ಮಹಿಳಾ ದಿನಾಚರಣೆ ಪುರುಷರ ಸುಧಾರಣೆಗೆ ಕಾರಣವಾಗಲಿ

ಪುರುಷರೆಂದು ಕರೆದುಕೊಳ್ಳಲು ನಾಚಿಕೆಪಟ್ಟುಕೊಳ್ಳುವಂಥ ದಿನಗಳ ಕಡೆಗೆ ಸಾಗುತ್ತಿದ್ದೇವೆಯೇ ಎಂಬ ಅನುಮಾನ ಕಾಡಲಾರಂಭಿಸಿದೆ. ನಮ್ಮೆಲ್ಲರ ಮನೆಗಳಲ್ಲಿ ತಾಯಿ, ಅಜ್ಜಿ, ಅತ್ತೆ, ಅಕ್ಕ, ತಂಗಿ, ಚಿಕ್ಕಮ್ಮ, ದೊಡ್ಡಮ್ಮ, ನಾದಿನಿ, ಸೊಸೆ, ಹೆಂಡತಿ, ಮಗಳು, ಗೆಳತಿ, ಪ್ರೇಯಸಿ ಹೀಗೆ ಹತ್ತು ಹಲವು ಸಂಬಂಧಿಕರಿದ್ದಾಗಲೂ ನಾವೇಕೆ 'ಗಂಡಸರು' ಆಗಿಯೇ ಉಳಿದಿದ್ದೇವೆ? ತಂದೆ, ಅಜ್ಜ, ಮಾವ, ಅಣ್ಣ, ತಮ್ಮ, ಚಿಕ್ಕಪ್ಪ, ದೊಡ್ಡಪ್ಪ, ಭಾವಮೈದುನ, ಅಳಿಯ, ಗಂಡ, ಮಗ, ಗೆಳೆಯ, ಪ್ರಿಯತಮ ಹೀಗೆ ಹತ್ತು ಹಲವು ಸಂಬಂಧಗಳ ವ್ಯಕ್ತಿಗಳಾಗಿಯೂ ನಾವೇಕೆ
'ಗಂಡು' ಆಗಿಯೇ ಉಳಿಯಬೇಕು? ನಮಗೆ ಸುರಕ್ಷೆ ನೀಡಬೇಕಾದ ಮನೆಯೇ ದೌರ್ಜನ್ಯದ ಜಾಗವಾಗುತ್ತಿದೆ ಎಂದು ಏಕೆ ನಮ್ಮ ಅಮ್ಮನಿಂದ ಹಿಡಿದು ಮಗಳವರೆಗೆ, ಹೆಂಡತಿಯರಿಂದ ಹಿಡಿದು ಗೆಳತಿಯವರೆಗೆ ಅಳುತ್ತಿದ್ದಾರೆ. ಅಪ್ಪ, ಚಿಕ್ಕಪ್ಪ, ಮಾವ ಮೊದಲಾದ ಸಂಬಂಧಿಕರಿಂದಲೇ ಸಂಬಂಧಿ ಮಹಿಳೆಯ ಮೇಲೆ ಅತ್ಯಾಚಾರವೆಂಬ ವರದಿಗಳು ಏಕೆ ಪ್ರಕಟವಾಗುತ್ತಿವೆ? ಬಂಧುಗಳನ್ನು ಕಂಡೇ ಬೆದರುವಂತಾಗುತ್ತಿದೆಯೆಂದು ನಮ್ಮ ಹೆಣ್ಣು ಮಕ್ಕಳೇಕೆ ಅಳಲು ತೋಡಿಕೊಳ್ಳುತ್ತಿದ್ದಾರೆ? ಪ್ರಶ್ನೆಗಳ ಸರಮಾಲೆ ಎದುರಾಗುತ್ತವೆ. ಇದು ಕೇವಲ ಹೆಣ್ಣುಮಕ್ಕಳ ಭಯದ ಪ್ರಶ್ನೆಯಲ್ಲ. ಅಪ್ಪ ಮಗಳನ್ನು ಎಲ್ಕೆಜಿಯಿಂದ ಪಿಜಿವರೆಗೆ ಓದಲು ಕಳಿಸಿ ಎಲ್ಲಿ ನನ್ನ ಮಗಳಿಗೆ ಯಾವಾಗ ಯಾವ ಶಿಕ್ಷಕನಿಂದ ತೊಂದರೆಯಾದೀತೋ ಎಂದು ಬೆದರಿದ್ದಾನೆ. ತಾಯಿಯ ಮೂಲಕ ಮಗಳಿಗೆ ಯಾರೇ ಮೈ ಮುಟ್ಟಲು ಬಂದರೂ ಬೇಡಾ ಅನ್ನಬೇಕು ಎಂದು ಎಲ್ಕೆಜಿ ಮಗುವಿಗೆ ಹೇಳಿಕೊಡಿಸುತ್ತಿದ್ದಾನೆ. ಇತ್ತೀಚಿನ ವರದಿಗಳು ಹೆಣ್ಣನ್ನು, ಹೆಣ್ಣು ಹೆತ್ತವರನ್ನೂ ಕಂಗಾಲು ಮಾಡುತ್ತಿವೆ. ಇದನ್ನು ಅರ್ಥ ಮಾಡಿಕೊಳ್ಳದ ಸರ್ಕಾರ, ಸಮಾಜ, ಶಿಕ್ಷಣ, ಧರ್ಮ, ಸಂಸ್ಕೃತಿ ಎಂದು ರೂಪುಗೊಳ್ಳುತ್ತದೆ ಎಂದು ಪ್ರತಿಕ್ಷಣವೂನಾವು ಪ್ರಾರ್ಥಿಸುವಂತಾಗಿದೆ. ಅಣ್ಣನಾಗಿ ನಾವು ನಮ್ಮ ಮನೆಯ ಯಾವ ಹೆಣ್ಣಿಗೂ ಯಾರೂ ತೊಂದರೆ ಕೊಡಬಾರದೆಂದು ಬಯಸುತ್ತೇವೆ. ಅಂಥ ನಾವೇ ಬೇರೆ ಮನೆಯ ಅಪರಿಚಿತ ಹೆಣ್ಣಿಗೂ 'ಗಂಡು' ಎಂಬ ಅಹಂನಿಂದ ಆಕ್ರಮಿಸುತ್ತೇವೆ. ಅದರ ಪರಿಣಾಮವಾಗಿಯೇ ಎಲ್ಲಾ ಧರ್ಮಗಳೂ ಹೆಣ್ಣನ್ನು ಗಂಡಿನ ಕಣ್ಣುಗಳಿಂದ ಕಾಪಾಡಲೇನೋ ಎಂಬಂತೆ ಬುರ್ಖಾ, ಪರದಾ, ಮುಸುಕು ಪದ್ಧತಿಗಳನ್ನು ಸುಟ್ಟಗಾಯದ ಮೇಲೆ ಬರೆ ಎಳೆದು ಉಪ್ಪು ಸುರಿದಂತೆ ಮಾಡಿಬಿಟ್ಟಿವೆ. ರೋಗವಿದ್ದದ್ದು "ಗಂಡಿನ" ಕಣ್ಣಿನಲ್ಲಿ, ಮನಸ್ಸಿನಲ್ಲಿ. ಆದರೆ ಔಷಧಿ ಕೊಟ್ಟದ್ದು "ಹೆಣ್ಣಿನ ಮೈಯಿಗೆ! ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಎಳಿದ್ರು ಅನ್ನೋ ಹಂಗೆ. ಇಂಥ ಪ್ರಯತ್ನಗಳಿಂದ ರೋಗ ಉಲ್ಬಣವಾಗುತ್ತದಷ್ಟೆ. ವಸ್ತ್ರಸಂಹಿತೆ ಎಷ್ಟು ಮುಖ್ಯವೋ ಅದಕ್ಕಿಂತಲೂ ಮನಸ್ಸಿನ ಸಂಹಿತೆ, ಸಂಯಮ ಬಹಳ ಮುಖ್ಯ. ಇಲ್ಲವಾದದ್ದರ ಪರಿಣಾಮ ಮಹಿಳಾ ದೌರ್ಜನ್ಯ ಹಾಗೂ ಅತ್ಯಾಚಾರ.
2012ನೆಯ ಸಾಲಿನಲ್ಲಿ NCRB(National Crime Records Bureau) ನೀಡಿರುವ ವರದಿಯಲ್ಲಿ ಮಹಿಳೆಯರ ಮೇಲೆ ನಡೆದಿರುವ ದೌರ್ಜನ್ಯ ಪ್ರಕರಣಗಳ ಸಂಖ್ಯೆ 244270, (ಶೇ.41.74), ಆಂಧ್ರ 28171, ಅಸ್ಸಾಂ 13544, ಬಿಹಾರ 11229, ಕರ್ನಾಟಕ 10366, ಕೇರಳ 10930, ಮಧ್ಯಪ್ರದೇಶ 16832, ಮಹಾರಾಷ್ಟ್ರ 16353, ಒರಿಸ್ಸಾ 11988, ರಾಜಸ್ತಾನ್ 21106, ಉತ್ತರಪ್ರದೇಶ 23,569, ಪಶ್ಚಿಮ ಬಂಗಾಳ 30942, ದೆಹಲಿ 5959, ಬೆಂಗಳೂರು 2263. ಈ ಪ್ರಕರಣಗಳ ಜೊತೆಗೆ ಬೆಚ್ಚಿ ಬೀಳಿಸುವ ಸಂಗತಿಯೆಂದರೆ ಅತ್ಯಾಚಾರ ಪ್ರಕರಣಗಳು. ನಮ್ಮ ದೇಶದಲ್ಲಿ 2012ರಲ್ಲಿ ಃಈಖಇ ವರದಿ ಪ್ರಕಾರ ದಾಖಲಾದ ಅತ್ಯಾಚಾರ ಪ್ರಕರಣಗಳ ಸಂಖ್ಯೆ 24923. ಅಪಹರಣಕ್ಕೊಳಗಾದ ಮಹಿಳೆಯರ ಸಂಖ್ಯೆ 38262, ವರದಕ್ಷಿಣೆ ಸಾವಿನ ಸಂಖ್ಯೆ 8233, ಗಂಡ ಹಾಗೂ ಗಂಡನ ಮನೆಯ ಸಂಬಂಧಿಕರಿಂದ ನಡೆದಿರುವ ದೌರ್ಜನ್ಯ, ಕಿರುಕುಳ ಪ್ರಕರಣಗಳ ಸಂಖ್ಯೆ 106527. ರಕ್ತ ಸಂಬಂಧಿಕರಿಂದಲೇ ನಡೆದಿರುವ ಅತ್ಯಾಚಾರ ಪ್ರಕರಣಗಳ ಸಂಖ್ಯೆ (Incest Rape) 392. ಇತರೆ ಅತ್ಯಾಚಾರ ಪ್ರಕರಣಗಳಲ್ಲಿ ಹತ್ತು ವರ್ಷದ ಒಳಗಿನ ಮಕ್ಕಳ ಮೇಲೆ 1872, 14ರಿಂದ 18 ವಯೋವಾನದ ಮಕ್ಕಳ ಮೇಲೆ 5608, 18 ರಿಂದ 30 ವರ್ಷದವರ ಮೇಲೆ 12191, 30ರಿಂದ 50 ವರ್ಷದ ನಡುವಯಸ್ಕ ಮಹಿಳೆಯರ ಮೇಲೆ 3100, 50 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರ ಮೇಲೆ 125 ಅತ್ಯಾಚಾರ ಪ್ರಕರಣಗಳು ನಡೆದು ದಾಖಲಾಗಿವೆ. ಹತ್ತು ವರ್ಷದೊಳಗಿನ ಅಂದರೆ ನಾಲ್ಕನೆಯ ತರಗತಿ ಓದುವ ಒಳಗಿನ ಕುಂಟಾಬಿಲ್ಲೆ ಆಡುವ 902 ಮಕ್ಕಳು, 'ಗಂಡು ಮೃಗ'ಗಳ ಕಾಮದಾಹಕ್ಕೆ ಬಲಿಯಾಗಿರುವ ಸುದ್ದಿ ಕೇಳಿ ಯಾವ ತಂದೆ, ಅಣ್ಣ, ತಮ್ಮ, ಅಜ್ಜ, ಮಾವ, ಗಂಡ, ಗೆಳೆಯ, ಶಿಕ್ಷಕ, ಶಾಸಕ, ಅಧಿಕಾರಿ, ನ್ಯಾಯಾಧೀಶ, ಪತ್ರಕರ್ತ, ಸ್ವಾಮೀಜಿ, ಸಮಾಜದ ಚಿಂತಕರು ಸುಮ್ಮನೆ ಇರಬಲ್ಲರು? ಅವರ ಕಣ್ಣೊಳಗೆ ನೀರು, ಎದೆಯೊಳಗೆ ಬೆಂಕಿ, ಮನದೊಳಗೆ ತಲ್ಲಣ, ಮೆದುಳಿನೊಳಗೆ ಬದಲಾವಣೆಯ ಬಿರುಗಾಳಿ ಮೂಡದಿದ್ದರೆ ಅವರನ್ನು ಮನುಷ್ಯರು ಎಂದು ಹೇಳಲಾದೀತೆ? ಮಾರ್ಚ್ 8ನೆಯ ತಾರೀಕು ಬಂದಿದೆ. ವಿಶ್ವದ ಮಹಿಳಾ ದಿನಾಚರಣೆಯನ್ನು ಮಹಿಳೆಯರು ಸೇರಿ ಆಚರಿಸುತ್ತಿದ್ದಾರೆ. ಆದರೆ ಬರುವ ದಿನಗಳಲ್ಲಿ ಪುರುಷರು ಮಾರ್ಚ್ 8 ಮಹಿಳಾ ದಿನಾಚರಣೆಯನ್ನು ಆಚರಿಸುವಂತಾಗಲಿ. ಅಂಥ ಪರಿವರ್ತನೆಯ ಪ್ರಯತ್ನ ಮಹಿಳಾವಾದಿಗಳಿಂದಾಗಲಿ. 'ಪುರುಷರೆಲ್ಲಾ ರಾಕ್ಷಸರು' ಎಂಬ ದ್ವೇಷದ ಬೀಜವನ್ನು ಎಷ್ಟೇ ನೋವಾಗಿದ್ದರೂ ಬಿತ್ತದಿರಲಿ. ಪುರುಷರೆಲ್ಲಾ ಮೊದಲು ಮನುಷ್ಯರಾಗಲಿ ಎಂಬ ಹಾರೈಕೆ ಅಮೃತದ ಮಳೆಯನ್ನು ಕರೆಯಲಿ ಎಂದು ಯಾವ ಮುಖ ಹೊತ್ತು ಪ್ರಾರ್ಥಿಸಲಿ ಎಂಬ ಸಂಕೋಚ ಎದೆಯನ್ನು ಹಿಂಡಿ ದೀನವದನದಲ್ಲಿ ನೊಂದ ಸೋದರಿಯರ ಮುಂದೆ ಮಂಡಿಯೂರಿ ಕೈ ಮುಗಿಯುವಂತೆ ಮಾಡಿದೆ. ಹೆತ್ತು, ಹೊತ್ತು, ಸಾಕಿ, ಸಲಹಿದ ಹೆಣ್ಣಿಗೆ, ತಾಯಿಗೆ, ಆದಿಶಕ್ತಿಗೆ, ಜಗದಂಬೆಗೆ ಕೈ ಮುಗಿಯೋಣ. ಶರಣು ಶರಣಾರ್ಥಿ ಎನ್ನೋಣ. 'ಮಹಿಳಾ ದಿನಾಚರಣೆ' "ಅಕ್ಕಮಹಾದೇವಿಯ ದಿನಾಚರಣೆ"ಯಾಗಲಿ ಎಂದು ಹಾರೈಸೋಣ.
ಹೌದು. ಹೆಣ್ಣಿನ ಮೇಲಿನ ದೌರ್ಜನ್ಯ ಇಂದು ನಿನ್ನೆಯದಲ್ಲ. ವೇದ ಕಾಲದಲ್ಲಿ ಸಬಲಳಾಗಿದ್ದ ಹೆಣ್ಣು, ವೇದ ಪೂರ್ವ ಕಾಲದಲ್ಲಿ ಶಾಕ್ತಧರ್ಮದ, ಮಾತೃ ಪ್ರಧಾನ ವ್ಯವಸ್ಥೆಯ 'ಮಾತೃದೇವತೆ'ಯಾಗಿದ್ದ ಹೆಣ್ಣು, ಕಾಲದ ತುಳಿತಕ್ಕೆ ಸಿಲುಕಿ "ಮಾಯೆ" ಎಂದು ಕರೆಯಲ್ಪಟ್ಟಳೋ ಅಂದಿನಿಂದಲೇ ಶುಂಭ ನಿಶುಂಭಾದಿಗಳನ್ನು -ಹರಿಹರ ಬ್ರಹ್ಮಾದಿಗಳಿಂದಲೂ ಸಂಹಾರ ಮಾಡಲಾಗದಿದ್ದ -ರಾಕ್ಷಸರನ್ನು ಸಂಹಾರ ಮಾಡಿದ ಚಾಮುಂಡೇಶ್ವರಿ, ಜಗದಂಬೆ, ಆದಿಶಕ್ತಿಯು ಪುರುಷ ಪ್ರಧಾನ ವ್ಯವಸ್ಥೆ ರೂಪಿಸಿದ ವೈಚಾರಿಕ, ಸೈದ್ಧಾಂತಿಕ, ಧಾರ್ಮಿಕ ಮೋಸದ ಕಾರಣದಿಂದಾಗಿ ಮಾಯೆ ಎಂದು ಕರೆಯಲ್ಪಟ್ಟಳು. ಮಾಯೆ ಎಂದರೆ ಸುಳ್ಳು, ಮಿಥ್ಯೆ ಎಂದರ್ಥ. ಯಾವ ಭಾರತದ ಸನಾತನ ಸರ್ವಶ್ರೇಷ್ಠ ಹಿಂದೂ ಧರ್ಮದ ವೇದಾಂತವು ದ್ಯಾವ ಪೃಥ್ವಿ ಸಂಬಂಧದಲ್ಲಿ ಹೆಣ್ಣು ಗಂಡು ಒಂದಾಗಿರಬೇಕೆಂಬ ಸತ್ಯವನ್ನು ಸಾರಿತ್ತೋ, ಯಾವ ಸಾಂಖ್ಯ ದರ್ಶನವು ಪ್ರಕೃತಿ-ಪುರುಷ ಎಂಬ ಪರಿಕಲ್ಪನೆಗಳ ಹಿನ್ನೆಲೆಯಲ್ಲಿ ಗಂಡು ಹೆಣ್ಣಿನ ಮಿಲನದ ಯೋಗವನ್ನು ಪ್ರತಿಪಾದಿಸಿತ್ತೋ, ಯಾವ ಶಾಕ್ತಧರ್ಮವು ಶಿವ ಎಂದರೆ ಜಡ ಶಿವೆ ಎಂದರೆ ಚೈತನ್ಯ. ಶಿವೆಯ ಕಾರಣದಿಂದ ಶಿವನೂ ಸಚೇತನನಾಗುತ್ತಾನೆ. ಕಲೆ ಅರ್ಥಾತ್ ಪಾರ್ವತಿಯನ್ನು ಹೊಂದಿ "ಸಕಲ" ನಾಗುತ್ತಾನೆ. "ಸಕಲ ಕಲಾ ವಲ್ಲಭನಾಗುತ್ತಾನೆ" ಎಂದಿತ್ತೋ ಅದೆಲ್ಲವನ್ನೂ ಬುಡಮೇಲು ಮಾಡಿದಂಥ ಪುರುಷ ರಾಜಕಾರಣದ ಫಲವಾಗಿ ಹೆಣ್ಣು-ಪ್ರಕೃತಿ-ಪೃಥ್ವಿಯನ್ನು ಮಾಯೆ ಎಂದು ಸಾರಲಾಯಿತು. ತನ್ನ ಕಚ್ಚೆಯನ್ನು ಕೆಚ್ಚನ್ನು ಭದ್ರವಾಗಿರಿಸಿಕೊಳ್ಳಲಾಗದ ವಿಶ್ವಾಮಿತ್ರರಂಥರ ಚಂಚಲರ ಸೋಲಿನ ಸತ್ಯವನ್ನು ಒಪ್ಪಿಕೊಳ್ಳಲಾರದ ಗಂಡು ಹೆಣ್ಣನ್ನು ಚಂಚಲೆ ಎಂದನು. ಮಾಯೆ ಎಂದನು. ಕಾಡಿಗೆ, ಹಿಮಾಲಯಕ್ಕೆ ಓಡಿ ಹೋಗುವ ಪಲಾನಯನವನ್ನು ಮಾಡಿದನು. ಆದರೆ ಇದೇ ನೆಲದಲ್ಲಿ ಯೋನಿಯನ್ನು ಪೂಜೆ ಮಾಡಿದ ಲಜ್ಜಾಗೌರಿಯ ಆರಾಧನೆಯನ್ನು ಶಾಕ್ತ ಪರಂಪರೆಯೂ ಇತ್ತು. ತಂತ್ರ ಸಾಧನಾ ಮಾರ್ಗವೂ ಇತ್ತು. ಇಂದಿಗೂ ಲುಪ್ತವಾಗಿ 'ಶ್ರೀ ವಿದ್ಯಾ' 'ಶ್ರೀ ಚಕ್ರ' ಆರಾಧನೆಯ ಸಾಂಪ್ರದಾಯಿಕ ಕರ್ಮಕಾಂಡವಾಗಿ ಉಳಿದಿದೆ. ಆದರೆ ಜಾತಿ ಪದ್ಧತಿಯನ್ನು ಒಪ್ಪದ, ಅಸ್ಪೃಶ್ಯತೆಯೇ ಇಲ್ಲದ, ಲಿಂಗತಾರತಮ್ಯವಿಲ್ಲದಂಥ ಹೆಣ್ಣನ್ನು ಮಾಯೆ ಎಂದು ಕರೆಯದೆ 'ಸತ್ಯ' ಎಂದು ಕರೆದು ಸಾಬೀತುಪಡಿಸಿದ್ದ. ಶಾಕ್ತಧರ್ಮ ಸರ್ವನಾಶವಾಗಿ ಹೋಗಿದೆ. ಯೋಗಿಗೆ ಯಾಗಿಣಿಯಾಗಿ ಕಾಡಿತ್ತು. ಮಾಯೆ ಎಂದಾಗಿ ದೇವದಾಸಿ, ಬಸವಿ ಪದ್ಧತಿಯಾಗಿ ಕೊಚ್ಚೆಗುಂಡಿಯಾಗಿ ಹೋಗಿದೆ. ಮಧ್ಯಕಾಲೀನ ಭಾರತದಲ್ಲಿ ಕ್ರೂರ ಮೊಗಲರ ಅಮಾನವೀಯ ದಾಳಿಗಳ ಪರಿಣಾಮ ರಾಣಿ ಪದ್ಮಿನಿಯಂಥವರು ಸಾವಿರಾರು ಸಖಿಯರೊಂದಿಗೆ ಚಿತೆಗೆ ಹಾರಿ ಪ್ರಾಣಬಿಟ್ಟ, ತೊಟ್ಟಿಲಲ್ಲೇ ಮದುವೆಯಾದ, ಮತಾಂತರಕ್ಕೆ ಒಳಗಾಗದಂಥ ಅತ್ಯಾಚಾರಕ್ಕೆ ಒಳಗಾಗದಂಥ ಮತಾಂಧ ಶಕ್ತಿಗಳ ಕ್ರೂರ ನರ್ತನಕ್ಕೂ ಭಾರತದ ಮಹಿಳೆ ಮೂಕಪಶುವಿನಂತೆ ಬಲಿಯಾಗಿದ್ದಾಳೆ. ಆಧುನಿಕ ಕಾಲದ ಜಾಗತೀಕರಣದ ಸರಕು ಸಂಸ್ಕೃತಿಯ ಜಾಹೀರಾತುಗಳಲ್ಲಿ ಮೈ ತೋರಿಸುವ ಯಂತ್ರವಾಗಿ ದುರ್ಬಳಕೆಯಾಗುತ್ತಿದ್ದಾಳೆ. ಪುರುಷ ಸಿದ್ಧಾಂತಿಗಳು, ವಿದ್ವಾಂಸರು, ರಾಜರು, ವ್ಯಾಪಾರಿಗಳು, ಕೊನೆಗೆ ಮನೆಯ ಜನರೂ ಕಾಲನ್ನು ಒರೆಸುವ ರಗ್ಗಿನಂತೆ ಹೆಣ್ಣನ್ನು ನಮ್ಮನ್ನು ನಾವು ಗಂಡಸರು ಎಂದುಕೊಳ್ಳಲು ನಾಚಿಕೆಯಾಗಬೇಕಲ್ಲವೇ?
ಈ ಎಲ್ಲ ಕೇಡುಗಳ ನಡುವೆಯೂ ಹೆಣ್ಣು ಮಕ್ಕಳ ಮಾನ ಪ್ರಾಣಗಳ ಸಂರಕ್ಷಣೆಗಾಗಿ ಹೋರಾಡಿ ದುಷ್ಟರನ್ನು ಕೊಂದು ತಾನು ಸತ್ತು ವೀರಸ್ವರ್ಗ ಸೇರಿದ "ಪೆಣ್ಣೋಳ್ ಶಾಸನ" ಎಂಬ ಸಾವಿರ ಸಾವಿರ ಸಂಖ್ಯೆಯ ವೀರಗಲ್ಲುಗಳು ಕರ್ನಾಟಕದಾದ್ಯಂತವೂ ದೊರಕುತ್ತವೆ. "ಗಂಡು ಗಂಡಾದೆಡೆ ಹೆಣ್ಣಿನ ಸೂತಕ ಹೆಣ್ಣು ಹೆಣ್ಣಾದೆಡೆ ಗಂಡಿನ ಸೂತಕ "ಸಾವಿಲ್ಲದ, ಕೇಡಿಲ್ಲದ, ರೂಹಿಲ್ಲದ ಚಲವಂಗಾನೊಲಿದೆನವ್ವ ಸಾವ ಕೆಡುವ ಗಂಡರನ್ನೊಯ್ದು ಒಲೆಯೊಳಗಿಳಕ್ಕು" ಎಂದು "ಸಾವಿಲ್ಲದ, ಕೇಡಿಲ್ಲದ, ರೂಹಿಲ್ಲದ ಚಲುವರು" ಬೇಕೆ ಹೊರತು ಹೆಣ್ಣಿಗೆ ಸಾವು ತರುವ ತಾವೂ ಸಾಯುವ ಕೇಡಿಗ 'ಗಂಡರು' ಬೇಡ ಎಂಬ ಕರೆ ನಾಡಿನ ಹೆಂಗಸರಿಗಲ್ಲ ದೇಶದ ಗಂಡಸರಿಗೇ ಎಂದು ನಾವು ಅರ್ಥಮಾಡಿಕೊಳ್ಳಬೇಕಿದೆ. "ಹೆಣ್ಣು ಮಾಯೆ ಎಂಬರು ಹೆಣ್ಣು ಮಾಯೆ ಅಲ್ಲ" ಎಂಬ ಅಲ್ಲಮನ ಮಾತು "ಗಡ್ಡ ಮೀಸೆ ಬಂದೆಡೆ ಗಂಡೆಂಬರಯ್ಯಾ /ಮೊಲೆ ಮೂಡಿ ಬಂದೆಡೆ ಹೆಣ್ಣೆಂಬರಯ್ಯ ಇವರೀರ್ವರ ನಡುವೆ ಸುಳಿವ ಆತ್ಮ ಹೆಣ್ಣೂ ಅಲ್ಲ ಗಂಡೂ ಅಲ್ಲ ಕಾಣಾ ರಾಮನಾಥ" ಎಂಬ ದೇವರದಾಸಿಮಯ್ಯನ ಮಾತು ಎಂದೆಂದಿಗೂ ಸತ್ಯವೆಂದು ಎಲ್ಲ ಕಾಲದ ಹೆಣ್ಣು ಗಂಡುಗಳು ಅರಿಯಬೇಕು. ಗಂಡಸರು ಗಂಡಸರಾಗದೆ ಚೆಲುವರಾಗಲಿ. ಅದೂ ಸಾವಿಲ್ಲದ ಸಾಯಿಸದ, ಅತ್ಯಾಚಾರವೆಸಗದ, ವಿಚ್ಛೇದನವಿಲ್ಲದ, ಕೇಡಿಲ್ಲದ ಕಲ್ಯಾಣದ ಬದುಕನ್ನು ಕಟ್ಟಿಕೊಳ್ಳಬಹುದಾದ ಚಲುವರಾಗಲಿ. 'ಸತ್ಯಂ -ಶಿವಂ-ಸುಂದರಂ' ಮಾತಾಗದೆ ಅನುಭೂತಿಯಾಗಲಿ. "ಸತಿ-ಪತಿಗಳೊಂದುದ ಭಕ್ತಿ ಹಿತವಪ್ಪುದು ಶಿವಂಗೆ". ಕಾಮವು ಕ್ರೌರ್ಯವಾಗದೆ ಪ್ರೇಮವಾಗಲಿ, ಭಕ್ತಿಯಾಗಲಿ.
-ಡಾ. ಬಿ.ವಿ. ವಸಂತಕುಮಾರ್
bvvasanthakumar@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


