ಇಷ್ಟಕ್ಕೂ ಢೋಂಗಿ ಜ್ಯೋತಿಷಿಗಳನ್ನು ಬೆಳೆಸಿದವರ್ಯಾರು?

ಇತ್ತೀಚೆಗಂತೂ ಜ್ಯೋತಿಷಿಗಳೆಂದು, ದೇವಮಾನವರೆಂದು ಹೇಳಿಕೊಳ್ಳುವ, ಗುರೂಜಿ-ಸ್ವಾಮೀಜಿಗಳೆಂದು ಸಂಬೋಧಿಸಲ್ಪಡುವವರ ಅಂತಃಪುರದ ಅವಾಂತರಗಳು ದೃಶ್ಯಮಾಧ್ಯಮದ ಸುದ್ದಿ ವಾಹಿನಿಗಳಲ್ಲಿ ಸಾಪ್ತಾಹಿಕ ಧಾರಾವಾಹಿಯಂತೆ ಬಿತ್ತರಗೊಳ್ಳುತ್ತಿವೆ. ಮತ್ತು ಅವುಗಳ ಬಗ್ಗೆ ದಿನಗಟ್ಟಲೆ, ವಾರಗಟ್ಟಲೆ ಚರ್ಚೆಗಳೂ ನಡೆಯುತ್ತಿವೆ. ಅಂಥ ಚರ್ಚೆಗಳಲ್ಲಿ ಭಾಗವಹಿಸುವ ಬುದ್ಧಿಜೀವಿಗಳು, ಪ್ರಗತಿಪರರು, ಧಾರ್ಮಿಕ ವಿಚಾರಗಳ ಬಗ್ಗೆ ಅವರಿಗಿರುವ ಆಕ್ರೋಶವನ್ನು ಹೊರಹಾಕಲು ಒಳ್ಳೇ ವೇದಿಕೆ ಸಿಕ್ಕಿತೆಂದೇ ಭಾವಿಸಿ ಜನರಲ್ಲಿರುವ ಧಾರ್ಮಿಕ ನಂಬಿಕೆಗಳ ಮೇಲೆ ಆಕ್ರಮಣವನ್ನೇ ಮಾಡುತ್ತಿದ್ದಾರೆ. ಸರ್ಕಾರ ತರಬೇಕೆಂದು ಉದ್ದೇಶಿಸಿ ಕೈಬಿಟ್ಟಿದ್ದ ಮೂಢನಂಬಿಕೆ ಪ್ರತಿಬಂಧಕ ಕರಡು ವಿಧೇಯಕವನ್ನು ಮತ್ತೆ ಜಾರಿಗೊಳಿಸುವಂತೆ ಪರೋಕ್ಷವಾಗಿ ಪ್ರಭಾವ ಬೀರುವ ಪ್ರಯತ್ನ ಮಾಡುತ್ತಿದ್ದಾರೆ. ನಕಲಿ ಜ್ಯೋತಿಷಿಗಳ, ನಕಲಿ ದೇವಮಾನವರುಗಳ ಕಾಮಪುರಾಣಕ್ಕೂ ಜನಗಳ ಧಾರ್ಮಿಕ ನಂಬಿಕೆಗಳಿಗೂ ನಂಟು ಕಲ್ಪಿಸಿ ಹಿಂದೂ ಧರ್ಮದ ಆಚರಣೆಗಳನ್ನು ಅಪಹಾಸ್ಯ ಮಾಡುವುದು, ಜನರಲ್ಲಿ ಧಾರ್ಮಿಕ ಶ್ರದ್ಧೆ ಕ್ಷೀಣಿಸುವಂತೆ ಮಾಡುವುದು ಬುದ್ಧ್ದಿಜೀವಿಗಳೆನಿಸಿಕೊಂಡವರ ಒಂದು ರೀತಿಯ ತೆವಲು.
ಅಷ್ಟಕ್ಕೂ ಇಂಥ ನಕಲಿ ಜ್ಯೋತಿಷಿಗಳನ್ನು, ನಕಲಿ ದೇವಮಾನವರುಗಳನ್ನು ಹುಟ್ಟುಹಾಕುತ್ತಿರುವವರೇ ಸುದ್ದಿವಾಹಿನಿಗಳವರು. ಪೂರ್ವಾಪರ ವಿಚಾರಿಸದೆ ಕಾವಿ ರುದ್ರಾಕ್ಷಿ ತೊಟ್ಟವರನ್ನೆಲ್ಲಾ ಜ್ಯೋತಿಷಿಗಳು, ದೇವಮಾನವರುಗಳೆಂದು ಭ್ರಮಿಸಿ ಸ್ಟುಡಿಯೋಗಳಿಗೆ ಕರೆತಂದು, "ವಿಚಿತ್ರ ಬ್ರಾಹ್ಮಣನಿಗೆ ಮೈಯೆಲ್ಲಾ ರುದ್ರಾಕ್ಷಿ" ಎಂಬ ಗಾದೆ ಮಾತಿನಂತೆ ಮೈಕೈಯ ತುಂಬಾ ಮಣಿಗಳ ಮಾಲೆಗಳನ್ನು ಹಾಕಿ, ಬಗೆ ಬಗೆಯ ಪೋಸ್ಗಳಲ್ಲಿ ಅವರನ್ನು ತೋರಿಸಿ ಜನರ ದುಃಖ ದುಮ್ಮಾನಗಳನ್ನು ಕಳೆಯಲು ಬಂದ ದೈವಸ್ವರೂಪಿಗಳೆಂಬ ಭ್ರಮೆ ಹುಟ್ಟಿಸುವವರೇ ಇವರು. ತಾವೇ ಅವರುಗಳನ್ನು ಗುರೂಜಿ...ಸ್ವಾಮೀಜಿ...ಎಂದೆಲ್ಲಾ ಸಂಬೋಧಿಸಿ ಜನರೂ ಅದೇ ರೀತಿ ಕರೆಯುವಂತೆ ಪ್ರೇರೇಪಿಸುವವರು ಇವರೇ! ಟೆಲಿಫೋನ್ ಮೂಲಕ ವೀಕ್ಷಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವಂತೆ ಮಾಡಿ ಅವುಗಳಿಗೆ ಗ್ರಹಶಾಂತಿ, ವ್ರತ, ನೇಮ ಹೋಮಹವನಾದಿ ಪರಿಹಾರಗಳನ್ನು ಸೂಚಿಸುವಂತೆ ಮಾಡುವವರೂ ಇವರೇ. ಚುನಾವಣೆ ಬಂತೆಂದರೆ ಅಥವ ಭಿನ್ನಮತ ಏರ್ಪಟ್ಟು ಸರ್ಕಾರ ಡೋಲಾಯಮಾನ ಸ್ಥಿತಿ ತಲುಪಿತೆಂದರೆ ಸಾಕು ರಾಜಕೀಯ ವಿಶ್ಲೇಶಕರುಗಳಿಗಿಂತ ಹೆಚ್ಚಾಗಿ ಇದೇ ಜ್ಯೋತಿಷಿಗಳ ತಂಡವನ್ನು ಅಕ್ಕಪಕ್ಕ ಕೂಡಿಸಿಕೊಂಡು ದಿನಗಟ್ಟಲೆ ರಾಜಕಾರಣಿಗಳ ಜಾತಕಗಳನ್ನು, ಗ್ರಹಗತಿಗಳನ್ನೂ ಚರ್ಚಿಸುವವರೂ ಇವರೇ. ಜಗತ್ತಿನ ಯಾವುದೋ ಒಂದು ಮೂಲೆಯಲ್ಲಿ ಕೂತು ಯಾರೋ ಕಾಲಜ್ಞಾನಿ ಯಾವಾಗಲೋ ಹೇಳಿದನೆಂಬ ಪ್ರಳಯದ ವಿಷಯವನ್ನೇ ಇಟ್ಟುಕೊಂಡು ತಿಂಗಳುಗಟ್ಟಲೆ ಕೊರೆಯುವವರೂ ಇವರೇ.
ನಂತರ ಇವರೇ ಹುಟ್ಟು ಹಾಕಿದ ನಕಲಿಗಳಿಂದ ಎಡವಟ್ಟುಗಳೇನಾದರೂ ಆಗಿಬಿಟ್ಟರೆ ಅದನ್ನು ದಿನಗಟ್ಟಲೆ ತೋರಿಸಿ ಪ್ರಗತಿಪರರ ಜೊತೆ ಕೂತು ಅವರುಗಳಿಗೆ "ಕಳ್ಳ-ಮಳ್ಳ-ಸುಳ್ಳ-ಕಾಮಿ" ಎಂದೆಲ್ಲಾ ವಿಕೃತ ಬಿರುದುಗಳನ್ನು ಕೊಟ್ಟು ಅವರ ಮಾನ ಹರಾಜು ಹಾಕುವವರೂ ಇವರೇ. ಅವರನ್ನು ಟೀಕಿಸುವ ಭರದಲ್ಲಿ ಧಾರ್ಮಿಕ ನಂಬಿಕೆಗಳನ್ನೆಲ್ಲಾ ಮೂಢನಂಬಿಕೆ ಎಂದು ಜರಿದು, ಇವರ ಸಮ್ಮುಖದಲ್ಲೇ ಇವರದೇ ಜ್ಯೋತಿಷಿಗಳು ಸೂಚಿಸಿದ ಹೋಮಹವನಾದಿ ಪರಿಹಾರಗಳನ್ನು ದಂಧೆಯಂತಲೂ, ಶೋಷಣೆಯಂತಲೂ ಟೀಕಿಸಿ ಬೊಂಬಡಾ ಹೊಡೆಯುವವರೂ ಇವರೇ. ಇವರು ತಮ್ಮಿಂದಾದ ಆ ತಪ್ಪಿಗೆ ಕನಿಷ್ಠ ಸೌಜನ್ಯಕ್ಕಾದರೂ ವಿಷಾದ ವ್ಯಕ್ತಪಡಿಸುವುದಿಲ್ಲ. ಬದಲಾಗಿ ಅದಕ್ಕೂ ಸರ್ಕಾರವನ್ನೋ, ಜನರನ್ನೋ ಇಲ್ಲಾ ಧಾರ್ಮಿಕ ನಂಬಿಕೆಗಳನ್ನೋ ಹೊಣೆಯಾಗಿ ಮಾಡುತ್ತಾರೆ. ಇತ್ತೀಚೆಗೆ ನಡೆದ ದೇವಿಶ್ರೀ ಗುರೂಜಿಯ ಘಟನೆಯನ್ನೇ ನೋಡಿ. ಅವರು ಯಾರೆಂದೇ ಜನರಿಗೆ ಗೊತ್ತಿರಲಿಲ್ಲ. ಅವರನ್ನು ಜನಪ್ರಿಯಗೊಳಿಸಿದವರೇ ವಾಹಿನಿಗಳವರು. ಈಗ ಅವರ ಮಾನ ಕಳೆಯುತ್ತಿರುವುದೂ ಮಾಧ್ಯಮಗಳೇ. ದಿನಗಟ್ಟಲೆ ಆ ಘಟನೆಯ ಬಗ್ಗೆ ಚರ್ಚೆಗಳನ್ನೇರ್ಪಡಿಸಿ ಅದರಲ್ಲಿ ನಿರೂಪಕರಿಂದ ಹಿಡಿದು ಚರ್ಚೆಯಲ್ಲಿ ಭಾಗವಹಿಸುವ ಬುದ್ದಿಜೀವಿಗಳೂ ಜ್ಯೋತಿಷಿಗಳೂ ಮೊದಲ್ಗೊಂಡು ಎಲ್ಲರೂ ಈ ನ್ಯೂನತೆಗೆ ಸರ್ಕಾರವನ್ನು ಹೊಣೆ ಮಾಡುತ್ತಿದ್ದಾರೆ. ಬೇರೆ ಯಾವುದೇ ಹುದ್ದೆಯನ್ನಲಂಕರಿಸಬೇಕಾದರೆ ಸರ್ಕಾರದಿಂದ ಅರ್ಹತಾ ಪತ್ರವೆಂಬುದಿರುತ್ತದೆ ಆದರೆ ಜ್ಯೋತಿಷಿ ಎನಿಸಿಕೊಳ್ಳಬೇಕಾದರೆ ಅಂತಹ ನಿರ್ಬಂಧವೆಂಬುದೇನೂ ಇಲ್ಲ, ಯಾರು ಬೇಕಾದರೂ ಜ್ಯೋತಿಷಿ ಅಥವಾ ದೇವಮಾನವರಾಗಿಬಿಡಬಹುದು! ಹಾಗಾಗಿ ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಿ ಜ್ಯೋತಿಷಿಗಳನ್ನು ನಿಯಂತ್ರಿಸಬೇಕು ಎಂಬ ವಾದವನ್ನು ಮಂಡಿಸುತ್ತಿದ್ದಾರೆ. ಇದೊಂದು ರೀತಿಯಲ್ಲಿ ತಮ್ಮಿಂದಾದ ಪ್ರಮಾದದ ಹೊಣೆಯನ್ನು ಸರ್ಕಾರದ ಹೆಗಲಿಗೆ ವರ್ಗಾಯಿಸುವ ತಂತ್ರವೆನ್ನದೆ ಬೇರೇನೆನ್ನಲಾದೀತು?
ಸರ್ಕಾರ ಅರ್ಹತಾ ಪತ್ರವೊಂದನ್ನು ಕೊಟ್ಟುಬಿಟ್ಟರೆ ನಕಲಿಗಳು ಹುಟ್ಟುವುದೇ ಇಲ್ಲವೇ? ಬೋರ್ಡ್ ಹಾಕಿಕೊಂಡು ತಪ್ಪುತಪ್ಪು ಚಿಕಿತ್ಸೆ ಮಾಡಿ ಜೀವಹಾನಿ ಮಾಡುತ್ತಿರುವ ನಕಲಿ ವೈದ್ಯರುಗಳನ್ನು ನಾವು ನೋಡುತ್ತಿಲ್ಲವೇ? ಪೊಲೀಸ್ ಪೋಶಾಕು ಧರಿಸಿ ಹೆದ್ದಾರಿಗಳಲ್ಲಿ ಕಲೆಕ್ಷನ್ ಮಾಡುವುದು, ಆದಾಯ ತೆರಿಗೆ ಅಧಿಕಾರಿಗಳ ಸೋಗಿನಲ್ಲಿ ಬಂದು ಮನೆ ಲೂಟಿ ಮಾಡುವುದು, ಅಷ್ಟೇ ಏಕೆ ಸುದ್ದಿವಾಹಿನಿಗಳ ವರದಿಗಾರರೆಂದು ಹೇಳಿಕೊಂಡು ಹಣ ವಸೂಲಿ ಮಾಡುವುದೆಲ್ಲ ನಡೆಯುತ್ತಿಲ್ಲವೇ? ಖಾಕಿ ಖಾದಿ ತೊಟ್ಟು ಮೋಸಮಾಡುವವರು ಇರುವಂತೆಯೇ ಕಾವಿ ತೊಟ್ಟು ಮೋಸ ಮಾಡುವವರೂ ಇದ್ದಾರೆ. ಒಬ್ಬ ನಕಲಿ ವೈದ್ಯ ಸಿಕ್ಕಿಬಿದ್ದರೆ ಅದೊಂದು ಸಾಮಾನ್ಯ ಸುದ್ದಿಯಾಗುತ್ತದೆಯೇ ಹೊರತು ಇಡೀ ವೈದ್ಯಕೀಯ ವ್ಯವಸ್ಥೆಯೇ ತಪ್ಪು ಎಂಬಂತಹ ಚರ್ಚೆಯಾಗುವುದಿಲ್ಲ. ಒಬ್ಬ ಸುದ್ದಿವಾಹಿನಿಯ ವರದಿಗಾರನೆಂದು ಹೇಳಿಕೊಂಡು ಹಣ ವಸೂಲಿ ಮಾಡುವವನು ಸಿಕ್ಕಿಬಿದ್ದರೆ ಸುದ್ದಿವಾಹಿನಿಯ ವಿಶ್ವಾಸಾರ್ಹತೆಯನ್ನು ಪ್ರಶ್ನೆ ಮಾಡುವುದಿಲ್ಲ. ಆದರೆ ಧಾರ್ಮಿಕ ವಿಚಾರಗಳಲ್ಲಿ ಯಾರಾದರೊಬ್ಬ ನಕಲಿ ಸಿಕ್ಕಿಬಿಟ್ಟರೆ ಸಾಕು ಚರ್ಚೆ ಅವನೊಬ್ಬನಿಗೆ ಸೀಮಿತವಾಗಿರದೆ ಜನರ ಧಾರ್ಮಿಕ ನಂಬಿಕೆಗಳ ಅಡಿಪಾಯವನ್ನೇ ಅಲ್ಲಾಡಿಸುವಂತೆ ಚರ್ಚೆಗಳಾಗುತ್ತವೆ. ಸರ್ಕಾರ ಅಂಥ ಧಾರ್ಮಿಕ ಆಚರಣೆಗಳನ್ನೇ ನಿಯಂತ್ರಿಸಬೇಕೆಂದು ಕೂಗೆಬ್ಬಿಸಲಾಗುತ್ತದೆ. ಇದೆಂಥ ವೈಪರೀತ್ಯ?
ಇನ್ನು ಭವಿಷ್ಯ ಹೇಳುವವರಿಗೆಲ್ಲಾ ಕನಿಷ್ಠ ವಿದ್ಯಾರ್ಹತೆ ಮತ್ತು ಹೊಣೆಗಾರಿಕೆಯನ್ನು ಗೊತ್ತುಪಡಿಸಬೇಕೆಂಬುದೇ ಈ ಪ್ರಗತಿಪರರ ಅಭಿಪ್ರಾಯವಾದರೆ ಭವಿಷ್ಯ ನುಡಿಯುವವರಲ್ಲಿ ಅನಕ್ಷರಸ್ಥ ಕೊಂಡಮಾಮಗಳಿದ್ದಾರೆ, ಹಾಲಕ್ಕಿ ಶಾಸ್ತ್ರ ಹೇಳುವ ಬುಡುಬುಡಿಕೆಯವರಿದ್ದಾರೆ, ಗಿಣಿಶಾಸ್ತ್ರ ಹೇಳುವವರಿದ್ದಾರೆ. ವರ್ಷಕ್ಕೊಮ್ಮೆ ಜಾತ್ರೆಯಲ್ಲಿ ಕಂಬ ಏರಿ ಶಾಸ್ತ್ರ ಹೇಳುವ ಮೈಲಾರಿ ಲಿಂಗ ಅಂಥವರಿದ್ದಾರೆ. ಹಳ್ಳಿಗಳಲ್ಲಿ ಗ್ರಾಮದೇವತೆ ಮೈಮೇಲೆ ಬರುತ್ತದೆಂದು ಹೇಳಿ ಭವಿಷ್ಯ ನುಡಿಯುವವರಿದ್ದಾರೆ. ದಕ್ಷಿಣ ಕನ್ನಡದಲ್ಲಿ ಭೂತಕೋಲ, ಕೊಡಗಿನಲ್ಲಿ ಪಂಜುರ್ಲಿ ಹೀಗೆ ಮಲೆನಾಡು, ಬಯಲುಸೀಮೆ ಒಂದೊಂದು ಪ್ರದೇಶದಲ್ಲೂ ಅದರದ್ದೇ ಆದ ಭವಿಷ್ಯ ನುಡಿಯುವ ಪದ್ಧತಿಗಳಿವೆ. ಒಂದು ರೀತಿಯಲ್ಲಿ ಅವುಗಳೆಲ್ಲಾ ಇರುವುದರಿಂದಲೇ ನಮ್ಮ ಜಾನಪದ ಸಂಸ್ಕೃತಿಯು ಶ್ರೀಮಂತವಾಗಿದೆ. ಅವುಗಳನ್ನೆಲ್ಲಾ ಸಾರಾಸಗಟಾಗಿ ಮೂಢನಂಬಿಕೆಗಳೆಂದು ಉಪೇಕ್ಷೆ ಮಾಡಲಾಗುವುದಿಲ್ಲ. ಅವುಗಳಿಂದ ಮಾನಸಿಕ ನೆಮ್ಮದಿ ಕಾಣುತ್ತಿರುವವರು ಲಕ್ಷಾಂತರ ಮಂದಿಯಿದ್ದಾರೆ. ಈ ದೇಶದಲ್ಲಿರುವ ದಾರಿದ್ರ್ಯ ಹಸಿವು ಹಾಹಾಕಾರಗಳಿಂದ ಕಂಗೆಟ್ಟು ಆತ್ಮಹತ್ಯೆಯ ಮಾರ್ಗ ಹಿಡಿಯಬೇಕಾಗಿದ್ದ ಎಷ್ಟೋ ಮಂದಿಯನ್ನು ಮುಂದೊಂದು ದಿನ ತಮಗೂ ಒಳ್ಳೆಯ ಟೈಮ್ ಬಂದೇ ಬರುತ್ತದೆಂಬ ಆಶಾವಾದದ ಮೇಲೆ ಬದುಕುವಂತೆ ಮಾಡಿರುವುದರಲ್ಲಿ ಇಂಥ ಭವಿಷ್ಯಕಾರರ ಪಾತ್ರ ಬಹು ದೊಡ್ಡದಿದೆ. ಹೀಗಿರುವಾಗ ಅಂಥವರನ್ನು ನಿಯಂತ್ರಿಸಲು ಅರ್ಹತೆಗಳನ್ನು ನಿಗದಿಪಡಿಸಲಾದೀತೇ? ಆ ನಿಯಮಗಳಡಿ ಬಾರದವರನ್ನು ಜೈಲಿಗಟ್ಟಲಾದೀತೇ? ಹಾಗೆ ಮಾಡಿದರೆ ನಮ್ಮ ಶ್ರೀಮಂತ ಜಾನಪದ ಸಂಸ್ಕೃತಿಯ ಮೇಲೆ ನಾವೇ ದಾಳಿ ಮಾಡಿದಂತಾಗುವುದಿಲ್ಲವೇ?
ಜಗತ್ತಿನಲ್ಲಿ ಮುಂದೆ ಸಂಭವಿಸಬಹುದಾದ ಘಟನೆಗಳನ್ನು ತಮ್ಮ ಭವಿಷ್ಯವಾಣಿಗಳಲ್ಲಿ ನುಡಿಯುವ ಮಂದಿಯನ್ನು ನಮ್ಮಲ್ಲಿ ಕಾಲಜ್ಞಾನಿಗಳೆಂದು ಕರೆಯಲಾಗುತ್ತದೆ. ಅವರಲ್ಲಿ ಕೆಲವರು ನುಡಿದಿರುವ ಭವಿಷ್ಯವಾಣಿಗಳು ಇಂದಿಗೂ ಅಕ್ಷರಷಃ ಸತ್ಯವೆಂದು ಸಾಬೀತಾಗುತ್ತಿವೆ. ಹಾಗಾಗಿ ಕೆಲವರಿಗೆ ದೈವತ್ವದ ಪಟ್ಟ ದೊರಕಿರುವುದನ್ನೂ ಕಾಣಬಹುದು. ಶ್ರೀಮದ್ ಭಾಗವತದ ಏಕಾದಶ ಸ್ಕಂದದಲ್ಲಿ ಶ್ರೀ ವೇದವ್ಯಾಸರು ಕಲಿಯುಗದಲ್ಲಿ ಜನರ ನಡೆ ನುಡಿ ವೇಷಭೂಷಣ ಕೇಶಾಲಂಕಾರ ಸ್ತ್ರೀ ಪುರುಷರ ಸಂಬಂಧಗಳು ಹೇಗಿರುತ್ತದೆಂದು ವರ್ಣಿಸಿದ್ದಾರೋ ಅದೇ ರೀತಿಯಲ್ಲಿ ನೂರಕ್ಕೆ ನೂರರಷ್ಟಿರುವುದನ್ನು ಇಂದು ಕಾಣಬಹುದಾಗಿದೆ. ಅವರ ಆ ದಿವ್ಯದೃಷ್ಟಿಯಿಂದಲೇ ಅವರನ್ನು "ವ್ಯಾಸಾಯ ವಿಷ್ಣುರೂಪಾಯ ವ್ಯಾಸರೂಪಾಯ ವಿಷ್ಣವೇ"(ಶ್ರೀಮನ್ ಮಹಾವಿಷ್ಣುವಿನ ಸಾಕ್ಷಾತ್ ಅವತಾರವೆಂದೇ) ಎಂದು ಪೂಜಿಸಲಾಗುತ್ತಿದೆ. ಇತ್ತೀಚಿನ ದಿನಗಳ ಉದಾಹರಣೆಬೇಕೆಂದರೆ ಪೋತನೂರಿ ವೀರಬ್ರಹ್ಮೇಂದ್ರ ಸ್ವಾಮಿ ಹಾಗೂ ಕೈವಾರದ ನಾರಾಯಣತಾತ ಅವರ ಹೆಸರುಗಳನ್ನು ಉದಾಹರಿಸಬಹುದಾಗಿದೆ. ಕೈವಾರದ ನಾರಾಯಣತಾತ ಅವರು 198 ವರ್ಷಗಳ ಹಿಂದೆಯೇ ನಮ್ಮ ದೇಶ ನಮ್ಮ ಸಮಾಜದಲ್ಲಾಗುವ ಬದಲಾವಣೆಗಳ ಬಗ್ಗೆ ಭವಿಷ್ಯ ನುಡಿದಿದ್ದರು. ಅವರ ಭಾಷೆ ತೆಲುಗು ಆಗಿದ್ದುದರಿಂದ ಅವರ ಭವಿಷ್ಯವಾಣಿ ತೆಲುಗಿನಲ್ಲಿದೆ. ಅದರ ಒಂದೆರಡು ತುಣುಕುಗಳನ್ನು ಇಲ್ಲಿ ಪ್ರಸ್ಥಾಪಿಸಬೇಕಿದೆ: "ಚೋರುಲ ಪಟ್ಟಂಬಾಯೆನು, ರಾಜೆವ್ವಡು ಲೇಕಪೋಯ, ರಾಜ್ಯಮು ಚೆಡೆರಾ, ದೊಂಗಲ ದೋಪೈಯನ್ನದಿ ನಿಂಡಾ ಪರತತ್ವ ಪ್ರಚಂಡ ನಾರೇಯಣ ಕವಿ" ಅರ್ಥಾತ್ "ಕಳ್ಳರು ಅಧಿಕಾರಕ್ಕೆ ಬರುತ್ತಾರೆ, ರಾಜರು ಇರುವುದಿಲ್ಲ ರಾಜ್ಯದ ಆಡಳಿತ ನಡೆಯುತ್ತೆ, ಕಳ್ಳರೇ ಪ್ರಭುತ್ವದಲ್ಲಿರುತ್ತಾರೆ". ಅಂದರೆ ಭಾರತಕ್ಕೆ ಸ್ವಾತಂತ್ರ ಬಂದು ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ಬಂದು ಭ್ರಷ್ಟಾಚಾರಿಗಳು ದೇಶವನ್ನಾಳುತ್ತಾರೆ ಎಂಬ ಭವಿಷ್ಯವನ್ನು ದೇಶದಲ್ಲಿ ಸ್ವಾತಂತ್ರ ಹೋರಾಟ ಶುರುವಾಗುವುದಕ್ಕೆ ಮುಂಚೆಯೇ ನುಡಿದಿದ್ದಾರೆ. ಇಂಥಾ ಭವಿಷ್ಯಗಳನ್ನು ಹೇಳಿರುವ ಕೈವಾರದ ನಾರಾಯಣತಾತ ಅವರು ದೊಡ್ಡ ವಿದ್ವಾಂಸರೇನಲ್ಲ. ಕೇವಲ ಒಬ್ಬ ಬಳೆಗಾರ ಅಷ್ಟೇ. ಅವರು ಇಷ್ಟು ನಿಖರವಾಗಿ ಭವಿಷ್ಯ ಹೇಳಿರುವುದು ಯಾವ ಕುಂಡಲಿಗಳನ್ನು ನೋಡಿಯೂ ಅಲ್ಲ, ಗ್ರಹಗಳ ಚಲನೆಗಳ ಲೆಕ್ಕಾಚಾರ ಮಾಡಿಯೂ ಅಲ್ಲ. ಇಂತಿಂಥಾ ಮಹಾನುಭಾವರು ಹುಟ್ಟಿರುವ ಈ ದೇಶದಲ್ಲಿ, ಟಿ.ವಿ ಯಲ್ಲಿ ಕಾಣಿಸಿಕೊಂಡ ಯಾರೋ ಒಬ್ಬ ನಕಲಿ ಪಂಡಿತ ಏನೋ ಮಾಡಬಾರದ್ದನ್ನು ಮಾಡಿ ಸಿಕ್ಕಿಕೊಂಡ, ಅಂದರೆ ಇಡೀ ವ್ಯವಸ್ಥೆಗೇ ನಿರ್ಬಂಧ ಹೇರುವ ಮಾತಾಡುವುದು ಎಷ್ಟು ಸಮಂಜಸ? ಆಗ ಕೈವಾರದ ನಾರಾಯಣಪ್ಪ, ವೀರಬ್ರಹ್ಮೇಂದ್ರ ಸ್ವಾಮಿಗಳಂಥವರು ಕಾಣಸಿಗುವುದಾದರೂ ಎಲ್ಲಿಂದ?
ಇಂದು ನಿಜವಾಗಲೂ ಸರ್ಕಾರದ ನಿಯಂತ್ರಣದ ಅಗತ್ಯವೇನಾದರೂ ಇದ್ದರೆ ಅದು ಈ ಸುದ್ದಿವಾಹಿನಿಗಳ ದ್ವಂದ್ವನೀತಿಗಳಿಗೇ ವಿನಃ ಜ್ಯೋತಿಷ್ಯಕ್ಕಲ್ಲ. ಅಭಿವ್ಯಕ್ತಿ ಸ್ವಾತಂತ್ರದ ಹೆಸರಿನಲ್ಲಿ ಕಿರಿಕ್ ಮಾಡುತ್ತಾರೆಂದು ಹೆದರಿ ಸರ್ಕಾರಗಳು ಸುಮ್ಮನಿವೆ ಅಷ್ಟೇ. ಆದುದರಿಂದ ಶಾಸ್ತ್ರ ಹೇಳುವುದು ಕೇಳುವುದು ನಂಬಿಕೆಯೋ? ಮೂಢನಂಬಿಕೆಯೋ? ಎಂಬುದನ್ನು ವಾಹಿನಿಗಳು ಮೊದಲು ಸ್ಪಷ್ಟ ಪಡಿಸಲಿ. ಮೂಢನಂಬಿಕೆಯೆಂಬುದೇ ಅವರ ನಿಲುವಾದಲ್ಲಿ ಅಂಥ ಕಾರ್ಯಕ್ರಮಗಳ ಪ್ರಸಾರವನ್ನು ನಿಲ್ಲಿಸಲಿ. ಟಿ.ಆರ್.ಪಿ ಗಾಗಿ ಢೋಂಗಿ ವ್ಯಕ್ತಿಗಳನ್ನು ಹೀರೋಗಳನ್ನಾಗಿ ಮಾಡಿ ಅವರ ನಿಜಬಣ್ಣ ಬಯಲಾಗುತ್ತಿದ್ದಂತೆ ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಸರ್ಕಾರಕ್ಕೆ ಬಿಟ್ಟಿ ಸಲಹೆ ಕೊಡುವುದು ಬೇಡ. ಮೊದಲು ತಮ್ಮನ್ನು ತಾವು ನಿಯಂತ್ರಿಸಿಕೊಂಡು ನಂತರ ಇನ್ನೊಬ್ಬರ ನಿಯಂತ್ರಣದ ಬಗ್ಗೆ ಯೋಚಿಸುವುದು ಆರೋಗ್ಯವಂತ ಮನಸುಗಳ ಲಕ್ಷಣ.
- ಫಣಿರಾಮಚಂದ್ರ
paniramachandra.hs@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


