ಸಂಭ್ರಮದ ಬದುಕಿಗೆ ಎಂಟು ಸೂತ್ರಗಳು...

ನನಗೆ ಖುಷವಂತ್ ಸಿಂಗ್ ಮತ್ತು ಅವರ ಬರಹ ಎರಡೂ ಅಚ್ಚುಮೆಚ್ಚು...
ಸಂಭ್ರಮದ ಬದುಕಿಗೆ ಎಂಟು ಸೂತ್ರಗಳು...
Updated on: 

-ನೆನಪಿನಲ್ಲಿಟ್ಟುಕೊಳ್ಳಬಹುದಾದ ಕೆಲವು ಸಂಜೆಗಳನ್ನು ಅವರೊಟ್ಟಿಗೆ ಕಳೆದಿದ್ದೇನೆ ಎಂಬುದು ನನ್ನ ಬದುಕಿನ ದೊಡ್ಡ ಸಂತೋಷಗಳಲ್ಲಿ ಒಂದು. ಖುಷವಂತ್ ಸಿಂಗ್ ಬಗ್ಗೆ ಎಷ್ಟು ಹೇಳಿದರೂ ಸಾಲದು. ಹಾಗಾಗಿ, ಅವರ ಬಗ್ಗೆ ಹೇಳುವುದರ ಬದಲು, ಬದುಕಲ್ಲಿ ಹೇಗೆ ಖುಷಿಯಾಗಿ ಇರಬೇಕು ಎನ್ನುವ ಬಗ್ಗೆ ಅವರು ಬರೆದಿದ್ದ ಲೇಖನವನ್ನು ಮೆಲುಕು ಹಾಕೋಣ...

ನನಗೆ ಖುಷವಂತ್ ಸಿಂಗ್ ಮತ್ತು ಅವರ ಬರಹ ಎರಡೂ ಅಚ್ಚುಮೆಚ್ಚು. ಶತ್ರುಗಳೂ ಅಸೂಯೆ ಪಡಬೇಕು; ಅಷ್ಟು ಚೆಂದವಾಗಿ ಬದುಕಿದವರು ಖುಷ್ವಂತ್‌ಸಿಂಗ್. ಅವರ ಬರಹ ಮತ್ತು ವ್ಯಕ್ತಿತ್ವ ಬೇರೆಯಾಗಿರಲಿಲ್ಲ. 99 ವರ್ಷ ಕಾಲ ಬಾಳಿದ ಆ ಅಜ್ಜ ಬದುಕಿಡೀ ಖುಷಿಯಿಂದ ಇದ್ದರು. ಅಷ್ಟೇ ಖುಷಿಯಿಂದ ನಿರಂತರವಾಗಿ ಬರೆದರು.
ಲೇಖಕನಾದವನು ಜನಸಾಮಾನ್ಯರ ಜೊತೆ ಬೆರೆಯುವುದಿಲ್ಲ, ಬಾಗಿಲು ಜಡಿದುಕೊಂಡು ಏಕಾಂತದಲ್ಲೇ ಕಳೆದುಹೋಗುತ್ತಾನೆ ಎನ್ನುವ ಭಾವನೆ ಬಹುತೇಕರಲ್ಲಿದೆ. ಆದರೆ ಆ ಮಾತು ಖುಷವಂತ್ ಸಿಂಗ್ ಅವರಿಗಂತೂ ಖಂಡಿತ ಅನ್ವಯವಾಗುತ್ತಿರಲಿಲ್ಲ! ಗೆಳೆಯರು, ಗೆಳತಿಯರ ದೊಡ್ಡ ದಂಡೇ ಅವರ ಸುತ್ತಲೂ ಇರುತ್ತಿತ್ತು. ಆದರೆ ಎಂಥ ಗದ್ದಲದ ನಡುವೆಯೂ ಗದ್ದಕ್ಕೆ ಕೈ ಹಚ್ಚಿ ಪುಟಗಟ್ಟಲೇ ಬರೆದುಬಿಡುವ ಚೈತನ್ಯ, ಪಾಂಡಿತ್ಯ ಖುಷವಂತ್ ಸಿಂಗ್ ಅವರಿಗಿತ್ತು. ಹಾಗಾಗೇ Delhi ಮತ್ತು Train to pakistan ನಂಥ ಅದ್ಭುತ ಕೃತಿಗಳು ಅವರಿಂದ ಬಂದವು.
ನಾನೂ ಕೂಡ ನೆನಪಿನಲ್ಲಿಟ್ಟುಕೊಳ್ಳಬಹುದಾದ ಕೆಲವು ಸಂಜೆಗಳನ್ನು ಅವರೊಟ್ಟಿಗೆ ಕಳೆದಿದ್ದೇನೆ ಎಂಬುದು ನನ್ನ ಬದುಕಿನ ದೊಡ್ಡ ಸಂತೋಷಗಳಲ್ಲಿ ಒಂದು. ಖುಷವಂತ್ ಸಿಂಗ್ ಬಗ್ಗೆ ಎಷ್ಟು ಹೇಳಿದರೂ ಸಾಲದು. ಹಾಗಾಗಿ, ಅವರ ಬಗ್ಗೆ ಹೇಳುವುದರ ಬದಲು, ಬದುಕಲ್ಲಿ ಹೇಗೆ ಖುಷಿಯಾಗಿ ಇರಬೇಕು ಎನ್ನುವ ಬಗ್ಗೆ ಅವರು ಬರೆದಿದ್ದ ಲೇಖನವನ್ನು ಮೆಲುಕು ಹಾಕೋಣ...
ಪಾಯಿಂಟ್ ನಂ.1: ಸಂತೋಷದ ಬದುಕು ನಿಮ್ಮದಾಗಬೇಕು ಎನ್ನುವುದಾದರೆ, ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಿ. ಯಾವುದೇ ಕಾಯಿಲೆಯೂ ಹತ್ತಿರ ಬರದಂತೆ ನೋಡಿಕೊಂಡರೆ, ಸಂಭ್ರಮದಿಂದ ಬದುಕುವ ಕ್ಷಣ ಜೊತೆಯಾಯಿತು ಎಂದೇ ಅರ್ಥ. ನೆನಪಿರಲಿ: ನನಗಿರುವುದು ಅಂಥಾ ದೊಡ್ಡ ಕಾಯಿಲೆಯಲ್ಲ ಎಂದು ಯಾವುದನ್ನೂ ಉಪೇಕ್ಷೆ ಮಾಡಬೇಡಿ. ತಲೆನೋವಿನಂಥ ಅತಿ ಚಿಕ್ಕ ಸಮಸ್ಯೆ ಕೂಡ ನಿಮ್ಮ ನೆಮ್ಮದಿಯನ್ನು ಹಾಳು ಮಾಡಬಲ್ಲದು. ಹಾಗಾಗಿ, ಸಣ್ಣದೊಂದು ಕಾಯಿಲೆಯೂ ಜೊತೆಯಾಗದಂತೆ ನೋಡಿಕೊಳ್ಳಿ.
ಪಾಯಿಂಟ್ ನಂ.2: ಗೆಳೆಯ, ಗೆಳೆತಿಯರೊಂದಿಗೆ ಅಥವಾ ಕುಟುಂಬದೊಂದಿಗೆ ಪ್ರವಾಸ ಹೋಗುವುದೂ ಹೋಟೆಲಿಗೆ ಊಟಕ್ಕೆ ಹೋಗುವುದು, ಸಿನಿಮಾ ವೀಕ್ಷಣೆಗೆ ತೆರಳುವುದು... ಇವೆಲ್ಲ ಸಂತೋಷದ ಬದುಕು ಹೊಂದಿದವನ ದಿನಚರಿಯ ಭಾಗಗಳು. ಇದು ಸಾಧ್ಯವಾಗಬೇಕೆಂದರೆ, ನಮ್ಮ ಅಗತ್ಯಗಳಿಗೆ ಹೊಂದುವಷ್ಟು ಪ್ರಮಾಣದ ದುಡ್ಡು ಬೇಕೇ ಬೇಕು. ಹಾಗಾಗಿ, ಲಕ್ಷದ ಲೆಕ್ಕದಲ್ಲಿ ಅಲ್ಲದಿದ್ದರೂ, ಯಾವಾಗಲೂ ಸ್ವಲ್ಪ ಹೆಚ್ಚೇ ಅನ್ನಿಸುವಷ್ಟು ಬ್ಯಾಂಕ್ ಬ್ಯಾಲೆನ್ಸ್ ಇರುವಂತೆ ನೋಡಿಕೊಳ್ಳಿ...
ಪಾಯಿಂಟ್ ನಂ.3: ಸ್ವಂತದ್ದೊಂದು ಮನೆ ಇರಲಿ. ನೆಮ್ಮದಿಯ ಬದುಕಿಗೆ ಅಗತ್ಯವಾಗಿ ಇರಲೇಬೇಕಾದ ಸವಲತ್ತು ಇದು. ವಾಸಿಸುವ ಮನೆ ಅದೆಷ್ಟೇ ದೊಡ್ಡದಿದ್ದರೂ, ಎಷ್ಟೇ ಚೆನ್ನಾಗಿದ್ದರೂ ಅದು ಸ್ವಂತವಲ್ಲ. ಅಂದರೆ, ಅದರಿಂದ ಖಂಡಿತ ನೆಮ್ಮದಿ ಸಿಗುವುದಿಲ್ಲ. ಹಾಗಾಗಿ, ಪುಟ್ಟದಾದರೂ ಸರಿ, ಒಂದು ಸ್ವಂತ ಮನೆ ಮಾಡಿಕೊಳ್ಳಿ. ಮನೆಯ ಮುಂದೆ ಚಿಕ್ಕ ಖಾಲಿ ಜಾಗವಿದ್ದರೆ ನಿಮ್ಮ ಇಷ್ಟದ ಹೂಗಿಡಗಳನ್ನು ಬೆಳೆಸಿ. ಸಂಜೆ ಮತ್ತು ಬೆಳಗಿನ ಹೊತ್ತು, ಮನೆಯ ಎದುರು ಕೂತು ಪೇಪರ್ ಓದುತ್ತಲೋ, ಗಿಡಗಳಿಗೆ ನೀರು ಹಾಕುತ್ತಲೋ ಸುತ್ತಲಿನ ಪರಿಸರವನ್ನು ಆಸ್ವಾದಿಸಿ.
ಪಾಯಿಂಟ್ ನಂ.4: ಸಂಗಾತಿಯೊಂದಿಗಿನ ಬಾಂಧವ್ಯ ಮಧುರವಾಗಿರಲಿ. ಜೊತೆಯಲ್ಲಿರುವವರು ನಿಮ್ಮ ಗೆಳೆಯ /ಗೆಳತಿ ಆಗಿರಬಹುದು. ಅಥವಾ ಗಂಡ/ಹೆಂಡತಿ ಆಗಿರಬಹುದು. ಅವರೊಂದಿಗಿನ ಬಾಂಧವ್ಯ ಮಧುರವಾಗಿರಬೇಕು. ಮುಖ್ಯವಾಗಿ ಪರಸ್ಪರರಲ್ಲಿ 'ಅಂಡರ್‌ಸ್ಟ್ಯಾಂಡಿಂಗ್‌' ಇರಬೇಕು. ಇಬ್ಬರ ಮಧ್ಯೆ ಅಥವಾ ಅಂಡರ್‌ಸ್ಟ್ಯಾಂಡಿಂಗ್ ಇಲ್ಲವೆಂದಾದರೆ ಜೊತೆಗಿದ್ದು ಕಿತ್ತಾಡುವುದಕ್ಕಿಂತ, ಡೈವೋರ್ಸ್ ಕೊಟ್ಟು ಅಥವಾ ಆ ಸಂಬಂಧದಿಂದ ಕಳಚಿಕೊಂಡು ನೆಮ್ಮದಿಯಾಗಿರುವುದೇ ಒಳ್ಳೆಯದು.
ಪಾಯಿಂಟ್ ನಂ.5: ಬೇರೆಯವರೊಂದಿಗೆ ನಿಮ್ಮನ್ನು ಹೋಲಿಸಿಕೊಳ್ಳಲು ಹೋಗಬೇಡಿ. ನಿಮ್ಮದೇ ವಯಸ್ಸಿನ ಮತ್ತೊಬ್ಬರು ದಿಢೀರನೆ ಹೆಸರು ಮಾಡುತ್ತಾರೆ. ಹಣ ಸಂಪಾದಿಸುತ್ತಾರೆ. ಎರಡೆರಡು ಮನೆ ಕಟ್ಟಿಸುತ್ತಾರೆ. ಹಡಗಿನಂಥ ಕಾರು ಖರೀದಿಸುತ್ತಾರೆ. ಅದನ್ನು ನೋಡಿ ಹೊಟ್ಟೆ ಉರಿದುಕೊಳ್ಳಬೇಡಿ. ಅವರು ಇಷ್ಟು ಬೇಗ ಮುಂದುವರಿದು ಬಿಟ್ರು. ನಾನು ಮಾತ್ರ ಹೀಗೇ ಉಳ್ಕೋಂಬಿಟ್ಟೆ ಎಂದು ಸಂಕಟಕ್ಕೆ ಬೀಳಬೇಡಿ. ಮತ್ತೊಬ್ಬರೊಂದಿಗೆ ನಮ್ಮನ್ನು ಹೋಲಿಸಿಕೊಳ್ಳುವ ಕಾಯಿಲೆ ನಮ್ಮ ನೆಮ್ಮದಿಯನ್ನು ಹಾಳು ಮಾಡುತ್ತದೆ. ನೆನಪಿರಲಿ.
ಪಾಯಿಂಟ್ ನಂ.6: ಬದುಕಲ್ಲಿ ಬಂದು ಹೋಗುವ ಮಂದಿ ಎಷ್ಟೇ ಆಪ್ತರಾಗಿದ್ದರೂ ಸರಿ, ಅವರೊಂದಿಗೆ ನಿಮ್ಮ ದೌರ್ಬಲ್ಯಗಳನ್ನು, ನಿಮ್ಮ ಬದುಕಿನ ಅತಿ ಮುಖ್ಯ ಗುಟ್ಟುಗಳನ್ನು ಹೇಳಿಕೊಳ್ಳಲೇಬೇಡಿ. ಏಕೆಂದರೆ, ಮುಂದೊಂದು ಸಂದರ್ಭದಲ್ಲಿ 'ಪ್ರಾಣ ಸ್ನೇಹಿತ'(ತೆ)' ಎಂದುಕೊಂಡವರೇ ಪರಮಶತ್ರು ಆಗಬಹುದಾದ ಸಾಧ್ಯತೆಗಳೂ ಇರುತ್ತವೆ. ಅಂಥ ಸಂದರ್ಭದಲ್ಲಿ ಒಂದು ಕಾಲದಲ್ಲಿ 'ಎಲ್ಲವನ್ನೂ' ಹೇಳಿಕೊಂಡವರ ಬದುಕು ಸಂಕಟದ ಹೊಳೆಗೆ ಬೀಳುವ ಸಂಭವವಿರುತ್ತದೆ.
ಪಾಯಿಂಟ್ ನಂ.7: ಹಾಡು ಕೇಳುವುದು, ಕೈ ತೋಟ ಮಾಡುವುದು, ಚಿತ್ರ ಬರೆಯುವುದು, ಓದುವುದು, ಬರೆಯುವುದು... ಹೀಗೆ, ನಿಮಗೆ ಯಾವುದರಲ್ಲಿ ಹೆಚ್ಚು ಆಸಕ್ತಿಯಿದೆಯೋ, ಆ ಕೆಲಸವನ್ನು ಶ್ರದ್ಧೆಯಿಂದ ಮಾಡುವುದನ್ನು ಕಲಿಯಿರಿ. ಇಂಥ ಹವ್ಯಾಸಗಳೂ ನಮ್ಮ ಬದುಕಿನ ಸಂಭ್ರಮವನ್ನು ಹೆಚ್ಚಿಸುತ್ತವೆ.
ಪಾಯಿಂಟ್ ನಂ.8: ದಿನವೂ ಬೆಳಗ್ಗೆ ಮತ್ತು ಸಂಜೆ 15 ನಿಮಿಷದ ಮಟ್ಟಿಗಾದರೂ ಧ್ಯಾನ ಮಾಡಲು ಆರಂಭಿಸಿ. ಬೆಳಗಿನ ಹೊತ್ತು, ಈ ದಿನ ನಾನು ಯಾವುದೇ ಕೆಟ್ಟ ಕೆಲಸ ಮಾಡಲು ಮುಂದಾಗದಂಥ ಮನಸ್ಸು ಕೊಡು ಎಂದು ನೀವು ನಂಬುವ ಶಕ್ತಿಯಲ್ಲಿ ಪ್ರಾರ್ಥಿಸಿ. ಸಂಜೆಯ ವೇಳೆಗೆ ಧ್ಯಾನಕ್ಕೆ ಕೂತಾಗ- ಯಾವುದೇ ಅವಸರದ ಕೆಲಸಕ್ಕೆ ಕೈ ಹಾಕದಂತೆ ನೋಡಿಕೊಂಡಿದ್ದಕ್ಕೆ, ಎಲ್ಲ ಅನಾಹುತಗಳಿಂದಲೂ ಈ ದಿನ ಕಾಪಾಡಿದ್ದಕ್ಕೆ ಧನ್ಯವಾದ ಎಂದು ಪ್ರಾರ್ಥನೆಗೆ ಕೂತಾಗಲೇ ಹೇಳಿಬಿಡಿ.
ನೆನಪಿರಲಿ. ನೆಮ್ಮದಿಯ ಬದುಕು ಕೈಗೆಟಕುವುದು ಇಂಥ ಪುಟ್ಟ ಪುಟ್ಟ ನಿರ್ಣಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗಲೇ ಹೊರತು, ಹಣ, ಅಧಿಕಾರ, ಅಂತಸ್ತು ಅಥವಾ ಆಳುಕಾಳುಗಳನ್ನು ಹೊಂದುವುದರಿಂದ ಅಲ್ಲ!

ಕೆಲವು ಕಾಡುವ ತರಲೆ ಪ್ರಶ್ನೆಗಳು
- ಜೇಬಿನಿಂದ ಜಾರಿಬಿದ್ದ ನಾಣ್ಯ ಟೇಬಲ್ ಅಡಿಯೇ ಹೋಗಿ ಕೂರುವುದೇಕೆ?
-ಎಲ್ಲವನ್ನೂ ಮಿನುಗಿಸುವ ಸೂರ್ಯ ನಮ್ಮ ಚರ್ಮವನ್ನೇಕೆ ಕಪ್ಪು ಮಾಡುತ್ತಾನೆ?
- ನಾಯಿಯ ಆಹಾರವನ್ನು "New and Improved'' ಎಂದು ಹೇಳುತ್ತಾರಲ್ಲ. ಅದರ ರುಚಿ ನೋಡಿದವರು ಯಾರು?
- ಪೋಲೆಂಡ್ ಜನರನ್ನು ಪೋಲ್ಸ್ ಎಂದು ಕರೆಯಬಹುದಾದರೆ, ಹಾಲೆಂಡ್ ಜನರನ್ನು 'ಹೋಲ್ಸ್‌'ಎಂದೆನ್ನಬಾರದೇಕೆ?
-ಪಿಯಾನೋ ವಾದಕ ಕ್ಝಿಛಟ್ಝಿಡಡಿ ಆದರೆ, ರೇಸಿಂಗ್ ಕಾರ್ ಚಾಲಕ Racist ಏಕಲ್ಲ?
-ಬ್ರಹ್ಮಾಂಡದಲ್ಲಿ ನೂರು ಕೋಟಿಗೂ ಅಧಿಕ ನಕ್ಷತ್ರಗಳಿವೆ ಎಂದು ಹೇಳಿದಾಗ ನಂಬುವ ಜನ, ಗೋಡೆಗೆ ಈಗತಾನೇ ಪೇಂಟ್ ಮಾಡಿದ್ದಾರೆ ಎಂದು ಹೇಳಿದರೂ ಅದನ್ನು ಮುಟ್ಟಿ ನೋಡಿ ಪರೀಕ್ಷಿಸುವುದೇಕೆ?
- ನೀರಿನೊಳಗೆ ಅಳುವುದಕ್ಕೆ ಸಾಧ್ಯವೇ?
-ಕೈಗೆ ಏನಾದರೂ ಹತ್ತಿದಾಗಲೇ ಮೂಗು ತುರಿಸುವುದೇಕೆ?
-ಮೀನಿಗೆ ಬಾಯಾರಿಕೆಯಾಗುವುದಿಲ್ಲವೇ?
- ಕಟ್ಟಡ ಕಟ್ಟಿದ ನಂತರವೂ ಅದನ್ನು Building ಅನ್ನುವುದೇಕೆ?
- ಚೆನ್ನಾಗಿ ನಿದ್ರೆಯಾಯಿತು ಎಂದು ಹೇಳುವುದಕ್ಕೆ 'ಮಗುವಿನಂತೆ ಮಲಗಿದೆ' ಎನ್ನುತ್ತಾರೆ. ಮಗು ಎಂದಾದರೂ ಚೆನ್ನಾಗಿ ನಿದ್ರೆ ಮಾಡಿದ್ದನ್ನು ನೋಡಿದ್ದೀರಾ? ಪ್ರತೀ ಎರಡು ಗಂಟೆಗೆ ಎಚ್ಚರಗೊಂಡು ಅಳುತ್ತದಲ್ಲ?
- ಭೂಮಿಯಲ್ಲಿ ಕಂಪನವಾದರೆ ಭೂಕಂಪ, ಮಂಗಳ ಗ್ರಹದಲ್ಲಿ ಕಂಪನವಾದರೆ?
- ಮಂಗನಿಂದ ಮಾನವ ಎನ್ನುವುದಾದರೆ, ಇನ್ನೂ ಮಂಗಗಳೇಕಿವೆ?
- ಯಾರನ್ನಾದರೂ ಕಳುಹಿಸುವಾಗ ಬಾಯ್ ಬಾಯ್ ಎನ್ನುವವರು, ಯಾರಾದರೂ ಎದುರಾದಾಗ ಹಾಯ್ ಹಾಯ್ ಎನ್ನುವುದಿಲ್ಲವೇಕೆ?
-ನಾವು ನಮ್ಮನ್ನೇ ತಿಂದರೆ ಅದೃಶ್ಯವಾಗುತ್ತೀವೋ ಅಥವಾ ಇನ್ನೂ ದಪ್ಪಗಾಗುತ್ತೀವೋ?
-ನಿಘಂಟು ಎನ್ನುವ ಪದ ನಿಘಂಟಿನಲ್ಲಿರುತ್ತದಾ?
-ಪ್ರೀತಿ ಕುರುಡು ಎನ್ನುವುದಾದರೆ ಮೊದಲ ನೋಟದಲ್ಲೇ ಪ್ರೀತಿ ಹುಟ್ಟಿದ್ದು ಹೇಗೆ?


- ವಿಶ್ವೇಶ್ವರ ಭಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com