ಅಂಕಣಗಳು

ಪ್ರಧಾನಿಯಾಗುವ ರೊಂಬ ರೊಂಬ ಕನಸು

Published On :

'ಕನಸು ಕಾಣುವುದಕ್ಕೆ ಹೆದರಬೇಡಿ. ಧೈರ್ಯವಾಗಿ ಮಹೋನ್ನತ ಕನಸುಗಳನ್ನು ಕಾಣಿರಿ.'- ಇದು ಯಾರೋ ವ್ಯಕ್ತಿತ್ವ ವಿಕಸನದ ಗುರು ಹೇಳುತ್ತಿರುವ ಮಾತು ಎಂದುಕೊಳ್ಳುತ್ತೀರೇನೋ. ಸ್ವಲ್ಪ ಇರಿ... ವಣಕ್ಕಂ. ಈ ಹೇಳಿಕೆ ಕೆಳಗೀಗ ನನ್ನ ಸಿಗ್ನೇಚರ್ ಇದೆ. ನಾನು ಜಯಲಲಿತಾ, ಭಾರತದ ಪ್ರಧಾನಿಯಾಗುವುದು ನನ್ನ ಸಧ್ಯದ ಕನಸು.
ನಾನು ಹೀಗೆಲ್ಲ ಕನಸು ಕಾಣುವುದಕ್ಕೆ ಚಾರಿತ್ರಿಕ ಕಾರಣಗಳು ಬಹಳ ಇವೆ. ಈ ಐತಿಹಾಸಿಕ ಕಾರಣಗಳೇ ನನ್ನನ್ನು ವ್ಯಾಪಕವಾಗಿ ಕನಸು ಕಾಣುವುದಕ್ಕೆ ಪ್ರೇರೇಪಿಸುತ್ತಿವೆ. ವೈಯಕ್ತಿಕ ನೆಲೆಯಲ್ಲಿ ಹೇಳುವುದಾದರೆ ನಾನು ಸಿನಿಮಾದ ಬಣ್ಣದ ಲೋಕದಲ್ಲಿ ಬೇರುಗಳನ್ನು ಹೊಂದಿದವಳು. ಸಿನಿಮಾಕ್ಕಿಂತ ಅದ್ಭುತವಾಗಿ ಇನ್ಯಾವುದು ತಾನೇ ಕನಸು ಕಟ್ಟುವುದಕ್ಕೆ ಹೇಳಿಕೊಡುತ್ತದೆ? ಹೀಗಾಗಿ ಲೋಕಸಭೆ ಚುನಾವಣೆಯ ಹೊಸ್ತಿಲಿನಲ್ಲಿ ನಾನು ಹೊಸ ಕನಸು ಹೆಣೆದಿದ್ದೇನೆ. ತಮಿಳುನಾಡನ್ನು ಕ್ಲೀನ್‌ಸ್ವೀಪ್ ಮಾಡುವುದೇ 'ಅಮ್ಮ'ನ ಕನಸು ಎಂದು ನೀವು ತರಾತುರಿಯಲ್ಲಿ ನಿರ್ಧಾರಕ್ಕೆ ಬರುವುದು ಬೇಡ. ಎಷ್ಟು ದಿನ ಅಂತ ತಮಿಳುನಾಡಿನಲ್ಲಿದ್ದುಕೊಂಡು ಪಕ್ಕದ ಕರ್ನಾಟಕದ ಜತೆ ರಗಳೆ ಮಾಡಿಕೊಂಡಿರುವುದು? ನನ್ನ ಕಣ್ಣಿಗೀಗ ಜಗತ್ತಿನ ವಿಸ್ತಾರ ಕಾಣುತ್ತಿದೆ. ಅಕ್ಕಪಕ್ಕದ ರಾಜ್ಯಗಳ ಮಾತು ಹಾಗಿರಲಿ, ಈ ಒಬಾಮಾ, ಪುಟಿನ್ನು, ವೆನ್ ಜಿಯಾಬೊ ಹೀಗೆ ಜಾಗತಿಕ ನಾಯಕರೆಲ್ಲ ನನಗೆ ಉದ್ದಂಡ ನಮಸ್ಕಾರ ಹಾಕುವ ದಿನಗಳನ್ನು ಕಾಣಬೇಕೆಂಬ ಆಸೆಯೊಂದಿದೆ. ನಿಮಗೆ ಇದರ ಸ್ಪಷ್ಟ ಚಿತ್ರಣ ಸಿಗಬೇಕು ಎಂದಾದರೆ ಇತ್ತೀಚೆಗೆ ನನ್ನ ಜನ್ಮದಿನದ ಪ್ರಯುಕ್ತ ನನ್ನ ಅಭಿಮಾನಿ ವರ್ಗವು ಚೆನ್ನೈನ ಪ್ರಮುಖ ಬೀದಿಗಳಲ್ಲಿ ನಿಲ್ಲಿಸಿರುವ ಕಟೌಟ್‌ಗಳನ್ನು ನೋಡಬೇಕು. ಅದರಲ್ಲಾಗಲೇ ಜಾಗತಿಕ ಮುಖಂಡರೆಲ್ಲ ನನ್ನೆದುರು ಸಾಮಂತ ರಾಜರ ಪೋಸಿನಲ್ಲಿ ನಿಂತದ್ದಾಗಿದೆ.
ಅಂದಹಾಗೆ, ನಾನು ಪ್ರಧಾನಿ ಕನಸು ಕಾಣಲಿಕ್ಕಿರುವ ಇನ್ನೊಂದು ಐತಿಹಾಸಿಕ ಕಾರಣವನ್ನೂ ಹೇಳಬೇಕು. ಅದೆಂದರೆ ಈವರೆಗೆ ಪ್ರಧಾನಿಗಳಾದವರ ಇತಿಹಾಸ. ಅದು ನನಗೂ ಒಂದು ಛಾನ್ಸು ಏಕಿರಬಾರದು ಎಂದುಕೊಳ್ಳುವುದಕ್ಕೆ ಬಲವಾದ ಕಾರಣಗಳನ್ನೇ ಒದಗಿಸಿದೆ. ಭಾರತದಲ್ಲಿ ಪ್ರಧಾನಿಯಾದವರ ಹೆಸರು ಹೇಳುತ್ತ ಹೋಗಿ. ಆನಂತರ ಅವರಲ್ಲಿ ಎಷ್ಟು ಮಂದಿ ಚುನಾವಣೆಗೂ ಮೊದಲು ಸಾಧ್ಯತೆಯ ಪಟ್ಟಿಯಲ್ಲಿದ್ದರು ಅಂತ ಗಮನಿಸಿ. ಐ. ಕೆ. ಗುಜ್ರಾಲ್ ಪ್ರಧಾನಿಯಾಗುತ್ತಾರೆ ಅಂತ ಯಾರಾದರೂ ಅಂದುಕೊಂಡಿದ್ದರಾ? ದೇವೇಗೌಡರಿಗೆ ಪ್ರಧಾನಿಯಾಗುವ ಅವಕಾಶ ಬಂದೊದಗುತ್ತದೆ ಅಂತ ಅವರೇ ಅಂದುಕೊಂಡಿರಲಿಕ್ಕಿಲ್ಲ. ಇನ್ನು ಮನಮೋಹನ ಸಿಂಗ್ ಅವರ ಕತೆಯೂ ಇದೇ ಅಲ್ಲವೇ? ಹೀಗಾಗಿ ಯಾರೇ ನಾಯಕರಾಗಿ ಮುಂಚೂಣಿಯಲ್ಲಿದ್ದರೂ, ಎಂಥದ್ದೋ ಹವಾ ಇದೆ ಎಂಬ ವಿಶ್ಲೇಷಣೆಗಳು ಎದುರಿಗಿದ್ದರೂ ಭಾರತದ ಪ್ರಧಾನಿ ಇಂಥವರೇ ಆಗಿಬಿಡುತ್ತಾರೆ ಅಂತ ಹೇಳುವುದು ಬಹಳ ಕಷ್ಟ. ಈ ಅಂಶವೇ ನಮ್ಮೆಲ್ಲರಿಗೂ ತೃತೀಯ ರಂಗ, ಪ್ರಧಾನಿ ಪಟ್ಟ ಎಂದೆಲ್ಲ ಕನಸು ಕಾಣುವುದಕ್ಕೆ ಅವಕಾಶ ಮಾಡಿಕೊಟ್ಟಿದೆ. ಹೀಗೆ ಕನಸು ಕಾಣುವ ಅವಕಾಶ ಇದ್ದಾಗ ಸುಮ್ಮನಿರಬಾರದು. ಹಾಗೆಂದೇ ಭಾರತವ್ಯಾಪಿ ಹರವು ನಮ್ಮ ಪಕ್ಷಕ್ಕಿದೆಯೇ ಎಂಬ ಪ್ರಶ್ನೆಗಳನ್ನೆಲ್ಲ ಕೇಳಿಕೊಳ್ಳುವ ಅನಿವಾರ್ಯತೆ ಎದುರಾಗದೇ ನಮ್ಮ ದೇಶದಲ್ಲಿ ಲಾಲು ಪ್ರಸಾದ್, ಮಮತಾ ಬ್ಯಾನರ್ಜಿ, ನಿತೀಶ್ ಕುಮಾರ್, ಮಾಯಾವತಿ, ಮುಲಾಯಂ ಸಿಂಗ್ ಯಾದವ್ ಎಲ್ಲರೂ ನಾವೇಕೆ ಪ್ರಧಾನಿಯಾಗಬಾರದು ಎಂದು ಕನಸು ಕಾಣುತ್ತಲೇ ಇರುತ್ತಾರೆ. ಆ ಪಟ್ಟಿಯಲ್ಲಿ ನಾನೂ ಇದ್ದೀನಿ.
ನಾನು ಪ್ರಧಾನಿಯಾದರೆ ಚೀನಾದವರ ಜತೆ ಜಗಳ ಮಾಡಿ ಟಿಬೇಟ್‌ನಲ್ಲಿ ಹುಟ್ಟುವ ಬ್ರಹ್ಮಪುತ್ರ ನದಿಯನ್ನು ತಮಿಳುನಾಡಿನವರೆಗೆ ಹರಿಸುವ ಯೋಜನೆ ಕೈಗೊಳ್ಳುತ್ತೇನೆ. ದೇಶವನ್ನೂ ತಮಿಳುನಾಡಿನಂತಾಗಿಸುವುದು ಪ್ರಧಾನಿಯಾಗಿ ನನ್ನ ಕನಸು. ಡಿಎಂಕೆಗಾಗಲೀ, ನನ್ನ ಪಕ್ಷಕ್ಕಾಗಲೀ ಇಂಥದೊಂದು ನಿಷ್ಠೆ ಅಂತಿಲ್ಲ. ಜನರೆದುರು ಬೇರೆ ಆಯ್ಕೆಗಳೂ ಇಲ್ಲ ಅಥವಾ ಅವರು ಅಷ್ಟರಮಟ್ಟಿಗೆ ಬೇರೆ ಆಯ್ಕೆಗಳನ್ನು ಹೊಸ್ತಿಲಾಚೆಗೆ ಇಟ್ಟಿದ್ದಾರೆ. ಕರುಣಾನಿಧಿ ಮತ್ತು ನಾನು ಯಾವಾಗ ಯಾವ ಕೂಟ ಸೇರುತ್ತೇವೆ, ಯಾವಾಗ ಯಾರನ್ನು ಹೊಗಳುತ್ತೇವೆ ಎಂಬುದು ಅಯೋವುಯ. ಇಡೀ ದೇಶಕ್ಕೂ ಈ ಗೊಂದಲ ಹರಡಿದರೆ ಎಷ್ಟು ಚೆನ್ನಾಗಿರುತ್ತೆ!  


- ಅಶ್ವಹೃದಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.