ಅಂಕಣಗಳು

ನಾನು ಭಾರತೀಯನಲ್ವಾ?

ನಾನು ಭಾರತೀಯನಲ್ವಾ?
Published On :

ಎಲ್ಲಾ ಪಕ್ಷಗಳು ತಮ್ಮ ತಮ್ಮ ನಿರ್ದಿಷ್ಟ ಸ್ಥಾನಗಳ ಪಟ್ಟಿಯನ್ನು ಬಿಡುಗಡೆಗೊಳಿಸಿವೆ. ಚುನಾವಣಾ ಆಯೋಗವು ನೀತಿ ಸಂಹಿತೆಯ ನಿಯಮವನ್ನು ಜಾರಿಗೆ ತಂದಿದೆ. ಸ್ವಲ್ಪ ದಿನಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಆದರೆ ದೇಶದ ಗಡಿ ಭಾಗದಲ್ಲಿದ್ದು ನಮ್ಮನ್ನು ರಕ್ಷಿಸುವ ಸೈನಿಕರಿಗೆ ಮಾತ್ರ ಮತ ಚಲಾಯಿಸುವ ಅವಕಾಶವೇ ಸಿಗುತ್ತಿಲ್ಲ:
1)    ಅನೇಕ ಸೈನಿಕರ ಬಳಿ ಮತದಾರನ ಗುರುತುಪತ್ರ ಇರುವುದಿಲ್ಲ. ಏಕೆಂದರೆ ಬಹುತೇಕರು 18ನೇ ವಯಸ್ಸಿನಲ್ಲಿಯೇ ಸೈನ್ಯಕ್ಕೆ ಸೇರಿರುತ್ತಾರೆ. ಮತ್ತೆ ಸೈನ್ಯದ ಗುರುತಿನ ಪತ್ರ ಇರುವುದರಿಂದ ಮತದಾರನ ಗುರುತಿನ ಪತ್ರ ಸಹಜವಾಗಿ ಅವಶ್ಯಕವಲ್ಲ ಎನಿಸುತ್ತದೆ.
2)    ಅನೇಕ ಸೈನಿಕರು ಗಡಿ ಕಾಯುತ್ತಿದ್ದಾರೆ. ಇನ್ನು ಕೆಲವರು ಸಿಯಾಚಿನ್‌ನಂತಹ ಹಿಮಪರ್ವತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರಂತೂ ನಮ್ಮ ದೇಶದ ಲೋಕಸಭೆ ಆಗಲಿ ವಿಧಾನಸಭಾ ಚುನಾವಣೆಗೆ ಮತದಾರರೇ ಅಲ್ಲ ಎನ್ನುವ ಪರಿಸ್ಥಿತಿಯಲ್ಲಿದ್ದಾರೆ. ಏಕೆಂದರೆ ಯಾವುದೇ ಪೋಲಿಂಗ್ ಬೂತ್‌ನ ವ್ಯವಸ್ಥೆಯನ್ನು ನಮ್ಮ ಸರ್ಕಾರ ಮಾಡಿರುವುದಿಲ್ಲ.
3)    ಶಾಂತಿಯುತವಾದ ಪ್ರದೇಶದಲ್ಲಿ (ಪಂಜಾಬ್‌ನಿಂದ ಕನ್ಯಾಕುಮಾರಿ ಹಾಗೂ ರಾಜಸ್ಥಾನದಿಂದ ಬಿಹಾರ, ಪಶ್ಚಿಮ ಬಂಗಾಳ) ಪ್ರಶಿಕ್ಷಣಕ್ಕಾಗಿ ಬಂದಂತಹ ಸೈನಿಕರಾದರು ಮತ ಚಲಾಯಿಸಬೇಕಲ್ಲಾ? ಅವರಿಗೆ ಏನು ಅಡ್ಡಿ ಬರುತ್ತಿದೆಯೋ ಗೊತ್ತಾಗುತ್ತಿಲ್ಲ. ಹೀಗಾಗಿ ಶೇ. 65- 70 ಸೈನಿಕರು ಮತ ಚಲಾಯಿಸುವುದೇ ಇಲ್ಲ. ಕೆಲವರು ಮಾತ್ರ ರಜೆಯಲ್ಲಿದ್ದಾಗ ಮತದಾನ ನಡೆದರೆ, ಅವರ ಬಳಿ ಮತದಾರ ಗುರುತಿನ ಚೀಟಿ ಇದ್ದರೆ ಮತ ಚಲಾಯಿಸಿ ಬರುತ್ತಾರಷ್ಟೆ.
ಒಂದು ಪ್ರಶ್ನೆ ಮಾತ್ರ ಬಹುತೇಕ ಸೈನಿಕರನ್ನು ನೆರಳಿನಂತೆ ಹಿಂಬಾಲಿಸುತ್ತಲೇ ಇರುತ್ತದೆ. ಅವರು ತಮ್ಮ ತರಬೇತಿ ಮುಗಿಸಿ ಶಪಥ ಮಾಡುವಾಗ, "ನಾನು ಈ ದೇಶದ ನಾಗರಿಕನಾಗಿದ್ದು, ನಮ್ಮ ಸಂವಿಧಾನದ ಎಲ್ಲಾ ಆಜ್ಞೆಗಳ ಅಡಿಯಲ್ಲಿದ್ದು ದೇಶದ ರಕ್ಷಣೆಗೆ ನನ್ನ ಜೀವನವನ್ನು ಮುಡುಪಾಗಿಡುತ್ತೇನೆ. ತಾಯಿನಾಡಿಗಾಗಿ ನನ್ನ ಜೀವ ಹೋದರೂ ಸರಿ. ಜೈ ಹಿಂದ್, ಜೈ ಭಾರತ ಮಾತಾಕೀ" ಎಂದು ಪ್ರತಿಜ್ಞೆ ಮಾಡುತ್ತಾರೆ.
ಆದರೆ "ಸಂವಿಧಾನದ ಎಲ್ಲಾ ಆಜ್ಞೆಗಳ ಅಡಿಯಲ್ಲಿ ನಾನು ಬರುತ್ತೇನೆ ಎಂದು ಹೇಳಿದರೂ, ದೇಶದ ಗಡಿ ಭಾಗದ ಉದ್ದಗಲವನ್ನೂ ಕಾಯುವ ತಮಗೆ ಮೂಲಭೂತ ಹಕ್ಕುಗಳಲ್ಲಿ ಒಂದಾದ ಮತ ಚಲಾಯಿಸುವ ಅವಕಾಶ ಏಕೆ ಸಿಗುತ್ತಿಲ್ಲ? ನಾನು ಭಾರತೀಯನಲ್ವಾ? ನಾನು ಸೇನೆಯಿಂದ ನಿವೃತ್ತನಾಗುವವರೆಗೆ ಮತ ಚಲಾಯಿಸುವ ಸೌಭಾಗ್ಯ ನನಗಿಲ್ವಾ? ನಾನು ನೀರಿನ ಮೇಲಿನ ಗುಳ್ಳೆ ಅಥವಾ ಗ್ರಾಮ ದೇವತೆಗೆ ಬಿಟ್ಟಂತಹ ಕೋಣವೇ?" ಎಂಬ ಪ್ರಶ್ನೆ ಕೊರೆಯತೊಡಗುತ್ತದೆ.
ನಾನು ವಿಶ್ವ ಮೆಚ್ಚುವ ಭಾರತೀಯ ಸೇನೆಗೆ ಸೇರಿದವನು. ಕಷ್ಟ ಬಂದಾಗ ದೇವರನ್ನು, ನೋವಾದಾಗ ವೈದ್ಯರನ್ನು, ಯುದ್ಧ ಬಂದಾಗ ಸೈನಿಕನನ್ನು ನೆನೆಯಲಾಗುತ್ತದೆ. ವೈದ್ಯರು, ದೇವರು ಜೀವ ಉಳಿಸಬಹುದು ಆದರೆ ಸೈನಿಕ ತನ್ನ ಜೀವನವನ್ನು ಬಲಿ ಕೊಟ್ಟು ಇನ್ನೊಬ್ಬರ ಜೀವ ರಕ್ಷಿಸುತ್ತಾನೆ. ಅಂಥ ಸೈನಿಕನಿಗೆ ತಮ್ಮನ್ನಾಳುವ ನಾಯಕ ಯಾರಾಗಬೇಕೆಂದು ನಿರ್ಧರಿಸುವ ಹಕ್ಕು ಸಿಗುತ್ತಿಲ್ಲ. ಐದು ವರ್ಷಕ್ಕೆ ಒಂದು ಬಾರಿ ಬರುವ ಚುನಾವಣೆಗೆ ತನ್ನ ನೆಚ್ಚಿನ ಅಭ್ಯರ್ಥಿಗೆ ಮತಹಾಕಲು ಅವಕಾಶವೇ ಆತನೆದುರಿಗಿಲ್ಲ.
 ಮಿತ್ರರೇ ನೀವೆಲ್ಲಾ ಮುಷ್ಕರ ಮಾಡಬಹುದು, ಬೀದಿಗಿಳಿದು ಬಸ್ಸು ಸುಡಬಹುದು. ಆದರೆ ಸೈನಿಕರಿಗೆ ಇದನ್ನೆಲ್ಲ ಮಾಡಲಾಗದು. ಇದುವರೆಗೆ ಅನೇಕ ಪತ್ರಿಕೆಗಳಲ್ಲಿ ಈ ವಿಷಯ ಬಂದಿದೆ. ಸರ್ಕಾರಕ್ಕೆ ಬರೆದ ಮನವಿ ಪತ್ರಗಳಿಗೆ ಲೆಕ್ಕವಿಲ್ಲ. ಹೊಳೆಯಲ್ಲಿ ಹುಣಸೇ ಹಣ್ಣು ತೊಳೆದಂತಾಗಿದೆ. ನಮ್ಮ ದೇಶ ತಂತ್ರಜ್ಞಾನದಲ್ಲಿ  ಎಷ್ಟೊಂದು ದಾಪುಗಾಲಿಡುತ್ತಿದೆ. ಆದರೆ ಅದಕ್ಕೆ ದೇಶದ ಸೈನಿಕರಿಗಾಗಿ ಒಂದು ಹೊಸ ಮತಗಟ್ಟೆಯನ್ನು ಸ್ಥಾಪಿಸಲಾಗುತ್ತಿಲ್ಲವೇಕೆ? ಕಾಲ ಮಿಂಚಿಲ್ಲ. ಆದಷ್ಟು ಬೇಗ ಸಂಬಂಧಪಟ್ಟವರು ಈ ಕಾರ್ಯಕ್ಕೆ ಮುಂದಾಗಬೇಕು.

-ಈರಣ್ಣ ಗಂಗಾಧರ ಉದಾಶಿ, ನಿವೃತ್ತ ಸೈನಿಕ
iranna.udashi@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.