ಅಂಕಣಗಳು

ಬಿಟ್ಟಿ ಪ್ರಚಾರ ಪಡೆಯುತ್ತಿರುವ ಪ್ರಿಯಾಂಕಾರ ಅರ್ಹತೆ ಏನು?

ಬಿಟ್ಟಿ ಪ್ರಚಾರ ಪಡೆಯುತ್ತಿರುವ ಪ್ರಿಯಾಂಕಾರ ಅರ್ಹತೆ ಏನು?
Published On :

ಅಮೇಠಿ ಮತ್ತು ರಾಯ್‌ಬರೇಲಿ ಎರಡು ಕ್ಷೇತ್ರಗಳಲ್ಲಿ ಪ್ರಿಯಾಂಕಾ ವಾದ್ರಾ ಪುಂಖಾನುಪುಂಖ ಹೇಳಿಕೆಗಳನ್ನು ಎಸೆಯುತ್ತಿರುವ ಒಂದೇ ಆಧಾರದಲ್ಲಿ ಪ್ರಿಯಾಂಕ ವರ್ಸಸ್ ಮೋದಿ ಎಂಬ ವಿಶ್ಲೇಷಣೆಗಳು ಹುಟ್ಟಿಕೊಂಡುಬಿಟ್ಟಿವೆ. ಎದುರಾಳಿಯ ಯಾವ ಆರೋಪಗಳಿಗೂ ಉತ್ತರಿಸದಿದ್ದರೂ ಪ್ರಶ್ನೆಗೆ ಪ್ರಶ್ನೆ ಕೇಳುವ ವರಸೆಯನ್ನೇ ವೈಭವೀಕರಿಸಿ 2019ರ ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿ ಪ್ರಿಯಾಂಕಾ ಗಾಂಧಿಯೇ ಎಂಬ ಅನುಮಾನ ತಲೆಎತ್ತುವಷ್ಟು ಪ್ರಚಾರ ಸಿಗುತ್ತಿದೆ. ರಾಹುಲ್ ಗಾಂಧಿಗಿಂತ ಪ್ರಿಯಾಂಕಾ ವಾಸಿ ಎಂಬ ಎಲ್ಲೋ ಒಂದೆರೆಡು ಕಡೆ ಮಾತು ಕೇಳಿದ ಮೇಲಂತೂ ಈ ಸಂದೇಹಕ್ಕೆ ಇನ್ನಷ್ಟು ಬಲ ಸಿಕ್ಕಿದೆ.
ಹೋಗಲಿ ಬಿಡಿ, ಇದು ಕಾಂಗ್ರೆಸ್ ಅಧಿಪತ್ಯ ಇಟ್ಟುಕೊಂಡಿರುವ ದೊಡ್ಡ ಕುಟುಂಬದ ಆಂತರಿಕ ವಿಚಾರ. ಏಕೆಂದರೆ ದೇಶದ ಪ್ರಧಾನಿ ಅಭ್ಯರ್ಥಿ ಕಾಂಗ್ರೆಸ್‌ನಿಂದ ಯಾರಾಗಬೇಕು ಎಂದು ನಿರ್ಧರಿಸುವುದು ಇದೇ ಕುಟುಂಬ. ಅವರು ಅಕ್ಕನನ್ನಾದರೂ ಬಿಂಬಿಸಬಹುದು, ತಮ್ಮನನ್ನಾದರೂ ಬಿಂಬಿಸಬಹುದು. ಹೀಗಾಗಿ ಸದ್ಯಕ್ಕೆ ವಿಚಾರ ಮಾಡುವ ಸಂಗತಿಯೇ ಅಲ್ಲ. ಆದರೆ ಈ ಚುನಾವಣೆಯಲ್ಲಿ ನಮ್ಮ ಮಾಧ್ಯಮಗಳು ಯಾಕೆ ಪ್ರಿಯಾಂಕಾ ಗಾಂಧಿ ಹಿಂದೆ ಸುತ್ತುತ್ತಿವೆ ಎಂಬುದೇ ಅರ್ಥವಾಗುತ್ತಿಲ್ಲ. ಅಷ್ಟಕ್ಕೂ ಪ್ರಿಯಾಂಕಾ ಮೇಲೆ ಮಾಧ್ಯಮಗಳಿಗೇಕೆ ಈ ರೀತಿಯ ಆದರ, ಅಭಿಮಾನ? ಇವರನ್ನು ಮೋದಿಗೆ ಸರಿಯಾದ ಪ್ರತಿಸ್ಪರ್ಧಿ ಎಂದು ಬಿಂಬಿಸುವುದರಲ್ಲಿ ಅರ್ಥವಿದೆಯೇ? ಮಾಧ್ಯಮಗಳೇ ಕುಟುಂಬ ರಾಜಕೀಯಕ್ಕೆ ನೀರೆರೆಯುತ್ತಿವೆಯೇ? ಗೊತ್ತಾಗುತ್ತಿಲ್ಲ. ರಾಹುಲ್ ಗಾಂಧಿ ಅವರನ್ನೇ ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುವುದರಲ್ಲಿ ಒಂದು ಅರ್ಥವಿದೆ. ಕಳೆದ ಎರಡು ಅವಧಿಯಲ್ಲಿ ಸಂಸತ್ ಸದಸ್ಯರಾಗಿರುವ ರಾಹುಲ್‌ಗೆ ಒಂದಷ್ಟಾದರೂ ದೇಶದ ಸ್ಥಿತಿಗತಿ, ರಾಜಕೀಯ, ಸಾಮಾಜಿಕ, ಆರ್ಥಿಕ ಪರಿಸ್ಥಿತಿಯ ಅನುಭವವಿದೆ. ಆದರೆ ಪ್ರಿಯಾಂಕಾಗೆ ಈ ಯಾವ ಅನುಭವವಿದೆ? ಕೆಲ ಕಾಂಗ್ರೆಸ್ಸಿಗರಂತೂ 12 ವರ್ಷಗಳಿಂದ ಗುಜರಾತ್‌ನ ಮುಖ್ಯಮಂತ್ರಿಯಾಗಿ ಆಳ್ವಿಕೆ ನಡೆಸುತ್ತಿರುವ ನರೇಂದ್ರ ಮೋದಿ ಪ್ರಧಾನಿಯಾಗಲು ಲಾಯಕ್ಕಿಲ್ಲ, ಅವರಿಗೆ ದೇಶದ ಆಡಳಿತ ಹೇಗೆ ನಡೆಸಬೇಕು ಎಂಬುದೇ ಗೊತ್ತಿಲ್ಲ, ಅವರಿಗಿಂತ ಬಿಜೆಪಿಯಲ್ಲಿನ ಇನ್ನೊಬ್ಬ ಅಥವಾ ಮತ್ತೊಬ್ಬ ನಾಯಕ ವಾಸಿ ಎಂದು ಬೊಬ್ಬೆ ಇಡುತ್ತಿರುತ್ತಾರೆ. ಆದರೆ ಪ್ರಿಯಾಂಕಾ ಗಾಂಧಿ ವಿಚಾರಕ್ಕೆ ಬಂದರೆ ಈ ನಾಯಕರಿಗೆ ಇಂಥ ತರ್ಕಗಳೇಕೆ ಕಾಡುವುದಿಲ್ಲ? ಇದುವರೆಗೆ ಒಮ್ಮೆಯೂ ಸಂಸತ್ ಸದಸ್ಯೆಯಾಗದ, ಅಧಿಕಾರಿಯೂ ಆಗದ, ಕ್ಯಾಬಿನೆಟ್ ಸಚಿವೆಯೂ ಆಗದ, ಮುಖ್ಯಮಂತ್ರಿಯೂ ಆಗದ, ಯಾವುದೇ ರಾಜಕೀಯ ಅನುಭವವೂ ಇಲ್ಲದ (ಅಮೇಠಿ ಮತ್ತು ರಾಯಬರೇಲಿಯಲ್ಲಿ ಚುನಾವಣಾ ಪ್ರಚಾರ ನಡೆಸಿದ್ದು ಬಿಟ್ಟರೆ) ಪ್ರಿಯಾಂಕಾ ಗಾಂಧಿ ಹೇಗೆ ದೇಶ ಆಳಲು ಲಾಯಕ್ಕಾಗುತ್ತಾರೆ? ಇಂಥವರ ಮಗಳು, ಇಂಥವರ ಮೊಮ್ಮಗಳು ಎಂಬ ಅರ್ಹತೆಯನ್ನು ಬಿಟ್ಟರೆ ಮತ್ತೇನನ್ನೂ ಹೊಂದಿರದ ಪ್ರಿಯಾಂಕಾ ವಾದ್ರಾರ ಪ್ರತಿ ಮಾತನ್ನೂ ಮುಖಪುಟಕ್ಕೆ ತರಬೇಕಾದ, ಚಾನೆಲ್‌ಗಳಲ್ಲಿ ಮುಖ್ಯಸುದ್ದಿ ಮಾಡುತ್ತಿರುವ ಮಾಧ್ಯಮದ ಬಳಿ ಇರುವ ಮಾನದಂಡವಾದರೂ ಏನು?
ಪ್ರಿಯಾಂಕ ಎಂದರೆ ನಮಗೆ ನೆನಪಾಗುವುದು ಪ್ರತಿ ಬಾರಿಯ ಲೋಕಸಭೆ ಚುನಾವಣೆ. ಈ ಸಂದರ್ಭದಲ್ಲಿ ಅಮ್ಮ ಮತ್ತು ತಮ್ಮ ರಾಹುಲ್ ಅವರ ಅಮೇಠಿ ಮತ್ತು ರಾಯ್‌ಬರೇಲಿಯಲ್ಲಿ ಪ್ರಚಾರ ನಡೆಸಿರುವ ಇವರು, ಉಳಿದೆಲ್ಲಾ ಸಂದರ್ಭಗಳಲ್ಲಿ ಅಪರೂಪಕ್ಕೆ ಒಮ್ಮೆ ಮಾತ್ರ ಕಾಣಿಸುತ್ತಾರೆ. ರಾಜಕೀಯದ ದೃಷ್ಟಿಯಲ್ಲಿ ಇವರನ್ನು ಇದುವರೆಗೆ ಯಾರೂ ಗಂಭೀರವಾಗಿ ಪರಿಗಣಿಸಿಲ್ಲ. ಏಕೆಂದರೆ ರಾಜಕೀಯದಲ್ಲಿ ತಮ್ಮ ನಿಲುವೇನು ಎಂಬುದರ ಬಗ್ಗೆಯೂ ಅವರು ಯಾವ ಗುಟ್ಟು ಬಿಟ್ಟುಕೊಟ್ಟಿಲ್ಲ.
ನಿಜಕ್ಕೂ ಪ್ರಿಯಾಂಕಾ ಗಾಂಧಿ ಅವರನ್ನು ಈ ರೀತಿ ಬಿಂಬಿಸುವುದರಲ್ಲಿ ಅರ್ಥವಿದೆಯೇ? ಈ ಬಗ್ಗೆ ಪ್ರಚಾರ ಮಾಡುತ್ತಿರುವವರೇ ಉತ್ತರಿಸಬೇಕು. ಗುಜರಾತ್ ಅನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದಿದ್ದರೂ, ನರೇಂದ್ರ ಮೋದಿಗೆ ರಾಷ್ಟ್ರ ರಾಜಕಾರಣದ ಅನುಭವವೇ ಇಲ್ಲ ಎಂಬ ಕಾಂಗ್ರೆಸ್ಸಿಗರ ಮಾತುಗಳೂ ಕ್ಷುಲ್ಲಕವಾಗಿ ಕಾಣುತ್ತವೆ. ದೇಶಕ್ಕೆ ಪ್ರಿಯಾಂಕಾ ಗಾಂಧಿ ಯಾವ ರೀತಿಯ ಸೇವೆ ನೀಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸೊನ್ನೆ ಮಾತ್ರ. ಕೇವಲ ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಮಗಳು ಎಂಬ ಹೆಗ್ಗಳಿಕೆ ಬಿಟ್ಟರೆ ಪ್ರಿಯಾಂಕಾ ಗಾಂಧಿ ಅವರ ವ್ಯಕ್ತಿತ್ವದಲ್ಲಿ ಬೇರೇನೂ ಹೇಳಿಕೊಳ್ಳುವಂಥ ವಿಶೇಷವಿಲ್ಲ. ರಾಷ್ಟ್ರ ಮುನ್ನಡೆಸುವ ಛಾತಿ ಇದೆಯೇ ಎಂಬ ಪ್ರಶ್ನೆಗೆ ಉತ್ತರ ಆ ದೇವರೇ ಬಲ್ಲ. ಏಕೆಂದರೆ, ಇತ್ತೀಚಿನ ರಾಜಕೀಯ ಪ್ರಚಾರ ಸಭೆಗಳಲ್ಲಿ ಅವರು ಮಾತನಾಡುತ್ತಿರುವ ರೀತಿ ಇದಕ್ಕೆ ಉತ್ತರ ಕೊಡುತ್ತದೆ. ಪ್ರೌಢತೆಯಿಂದ ಕೂಡಿದ ಮಾತುಗಳ ಹೊರತಾಗಿ, ಬೇರೆ ಇನ್ನೇನೋ ಮಾತನಾಡುತ್ತಾರೆ. ನರೇಂದ್ರ ಮೋದಿ ಪ್ರಿಯಾಂಕಾ ನನ್ನ ಮಗಳಿದ್ದಂತೆ ಎಂದರು ಎಂಬುದಕ್ಕೆ ಅವರು ಕೆಂಡಾಮಂಡಲವಾದಂಥ ಪ್ರತಿಕ್ರಿಯೆಗಳನ್ನೇ ಕೊಟ್ಟು ಬಿಟ್ಟರು. ನಾನು 'ರಾಜೀವ್ ಗಾಂಧಿ ಮಗಳು' ಎಂದು ಹೇಳುವ ಮೂಲಕ ಬಾಲಿಷ ವರ್ತನೆ ಪ್ರದರ್ಶಿಸಿಬಿಟ್ಟರು. ಅಷ್ಟಕ್ಕೂ ಮೋದಿ ಹೇಳಿದ್ದರಲ್ಲಿ ಯಾವ ತಪ್ಪಿದೆ? ಪ್ರಿಯಾಂಕಾ ಗಾಂಧಿ ನನ್ನ ಮಗಳಿದ್ದ ಹಾಗೆ ಎಂದರೆ ತಪ್ಪೇ? ರಾಜೀವ್ ಗಾಂಧಿ ಮಗಳಲ್ಲ ಎಂದೇನಾದರೂ ಅವರು ಹೇಳಿದ್ದರೇ?
ವಿಚಿತ್ರವೆಂದರೆ ಈ ವಿವಾದಕ್ಕೆ ಕಾರಣವಾದ ಸಂದರ್ಶನದ ಮೇಲೆ ಸರ್ಕಾರವೇ ಕೈಯಾಡಿಸಿದೆ ಎಂಬ ಆರೋಪಗಳೂ ಇವೆ. ದೂರದರ್ಶನಕ್ಕೆ ಮೋದಿ ನೀಡಿದ ಸಂದರ್ಶನ ಭಾನುವಾರ ಪ್ರಸಾರವಾಗಿತ್ತು. ಇದರಲ್ಲಿ ಮೋದಿ, "ಪ್ರಿಯಾಂಕಾ ನನ್ನ ಮಗಳಿದ್ದ ಹಾಗೆ" ಎಂದಿದ್ದರು ಎಂಬ ವರದಿಗಳು ಬಂದಿದ್ದವು. ಆದರೆ ಶುಕ್ರವಾರದ ಸುದ್ದಿಗಳ ಪ್ರಕಾರ, ಮೋದಿ ಈ ರೀತಿ ಹೇಳಿಯೇ ಇರಲಿಲ್ಲವಂತೆ. ಹಾಗಾದರೆ ಈ ವಿವಾದದ ಸೃಷ್ಟಿ ಯಾರದ್ದು ಎಂಬುದನ್ನು ಆ ದೇವರೇ ಹೇಳಬೇಕು. ಇಂಥ ಸಂಗತಿಗಳನ್ನು ನೋಡಿದರೆ ಬೇಕೆಂದೇ ಕಾಂಗ್ರೆಸ್, ಪ್ರಿಯಾಂಕಾ ಸುತ್ತ ಒಂದು ವಿವಾದ ಸೃಷ್ಟಿಸುತ್ತಿದೆ ಅನ್ನಬಹುದು. ವಿವಾದ ಸೃಷ್ಟಿಸದ ಹೊರತು ಪ್ರಿಯಾಂಕಾ ಸುದ್ದಿಯಲ್ಲಿ ಇರಲ್ಲ ಎಂಬ ಭಯ ಇರಬೇಕು ಎಂಬುದೂ ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ.
ಇನ್ನು ಅಮೇಠಿ ಮತ್ತು ರಾಯ್‌ಬರೇಲಿಯಲ್ಲಿ ಪ್ರಿಯಾಂಕಾ ನಡೆಸುತ್ತಿರುವ ಪ್ರಚಾರವಾದರೂ ಎಂಥದ್ದು? ಮೋದಿ ಹೋದಲ್ಲೆಲ್ಲಾ ನಮ್ಮ ಗುಜರಾತ್ ನೋಡಿ ಅನ್ನುತ್ತಾರೆ. ಆದರೆ ಪ್ರಿಯಾಂಕಾ ಗಾಂಧಿ ಅಪ್ಪಿತಪ್ಪಿಯೂ ಈ ಎರಡೂ ಕ್ಷೇತ್ರಗಳಲ್ಲಿ ಅಮ್ಮ ಸೋನಿಯಾ ಮತ್ತು ತಮ್ಮ ರಾಹುಲ್ ಗಾಂಧಿ ಮಾಡಿರುವ ಸಾಧನೆ ನೋಡಿ ಮತ ಹಾಕಿ ಎಂದು ಕೇಳುತ್ತಿಲ್ಲ. ಬದಲಾಗಿ ನೇರವಾಗಿ ನರೇಂದ್ರ ಮೋದಿ ಅವರ ವಿರುದ್ಧವೇ ವಾಗ್ದಾಳಿ ನಡೆಸುತ್ತಾರೆ. ಅಂದರೆ ಪ್ರಿಯಾಂಕಾ ಅವರ ಮಾತಿನ ವರಸೆಯಲ್ಲೇ ಅಮೇಠಿ ಮತ್ತು ರಾಯ್‌ಬರೇಲಿಯಲ್ಲಿ ಯಾವ ಅಭಿವೃದ್ಧಿಯಾಗಿಲ್ಲ ಎನ್ನಬಹುದು. ಆಗಿದ್ದರೆ ಪ್ರಿಯಾಂಕಾ ಅಭಿವೃದ್ಧಿಗಾಗಿ ಮತ ಹಾಕಿ ಎನ್ನಬೇಕಿತ್ತಲ್ಲವೇ? ಅಪ್ಪನನ್ನು, ಅಜ್ಜಿಯನ್ನು ನೆನಪಿಸಿಕೊಂಡು ಆಡುವ ಭಾವನಾತ್ಮಕ ಮಾತುಗಳೇ ಬಂಡವಾಳ ಏಕಾಗಬೇಕಿತ್ತು? ಗುಜರಾತ್ ಮಾದರಿ ಎನ್ನುತ್ತಿರುವ ಮೋದಿಯವರಿಗೆ 'ಅಮೇಠಿ ಮಾದರಿ'ಯ ಮೂಲಕ ಉತ್ತರ ಕೊಡಬಹುದಿತ್ತಲ್ಲ? ಅವೆಲ್ಲ ಬಿಟ್ಟು, 'ಮೋದಿ ದಿಲ್ ಮಾಂಗೇ ಮೋರ್ ಅಂತಾರೆ. ಅವರಿಗೆ ಸಿಕ್ಕಷ್ಟೂ ತೃಪ್ತಿಯಿಲ್ಲ' ಅಂತ ಪ್ರಿಯಾಂಕಾ ಕೆಣಕುತ್ತಾರೆ. ಇದೇ ಮಾತನ್ನು ಇವರ ಕುಟುಂಬಕ್ಕೇ ಚೆನ್ನಾಗಿ ಅನ್ವಯಿಸಬಹುದಲ್ಲ?
ಒಂದು ಕೋನದಲ್ಲಿ ಇಂದಿರಾ ಗಾಂಧಿ ರೀತಿ ಕಾಣಿಸುತ್ತಾರೆ ಎಂಬ ಹೋಲಿಕೆ ಪ್ರಿಯಾಂಕಾ ಪಾಲಿಗೆ ನಿಲ್ಲಬಹುದು. ಇದನ್ನು ಬಿಟ್ಟರೆ, ದೇಶದ ಮುಂದಿನ ನಾಯಕಿ ಎಂದು ಬಿಂಬಿಸುವಲ್ಲಿ ಯಾವ ಉದ್ದೇಶವೂ ಈಡೇರಲ್ಲ. ಆದರೂ ಪ್ರಸ್ತುತದಲ್ಲಿ ಮಾಧ್ಯಮಗಳು, ಕಾಂಗ್ರೆಸ್ ಪಾಲಿಗೆ ಪ್ರಿಯಾಂಕಾ ಗಾಂಧಿ ಐಕಾನ್ ರೀತಿ ಆಗಿಬಿಟ್ಟಿದ್ದಾರೆ. ಹೀಗಾಗಿಯೇ ಅಲ್ಲವೇ ಬೀದರ್ ಲೋಕಸಭಾ ಕ್ಷೇತ್ರದ ಸಂಸದ ಧರಂಸಿಂಗ್ ಅವರು ರಾಹುಲ್‌ಗಿಂತ ಪ್ರಿಯಾಂಕಾ ಗಾಂಧಿಯೇ ವಾಸಿ ಎಂದಿದ್ದು! ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಪ್ರಿಯಾಂಕಾ ಪತಿ ರಾಬರ್ಟ್ ವಾದ್ರಾ ಚುನಾವಣಾ ಆಯೋಗದ ನಿಯಮವನ್ನೂ ಮೀರಿ 150 ಬೈಕುಗಳೊಂದಿಗೆ ರ್ಯಾಲಿ ನಡೆಸಿದರು. ಫಲಿತಾಂಶ ಬಂದಾಗ ಆ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 10 ವಿಧಾನಸಭೆ ಸ್ಥಾನಗಳ ಪೈಕಿ 7ರಲ್ಲಿ ಕಾಂಗ್ರೆಸ್ ಸೋತಿತ್ತು. ಕುಟುಂಬ ರಾಜಕಾರಣದ ಭಜನಾಮಂಡಳಿಯವರು ಇಂಥ ಅಂಶಗಳನ್ನೂ ಲೆಕ್ಕಕ್ಕೆ ತೆಗೆದುಕೊಳ್ಳಬೇಕು!


- ಸಿ. ಜೆ. ಸೋಮಶೇಖರ್, ಕನ್ನಡಪ್ರಭ
sompreethi@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.