುತ್ತೀರಾ? ಅಷ್ಟಕ್ಕೂ ಇಷ್ಟು ದೊಡ್ಡ ಮೊತ್ತದ ಲುಕ್ಸಾನು ನಿಜಕ್ಕೂ ಅಗುತ್ತಿದೆಯೇ? ಇದು ನಿಜವೇ ಆದಲ್ಲಿ ಖಂಡಿತವಾಗಿಯೂ ರೈಲ್ವೆ ಎನ್ನುವುದು ರೋಗಗ್ರಸ್ಥ ಸಂಸ್ಥೆಯಾಗುವುದರಲ್ಲಿ ಸಂಶಯವೇ ಇಲ್ಲ. ಇದೆಲ್ಲದರ ಮಧ್ಯೆ ನಾವು ವಿದೇಶಿ ಶೈಲಿಯ, ಹೈ ಸ್ಪೀಡ್ ರೈಲು ಬಗ್ಗೆ ಯೋಚಿಸುತ್ತಿದ್ದೇವೆ, ಆದರೆ ವಿದೇಶೀ ಗುಣ ಮಟ್ಟಕ್ಕೆ ಹೊಂದಿಕೊಳ್ಳಲು ನಮಗೆ ಸಾಧ್ಯವೇ? ಸುರಕ್ಷತೆ ಮತ್ತು ಸ್ವಚ್ಛತೆಯನ್ನು ನಾವು ಪಾಲಿಸಬಲ್ಲೆವೆ?
ಕಾರಣ ನಮ್ಮಲ್ಲಿ ಇವತ್ತಿಗೂ ಅದೇ ಹಳೆಯ ಶೈಲಿ ಲೊಕೊಮೊಟಿವ್ ಎಂಜಿನ್‌ಗಳ ಬಳಕೆಯಿದೆ. ಭಾರದ ಡಬ್ಬಿ ನಿರ್ಮಾಣದಲ್ಲಿ ಬದಲಾವಣೆ ಬಂದೇ ಇಲ್ಲ. 1957 ರಲ್ಲೇ ಆರಂಭವಾಗಿರುವ ಖಉಖಕ ಎಂಬ ರೇಲ್ವೆ ಸಂಶೋಧನಾ ಇಲಾಖೆ ಇವತ್ತಿಗೂ ಹೊಸ ಅವಿಷ್ಕಾರಗಳನ್ನೇ ಕೊಡುತ್ತಿಲ್ಲ. ಅದೇ ಚೀನಾ, ಹೈ ಸ್ಪೀಡ್ ರೈಲುಗಳ (Shinkansen 700 ತಂತ್ರಜ್ಞಾನ) ಮೇಲ್ಭಾಗ ಫೈಬರ್‌ಗೆ ಇಳಿಸಿ, ಕೆಳಗಿನ ಶೇ.25 ಮಾತ್ರ ಲೋಹ ಬಳಸುವ 'ಮಲ್ಟಿಪಲ್ ಶೆಡ್ಡಿಂಗ್‌' ತಂತ್ರಜ್ಞಾನ ರೈಲಿಗೆ ವೇಗವನ್ನು ಒದಗಿಸುವ ಜೊತೆಗೆ, ವೇಗದಲ್ಲಿ ಇಂಧನ ಕ್ಷಮತೆ ಕಾಯ್ದುಕೊಳ್ಳುವಲ್ಲಿ ಸಫಲವಾಗಿದೆ. ಆ ಕಾರಣಕ್ಕಾಗೇ ಅಲ್ಲಿ ವೇಗದ ಬುಲೆಟ್ ರೈಲುಗಳು ಯಶಸ್ಸು ಸಾಧಿಸಿರುವುದು. ಎರಡು ದಶಕಗಳು ಕಳೆದರೂ, ನಾವು ಮಾತ್ರ ಅದೇ ಅಚ್ಚು ಮತ್ತು ಗಾಲಿ ಎನ್ನುವ ಸೂತ್ರಕ್ಕೆ ಅಂಟಿಕೊಂಡಿದ್ದೇವೆ. ಹೇಗೆ ವೇಗ ಪಡೆದೀತು ನಮ್ಮ ರೈಲು?  
ಚೀನಾ ಮತ್ತು ಜಪಾನ್‌ನಲ್ಲಿ ರೈಲು ಹಳಿತಪ್ಪುವುದಿಲ್ಲ ಅಥವಾ ಹಳಿ ಅಗಲವಾಗುವುದಿಲ್ಲ. ಜಪಾನ್ ಮತ್ತು ಚೀನಾಗಳಲ್ಲಿನ ನೌಕರನೊಬ್ಬ ಒಂದು ಗಂಟೆಯಲ್ಲಿ 300 ಕಿ.ಮೀ. ಸಲೀಸಾಗಿ ಚಲಿಸಿ ಆವತ್ತಿನ ಕೆಲಸ ಮುಗಿಸಿ ಸಂಜೆಗೆ ಅಷ್ಟೆ ದೂರ ಕ್ರಮಿಸಿ ಮನೆ ಸೇರುತ್ತಾನೆ. ಹೊರಗಡೆ ಮಾತ್ರ ಭಯಾನಕ ವೇಗದಲ್ಲಿ ಸರಿದು ಹೋಗುವ, ಆದರೆ ಒಳಗಡೆ ಮಾತ್ರ ಒಂದಿನಿತೂ ಅಲ್ಲಾಡದ, ಕಾಫಿ ಲೋಟವನ್ನು ಕುಲುಕಿಸದ ರೈಲನ್ನು ಹೊರ ದೇಶದಿಂದ ಹೋದ ಪ್ರಯಾಣಿಕರು ಬಾಯಿ ಬಾಯಿ ಬಿಟ್ಟು ನೋಡುವಂತೆ ಆಗುತ್ತದೆ.  ಆದರೆ ಇಂದು ನಮ್ಮಲ್ಲೇನಾಗುತ್ತಿದೆ ನೋಡಿ? (ನೂತನ ರೈಲ್ವೆ ಮಂತ್ರಿಗಳು ಇದನ್ನು ಗಮನಿಸಲಿ) ರೈಲು ಎನ್ನುವುದು ಮನುಷ್ಯ, ಸಾಮಾನು ಮತ್ತು ಸಾಧ್ಯವಾದರೆ ಪ್ರಾಣಿಗಳನ್ನೂ ಸಾಗಿಸುವ ಒಂದು ಸಂಚಾರದ ವ್ಯವಸ್ಥೆ ಅಷ್ಟೆ. ಅದರಲ್ಲಿ ಮೊದಲಿಗೆ ಬುಕಿಂಗ್ ಎನ್ನುವ ಪ್ರಹಸನಕ್ಕೆ ಬಂದರೆ ಈ ಕೆಳಗಿನ ಅಂಶಗಳನ್ನು ಗಮನಿಸುವುದು ಒಳ್ಳೆಯದು.
= ಜಗತ್ತಿನ ಅತ್ಯಂತ ವೇಗದ ಚೀನಾ ರೈಲಿಗೆ ಬುಕಿಂಗ್ ಎನ್ನುವುದು ಆನ್ಲೈನ್ ಆದರೂ ಯಾವತ್ತೂ ಅದರ ಸರ್ವರ್ ಜಾಮ್ ಆಗುವುದಿಲ್ಲ. ಅಲ್ಲಿ ಬುಕಿಂಗ್‌ಗೆ ನಾಲ್ಕೇ ಹಂತಗಳಿದ್ದು ಎಲ್ಲೂ ಸಮಯದ ಪೋಲಾಗಿ ಸರ್ವರ್ ಕೈಕೊಡುವುದೇ ಇಲ್ಲ. ಕೊನೆಯ ಕ್ಷಣದಲ್ಲಿ ಕೌಂಟರ್ ಬುಕಿಂಗ್ ವ್ಯವಸ್ಥೆಯೇ ಇಲ್ಲ. ಕನಿಷ್ಠ ನಾಲ್ಕು ಗಂಟೆಯ ಮೊದಲೇ ಪ್ರಯಾಣಿಕರ ಪಟ್ಟಿಯನ್ನು ಆಯಾ ಇಲಾಖಾ ವ್ಯಾಪ್ತಿಯೊಳಗೆ ಪರೀಕ್ಷಿಸಿ ಪ್ರಯಾಣಿಕ ಮತ್ತು ಅವನ ವಸ್ತುಗಳಿಂದ ಯಾವುದೇ ಹಾನಿ ಇಲ್ಲ ಎನ್ನುವುದನ್ನು ದೃಢಪಡಿಸಿಕೊಳ್ಳಲಾಗುತ್ತದೆ.
= ಜಪಾನ್, ಚೀನ, ಸಿಂಗಾಪುರ್, ದುಬೈ, ಕೊನೆಗೆ ಇಂಡೊನೇಶಿಯಾದಲ್ಲಿನ ರೇಲ್ವೆ ಬುಕಿಂಗ್ ಎಷ್ಟು ಬಿಗಿಯಾಗಿದೆ ಎಂದರೆ ಅಲ್ಲಿ ಏಜೆಂಟ್‌ಗಳ ಅವ್ಯವಹಾರವೇ ಇಲ್ಲ. ನಮ್ಮಲ್ಲಿ ದಿನವಹಿ ಏಜೆಂಟ್ ಬುಕಿಂಗ್ ಅವ್ಯವಹಾರದ ಮೊತ್ತವೇ 27 ಕೋಟಿ ದಾಟುತ್ತದೆ. ಆ ದೇಶದಲ್ಲಿಲ್ಲಿ ನೇರವಾಗಿ ಬುಕಿಂಗ್ ಅಂತರ್ಜಾಲದ ಮೂಲಕವೇ ಮಾಡಲಾಗುತ್ತದೆ. ಫ್ಲಾಟ್‌ಫಾರ್ಮ್‌ನಲ್ಲಿ ಕಾಯುವ ರಗಳೆ ಇಲ್ಲವೇ ಇಲ್ಲ. ಜೊತೆಗೆ ಸೀಟ್ ಭರ್ತಿ ಆಗುತ್ತಿದ್ದಂತೆಯೇ ಅದನ್ನು  ಘೋಷಿಸಲಾಗುತ್ತದೆ.
= ನಮ್ಮಲ್ಲಿ ಬುಕಿಂಗ್ ಪ್ರಕ್ರಿಯೆ ಎಷ್ಟೇ ಬಿಗಿಯಾಗಿದೆ ಎಂದರೂ ಆರಂಭಿಸಿದ ಅರ್ಧ ಗಂಟೆಯಲ್ಲೇ ವೇಟಿಂಗ್ ಲಿಸ್ಟ್ ಬರುತ್ತದೆ. ಇನ್ನು 60 ದಿನಗಳ ಮುಂಗಡ ಬುಕಿಂಗ್ ಮುಗಿಯುತ್ತಿದ್ದರೆ ಏಜೆಂಟ್ ಮಾತ್ರ ಕನ್‌ಫರ್ಮ್ ಟಿಕೆಟ್ ಕೊಡುತ್ತಲೆ ಇರುತ್ತಾನೆ. ಒಂದು ಇಮೇಲ್ ಐ.ಡಿ. ಮತ್ತು ಒಂದು ಐ.ಪಿ. ಅಡ್ರೆಸ್‌ಗೆ ಇಷ್ಟೇ ಬುಕಿಂಗ್ ಎಂದಿದ್ದರೂ, ಸರ್ವರ್ ಗೇಟ್ವೇಯಲ್ಲಿ ಕಾನ್ಫಿಗರೇಷನ್ ಬದಲಾಯಿಸಿ ಬುಕಿಂಗ್ ಮಾಡುತ್ತಲೇ ಇರುತ್ತಾರೆ. ಇದೆಲ್ಲ ಬುಕಿಂಗ್ ಕೌಂಟರ್‌ಗಳಲ್ಲೂ ಇವರಿಗೆ ಸಹಾಯ ಮಾಡುವ ಸಿಬ್ಬಂದಿಯಿಂದಾಗಿ ಸಾಧ್ಯವಾಗುತ್ತದೆ. ಅವರ ಮೂಲಕ ಯಾವ ಲೈನ್‌ನಲ್ಲಿ ಎಷ್ಟು ಟಿಕೆಟ್ ಕ್ಯಾನ್ಸಲ್/ಬಾಕಿ ಇತ್ಯಾದಿ ವಿವರ ಸಿಗುತ್ತಲೇ ಇರುತ್ತದೆ. ಹಾಗಾಗೇ ಕೊನೆಯ ಅರ್ಧ ಗಂಟೆ ಇದ್ದಾಗಲೂ ಮೂರರಷ್ಟು ದರಕ್ಕೆ ಕನ್‌ಫರ್ಮ್ ಟಿಕೆಟು ನಮಗೆ ಲಭ್ಯವಾಗುತ್ತದೆ. ನಾವು ನೋಡಿದರೆ ನೂರು ಚಿಲ್ಲರೆ ವೇಟಿಂಗ್ ಲಿಸ್ಟ್?  
= ಇನ್ನು ಅಷ್ಟು ಹೈ ಸ್ಪೀಡ್ ರೈಲನ್ನು ಹೇಗೆ ಅಘಾತವಾಗದಂತೆ ನಿರ್ವಹಿಸಬಲ್ಲೆವು? (ನಮ್ಮಲ್ಲಿ ಗರಿಷ್ಟ ವೇಗ 120ರ ಆಸು ಪಾಸು) ವಿದೇಶದ ರೈಲು ವ್ಯವಸ್ಥೆಯಲ್ಲಿ ಜಿ.ಪಿ.ಎಸ್. ವ್ಯವಸ್ಥೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗಿದೆ. ಪ್ರತಿ ರೈಲಿನ ಚಲನಶೀಲತೆಯ ಕರಾರುವಾಕ್ಕಾದ ಲೆಕ್ಕಾಚಾರ ನಿಯಂತ್ರಣ ಕೊಠಡಿಯಲ್ಲಿ ಸಿಗುತ್ತಿರುತ್ತದೆ. ಜೊತೆಗೆ ಪ್ರತಿ ಹಳಿಯ ನಿರ್ದಿಷ್ಟ ಅಂತರದಲ್ಲಿ ಜೋಡಿಸಲಾಗಿರುವ ಸೆನ್ಸಾರ್ ವ್ಯವಸ್ಥೆಯಿಂದಾಗಿ, ರೈಲು ಹಳಿಯ ಅಂತರ, ಹಳಿಯ ಮೇಲೆ ಅಗತ್ಯಕ್ಕಿಂತ ಹೆಚ್ಚಿನ ಭಾರ ಬೀಳುತ್ತಿದೆಯೇ ಎನ್ನುವ ಮಾಹಿತಿಯೆಲ್ಲ ಚಾಲಕನಿಗೆ ಮತ್ತು ಹತ್ತಿರದ ಕೊಠಡಿಗೆ ದೊರಕುತ್ತದೆ. (ಮ್ಯಾಡ್ರಿಡ್- ಸವಿಲ್ಲೆ ಮಧ್ಯದ 1992ರ ಬಾರ್ಸಿಲೋನ ಓಲಿಂಪಿಕ್ಸ್ ರೈಲು ಇವತ್ತಿಗೂ ನಿಲ್ಲದೆ 400 ಕಿ.ಮೀ. ವೇಗದಲ್ಲಿ ಚಲಿಸುತ್ತಿದೆ. ಇದು ಕೂಡಾ ಉಪಗ್ರಹ ನಿಯಂತ್ರಣದಲ್ಲಿದೆ.)
= ಅಪಘಾತವಾಗಲೆಂದೇ ಕಂಬಿ ಕಿತ್ತುಹಾಕಿದ್ದರೆ, ಹಳಿಯ ಇಕ್ಕೆಲಗಳಲ್ಲಿ ಸ್ಪೋಟಕ ಜೋಡಿಸಿದ್ದರೆ ಸೆನ್ಸಾರ್‌ಗಳು ಅದೆಷ್ಟು ವೇಗವಾಗಿ ಸೂಚನೆಯನ್ನು ತಲುಪಿಸುತ್ತವೆ ಎಂದರೆ ಅದನ್ನಿರಿಸಿರುವ ವ್ಯಕ್ತಿ ಸ್ಟೇಷನ್ ದಾಟುವ ಮೊದಲೇ ನಿಯಂತ್ರಣ ಕೊಠಡಿಯಿಂದ ಪೊಲೀಸರಿಗೆ ಮತ್ತು ರೈಲು ಚಾಲಕನಿಗೆ ಸೂಚನೆ ಹೋಗಿರುತ್ತದೆ. ಹಾಗಾಗಿ ಯಾವುದೇ ಹೈಸ್ಪೀಡ್ ರೈಲು ಅಪಘಾಕ್ಕೀಡಾಗುವ ಸಾಧ್ಯತೆ ಶೇ.0.01 ಮಾತ್ರ.  
ಭಾರತ ಹೊರತು ಪಡಿಸಿದರೆ ಇತ್ತೀಚಿನ ದಶಕದಲ್ಲಿ ಏಷ್ಯಾದ ಇತರೆ ದೇಶಗಳಲ್ಲಿನ ರೇಲ್ವೆಗಳು ಪಾರಂಪರಿಕ ಲೈನ್ ಪದ್ಧತಿ ಕೈಬಿಟ್ಟು 3 ಎಮ್. ರೇಡಿಯಲ್ ಸಿಸ್ಟಮ್ ಉಪಯೋಗಿಸುತ್ತಿರುವುದರಿಂದ ಅಲ್ಲಿನ ರೈಲುಗಳು ಹಳಿ ತಪ್ಪುವುದೇ ಇಲ್ಲ. 3 ಎಮ್. ರೇಡಿಯಲ್ ಸಿಸ್ಟಮ್‌ನಲ್ಲಿ ಗಾಲಿಗಳು ಹಳಿಗಳನ್ನು ಕಚ್ಚಿಕೊಳ್ಳುವ ವಿನ್ಯಾಸವನ್ನು ಸಂಪೂರ್ಣ ಬದಲಿಸಲಾಗಿದ್ದು, ಬೇರಿಂಗ್ ಮೇಲಿನ ಒತ್ತಡ ಆಗ್ಗಿಂದಾಗ್ಗೆ ಹಂಚಿಕೆಯಾಗಿ ಹಳಿಗಳಿಂದ ಹರಿಯುವ ಸಣ್ಣ ಪ್ರಮಾಣದ ಕಾಂತೀಯ ಬಲ ಅದನ್ನು ಬಲವಾಗಿ ಕಚ್ಚಿಕೊಳ್ಳುವ ಸಾಮರ್ಥ್ಯಕ್ಕೆ ಸಜ್ಜು ಮಾಡುತ್ತದೆ.  Wuhan - Guangzhou  ಹೈಸ್ಪೀಡ್ ರೈಲು ಇದೇ ತಂತ್ರಜ್ಞಾನದಲ್ಲಿ ಚಲಿಸುತ್ತಿದ್ದು ಗಂಟೆಗೆ 350 ಮೈಲಿ ಚಲಿಸುವ ಸಾಮರ್ಥ್ಯ ಹೊಂದಿದೆ.
= ನಮ್ಮಲ್ಲಿ ಯಾಕೆ ಗಲೀಜು ಡಬ್ಬಿಗಳನ್ನು ಉಪಯೋಗಿಸಲಾಗುತ್ತದೆ? ವಿದೇಶದಲ್ಲಿ ರೈಲಿನ ಗಲೀಜು, ಹಳಿಗಳ ಮಧ್ಯೆ ಬೀಳುವ ವ್ಯವಸ್ಥೆಯನ್ನು ತೆಗೆದು ಎಷ್ಟೋ ಕಾಲವಾಗಿದೆ. ಅಲ್ಲಿ ಶೌಚಾಲಯದ ಉತ್ಪನ್ನ ರೀ-ಪ್ರಾಸೆಸ್ ಆಗುವ ಸ್ವಯಂ ಚಾಲಿತ ವ್ಯವಸ್ಥೆಯಿಂದ ಕೊನೆಯ ಡಬ್ಬಿಯ ಕಡೆಯಲ್ಲಿ ಸಂಸ್ಕರಿತ ತ್ಯಾಜ್ಯ ಸಂಗ್ರಹವಾಗಿ ಅದನ್ನು ಗಾರ್ಬೇಜ್‌ಗೆ ಕಳಿಸುತ್ತಾರೆ. ರೈಲಿನಲ್ಲೇ ಸಂಸ್ಕರಿತ ಅನಿಲ ಅಲ್ಲಿನ ಹಲವು ಇಲೆಕ್ಟ್ರಾನಿಕ್ ಉಪಕರಣಗಳಿಗೆ ಬಳಕೆಯಾಗುತ್ತದೆ.
ನಿಮಗೆ ಗೊತ್ತಿರಲಿ. ದಕ್ಷವಾಗಿ ಕಾರ್ಯ ನಿರ್ವಹಿಸಲೆಂದೇ ನಮ್ಮ ರೇಲ್ವೆ ಇಲಾಖೆ ಪ್ರತಿ ಕಾಮಗಾರಿಯ ಅನುಸಾರ 32 ನಿರ್ದೇಶನಾಲಯಗಳನ್ನು ಹೊಂದಿದೆ. ಆದರೆ ಯಾವುದೇ ನಿರ್ದೇಶನಾಲಯಗಳೂ ಸರಿಯಾದ ದಿಕ್ಕಿನಲ್ಲಿ ಬಂದಿದ್ದು ಕಾಣದು. ಕೇವಲ ರೈಲು ಸ್ವಚ್ಛತೆಗಾಗಿ 760 ಕೋಟಿ ವ್ಯಯಿಸುತ್ತಿರುವ ಇಲಾಖೆ ಒಂದಿನವೂ ಶೌಚಾಲಯಗಳನ್ನು ಶುಭ್ರವಾಗಿಟ್ಟಿದ್ದು ಇಲ್ಲ.
=  ಸಂತೋಷಕುಮಾರ್ ಮೆಹಂದಳೆ
jmehandale@gmail.com


--
ರೇಲ್ವೆ ಏಕೆ ಸುರಕ್ಷಿತವಲ್ಲ?


ಇತ್ತೀಚೆಗೆ ರೈಲು ಅಪಘಾತವಾದಗಲೆಲ್ಲ ರೈಲಿನ ಸುರಕ್ಷತೆಯ ಬಗ್ಗೆ ಸಾಕಷ್ಟು ಚರ್ಚೆಗಳು ಆಗಿ, ಕೊನೆಗೆ ಅವೆಲ್ಲವೂ ಮೂಲಭೂತ ಸೌಕರ್ಯ, ತಾಂತ್ರಿಕಮಟ್ಟ ಮತ್ತು ಸಿಬ್ಬಂದಿ ದಕ್ಷತೆ ಹೆಚ್ಚಿಸುವ ಬಗ್ಗೆಯೇ ಚರ್ಚೆಗೆಳೆಯುತ್ತವೆ. ಆದರೆ ನಮ್ಮ ದೇಶದ ಲಕ್ಷಾಂತರ ಜನರ ಅನಿವಾರ್ಯ ಸಂಚಾರ ವ್ಯವಸ್ಥೆಯಾದ ರೈಲು ಸಂಚಾರವು ಅಸುರಕ್ಷಿತ, ಅಪ್ರಿಯ ಹಾಗೂ ಶೋಷಣೆಯ ವ್ಯವಸ್ಥೆಯಾಗಿರುವುದು ದುರಂತ.
ನನ್ನದೆ ಸ್ವಂತ ಅನುಭವದಲ್ಲಿ ಉದಾಹರಣೆ ನೀಡಬೇಕೆಂದರೆ 2000ನೇ ಇಸವಿಯಲ್ಲಿ ದೆಹಲಿ ಕನ್ನಡಿಗ ಪತ್ರಿಕೆಯವರು ಆಯೋಜಿಸಿದ ಕಾರ್ಯಕ್ರಮಕ್ಕಾಗಿ ಕಾಶಿಗೆ ಕಲಾವಿದರ ಗುಂಪು ಹೊರಟಿದ್ದಿವಿ. ನಡುರಾತ್ರಿಯಲ್ಲಿ ಮಧ್ಯಪ್ರದೇಶದ ಯಾವುದೋ ರೇಲ್ವೆ ಸ್ಟೇಷನ್‌ನಲ್ಲಿ ಕ್ರಾಸಿಂಗ್‌ಗಾಗಿ ರೈಲು ನಿಂತಿತು. ಇಲ್ಲಿ 10-15 ಗಂಡಸು- ಹೆಂಗಸರು ಇರುವ ಗುಂಪೊಂದು ನಮ್ಮ ರಿಸರ್ವ್ ಬೋಗಿಗೆ ಹತ್ತಿತು! ನಾನು ತಕ್ಷಣವೇ ಟಿ.ಸಿ.ಯನ್ನು ಕರೆಸಿ 'ಟಿಕೇಟ್ ಇಲ್ಲದ ಅವರು ಹೇಗೆ ನಡುರಾತ್ರಿಯಲ್ಲಿ ರಿಸರ್ವ್ ಬೋಗಿಯಲ್ಲಿ ಹತ್ತಿದರು? ಅವರನ್ನು ತಕ್ಷಣವೇ ಇಳಿಸಿ' ಎಂದರೂ ಆ ಟಿ.ಸಿ. ಒಪ್ಪದೆ, 'ಅವರು ಆಗಾಗ ಬರುತ್ತಾರೆ, ಮುಂದಿನ ಸ್ಟೇಷನ್‌ನಲ್ಲಿ ಇಳಿಯುತ್ತಾರೆ. ಅವರಿಂದ ನಿಮಗೇನು ತೊಂದರೆ ಇಲ್ಲ' ಎಂದ. ಆದರೆ ಇಳಿಯುವಾಗ ಅವರು ಒಂದು ಬಾಗಿಲಿನಿಂದ ಇನ್ನೊಂದು ಬಾಗಿಲಿನವರೆಗೂ ಬೋಗಿ ಪೂರ್ಣ ನಡೆದು ಹೋಗಿ ಇಳಿದು ಹೋದರು. ಬೆಳಗ್ಗೆ ನೋಡಿದಾಗ ನಮ್ಮ ಗುಂಪಿನಲ್ಲಿದ್ದ ಒಬ್ಬ ಹೆಣ್ಣು ಮಗಳ ಬ್ಯಾಗ್ ಮಾಯವಾಗಿತ್ತು. ಅದರಲ್ಲಿ ಆಕೆ ತಂದಿದ್ದ ಎಲ್ಲ ಹಣವೂ ಹೋಗಿತ್ತು. ರೈಲು ಇನ್ನೊಂದು ವಲಯ ಪ್ರವೇಶಿಸಿದ್ದರಿಂದ ಟಿಸಿಯು ಇಳಿದು ಹೋದ. ಇದೆಲ್ಲ ನಿತ್ಯ ನಡೆಯುವ ವ್ಯವಸ್ಥಿತ ಸಂಚೆಂದು ನಮಗೆ ಅರ್ಥವಾಗಲು ಬಹಳ ಸಮಯವೇ ಬೇಕಾಯಿತು!
ಇಂತಹ ಸಂಚು ಅಥವಾ ಅಸುರಕ್ಷತೆ ಏನಾದರೂ ಬದಲಾವಣೆ ಆಗಿದ್ದಿದೆ ಎಂದರೆ? ಉಹುಂ, ಈಗಲೂ ಏನೂ ಬದಲಾವಣೆ ಆಗಿಲ್ಲ! ಇತ್ತೀಚೆಗೆ ಸಂಘಮಿತ್ರ ಎಕ್ಸ್‌ಪ್ರೆಸ್‌ನಲ್ಲಿ ಅದೇ ಕಾಶಿಗೆ ಬೆಂಗಳೂರಿನಿಂದ ದಸರ ವೇಳೆಯಲ್ಲಿ ಹೊರಟಾಗ ಇಡೀ ರಿಸರ್ವ್ ಬೋಗಿಯ ಎರಡನೇ ದರ್ಜೆ ಪ್ರಯಾಣಿಕರು, ಇದೇ 'ಪ್ರಯಾಣ ದಬ್ಬಾಳಿಕೆ' ಎಂದರೆ ಏನೆಂದು ಅನುಭವಿಸಿದರು! ಉತ್ತರಭಾರತದಿಂದ ಕರ್ನಾಟಕ, ತಮಿಳುನಾಡು ಹಾಗೂ ಆಂಧ್ರಪ್ರದೇಶಗಳಿಗೆ ವಿವಿಧ ಕೂಲಿ ಕಾರ್ಯಗಳಿಗೆ ಕೆಲಸಕ್ಕೆ ಬರುವ ಜನರು ದಸರ ವೇಳೆಯಲ್ಲಿ ಊರಿಗೆ ಹೊರಡುತ್ತಾರೆ. ಸಾಮಾನ್ಯ ದರ್ಜೆಯ ಟಿಕೆಟ್ ತೆಗೆದುಕೊಂಡು ರಿಸರ್ವ್ ಬೋಗಿಗಳಿಗೆ ಇವರು ನುಗ್ಗಿ ಬಿಡುತ್ತಾರೆ! ಇಲ್ಲಿ ಒಂದು ಗಮನವಿಟ್ಟುಕೊಳ್ಳಬೇಕಾದ ವಿಚಾರವೇನೆಂದರೆ ಸಪ್ಟೆಂಬರ್‌ನಿಂದ ಡಿಸೆಂಬರ್‌ವರೆಗೂ ದಕ್ಷಿಣ ಭಾರತೀಯರು ಉತ್ತರ ಭಾರತ ಪ್ರವಾಸ ಹೊರಡುವುದರಿಂದ ಬಹಳ ದಿನಗಳ ಹಿಂದೆಯೇ ಎಲ್ಲ ಸೀಟುಗಳು ಭರ್ತಿಯಾಗಿರುತ್ತದೆ. ರೈಲ್ವೆ ಇಲಾಖೆ ಅಧಿಕ ಸಂಖ್ಯೆಯ ಟಿಕೆಟ್ ಹೇಗೆ ನೀಡುತ್ತಾರೆ ಎಂದು ಅರ್ಥವಾಗುವುದಿಲ್ಲ! ಹಗಲಿನಲ್ಲಿ ಮೂರು ಜನರು ಕುಳಿತುಕೊಳ್ಳುವ ಜಾಗದಲ್ಲಿ ನಮ್ಮನ್ನು ಸರಿಸಿ ಕೂಡುವುದು. ಮೇಲಿನ ಬರ್ತ್‌ನಲ್ಲಿ ಯಾವುದೇ ಮುಲಾಜಿಲ್ಲದೇ ಏರಿ ನಿದ್ದೆ ಮಾಡುವುದು. ರಾತ್ರಿ ವೇಳೆ ಎರಡು ಸೀಟಿನ ನಡುವಿನ ಜಾಗ ಹಾಗೂ ಎಲ್ಲರಿಗೂ ಓಡಾಡಲು ಇರುವ ಒಣಿ ಅಂತಹ ಜಾಗದಲ್ಲಿ ಮಲಗುವುದೆಲ್ಲ ಮಾಡುತ್ತಾರೆ.
ಇವರಿಗೆ ಟಿಸಿಗಳು ಏನನ್ನೂ ಪ್ರಶ್ನಿಸುವುದಿಲ್ಲ ಮತ್ತು ಇವರಿಗೆ ಯಾವ ಕಾನೂನುಗಳು ಲಾಗು ಆಗುವುದಿಲ್ಲ! ಇಂತಹ ಸಂದರ್ಭದಲ್ಲಿ ಹೆಂಗಸರು ಮಕ್ಕಳು ಜೊತೆಯಲ್ಲಿದ್ದಾಗ ಪ್ರಯಾಣ ಹೇಗೆ ಸುರಕ್ಷಿತವಾಗಿರುತ್ತದೆ? ಹತ್ತಿರದ ಊರುಗಳಿಂದ ಬೆಂಗಳೂರಿಗೆ ಬರುವ ದಿನನಿತ್ಯದ ಪ್ರಯಾಣಿಕರು ಅನೇಕ ಎಕ್ಸ್‌ಪ್ರೆಸ್ ರೈಲಿನ ರಿಸರ್ವ್ ಬೋಗಿಗಳಲ್ಲಿ ನುಗ್ಗಿ ಇಂತಹ ಕಾಟ ಕೊಡುವುದು ಸಾಮಾನ್ಯವಾಗಿರುವುದು ಯಾರಿಗೂ ಮರ್ಯಾದೆ ತರುವ ವಿಷಯವಲ್ಲ ಅಲ್ಲವೇ? ಇನ್ನೊಂದು ದುರಂತವೆಂದರೆ ನಮ್ಮ ದೇಶವ್ಯಾಪಿ ಇರುವ ಹೆಚ್ಚು ಕಡಿಮೆ ಎಲ್ಲಾ ಊರಿನ ರೈಲ್ವೆ ಸ್ಟೇಷನ್‌ಗಳು ಕೊಳಚೆ ಪ್ರದೇಶಗಳಿಂದಲೇ ಸ್ವಾಗತಿಸುತ್ತವೆ! ಯಾವುದೋ ರೈಲ್ವೆ ಸ್ಟೇಷನ್ ಆದರೂ ಸುರಕ್ಷತೆ ದೃಷ್ಟಿಯಿಂದ ಶೂನ್ಯ ರಕ್ಷಣೆಯೊಂದಿದೆ ಎಂದರೆ ಆಶ್ಚರ್ಯವೇನಿಲ್ಲ. ಸಾವಿರಾರು ಜನರು ಏಕಕಾಲಕ್ಕೆ ಇಲ್ಲಿಗೆ ಬರುತ್ತಾರೆ ಮತ್ತು ಹೋಗುತ್ತಾರೆ. ಆದರೆ ಅವರು ತರುವ ಬ್ಯಾಗು, ಸೂಟ್‌ಕೇಸ್‌ಗಳು ಹಾಗೂ ಸ್ವತಃ ಅವರು ಕೂಲಂಕಷ ಪರಿಶೀಲನೆಗೆ ಒಳಪಡುವುದೇ ಇಲ್ಲ. ಪ್ರಯಾಣಿಕರೋ ಅಲ್ಲವೋ, ಅವರ ಬಳಿ ಆ ದಿನದ ರೈಲಿನ ಟಿಕೆಟ್ ಅಥವಾ ಪ್ಲಾಟ್‌ಫಾರಂ ಟಿಕೆಟ್ ಇರುವುದೋ ಇಲ್ಲವೋ ಗೊತ್ತಿಲ್ಲ. ಆದರೂ ಅನಗತ್ಯ ಜನರು ರೇಲ್ವೆ ಸ್ಟೇಷನ್ ಒಳಗೆ ಏಕೆ ಇರಬೇಕೆಂದು ಗೊತ್ತಾಗುವುದೇ ಇಲ್ಲ! ಇಂತಹ ಪರಿಸ್ಥಿತಿಯಲ್ಲಿ ರೈಲ್ವೆ ಸ್ಟೇಷನ್ ಆಗಲಿ ಅಥವಾ ರೈಲಿನ ಸಂಚಾರವಾಗಲಿ ಎಷ್ಟು ಸುರಕ್ಷಿತ? ನಾನು ದೇಶವ್ಯಾಪಿ ರೈಲಿನಲ್ಲಿ ಅನೇಕ ಊರುಗಳಿಗೆ ಹೋಗಿರುವೆ. 100ಕ್ಕೆ 90 ಭಾಗ ರೇಲ್ವೆ ಸ್ಟೇಷನ್‌ಗಳು ವೃದ್ಧರು ಮತ್ತು ಅಂಗವಿಕಲರ ಸ್ನೇಹಿ ಅಲ್ಲ. ಸಾಮಾನ್ಯವಾಗಿ ಗಟ್ಟಿಮುಟ್ಟಿನ ಜನರು ಸಾಮಾನುಗಳನ್ನು ಹೊತ್ತುಕೊಂಡು ಆಕಾಶಕ್ಕೆ ಏಣಿ ಹಾಕಿದಂತಿರುವ ಸೇತುವೆಯ ಮೆಟ್ಟಲು ಹತ್ತಿಕೊಂಡು 2ರಿಂದ 10ರವರೆಗಿನ ಪ್ಲಾಟ್‌ಫಾರಮ್‌ಗಳಿಗೆ ಹೋಗಲು ಏದುಸಿರು ಬಿಡಬೇಕಾಗುತ್ತದೆ. ಚಲಿಸುವ ಮೆಟ್ಟಲು, ಲಿಫ್ಟ್ ಹೋಗಲಿ ಬೇಡ, ರ್ಯಾಂಪ್ ಆದರೂ ಹಾಕಿದರೆ ಎಷ್ಟೋ ಜನಕ್ಕೆ ಅನುಕೂಲವಾಗುವುದಿಲ್ಲವೆ? ಬೋಗಿ, ಸ್ಟೇಷನ್‌ಗಳ ಸ್ವಚ್ಛತೆ, ಊಟ ತಿಂಡಿಯ ವಿಚಾರ ಹೇಳದಿರುವುದೇ ಲೇಸು. ರೇಲ್ವೆ ಬಜೆಟ್ ಎಂದರೆ ಹೆಚ್ಚು ರೈಲುಗಳ ಘೋಷಣೆ ಎಂಬುದಷ್ಟಕ್ಕೇ ಸೀಮಿತವಾಗದೇ ರೈಲು ಪ್ರಯಾಣವನ್ನು ಜನಸ್ನೇಹಿಯಾಗಿಸುವತ್ತ ಗಮನ ನೀಡಬೇಕು.  ನಗುಮುಖದ ಸದಾನಂದಗೌಡರು ಇತ್ತ ಚಿತ್ತ ಹರಿಸಿ, ರೈಲು ಸಂಚಾರ ಎಂದರೆ 'ನಗುಮುಖದ ಉನ್ನತ ಸೇವೆಯ ವ್ಯವಸ್ಥೆ 'ಎಂಬ ಅನುಭವ ಮುಂದಿನ ಐದು ವರ್ಷಗಳಲ್ಲಾದರೂ ಪೂರ್ಣಗೊಳಿಸುತ್ತಾರೆಂಬ ನಿರೀಕ್ಷೆ ಇಟ್ಟುಕೊಳ್ಳಬಹುದೇ?
=  ಸಂಜಯ್. ಎಚ್. ಪಾಟೀಲ್.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.