ನಾವು ಆನಂದದಿಂದ ಇರುವುದು ಹೇಗೆ?

ಆಮ್ ಆದ್ಮಿ ಪಕ್ಷ ಹಾಗೂ ಅದರ ನೇತಾರ ಅರವಿಂದ ಕೇಜ್ರಿವಾಲ ಒಂದಿಲ್ಲೊಂದು...
Updated on: 

ಕಳೆದ ನಾಲ್ಕೈದು ತಿಂಗಳುಗಳಿಂದ ಆಮ್ ಆದ್ಮಿ ಪಕ್ಷ ಹಾಗೂ ಅದರ ನೇತಾರ ಅರವಿಂದ ಕೇಜ್ರಿವಾಲ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಅವರ ಬಗ್ಗೆ ಅಲ್ಲಲ್ಲಿ ಜೋಕುಗಳೂ ಹುಟ್ಟಿಕೊಳ್ಳುತ್ತಿವೆ. ಇಲ್ಲಿವೆ ಎರಡು ಹೊಸ ಜೋಕುಗಳು.

ನೀವು ಟ್ವಿಟರ್ ಪ್ರಿಯರಾದರೆ ಏಕಾಂಗಿ ಅಲ್ಲ. ಯಾರಾದರೂ ನಿಮ್ಮನ್ನು ತಾಸುಗಟ್ಟಲೆ ಕಾಯಿಸಿದರೆ, ನೀವು ಟ್ವಿಟರ್‌ಪ್ರಿಯರಾದರೆ ಬೇಸರವಾಗುವುದಿಲ್ಲ. ಸಮಯ ವ್ಯರ್ಥವಾಯಿತು ಎಂದು ಕೋಪ ಬರುವುದಿಲ್ಲ. ನೀವು ಟ್ವಿಟರ್‌ನಲ್ಲಿ ಎಂಗೇಜ್ ಆಗಿರಬಹುದು. ಟ್ವಿಟರ್‌ನಲ್ಲಿ ನೀವು ಎಷ್ಟು ಜನರನ್ನು ಫಾಲೋ ಮಾಡುತ್ತೀರೋ, ಎಷ್ಟು ಜನ ನಿಮ್ಮನ್ನು ಫಾಲೋ ಮಾಡುತ್ತಾರೋ ಅವರೆಲ್ಲರ ಜತೆಗೆ ನೀವು 'ಮೌನ' ಮಾತುಕತೆಯಲ್ಲಿ ನಿರತರಾಗಿರುತ್ತೀರಿ. ಆದ್ದರಿಂದ waiting is a pleasure.ಕಾಯುವುದರಲ್ಲೂ ಮಹದಾನಂದವಿದೆ.
ಇಂದು  Life Pro Tips ಎಂಬ ಟ್ವೀಟ್‌ನಲ್ಲಿ ಕಂಡ "How can we be happy?' ಎಂಬ ಪುಟ್ಟ ಪ್ರಸಂಗವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಇದು ನಿಮಗೂ ಇಷ್ಟವಾಗಬಹುದು.
ಒಮ್ಮೆ ಸುಮಾರು ಐವತ್ತು ಮಂದಿ ಒಂದು ಸೆಮಿನಾರ್‌ನಲ್ಲಿ ಪಾಲ್ಗೊಂಡಿದ್ದರು. ಏಕಾಏಕಿ ಭಾಷಣಕಾರ ತನ್ನ ಮಾತನ್ನು ನಿಲ್ಲಿಸಿ, 'ನಿಮ್ಮೆಲ್ಲರಿಗೂ ಒಂದು ಕೆಲಸ ಕೊಡುತ್ತೇನೆ. ನಾನು ಹೇಳಿದಂತೆ ಮಾಡಿ' ಎಂದ. 'ನಾನು ನಿಮ್ಮೆಲ್ಲರಿಗೂ ಒಂದೊಂದು ಬಲೂನ್ ಕೊಡುತ್ತೇನೆ. ನೀವೆಲ್ಲರೂ ಪೆನ್ನಿಂದ ನಿಮ್ಮ ನಿಮ್ಮ ಹೆಸರನ್ನು ಬಲೂನಿನ ಮೇಲೆ ಬರೆಯಬೇಕು. ಆನಂತರ ನಾನು ಅವನ್ನೆಲ್ಲ ಸಂಗ್ರಹಿಸಿ ಬೇರೊಂದು ರೂಮಿನಲ್ಲಿಡುತ್ತೇನೆ. ಆಗಬಹುದಾ?' ಎಂದು ಕೇಳಿದ. ಎಲ್ಲರೂ ಆಯಿತೆಂಬಂತೆ ತಲೆಯಾಡಿಸಿದರು. ಎಲ್ಲರಿಗೂ ಒಂದೊಂದು ಬಲೂನ್ ಕೊಡಲಾಯಿತು. ಅವರು ಅದರ ಮೇಲೆ ತಮ್ಮ ಹೆಸರನ್ನು ಬರೆದುಕೊಟ್ಟರು. ಅವನ್ನೆಲ್ಲ ಸಂಗ್ರಹಿಸಿ ಬೇರೊಂದು ರೂಮಿನಲ್ಲಿಡಲಾಯಿತು.
ಐವತ್ತು ಮಂದಿ ಶಿಬಿರಾರ್ಥಿಗಳನ್ನು ಬಲೂನ್ ಇಟ್ಟ ರೂಮಿನೊಳಗೆ ಬಿಡಲಾಯಿತು. 'ನಿಮ್ಮ ಹೆಸರು ಬರೆದಿರುವ ಬಲೂನನ್ನು ಐದು ನಿಮಿಷಗಳೊಳಗೆ ಹುಡುಕಬೇಕು' ಎಂದು ಹೇಳಿದಾಗ, ಒಂದೇ ಸಮನೆ ನೂಕಾಟ, ತಳ್ಳಾಟ ಆರಂಭವಾಯಿತು. ಎಲ್ಲರೂ ತಮ್ಮ ಹೆಸರು ಬರೆದಿರುವ ಬಲೂನ್ ಹುಡುಕಲು ಮುಗಿಬೀಳಲಾರಂಭಿಸಿದರು. ಕೆಲವರು ಬಿದ್ದರು. ಬಿದ್ದವರನ್ನು ತುಳಿದರು. ಬಿದ್ದವರ ಎಡತಾಕಿ ಮತ್ತಷ್ಟು ಜನ ಬಿದ್ದರು. ಬಿದ್ದವರನ್ನು ಮೇಲೇಳದಂತೆ ಕೆಲವರು ತಡೆದರು. ಆ ರೂಮಿನೊಳಗೆ ಹೊಡೆದಾಟ, ಬಡಿದಾಟ ನಡೆಯುತ್ತಿರಬಹುದೆಂಬ ಗುಮಾನಿ ಬರುವಂಥ ವಾತಾವರಣ.
ಐದು ನಿಮಿಷಗಳ ನಂತರ...
ಯಾರಿಗೂ ತಮ್ಮ ಹೆಸರು ಬರೆದಿರುವ ಬಲೂನು ಸಿಗಲಿಲ್ಲ.
ಆಗ ಅವರೆಲ್ಲರಿಗೂ 'ಒಂದು ಕೆಲಸ ಮಾಡಿ, ನೀವು ನಿಮ್ಮ ಹೆಸರು ಬರೆದಿರುವ ಬಲೂನನ್ನೇ ಸಂಗ್ರಹಿಸಬೇಕಿಲ್ಲ. ಯಾರ ಹೆಸರನ್ನು ಬರೆದಿರುವ ಬಲೂನ್ ಆದರೂ ಆಗಬಹುದು. ಒಂದನ್ನು ಸಂಗ್ರಹಿಸಿ ಅದರ ಮೇಲೆ ಯಾರ ಹೆಸರು ಬರೆದಿದೆಯೋ ಅವರಿಗೆ ಕೊಡಿ' ಎಂಬ ಸೂಚನೆ ನೀಡಲಾಯಿತು.
ಒಂದು ನಿಮಿಷದೊಳಗೆ ಎಲ್ಲರ ಕೈಯಲ್ಲೂ ಅವರ ಹೆಸರು ಬರೆದಿರುವ ಬಲೂನ್ ಇತ್ತು!
ಆಗ ಭಾಷಣಕಾರ ಹೇಳಿದ-'ನಮ್ಮ ಜೀವನವೂ ಹೀಗೇ. ಎಲ್ಲರೂ ಆನಂದ, ಸಂತಸಕ್ಕಾಗಿ ಎಲ್ಲೆಡೆ ಹುಡುಕುತ್ತಿರುತ್ತಾರೆ. ಅದು ಎಲ್ಲಿದೆಯೆಂಬುದನ್ನು ಅರಿಯದೇ ಹುಡುಕುತ್ತಿರುತ್ತಾರೆ. ಆದರೆ ನಮ್ಮ ಸಂತಸ ಬೇರೆಯವರ ಸಂತಸದಲ್ಲಿ  ಅಡಗಿದೆಯೆಂಬುದು ಗೊತ್ತೇ ಆಗುವುದಿಲ್ಲ. ನಾವು ಬೇರೆಯವರ ಸಂತಸವನ್ನು ಅವರಿಗೆ ಕೊಟ್ಟರೆ ನಮ್ಮ ಸಂತಸ ನಮಗೆ ಸಿಕ್ಕೇ ಸಿಗುತ್ತದೆ. ಅಷ್ಟಕ್ಕೂ ನಮ್ಮ ಜೀವನದ ಪರಮ ಉದ್ದೇಶವೇ ಇದು.'
ಕ್ರೇಜಿ ಜಗತ್ತಿನ ಜೋಕು ಜೋಕಾಲಿ
ಟೇಬಲ್ ಮೇಲಿಟ್ಟ ವಿಸ್ಕಿ ಬಾಟಲ್ ನೆಲಕ್ಕೆ ಬಿದ್ದು 'ಠಳ್‌' ಎಂದು ಒಡೆದು ಹೋಯಿತು. ಮೂರು ಇಲಿಗಳು ಬಂದು ಈ ವಿಸ್ಕಿಯನ್ನು ಒಂದು ಹನಿ ಬಿಡದಂತೆ ನೆಕ್ಕಿಬಿಟ್ಟವು. ಕೊನೆಹನಿ ನೆಕ್ಕಿ ಸಾಫ್ ಮಾಡುವ ಹೊತ್ತಿಗೆ ಮೂರೂ ಇಲಿಗಳು ಪೂರ್ತಿ ಟೈಟ್ ಆಗಿದ್ದವು.
'ಈ ಸಲ ಹಾಸನದಿಂದ ಟಿಕೆಟ್ ಕೇಳಿದ್ದೇನೆ. ಯಾವ ಪಕ್ಷವಾದರೂ ಸೈ, ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಸೆಣೆಸಿ ಅವರನ್ನು ಸೋಲಿಸಿದ್ದೇ ಖರೆ' ಎಂದು ಹೇಳಿತು ಮೊದಲ ಇಲಿ.
ಎರಡನೆಯ ಇಲಿ, 'ನೋಡ್ತಾ ಇರು, ನಾನು ಈ ಸಲ ಬೆಂಗಳೂರು ದಕ್ಷಿಣದಿಂದ ಸ್ಪರ್ಧಿಸುತ್ತೇನೆ. ನೀನು ಒಬ್ಬರನ್ನು ಸೋಲಿಸಿದರೆ ನಾನು ಅನಂತಕುಮಾರ್ ಹಾಗೂ ನಂದನ್ ನಿಲೇಕಣಿಯರಿಬ್ಬರನ್ನೂ ಸೋಲಿಸುತ್ತೇನೆ' ಎಂದಿತು.
ಮೂರನೆಯ ಇಲಿ ಬಾಯಿಂದ ತೊಟ್ಟಿಕುತ್ತಿದ್ದ ವಿಸ್ಕಿಯನ್ನು ಒರೆಸಿಕೊಳ್ಳುತ್ತಾ, ಹೇಳಿತು-'ಅಪಾಯಿಂಟ್‌ಮೆಂಟ್ ಇಲ್ಲದೇ ಬಂದಿದ್ದಕ್ಕೆ ನರೇಂದ್ರ ಮೋದಿ ಹೊರಕಳಿಸಿದರೆ ಆ ಅರವಿಂದ ಕೇಜ್ರಿವಾಲ ನನ್ನ ಮನೆ ಮುಂದೆ ಬಂದಿದ್ದಾನಂತೆ. ತಾಳಿ, ಅವನನ್ನು ವಿಚಾರಿಸಿಕೊಂಡು ಬರ್ತೀನಿ.'
---
ಅರವಿಂದ ಕೇಜ್ರಿವಾಲ ತಮ್ಮ ಪಕ್ಷದ ನಾಯಕರನ್ನು ಕರೆದು 'ಮೆಣಸಿನ ಪುಡಿಯನ್ನು ಬೆಕ್ಕಿಗೆ ತಿನ್ನಿಸಬೇಕಾಗಿದೆ. ಏನು ಮಾಡುವುದು? ನಿಮ್ಮಲ್ಲಿ ಐಡಿಯಾಗಳಿದ್ದರೆ ಹೇಳಿ' ಎಂದರಂತೆ.
'ಎರಡು ಮಾರ್ಗಗಳಿವೆ' ಅಂದರಂತೆ ಅಶುತೋಷ್. 'ಮೊದಲನೆಯ ಮಾರ್ಗ ಅಂದ್ರೆ ಬಲಾತ್ಕಾರವಾಗಿ ಮೆಣಸಿನಪುಡಿಯನ್ನು ಬೆಕ್ಕಿನ ಬಾಯಿಗೆ ತುರುಕಿ ತಿನ್ನಿಸುವುದು ಹಾಗೂ ಎರಡನೆಯದು, ಮೀನಿನ ಮೈಯಿಗೆ ಮೆಣಸಿನಪುಡಿಯನ್ನು ಸವರಿ, ಬೆಕ್ಕಿನ ಮುಂದಿಟ್ಟು ಅದನ್ನು ತಿನ್ನುವಂತೆ ಮಾಡುವುದು' ಎಂದು ಸಲಹೆ ಕೊಟ್ಟರಂತೆ.
'ತಪ್ಪು ತಪ್ಪು' ಎಂದರಂತೆ ಕೇಜ್ರಿವಾಲ. 'ನಿಮ್ಮ ಸಲಹೆ ಯಾಕೋ ನಮ್ಮ ಸಿದ್ಧಾಂತಕ್ಕೆ ಸರಿ ಬರೊಲ್ಲ. ಕಾರಣ ಮೊದಲನೆಯದು ಬಲವಂತದ ಮಾರ್ಗ ಹಾಗೂ ಎರಡನೆಯದು ಮೋಸದ ಮಾರ್ಗ. ಇವೆರಡೂ ಆಮ್ ಆದ್ಮಿ ಪಕ್ಷದ ಧೋರಣೆಗೆ ವಿರುದ್ಧವಾದುದು' ಎಂದರಂತೆ ಕೇಜ್ರಿವಾಲ.
ಆಗ ಅಶುತೋಷ್ 'ಕೇಜ್ರಿವಾಲಜೀ, ಹಾಗಾದರೆ ನೀವೇ ಹೇಳಿ. ನಮಗೆ ಬೇರೆ ಯಾವ ಐಡಿಯಾಗಳು ತೋಚುತ್ತಿಲ್ಲ' ಎಂದು ಹೇಳಿದರಂತೆ.
ಆಗ ಕೇಜ್ರಿವಾಲ ಹೇಳಿದರಂತೆ-'ಮೆಣಸಿನಪುಡಿಯನ್ನು ಬೆಕ್ಕಿನ ಬಾಲಕ್ಕೆ ಸವರಬೇಕು. ಆಗ ಅದರ ಬಾಲ ಉರಿಯಲಾರಂಭಿಸುತ್ತದೆ. ತಕ್ಷಣ ಬೆಕ್ಕು ತನ್ನ ಬಾಲವನ್ನು ನೆಕ್ಕಲಾರಂಭಿಸಿರುತ್ತದೆ. ಬೆಕ್ಕು ಸ್ವಪ್ರೇರಣೆಯಿಂದ ಮೆಣಸಿನ ಪುಡಿಯನ್ನು ತಿಂದಂತಾಯಿತು ಹೌದು ತಾನೇ?'
ಅದಕ್ಕೆ ಆಪ್‌ನಾಯಕರೆಲ್ಲ 'ಹೌದೌದು, ಹೌದೌದು' ಎಂದು ತಲೆಯಾಡಿಸಿದರಂತೆ.
ಕಳೆದ ನಾಲ್ಕೈದು ತಿಂಗಳುಗಳಿಂದ ಆಮ್ ಆದ್ಮಿ ಪಕ್ಷ ಹಾಗೂ ಅದರ ನೇತಾರ ಅರವಿಂದ ಕೇಜ್ರಿವಾಲ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಅವರ ಬಗ್ಗೆ ಅಲ್ಲಲ್ಲಿ ಜೋಕುಗಳೂ ಹುಟ್ಟಿಕೊಳ್ಳುತ್ತಿವೆ. ಇಲ್ಲಿವೆ ಎರಡು ಹೊಸ ಜೋಕುಗಳು.

ನನ್ನ ಹುಡುಗಿ ಯಾರು?
ತಾನು ಒಂದು ಹುಡುಗಿಯನ್ನು ಪ್ರೀತಿಸುತ್ತಿರುವ ವಿಷಯವನ್ನು ತಾಯಿಗೆ ಹೇಳಬೇಕೆಂದು ಮಗನಿಗೆ ಅತೀವ ಆಸೆಯಾಯಿತು. ಅದೇ ಉದ್ವೇಗದಲ್ಲಿ ತಾಯಿಯ ಬಳಿ ಹೋದ ಆತ, 'ಅಮ್ಮ, ನಾನು ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದೇನೆ. ಅವಳ ಜತೆ ಮದುವೆಯಾಗಬೇಕೆಂದಿದ್ದೇನೆ. ಅವಳು ಯಾರು ಎಂಬುದನ್ನು ನಿನಗೆ ನೇರವಾಗಿ ಹೇಳೊಲ್ಲ. ನಿನಗೊಂದು ಸಣ್ಣ ಪರೀಕ್ಷೆ ಮಾಡುತ್ತೇನೆ. ನಾನು ಮೂವರು ಯುವತಿಯರನ್ನು ನಿನ್ನ ಮುಂದೆ ತಂದು ಕುಳ್ಳಿರಿಸುತ್ತೇನೆ. ಆ ಪೈಕಿ ನಾನು ಪ್ರೀತಿಸುವ ಹುಡುಗಿ ಯಾರೆಂಬುದನ್ನು ನೀನು ಹೇಳಬೇಕು, ಆಗಬಹುದಾ?' ಎಂದು ಕೇಳಿದ.
ಅದಕ್ಕೆ ಅಮ್ಮ ಸಮ್ಮತಿಸಿದಳು.
ಮರುದಿನ ಆತ ಮೂವರು ಸುಂದರ ಯುವತಿಯರನ್ನು ಮನೆಗೆ ಕರೆದುಕೊಂಡು ಬಂದು ಜಗುಲಿಯಲ್ಲಿ ಕುಳಿತಿದ್ದ ಅಮ್ಮನ ಮುಂದೆ ಕುಳ್ಳಿರಿಸಿ, 'ಅಮ್ಮ, ಈ ಮೂವರ ಪೈಕಿ ನಾನು ಪ್ರೀತಿಸುತ್ತಿರುವ ಹಾಗೂ ಮದುವೆಯಾಗಲಿರುವ ಯುವತಿ ಯಾರು ಎಂಬುದನ್ನು ಹೇಳುತ್ತೀಯಾ?' ಎಂದು ಕೇಳಿದ.
ಅಮ್ಮ ಮೂವರನ್ನು ದಿಟ್ಟಿಸಿ ನೋಡಿದಳು. ತಕ್ಷಣ ಮಧ್ಯದಲ್ಲಿದ್ದವಳನ್ನು ತೋರಿಸುತ್ತಾ 'ಇವಳೇ. ಇವಳೇ. ನೀನು ಮದುವೆಯಾಗಲಿರುವ ಯುವತಿ' ಎಂದಳು. ಮಗನಿಗೆ ಆಶ್ಚರ್ಯವಾಯಿತು. ತಾನು ಮದುವೆಯಾಗಲಿರುವ ಹುಡುಗಿ ಇವಳೇ ಇವಳೇ ಎಂದು ಅಮ್ಮನಿಗೆ ಹೇಗೆ ಗೊತ್ತಾಯಿತು? ಎಂದು ಸೋಜಿಗಗೊಂಡ. ಈ ಕುರಿತು ತಾಯಿಯನ್ನು ಕೇಳಿದಾಗ ಅವಳು ಹೇಳಿದಳು- 'ನನಗೆ ಮಧ್ಯದಲ್ಲಿ ಇರುವವಳು ಇಷ್ಟವಾಗಲಿಲ್ಲ. ಅಷ್ಟಕ್ಕೂ ನನಗೆ ಇಷ್ಟವಾಗದವರನ್ನೇ ನೀನು ಮದುವೆಯಾಗೋದು ತಾನೆ?'

ಭಾರತ: ಎರಡು ಇಮೇಜುಗಳು
ಭಾರತವೇ ಬೇರೆ, ಇಂಡಿಯಾವೇ ಬೇರೆ. ಅವೆರಡು ನಮ್ಮ ದೇಶದ ಎರಡು ವಿಭಿನ್ನ ಇಮೇಜುಗಳು. ಒಂದು ಗ್ರಾಮಗಳಿಂದ ಕೂಡಿರುವ ಭಾರತ ಹಾಗೂ ಮತ್ತೊಂದು ನಗರಗಳಿಂದ ಕೂಡಿರುವ ಇಂಡಿಯಾ. ಒಂದು ದೇಸಿ ಸಂಸ್ಕೃತಿಯ ಭಾರತ ಹಾಗೂ ಇನ್ನೊಂದು ವಿದೇಶಿ ಸಂಸ್ಕೃತಿಯ ಇಂಡಿಯಾ.
ಇತ್ತೀಚೆಗೆ ಭಾರತ ಹಾಗೂ ಇಂಡಿಯಾದ ಇಮೇಜನ್ನು ಕಟ್ಟಿಕೊಡುವ ಕೆಲವು ಸಾಲುಗಳನ್ನು (ಪ್ರಾಯಶಃ ಫೇಸ್‌ಬುಕ್‌ನಲ್ಲಿರಬೇಕು) ಓದಿದೆ. 'ಭಾರತದಲ್ಲಿ ಹೊಟ್ಟೆಗೆ ಊಟವಿಲ್ಲದೆ ಹಸಿವಿನಿಂದ ಪ್ರತಿದಿನ ನೂರಾರು ಜನ ಸಾಯುತ್ತಾರೆ. ಚಿಕಿತ್ಸೆಗೆ ನೂರು ರುಪಾಯಿ ಹಣವಿಲ್ಲದೇ ಪುಟ್ಟಮಕ್ಕಳು ಸಾಯುತ್ತಾರೆ.'
ಇಂಥ ಕಠೋರ ಸತ್ಯಗಳನ್ನು 'ಸತ್ಯಮೇವ ಜಯತೆ' ಕಾರ್ಯಕ್ರಮದಲ್ಲಿ ಹೇಳುವ ಮೂಲಕ ನಟ ಆಮೀರ್‌ಖಾನ್ ಒಂದು ಕಂತಿಗೆ ಕೋಟಿ ರುಪಾಯಿ ಪಡೆಯುತ್ತಾನೆ. ಎಂಥ ವಿಪರ್ಯಾಸ!?

-ವಿಶ್ವೇಶ್ವರ ಭಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com