ಡ್ರೈವರ್‌ನ ಅಂತಿಮ ಯಾತ್ರೆಗೆ ಚಾಲಕನಾದ ಮಾಲೀಕ!

ನೀವು ಡಾ. ಸೈರಸ್ ಪೂನಾವಾಲ ಅವರ ಹೆಸರನ್ನು ಕೇಳಿರುವ ಸಾಧ್ಯತೆ ಕಡಿಮೆ...
ಡ್ರೈವರ್‌ನ ಅಂತಿಮ ಯಾತ್ರೆಗೆ ಚಾಲಕನಾದ ಮಾಲೀಕ!
Updated on: 

ನೀವು ಡಾ. ಸೈರಸ್ ಪೂನಾವಾಲ ಅವರ ಹೆಸರನ್ನು ಕೇಳಿರುವ ಸಾಧ್ಯತೆ ಕಡಿಮೆ. ಅವರು ಪೂನಾವಾಲ ಗ್ರುಪ್ ಕಂಪನಿಯ ಮುಖ್ಯಸ್ಥರು. ಫೋರ್ಬ್ಸ್ ಪತ್ರಿಕೆ ಹಿಂದಿನ ವರ್ಷ ನಡೆಸಿದ ಸಮೀಕ್ಷೆಯಲ್ಲಿ ಡಾ. ಪೂನಾವಾಲ ಅವರು ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಗಳ ಪೈಕಿ 14ನೇ ಸ್ಥಾನದಲ್ಲಿದ್ದರು. ವಿಶ್ವದ ಶ್ರೀಮಂತರ ಪೈಕಿ ಅವರಿಗೆ ಸಿಕ್ಕ ಸ್ಥಾನ 346ನೆಯದು. ಸಂದೇಹ ಬೇಡ. ಡಾ. ಪೂನಾವಾಲ ಅತ್ಯಂತ ಯಶಸ್ವಿ ಉದ್ಯಮಿ ಹಾಗೂ ಶ್ರೀಮಂತ.
ಅಂದ ಹಾಗೆ ನಾನು ಹೇಳ ಹೊರಟಿರುವುದು ಡಾ. ಸೈರಸ್ ಪೂನಾವಾಲ ಅವರ ಸಹೋದರ ಝವೆರೆ ಪೂನಾವಾಲ ಅವರ ಬಗ್ಗೆ. ಅವರೂ ಸಹ ಶ್ರೀಮಂತ ಉದ್ಯಮಿ. ಝವೆರೆ ಪೂನಾವಾಲ ಅವರ ಬಳಿ ಒಬ್ಬ ಡ್ರೈವರ್ ಇದ್ದ. ಆತನ ಹೆಸರು ಗಂಗಾದತ್ತ ಅಂತ. ಮೂವತ್ತು ವರ್ಷಗಳಿಂದ ಝವೆರೆ ಅವರ ಕಾರ್ ಡ್ರೈವರ್ ಆಗಿದ್ದವ. ಓಶೋ ರಜನೀಶ್ ಬಳಿಯಿದ್ದ ವಿದೇಶಿ ಐಷಾರಾಮಿ ಕಾರೊಂದನ್ನು ಝವೆರೆ ಖರೀದಿಸಿದ್ದರು. ಅಂದಿನಿಂದ ಗಂಗಾದತ್ತ ಆ ಕಾರಿನ ಡ್ರೈವರ್ ಆಗಿ ಝವೆರೆ ಅವರ ಮನೆಮನುಷ್ಯನಂತಿದ್ದ. ಗಂಗಾದತ್ತ ಅಂದ್ರೆ ಅವರಿಗೆ ಪಂಚಪ್ರಾಣ, ಬಹಳ ವಿಶ್ವಾಸ. ಒಂದು ದಿನ ಅವನೇನಾದರೂ ಕಾಯಿಲೆ ಬಿದ್ದು ಕೆಲಸಕ್ಕೆ ಬರದಿದ್ದರೆ ಚಡಪಡಿಸುತ್ತಿದ್ದರು. ಅಷ್ಟರಮಟ್ಟಿಗೆ ಆತ ಇವರ ಬದುಕಿನಲ್ಲಿ ನೆಲೆಸಿದ್ದ.
ಇತ್ತೀಚೆಗೆ ಗಂಗಾಧತ್ತ ನಿಧನನಾದ!
ಈ ಸುದ್ದಿ ತಿಳಿದಾಗ ಝವೆರೆ ಪೂನಾವಾಲ ಅವರಿಗೆ ಆಘಾತವಾಯಿತು. ಆಗ ಅವರು ದಿಲ್ಲಿಯಲ್ಲಿದ್ದರು. ತಮ್ಮ ಕೆಲಸ, ಕಾರ್ಯ, ಮೀಟಿಂಗ್‌ಗಳೆಲ್ಲವನ್ನೂ ರದ್ದುಪಡಿಸಿದರು. ತಾವು ಬರುವ ತನಕ ಅಂತ್ಯಕ್ರಿಯೆ ನೆರವೇರಿಸಬೇಡಿ ಎಂದು ಗಂಗಾದತ್ತನ ಹೆಂಡತಿಗೆ ಫೋನ್ ಮಾಡಿ ತಿಳಿಸಿದರು. ತಕ್ಷಣ ತಮ್ಮ ಆಪ್ತ ಕಾರ್ಯದರ್ಶಿಗೆ ಹೆಲಿಕಾಪ್ಟರ್ ರೆಡಿ ಮಾಡುವಂತೆ ಸೂಚಿಸಿದರು. ಸಾಯಂಕಾಲದ ಹೊತ್ತಿಗೆ ದಿಲ್ಲಿಯಿಂದ ಪೂನಾಕ್ಕೆ ಹೆಲಿಕಾಪ್ಟರ್‌ನಲ್ಲಿ ಬಂದರು.
ಪೂನಾಕ್ಕೆ ಬಂದವರೇ ಗಂಗಾದತ್ತ ಓಡಿಸುತ್ತಿದ್ದ ತಮ್ಮ ಕಾರನ್ನು ಹೂವಿನಿಂದ ಅಲಂಕರಿಸುವಂತೆ ಹೇಳಿದರು. ಆ ಕಾರಿನಲ್ಲಿಯೇ ತನ್ನ ಆಯುಷ್ಯದ ಅರ್ಧ ಭಾಗ ಕಳೆದ ಗಂಗಾದತ್ತನ ಪಾರ್ಥಿವ ಶರೀರವನ್ನು ಇಟ್ಟು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಹೋಗಲು ಸಿದ್ಧತೆ ಮಾಡುವಂತೆ ಸೂಚಿಸಿದರು. ಆ ಕಾರನ್ನು ಸ್ವತಃ ತಾವೇ ಡ್ರೈವ್ ಮಾಡಿಕೊಂಡು ಹೋಗಲು ಝವೆರೆ ಪೂನಾವಾಲ ನಿರ್ಧರಿಸಿದರು.
ಝವೆರೆಯವರ ಆಪ್ತೇಷ್ಟರು 'ಹೀಗೇಕೆ? ನಿಮ್ಮ ಆಶಯವೇನು?' ಎಂಬ ಪ್ರಶ್ನೆಯನ್ನು ಮುಂದಿಟ್ಟಾಗ ಅವರು ಹೇಳಿದ್ದು-'ಗಂಗಾದತ್ತ ಇದ್ದಾನಲ್ಲ. ಆತ ರಾತ್ರಿ, ಹಗಲೆನ್ನದೇ ಮೂವತ್ತು ವರ್ಷ ನನ್ನ ಕಾರನ್ನು ಓಡಿಸಿದ. ಅವನೊಬ್ಬ ಆದರ್ಶ ಡ್ರೈವರ್. ನಿಯತ್ತಾಗಿ ಕೆಲಸ ಮಾಡುತ್ತಿದ್ದ. ಒಂದು ದಿನ ಸಹ ಕರ್ತವ್ಯಲೋಪ ಮಾಡಲಿಲ್ಲ. ಕಿತ್ತು ತಿನ್ನುವ ಬಡತನವಿತ್ತು. ನನ್ನನ್ನು ಸೇರಿದ ಬಳಿಕ ಹಣಕ್ಕಾಗಿ ಹಪಹಪಿಸಲಿಲ್ಲ. ನನ್ನ ಕಾರಿನಲ್ಲಿ ಲಕ್ಷಾಂತರ ರೂಪಾಯಿ ಇರುತ್ತಿತ್ತು. ಒಂದು ಪೈಸೆಯನ್ನೂ ಮುಟ್ಟಲಿಲ್ಲ. ಕಾರಿನಲ್ಲಿ ಎಷ್ಟೇ ಹಣವಿಟ್ಟು ಹೋದರೂ ನನಗೆ ಚಿಂತೆಯಿರಲಿಲ್ಲ. ಆತ ತನ್ನ ಇಬ್ಬರು ಮಕ್ಕಳನ್ನು ಚೆನ್ನಾಗಿ ಓದಿಸಿದ. ಒಬ್ಬ ಮಗಳು ಚಾರ್ಟಡ್ ಅಕೌಂಟೆಂಟ್. ಆತ ಸಾರ್ಥಕ ಜೀವನ ಸಾಗಿಸಿದ. ಅಂಥ ಮನುಷ್ಯನಿಗೆ ನಾನು ಇಷ್ಟೂ ಮಾಡದಿದ್ದರೆ ಹೇಗೆ?'
ಝವೆರೆ ಆಪ್ತರು ಆಶ್ಚರ್ಯಚಕಿತರಾಗಿದ್ದರು. ಕೊನೆಯಲ್ಲಿ ಝವೆರೆ ಪೂನಾವಾಲ ಹೇಳಿದರು- 'ಜೀವನದಲ್ಲಿ ಎಲ್ಲರೂ ಹಣವನ್ನು ಗಳಿಸುತ್ತಾರೆ. ಅದರಲ್ಲಿ ವಿಶೇಷವೇನೂ ಇಲ್ಲ. ಆದರೆ ನಮ್ಮ ಜೀವನದಲ್ಲಿ, ನಮ್ಮ ಯಶಸ್ಸಿನಲ್ಲಿ ಕಾರಣರಾದವರನ್ನು ಮರೆಯಬಾರದು. ಬೇರೆಯವರ ಋಣವನ್ನು ಇಟ್ಟುಕೊಳ್ಳುವಷ್ಟು ಸ್ವಾರ್ಥಿಗಳು ನಾವಾಗಬಾರದು. ನಮ್ಮ ಸೇವಕರು, ಆಳುಗಳು, ಡ್ರೈವರ್‌ಗಳು, ಮನೆಕೆಲಸದವರನ್ನು ಚೆನ್ನಾಗಿ ನೋಡಿಕೊಳ್ಳದಷ್ಟು ಕಟುಕರಾಗಬಾರದು. ಇವರಿಗೆ ಗೌರವ ಕೊಡದವರು, ಜೀವನದಲ್ಲಿ ಇತರರಿಗೆ ಗೌರವ ಕೊಟ್ಟರೆ ಅದು ಅನ್ಯ ಉದ್ದೇಶ, ಸ್ವಾರ್ಥ, ಲಾಭವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಕೊಟ್ಟದ್ದಾಗಿರಬಹುದು. ಈ ಭಾವನೆಯೇ ಗಂಗಾದತ್ತನ ಅಂತ್ಯಕ್ರಿಯೆಯನ್ನು ಮಾಡುವಂತೆ ನನ್ನನ್ನು ಪ್ರೇರೇಪಿಸಿತು.' ಎಲ್ಲರಿಗೂ ಝವೆರೆ ಪೂನಾವಾಲ ಅವರಷ್ಟು ಶ್ರೀಮಂತರಾಗಲು ಸಾಧ್ಯವಾಗದೇ ಹೋಗಬಹುದು. ಆದರೆ ಅವರಷ್ಟು ಮಾನವೀಯತೆ ಮೆರೆಯಲು, ಹೃದಯ ಶ್ರೀಮಂತಿಕೆ ಮೆರೆಯಲು ಎಲ್ಲರಿಗೂ ಸಾಧ್ಯವಿದೆ. ಏನಂತೀರಾ?

ಪ್ರೀತಿಸುವುದು ಕಷ್ಟವಲ್ಲ, ಹೇಳೋದು...
ಕಳೆದ ವಾರ ದುರ್ಲಭಜೀ ಅವರ ಜತೆ ಮಾತಾಡುತ್ತಿದ್ದೆ. ಲೋಕಾಭಿರಾಮ ಮಾತಾಡುವಾಗ 'ಯೋಗೀಜಿ, ಃ್ಟ ಎಂದು ಹೇಳುವುದು ಬಹಳ ಕಷ್ಟ. ಅನೇಕ ಸಂದರ್ಭಗಳಲ್ಲಿ ನೋ ಎಂದು ಹೇಳಬೇಕಾದಾಗಲೆಲ್ಲ ಯೆಸ್ ಎಂದು ಹೇಳುತ್ತೇವೆ. ಹೊಟ್ಟೆ ತುಂಬಾ ಹಸಿವಾಗಿರುತ್ತದೆ. ಊಟ ಮಾಡ್ತೀಯಾ ಎಂದು ಕೇಳಿದರೆ ಊಟವಾಯ್ತು ಅಂತೇವೆ. ಬನ್ನಿ ಕುಳಿತುಕೊಳ್ಳಿ ಅಂದ್ರೆ ಇಷ್ಟು ಹೊತ್ತು ಕುಳಿತೇ ಇದ್ದೆ ಅಂತಾರೆ. ಯಾಕೆ ಹೀಗೆ?' ಎಂದು ಕೇಳಿದೆ.
ಯೋಗಿಜೀ ಈ ಪ್ರಶ್ನೆಗೆ ನೇರ ಉತ್ತರ ಕೊಡದೇ ಬೇರೆ ರೀತಿಯಲ್ಲಿ ವಿವರಿಸಿದರು. 'ಈ ಜಗತ್ತಿನಲ್ಲಿ ಪ್ರೀತಿಸಿದವರಿಗಿಂತ, ಲವ್ ಮಾಡಿ ಮ್ಯಾರೇಜ್ ಆದವರಿಗಿಂತ, ಪ್ರೀತಿಯನ್ನು ಹೇಳಿಕೊಳ್ಳಲಾಗದೇ, ಯಾರನ್ನು ಕೈ ಹಿಡಿಯಬೇಕಿತ್ತೋ ಅವರನ್ನು ಬಿಟ್ಟು ಬೇರೆಯವರ ಕೈ ಹಿಡಿದವರ ಸಂಖ್ಯೆಯೇ ಹೆಚ್ಚು. ತಮ್ಮ ಪ್ರೀತಿಯನ್ನು ನಿವೇದಿಸಿಕೊಳ್ಳಲಾರದವರ ಸಂಖ್ಯೆಯೇ ಜಾಸ್ತಿ' ಎಂದರು. 'ಅಚ್ಚರಿಯಿರಬಹುದು. ಪ್ರೀತಿಯಲ್ಲಿರುವ ಹುಡುಗ-ಹುಡುಗಿಗೆ ಬಹಳ ಕಷ್ಟವಾದುದೇನೆಂದರೆ ಐ ಟ್ಟಢಜ ಘ್ಟ್ಡ ಎಂದು ಹೇಳುವುದು. ಈ ಒಂದು ವಾಕ್ಯವನ್ನು ಹೇಳಲು ಸಾಧ್ಯವಾಗದೇ ಜೀವನವಿಡೀ ಪರಿತಪಿಸಿದವರಿದ್ದಾರೆ. ಐ ಲವ್ ಯು ಎಂದು ಹೇಳಿ ಮದುವೆಯಾದವರಿಗಿಂತ ಹೇಳಲಾಗದೇ ಮದುವೆಯಾಗದವರೇ ಹೆಚ್ಚು' ಎಂದರು ಯೋಗಿಜೀ.
ಅದೆಂಥ ಕಷ್ಟವೋ ಗೊತ್ತಿಲ್ಲ. ಬಹಳ ಸಂದರ್ಭದಲ್ಲಿ ನಮಗೆ ಅನಿಸಿದ್ದನ್ನು ಹೇಳಲು ಆಗುವುದಿಲ್ಲ. ಅಷ್ಟೇ ಅಲ್ಲ, ಅನಿಸಿದ್ದನ್ನು ಹೇಳಲಾಗದೇ ಒದ್ದಾಡುತ್ತಿರುತ್ತೇವೆ. ಒಂದು ಮಾತನ್ನು ನಮ್ಮ ಮನಸ್ಸಿನಲ್ಲಿಟ್ಟುಕೊಂಡು ಪೇಚಾಡುತ್ತಿರುತ್ತೇವೆ. ಅದ್ಯಾವ ಕಟ್ಟಳೆ, ಹಿಡಿತ ನಮ್ಮನ್ನು ಹಿಡಿದಿಟ್ಟಿರುವುದೋ ಏನೋ, ಒಂದು ಮಾತನ್ನು ಹೇಳಲು ಆಗುವುದಿಲ್ಲ.
ನನಗೆ ಯೋಗಿಜೀ ಮಾತು ನಿಜ ಅಂತೆನಿಸಿತು. ಅವರು ಹೇಳಿದರು- 'ನೋಡಿ, ಜನರಿದ್ದಾರಲ್ಲ ಅವರು ಮನಶ್ಶಾಸ್ತ್ರಜ್ಞರಲ್ಲ. ಅವರು ಟ್ಝಟಿಜ ್ಠಜಛಜಜ್ಠಡ ಅಲ್ಲ. ನೀವೇನು ಯೋಚಿಸುತ್ತಿದ್ದೀರಿ, ಹೇಳಲು ಬಯಸಿದ್ದೀರಿ ಎಂಬುದು ಅವರಿಗೆ ಗೊತ್ತಾಗುವುದಿಲ್ಲ. ನಿಮ್ಮ ಮನಸ್ಸಿನಲ್ಲಿ ವಿಹರಿಸುತ್ತಿರುವ ವಿಚಾರಗಳೇನು, ಕಲ್ಪನೆಗಳೇನು ಎಂಬುದನ್ನೆಲ್ಲ ಬೇರೆಯವರು ತಿಳಿದುಕೊಳ್ಳಬೇಕು ಎಂದು ನೀವೂ ಅಪೇಕ್ಷಿಸಬಾರದು. ಆದ್ದರಿಂದ ನೀವು ಬೇರೆಯವರಿಗೆ ಹೇಳಲೇಬೇಕು ಎಂದು ಅಂದುಕೊಂಡಿದ್ದನ್ನು ಹೇಳಲೇಬೇಕು. ಕೆಲವು ಸಂಗತಿಗಳನ್ನು ನಿಮ್ಮ ಪರವಾಗಿ ಬೇರೆಯವರು ಹೇಳಲು ಆಗುವುದಿಲ್ಲ. ಅದು ಸಮರ್ಪಕವೂ ಅಲ್ಲ. ಆ ಕೆಲಸವನ್ನು ನೀವೇ ಮಾಡಬೇಕು. ನಿಮಗೆ ಹೊಟ್ಟೆ ನೋಯುತ್ತಿದ್ದರೆ ವೈದ್ಯರ ಮುಂದೆ ನೀವೇ ನಿವೇದಿಸಿಕೊಳ್ಳಬೇಕು. ನನ್ನ ಮುಖ ನೋಡಿ ನೋವು ಎಲ್ಲಿದೆ ಎಂಬುದನ್ನು ವೈದ್ಯರೇ ತಿಳಿದುಕೊಳ್ಳಲಿ ಎಂದು ಯೋಚಿಸಿದರೆ ಹೇಗಿರುತ್ತದೆ? ನೀವು ಸಂಬಳ ಹೆಚ್ಚಳ, ಭಡ್ತಿಯನ್ನು ನಿರೀಕ್ಷಿಸುತ್ತಿದ್ದೀರಿ ಎಂದು ಹೇಳದಿದ್ದರೆ ನಿಮ್ಮ ಬಾಸ್‌ಗೆ ಗೊತ್ತಾಗುವುದಾದರೂ ಹೇಗೆ? ಅಳದೇ ಇದ್ದರೆ ಯಾವ ತಾಯಿಯೂ ಮಗುವಿಗೆ ಹಾಲುಣಿಸುವುದಿಲ್ಲ.'
ಅಂದ ಹಾಗೆ, ಹೇಳಬೇಕಾದುದನ್ನು ಹೇಳುವುದು ತಪ್ಪಲ್ಲ. ಹೇಳದಿರುವುದೇ ತಪ್ಪು. ಎಲ್ಲಿ, ಯಾವಾಗ, ಹೇಗೆ ಹೇಳಬೇಕೆಂಬುದು ಮಾತ್ರ ಗೊತ್ತಿರಲಿ.

ಹೋದೆಯಾ ಅಂದ್ರೆ...!?
ನನ್ನ ಸ್ನೇಹಿತನ ಬಳಿ ಹಳೆ ಫಿಯಟ್ ಕಾರೊಂದಿತ್ತು. ಅದನ್ನು ಅವರ ಮಕ್ಕಳೂ ಓಡಿಸುತ್ತಿರಲಿಲ್ಲ. ಒಂದು ವರ್ಷದಿಂದ ಅವರೂ ಓಡಿಸುವುದನ್ನು ನಿಲ್ಲಿಸಿದ್ದರು. ಮಾರಾಟ ಮಾಡೋಣ ಎಂದು ನಿರ್ಧರಿಸಿದರು. ಸೆಕೆಂಡ್ ಹ್ಯಾಂಡ್ ಕಾರ್ ಏಜೆಂಟ್ ಕಾರನ್ನು ನೋಡಿ, 'ಹೆಚ್ಚೆಂದರೆ ಇಪ್ಪತ್ತೈದು ಸಾವಿರ ರೂ. ಕೊಡಬಹುದು' ಎಂದ. ಅದಕ್ಕೆ ನನ್ನ ಸ್ನೇಹಿತರು 'ಎಲ್ಲಾದರೂ ಉಂಟಾ? ಅಷ್ಟು ಕಡಿಮೆ ರೇಟಿಗೆ ಕಾರನ್ನು ಕೊಡಲು ನನಗೆ ತಲೆಕೆಟ್ಟಿಲ್ಲ' ಅಂದರು. ವ್ಯವಹಾರ ಮುರಿದು ಬಿತ್ತು. ಅದಾದ ಬಳಿಕ ಮೂರ್ನಾಲ್ಕು ಮಂದಿ ಅವರ ಕಾರನ್ನು ನೋಡಿದರೂ ಯಾರೂ ಸಹ ಇಪ್ಪತ್ತೈದು ಸಾವಿರ ರೂಪಾಯಿಗಿಂತ ಜಾಸ್ತಿ ಕೋಟ್ ಮಾಡಲಿಲ್ಲ. ಒಂದು ವರ್ಷವಾಯಿತು. ಕಾರು ತುಕ್ಕು ತಿನ್ನಲಾರಂಭಿಸಿತ್ತು. ಅಲ್ಲದೇ ಮನೆಯಲ್ಲಿ ಕಾರನ್ನು ನಿಲ್ಲಿಸಲು ಜಾಗದ ಸಮಸ್ಯೆ ಸಹ ಎದುರಾಯಿತು. ಕಾರನ್ನು ಮಾರಲೇಬೇಕಾದ ಅನಿವಾರ್ಯತೆ ಎದುರಾಯಿತು. ಆದರೆ ಗಿರಾಕಿ ಮಾತ್ರ ಸಿಗಲಿಲ್ಲ. ಈ ಮಧ್ಯೆ ಒಂದಿಬ್ಬರು ಬಂದವರು ಐದು ಸಾವಿರ ರೂ. ಕೊಡ್ತೇವೆ. ಆರು ಸಾವಿರ ರೂ. ಕೊಡಬಹುದು ಎಂದರು. 'ಅಯ್ಯೋ ಶಿವನೇ, ಇಪ್ಪತ್ತೈದು ಸಾವಿರ ರೂಪಾಯಿಗೆ ಕೇಳಿದಾಗ ಕೊಟ್ಟು ಬಿಡಬೇಕಿತ್ತು' ಎಂದು ಅವರು ಅಲವತ್ತುಕೊಂಡರು. ಸ್ನೇಹಿತರು ಪತ್ರಿಕೆಯಲ್ಲಿ ಜಾಹೀರಾತು ಕೊಡಲು ನಿರ್ಧರಿಸಿದರು. ಜಾಹೀರಾತಿಗೆ ನಾಲ್ಕೂವರೆ ಸಾವಿರ ರೂಪಾಯಿ ಖರ್ಚಾಗುತ್ತದೆಂದು ತಿಳಿದು ಸುಮ್ಮನಾದರು.
ಆರು ತಿಂಗಳು ಕಳೆಯಿತು. ಸ್ನೇಹಿತರಿಗೆ ಕಾರಿನದ್ದೇ ಚಿಂತೆ. ಯಾಕೋ ಬಂದವರು 'ಸಾರ್ ಪುಕ್ಕಟೆ ಕೊಟ್ಟರೂ ನಿಮ್ಮ ಕಾರು ಬೇಡ ಬಿಡಿ' ಎಂದುಬಿಟ್ಟರು. 'ಮನೆಯಲ್ಲಿ ಮಕ್ಕಳು, ಪಾರ್ಕಿಂಗ್‌ಗೇ ಜಾಗ ಇಲ್ಲ. ಈ ಕಾರು ಬೇರೆ ಕೇಡು' ಎಂದು ಅವರಿಗೆ ಕೇಳುವಂತೆ ಹಂಗಿಸಲಾರಂಭಿಸಿದರು. ಇಂಥ ವಿಚಿತ್ರ ಸ್ಥಿತಿಯಲ್ಲಿ, ಬೇರೆ ದಾರಿ ಕಾಣದೇ ಸ್ನೇಹಿತರು ಎಂ.ಜಿ. ರಸ್ತೆಯಲ್ಲಿ ಕಾರನ್ನು ನಿಲ್ಲಿಸಿ, 'ದರಿದ್ರದ್ದು ಇಲ್ಲಿಯೇ ಇರಲಿ, ಯಾರಾದ್ರೂ ತೆಗೆದುಕೊಂಡು ಹೋಗಲಿ' ಎಂದು ಶಾಪ ಹಾಕಿ ಮನೆಗೆ ಬಂದುಬಿಟ್ಟರು.  ಪೀಡೆ ತೊಲಗಿತು ಎಂದು ಸ್ನೇಹಿತರು ಭಾವಿಸಿ ನಿರಾಳರಾದರು. ಐದು ದಿನಗಳ ಬಳಿಕ, ಮನೆಯ ಡೋರ್‌ಬೆಲ್ ಸದ್ದಾಯಿತು. ಹೊರಗೆ ಹೋಗಿ ನೋಡಿದರೆ ಪೊಲೀಸರು! ಗೇಟಿನ ಹೊರಗಡೆ ತಮ್ಮ ಫಿಯೆಟ್ ಕಾರು!
'ಏನ್ಸಾರ್, ಯಾರೋ ನಿಮ್ಮ ಕಾರನ್ನು ಕಳವು ಮಾಡಿ ಎಂ.ಜಿ. ರಸ್ತೆಯಲ್ಲಿ ಬಿಟ್ಟು ಹೋಗಿದ್ದಾರೆ. ನಮಗೆ ಸಿಕ್ಕಿತು ನೋಡಿ, ಅಲ್ಲಿ ತಂದು ನಿಲ್ಲಿಸಿದ್ದೇವೆ' ಎಂದರು. ಸ್ನೇಹಿತರಿಗೆ ಏನು ಹೇಳಬೇಕೆಂಬುದೇ ತಿಳಿಯದೆ ಪೆಚ್ಚಾಗಿ ಎಂಜಲು ನುಂಗಿಕೊಂಡರು. ಎಷ್ಟು ಹೊತ್ತಾದರೂ ಪೊಲೀಸರು ಜಾಗ ಖಾಲಿ ಮಾಡಲಿಲ್ಲ. ಅವರು ಹೋಗುವ ಸೂಚನೆಯೂ ಇರಲಿಲ್ಲ. ಆಗ ಪೊಲೀಸ್ ಕಾನ್‌ಸ್ಟೇಬಲ್ 'ಸಾರ್, ಬಹಳ ಪ್ರಯಾಸಪಟ್ಟು ನಿಮ್ಮ ಕಾರನ್ನು ಹುಡುಕಿದ್ದೇವೆ. ಖುಷಿಗಾಗಿ ಏನಾದರೂ ಕೊಡಿ' ಅಂದ. ಸ್ನೇಹಿತರು ಮತ್ತಷ್ಟು ಪೆಚ್ಚಾದರು. ಮನೆಯೊಳಗಿಂದ ಐದು ಸಾವಿರ ರೂಪಾಯಿ ತಂದು ಪೊಲೀಸರನ್ನು ಸಾಗ ಹಾಕಿದರು. ಈಗಲೂ ಅವರ ಮನೆಯ ಮುಂದೆ ಕಾರು ನಿಂತಿದೆ! ಕೆಲವು ಸಾಮಾನು, ವಸ್ತುಗಳನ್ನು ಹೊರ ಹಾಕಲು ಆಗುವುದಿಲ್ಲ. ಕೆಲವು ವ್ಯಕ್ತಿ, ಪ್ರಾಣಿಗಳೂ ಅಷ್ಟೆ. ಬೇಡವೆಂದರೂ ಹೊರಹಾಕಿದರೂ ವಾಪಸ್ ಮನೆಗೇ ಬರುತ್ತವೆ.


- ವಿಶ್ವೇಶ್ವರ ಭಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com