ಕೊನೆ ಇಲ್ಲದ ಲಂಚಗುಳಿತನ
ಕನ್ನಡಪ್ರಭದ 22/4/14 ಸಂಚಿಕೆಯಲ್ಲಿ ಮೂಡಿ ಬಂದ ಲಂಚಗುಳಿತನದ ವಿರೋಧದ ಹಿನ್ನೆಲೆಯ 'ನಿವೇಶನ, ಗಂಗಾ ಕಲ್ಯಾಣ ಯೋಜನೆಗೆ ಮಾಜಿ ಸೈನಿಕನ 'ಪರೇಡ್' ಈ ತಲೆಬರಹದಲ್ಲಿ ಮೂಡಿ ಬಂದ ವಿವರ ಓದಿ ತುಂಬಾ, ಖುಶಿಯಾಗಿ, ಸಿ. ರಂಗನ್ ಆ. ರಂಗಪ್ಪ ಇವರ ಕೃತ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತ ಈ ಪತ್ರ ಬರೆಯುತ್ತಿರುವೆ.
ರಂಗನ್ ಇವರು ಕೈಕೊಂಡ ಯಜ್ಞದಲ್ಲಿ ಯಶಸ್ಸು ಕಟ್ಟಿಟ್ಟದ್ದು. ಆದರೆ ಅದರ ಪೂರ್ವಾವ್ಯಥೆ ಇಂದಿನ ದಿನಗಳಲ್ಲೂ ಅನಿವಾರ್ಯ. ಏಕೆಂದರೆ ಮೇಲಿನಿಂದ ಕೆಳದರ್ಜೆಯವರೆಗೆ ಎಲ್ಲ ಕಡೆ ಭ್ರಷ್ಟಾಚಾರ ವ್ಯಾಪಕವಾಗಿ ಬೇರುಬಿಟ್ಟಿದೆ.
ನಾನೂ ಅವರಂತೆಯೇ ನನ್ನ ಅಂಚೆ ಇಲಾಖೆಯ ಸೇವಾವಧಿಯಲ್ಲಿ ಲಂಚಗುಳಿತನದ ವಿರೋಧ ನೀತಿಯನ್ನೇ ನನ್ನ ಧ್ಯೇಯವಾಗಿಟ್ಟುಕೊಂಡು ಬಂದವನು. ನನ್ನ ಹಲವು ಅನುಭವಗಳಲ್ಲಿ ಎರಡನ್ನು ಮಾತ್ರ ಇಲ್ಲಿ ಹೆಮ್ಮೆಯಿಂದ ಸಂಕ್ಷಿಪ್ತದಲ್ಲಿ ವಿವರಿಸುತ್ತಿರುವೆ.
ಸುಮಾರು 50 ವರ್ಷಗಳ ಹಿಂದೆ ನಾನು ಬಾಗಲಕೋಟೆ ಸಬ್ ಡಿವಿಜನ್ ಅಂಚೆ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದೆ. ಆಗ ಅಲ್ಲಿ ನಡೆದ ನನ್ನ ಅಧಿಕಾರ ವ್ಯಾಪ್ತಿಯಲ್ಲೇ ಬರುವ ತೇಲಗಿ ರೇಲ್ವೆ ಸ್ಟೇಷನ್ ಸಮೀಪ ಇದ್ದ ಕೆಂಬಗಿ ಎಂಬ ಹಳ್ಳಿಯಲ್ಲಿಯ ಪೋಸ್ಟ್ ಆಫೀಸಿನಲ್ಲಿ ಖಾಲಿ ಆಗಿದ್ದ ಬಿ.ಪಿ.ಎಂ. ಹುದ್ದೆಗೆ ಒಬ್ಬ ವ್ಯಕ್ತಿಯನ್ನು ನೇಮಿಸಬೇಕಿತ್ತು. ಸ್ಥಳೀಯ ಕನ್ನಡ ಶಾಲೆಯ ಮುಖ್ಯೋಧ್ಯಾಪಕರನ್ನು ಆಯ್ಕೆ ಮಾಡಿ, ಎಲ್ಲಾ ಕಾಗದ ಪತ್ರಗಳನ್ನು ತಯಾರಿಸಲೆಂದು ಒಂದು ನಿಗದಿತ ದಿನ ನನ್ನಲ್ಲಿ ಬರಲು ತಿಳಿಸಿದೆ ಅದರಂತೆ ಅವರು ಬಂದರು. ಎಲ್ಲಾ ಕಾಗದ ಪತ್ರ ತಯಾರಾದವು. ಸೆಕ್ಯುರಿಟಿ ಸಲುವಾಗಿ ಎಲ್ಐಸಿಗೆ ಪ್ರೀಮಿಯಮ್ ಹಣ ಕೂಡಾ ಕಳಿಸಿ ನನಗೆ ತಿಳಿಸಲು ಹೇಳಿದೆ. ಎಲ್ಲ ಮುಗಿದ ನಂತರ ಅವರಿಗೆ ಹೊರಡಲು ಹೇಳಿದೆ.
ಆಗ ಆ ವ್ಯಕ್ತಿ ತನ್ನ ಖಿಸೆಯಿಂದ ಇಪ್ಪತ್ತು ರೂ. ನೋಟೊಂದನ್ನು ತೆಗೆದು ನನ್ನ ಮುಂದೆ ಇಟ್ಟು ಅದನ್ನು ತೆಗೆದುಕೊಳ್ಳಲು ಹೇಳಿದ. ನಾನು ಅದನ್ನು ಕಂಡ ಕೂಡಲೇ ಸಿಟ್ಟಿನಿಂದ ಮೇಲೆದ್ದವನೇ ಅವರಿಂದ ಪಡೆದ ಎಲ್ಲ ಕಾಗದ ಪತ್ರ ಎಲ್ಐಸಿ ಫಾರಂ ಫೈಲ್ ಮಾಡಿ ನನಗೆ ಇಂಥ ವ್ಯವಹಾರ ನಡೆಸುವುದು ಇಷ್ಟವಿಲ್ಲ, ಆದ್ದರಿಂದ ನಿಮಗೆ ಈ ಜಾಗಕ್ಕೆ ನೇಮಕಾತಿ ಮಾಡುತ್ತಿಲ್ಲ ಮತ್ತು ಫೈಲ್ ಮೇಲೆ ಎಲ್ಲಾ ಬರೆದಿಡುತ್ತಿರುವೆ' ಎಂದು ಹೇಳಿ ಅವರನ್ನು ಹೊರಗೆ ಹಾಕಿದೆ. ಆಫೀಸಿನಲ್ಲಿ ಎಲ್ಲಾ ಸವಿಸ್ತಾರ ಬರೆದಿಟ್ಟುಬಿಟ್ಟೆ.
ಅಂಚೆ ಇಲಾಖೆಯಲ್ಲಿ ಐ.ಪಿ.ಎಸ್. ಆಫೀಸರ್ ಅಂತಾ ನಿವೃತ್ತಿ ಹೊಂದಿದ ನಂತರ ಒಂದು ಪ್ರಕರಣ, ನನ್ನ ಮಾಳಮಡ್ಡಿ, ಧಾರವಾಡ ಮನೆಯಲ್ಲಿ ಒಬ್ಬ ಹೆಂಗಸು ಮುಸುರಿ ತಿಕ್ಕುವ ಕೆಲಸ ಮಾಡುತ್ತಿದ್ದಳು. ಅವಳು ವಿಧವೆ. ಚಿಕ್ಕ ವಯಸ್ಸು. ಹೆಸರು ಲಕ್ಷ್ಮೀ. ವಿಚಾರ ಮಾಡಲಾಗಿ ಗಂಡ ರೇಲ್ವೆ ಕೂಲಿ ಕೆಲಸ ಮಾಡುವಾಗ ರೇಲು ಗಾಡಿಗೆ ಸಿಕ್ಕು ಮೃತಪಟ್ಟಿದ್ದ, ಒಂದು ವರ್ಷದ ಹಿಂದೆ ಅಂತಾ ಹೇಳಿದಳು. ನಾನು ನಿನಗೆ ವಿಧವಾ ಪಿಂಚಣಿ ಕೊಡಿಸಲು ಪ್ರಯತ್ನ ಮಾಡುವೆ. ನೀನು ಸಹಕಾರ ನೀಡಬೇಕು ಎಂದು ಹೇಳಿದೆ. ಅವಳು ಖುಷಿಯಿಂದ ಒಪ್ಪಿದಳು. ನಾನು ಎಲ್ಲಾ ಕಾಗದ ಪತ್ರ ಸಂಗ್ರಹಿಸಿ ಅವಳ ವಯಸ್ಸಿನ ಬಗ್ಗೆ ಕೋರ್ಟ್ ಅಫಿಡವಿಟ್ ಸಹಿತ ಪಡಕೊಂಡು ತಹಸೀಲ್ದಾರರಿಗೆ ಅರ್ಜಿ ಸಲ್ಲಿಸಿದೆ. ನಂತರ ಪ್ರತಿ ವಾರಕ್ಕೊಂದರಂತೆ ತಹಸೀಲ್ ಆಫೀಸಿಗೆ ಎಡತಾಕಿ ಚೌಕಾಸಿ ಮಾಡುತ್ತಿದ್ದೆ. ಎಲ್ಲಾ ಕಾಗದ ತವಾರಿ ಕಡೆಗೆ ಹೋಗಿವೆ, ರೆವಿನ್ಯೂ ಇನ್ಸ್ಪೆಕ್ಟರ್ ಕಡೆಗೆ ಹೋಗಿವೆ ಅಂತಾ ಏನೇನೋ ಹೇಳುತ್ತ ಕಾಲಹರಣ ಮಾಡುತ್ತ ಸಾಗಿದರು. ಒಂದು ದಿನ ಒಬ್ಬ ಇವರ ಮಧ್ಯವರ್ತಿ ನನ್ನನ್ನು ಸಂಪರ್ಕಿಸಿ ರೂ. 2000/- ಕೊಟ್ಟರೆ ಇಂದೇ ಪೆನ್ಷನ್ ಮಂಜೂರು ಮಾಡಿಸಿ ಕೊಡುವೆ ಎಂದು ಹೇಳಿದ. ನಾನು ಇದು ಸಾಧ್ಯವಿಲ್ಲ ಎಂದು ಅವನ ಹೇಳಿಕೆಯನ್ನು ಸಾರಾಸಗಟಾಗಿ ತಿರಸ್ಕರಿಸಿದೆ. ಮಂದೆ ನನ್ನ ಎಡತಾಕಪಟ್ಟಿ ಹಾಗೆಯೇ ನಡೆಯುತ್ತಿರಲು ಆ ವಿಧವೆಯ ಗಂಡು ಮಗು 18 ವರ್ಷ ಮಿಕ್ಕಿದವ ಇದ್ದದ್ದರಿಂದ ಪಿಂಚಣಿ ಸಿಗಲಾರದು ಎಂದು ತಿಳಿಸಿದರು. ನಾನು ಈ ಹೆಣ್ಣು ಮಗಳ ವಯಸ್ಸು 20 ವರ್ಷ, ಮೊದಲ ಮಗ 5 ವರ್ಷ, ನಂತರ ಇರುವ ಎರಡು ಹೆಣ್ಣು ಮಕ್ಕಳು 3 ವರ್ಷ ಮತ್ತು 11 ವರ್ಷದವು ಇವೆ ಎಂದು ವಾದಿಸಿದೆ. ಆದರೂ ಪಿಂಚಣಿ ಮಂಜೂರಾಗಲಿಲ್ಲ. ನನ್ನ ಪ್ರಯತ್ನ ಮುಂದುವರೆದೇ ಇತ್ತು. ಸ್ವತಃ ತಹಸೀಲ್ದಾರರ ಭೇಟಿ ಕೂಡ ಯಾವ ಪ್ರಯೋಜನ ನೀಡಲಿಲ್ಲ. ಅಸಿಸ್ಟೆಂಟ್ ಕಮೀಷನರ್, ಡೆಪ್ಯುಟಿ ಕಮೀಷನರ್ ಕೂಡ ತಾತ್ಸಾರ ಮಾಡಿದರು.
ಆ ತಹಸೀಲ್ದಾರ್ ವರ್ಗವಾಗಿ ಒಬ್ಬ ಪ್ರೊಬೇಷನರಿ ಆಫೀಸರ ತಹಸೀಲ್ದಾರ ಅಂತಾ ಬಂದರು. ಆಗ ನಾನು ಆ ಹೆಣ್ಣು ಮಗಳು ಮತ್ತು ಅವಳ ಚಿಕ್ಕ ಚಿಕ್ಕ ಮಕ್ಕಳನ್ನು ಆಫೀಸಿಗೆ ಕರಕೊಂಡು ಹೋಗಿ ತಹಸೀಲ್ದಾರರ ಮುಂದೆ ನಿಲ್ಲಿಸಿ ಎಲ್ಲ ವಿವರವಾಗಿ ಹೇಳಿದೆ. ಆಗ ಅವರು ಸಂಬಂಧಿಸಿದ ಕಾರಕೂನರನ್ನು ಕರೆಸಿ ಆ ಸಂಬಂಧಿಸಿದ ಫೈಲ್ ತರಿಸಿ ಆಗಲೇ ಪಿಂಚಣಿ ಮಂಜೂರು ಮಾಡಿದರು ಮತ್ತು ಎಲ್ಐಸಿಯಿಂದ ಬಂದು, ಅವರು ತಿಳಿಸಿದ, ಫಾರಂ ಪಡಕೊಂಡು ತುಂಬಿ ಕೊಡಲು ಹೇಳಿದರು. ಇದರ ವಿವರದ ಮೇಲೆ ಅವಳಿಗೆ ರೂ. 1000/- ಪರಿಹಾರ ಕೂಡ ಮಂಜೂರು ಮಾಡಿದರು. ನಾನು ಅವರಿಗೆ ನನ್ನ ಕೃತಜ್ಞತೆ ಹೇಳಿ ಶುಭ ಹಾರೈಸಿದೆ.
ಅವಳ ಮಗ 18 ವರ್ಷದವ ಆಗುವ ತನಕ ಮಾತ್ರ ಅವಳು ವಿಧವಾ ಪೆನ್ಷನ್ನಿಗೆ ಅರ್ಹಳಾದ್ದರಿಂದ ಇಲ್ಲಿ ಅವಳಿಗೆ, ನನ್ನ ಆಫೀಸ್ ಎಡತಾಕುವಲ್ಲಿ ಮತ್ತು ರೂ. 2000/- ಲಂಚ ಕೊಡಲು ಸಿದ್ಧರಿಲ್ಲದ್ದರಿಂದ, ಅವಳು ಮೂರು ವರ್ಷದ ಪಿಂಚಣಿಗೆ ವಂಚಿತಳಾದಳು. ಹೀಗಿದೆ ರೆವಿನ್ಯೂ ಇಲಾಖೆಯಲ್ಲಿಯ ಕಾರ್ಯವೈಖರಿ.
ಲಂಚಾವತಾರ ತಾಂಡವವಾಡದ ರಾಜ್ಯ ಸರ್ಕಾರದ ಇಲಾಖೆಗಳೇ ಇಲ್ಲ. ಅವುಗಳಲ್ಲಿ ಲೋಕೋಪಯೋಗಿ ಇಲಾಖೆ, ಕಂದಾಯ, ಪೊಲೀಸ್, ಆರ್ಟಿಓ, ನಗರಪಾಲಿಕೆ, ಸಹಕಾರ ಇಲಾಖೆ ಪ್ರಮುಖವಾಗಿವೆ. ಇಲ್ಲಿಯ ಹಗರಣ, ಲಂಚಗುಳಿತನಕ್ಕೆ ಕಡಿವಾಣ ಇಲ್ಲವೇ ಇಲ್ಲ, ಎಲ್ಲಂ ಖುಲ್ಲಾ ಖುಲ್ಲಾ. ಕೇಂದ್ರ ಸರ್ಕಾರೀ ಇಲಾಖೆಗಳಲ್ಲಿಯೂ ಇತ್ತಿತ್ತಲಾಗಿ ಭ್ರಷ್ಟಾಚಾರ ವ್ಯಾಪಕವಾಗಿ ಪಸರಿಸಿದೆ. ಅತ್ಯಲ್ಪ ಭ್ರಷ್ಟಾಚಾರ ನಡೆಯುತ್ತಿದ್ದ ಅಂಚೆ-ತಂತಿ ಇಲಾಖೆಯಲ್ಲಿ ಕೂಡ ಭ್ರಷ್ಟಾಚಾರ ಕಾಲಿಟ್ಟಿದೆ-ಪಸರಿಸುತ್ತಿದೆ.
ಇಂಥ ಬೃಹತ್ ಪ್ರಮಾಣದ ಭ್ರಷ್ಟಾಚಾರದಿಂದ ಸಾಮಾನ್ಯ ಜನತೆ ನಲುಗಿ ಹೋಗಿದ್ದಾರೆ.
-ದೀಕ್ಷಿತ್. ಯು.ಜಿ. ಧಾರವಾಡ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

