ಪಾಯಿಂಟ್ ಟು ಬಿ ನೋಟೆಡ್
ಲೋಕಸಭೆ ಚುನಾವಣೆ ಘೋಷಣೆಯಾಗಿ ಇದೀಗ ಸ್ಥಿರ ಸರ್ಕಾರದ ಫಲಿತಾಂಶ ಬರುವವರೆಗಿನ ಸುದ್ದಿಮನೆ ಚಿತ್ರಣ ಕದನ ಭೂಮಿಯಂತೆ. ಹೊಸದನ್ನು ಕೊಡುವ ಹವಣಿಕೆಯಲ್ಲಿ ಸಮಯದ ಪರಿವೆ ಇಲ್ಲದೇ ಸುದ್ದಿಜೀವಿಗಳೆಲ್ಲ ತೊಡಗಿಸಿಕೊಂಡಿದ್ದ ಹಂತವಿದು. ಸುದ್ದಿ- ವಿಶ್ಲೇಷಣೆಗಳ ಒತ್ತಡ ತುಸು ಕಡಿಮೆಯಾಗಿ ನಿಟ್ಟುಸಿರು ಚೆಲ್ಲಬಹುದಾದ ಈ ಸಂದರ್ಭದಲ್ಲಿ, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ವಿಶ್ಲೇಷಣಾತ್ಮಕವಾಗಿ ನಿಮ್ಮನ್ನು ತುಂಬ ಕಾಡಿದ ಸಂಗತಿ ಯಾವುದು ಎಂಬ ಪ್ರಶ್ನೆಯನ್ನು, ವಿಶೇಷವಾಗಿ ರಾಷ್ಟ್ರೀಯ ಸುದ್ದಿಗಳ ಬೆನ್ನುಹತ್ತಿ ಕುಳಿತಿದ್ದ 'ಕನ್ನಡಪ್ರಭ'ದ ಸುದ್ದಿಜೀವಿಗಳಿಗೆ ಕೇಳಿದಾಗ ಅವರು ಮೊಗೆದಿಟ್ಟಿದ್ದು...
ನಿಂದನೆಗಳೇ ತುಂಬಿದ ಲೋಕ
ಹಿಂದಿನ ಚುನಾವಣೆಗೆ ಹೋಲಿಸಿದಾಗ ಈ ಬಾರಿ ಗೋಚರವಾಗಿದ್ದು ಗರಿಷ್ಠ ಬೈಗುಳ ಪದಗಳು. ಅದೂ ಎಂಥಾದ್ದು? ದೊಡ್ಡ ಗೂಂಡ, ಮಂಗ, ಶೆಹಜಾದಾ, ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿದ ದಿನವೇ ದೇಶದಲ್ಲಿ 22 ಸಾವಿರ ಮಂದಿ ಕಗ್ಗೊಲೆಯಾಗಿ ಹೋಗುತ್ತಾರೆ... ಇತ್ಯಾದಿ.
ಇಂಥ ಪದ ಪ್ರಯೋಗಗಳು ಬೇಕೇ ಬೇಡವೇ ಎಂಬುದನ್ನು ರಾಜಕೀಯ ನೇತಾರರೇ ಅರ್ಥ ಮಾಡಿಕೊಳ್ಳಬೇಕು. ನಿಜಕ್ಕೂ ಇದು ಸರಿಯಾದ ಕ್ರಮವಲ್ಲ. ರಾಜಕೀಯ ಪ್ರತಿಸ್ಪರ್ಧಿಗಳನ್ನು ಹಣಿಯಬೇಕೆಂದಿದ್ದರೆ ಅವರ ಆಡಳಿತ ಶೈಲಿಯಲ್ಲಿನ ಹುಳುಕುಗಳನ್ನು ಸಮರ್ಥವಾಗಿ ಎತ್ತಿ ತೋರಿಸಿ ಮತ ಯಾಚನೆ ಮಾಡಬಹುದು. ಅದನ್ನು ಸಮರ್ಥವಾಗಿ ಎದುರಿಸಿ ಅದಕ್ಕೆ ತಕ್ಕ ಪ್ರತ್ಯುತ್ತರ ಕೊಡುವುದೇ ರಾಜಕೀಯ ತಂತ್ರಗಾರಿಕೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅದನ್ನು ಪ್ರಬಲವಾಗಿ ಬಿಂಬಿಸಲು ಎಲ್ಲ ರಾಜಕೀಯ ಪಕ್ಷಗಳು ವಿಫಲವಾಗಿವೆ ಎಂದು ಹೇಳಬೇಕಾಗಿದೆ.
ಏಕೆಂದರೆ ಕೇವಲ ವೈಯಕ್ತಿಕ ನಿಂದನೆಯೇ ಚುನಾವಣಾ ಪ್ರಚಾರ ಎಂದಾದರೆ ಉಳಿದ ವಿಚಾರಗಳು ಗೌಣವಾಗಿಬಿಡುತ್ತವೆ. ಆದರೆ ಪ್ರಸಕ್ತ ಸಾಲಿನಲ್ಲಿ ವೈಯಕ್ತಿಕ ನಿಂದನೆಯೇ ಪ್ರಧಾನ ಅಸ್ತ್ರವಾಗಿಬಿಟ್ಟಿದೆ. ಇತ್ತೀಚಿನ ದಿನಗಳಲ್ಲಿ ಕೆಲವೊಂದು ವಾಹಿನಿಗಳು ಅಂಥ ಹೇಳಿಕೆಯನ್ನೇ ವೈಭವೀಕರಿಸುತ್ತಿವೆ ಎನ್ನುವುದು ಶೋಚನೀಯ. ಅದಕ್ಕೆ ಪೂರಕವಾಗಿ ಕೆಲವೊಂದು ಜನರು ಬೈಗುಳ ಪದಗಳನ್ನೇ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದು ದುಃಖಕರ ವಿಚಾರ. ಕೇವಲ ಚುನಾವಣಾ ಆಯೋಗ ವಾಗ್ದಂಡನೆ ವಿಧಿಸುವ ಮೂಲಕ, ದಂಡ ವಿಧಿಸುವ ಮೂಲಕ ಇಂಥ ಪದ್ಧತಿಗೆ ಕಡಿವಾಣ ಹಾಕುವುದು ಕಷ್ಟ. ಏನೇ ಆಗಲಿ 2014ರ ಲೋಕಸಭೆ ಚುನಾವಣೆ ಶಾಂತಿಯುತವಾಗಿ ಮುಕ್ತಾಯವಾದ ಹೆಗ್ಗಳಿಕೆ ಜತೆಗೆ ಅತ್ಯಂತ ಕೆಟ್ಟ ಸಂಪ್ರದಾಯಕ್ಕೂ ಶ್ರೀಕಾರ ಬರೆದಿದೆ ಎಂದರೆ ತಪ್ಪಲ್ಲ.
-ಸದಾಶಿವ ಕೆ.
ಮೋದಿ ಮೇನಿಯಾಕ್ಕೆ ಸರ್ವರೂ ಶರಣು
- ಇಡೀ ಚುನಾವಣೆಯನ್ನು ಆಕ್ರಮಿಸಿಕೊಂಡಿದ್ದು ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ ಅವರು ಮಾತ್ರ. ಹಾಗೆ ನೋಡಿದರೆ, ಎದುರಾಳಿಗಳು ಎರಡು ಭಿನ್ನ ಸೈದ್ಧಾಂತಿಕ ನಡುವಿನ ಕದನ ಎಂಬಂತೆ ಬಿಂಬಿಸುವ ಯತ್ನ ನಡೆಸಿದರಾದರೂ ಜನ ಮಾತ್ರ ಮೋದಿ ಮಂತ್ರ ಪಠಿಸಿದರು. ಅದಕ್ಕೂ ಕಾರಣವಿದೆ. ಮೋದಿ ಬಳಿ ಹೇಳಿಕೊಳ್ಳಲು 'ಟ್ರ್ಯಾಕ್ ರೆಕಾರ್ಡ್' ಇತ್ತು. ಅದನ್ನೇ ಮುಖ್ಯವಾಗಿ ಬಿಂಬಿಸಿದರು. ಉಳಿದವರು ಈ ಟ್ರ್ಯಾಕ್ ರೆಕಾರ್ಡ್ ಸುಳ್ಳು ಎಂಬುದನ್ನು ಸಾಬೀತುಪಡಿಸಲು ಹೆಣಗಾಡಿದರಷ್ಟೇ. ತಮ್ಮ ಟ್ರ್ಯಾಕ್ ರೆಕಾರ್ಡ್ ಬಗ್ಗೆ ಹೇಳಿಕೊಳ್ಳಲೇ ಇಲ್ಲ. ಸುದ್ದಿ ಮನೆಯಲ್ಲಿ ಕುಳಿತು ನೋಡಿದಾಗ ಮೋದಿಗೆ ಎದುರಾಳಿಗಳೇ ಇರಲಿಲ್ಲ. ಪ್ರಾದೇಶಿಕವಾಗಿ ಸ್ಟ್ರಾಂಗ್ ಆಗಿದ್ದ ನಾಯಕರೂ ಕೂಡ ಸಪ್ಪೆಯಾದರು. ಮೋದಿ ಆಡಿದ ಪ್ರತಿ ಮಾತು ಹೆಡ್ಲೈನ್ ಆಗುತ್ತಿತ್ತು ಎಂದರೆ ಮೋದಿ ಮೇನಿಯಾ ಅರ್ಥವಾಗಲೇಬೇಕು. ವಿಶೇಷವಾಗಿ ಹೊಸ ಮತದಾರರನ್ನು ಮೋದಿ ತಲುಪಿದ ರೀತಿ ಅಮೋಘ. ಅವರ ಪಕ್ಕಾ ತಯಾರಿಯೊಂದಿಗೆ ಚುನಾವಣೆಗಿಳಿದಿದ್ದರು ಎಂಬುದರಲ್ಲಿ ಎರಡು ಮಾತಿಲ್ಲ.
- 2009 ಹಾಗೂ 2014ರ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿಯನ್ನು ಕೇಂದ್ರವಾಗಿಟ್ಟುಕೊಂಡು ನೋಡಿದರೆ, ಕೆಲವು ಪ್ರಚಾರ ತಂತ್ರಗಳು ಈ ಬಾರಿ ಸವಕಲಾಗಿದ್ದವು. ಅದರಲ್ಲಿ ಪ್ರಮುಖವಾಗಿ ಆಡ್ವಾಣಿಯ ನೆಚ್ಚಿನ ವಿಷಯ 'ಕಪ್ಪು ಹಣ' ಮತ್ತು ಬಿಜೆಪಿಯ ನೆಚ್ಚಿನ ಸಂಗತಿ 'ಕಡ್ಡಾಯ ಮತದಾನ'. ಮೋದಿಯ ಅಭಿವೃದ್ಧಿಯ ಮಾತುಗಳು ಮುಂದೆ ಇವು ಮುನ್ನೆಲೆಗೆ ಬರಲೇ ಇಲ್ಲ. ಅಲ್ಲದೆ, ಕಳೆದ ಚುನಾವಣೆಯಲ್ಲಿ ಕಪ್ಪು ಹಣ ಮುಂದಿಟ್ಟುಕೊಂಡು ಹೋರಾಡಿದ್ದ ಆಡ್ವಾಣಿ ಕೂಡಾ ಹಿನ್ನೆಲೆಗೆ ಸರಿದಿದ್ದು ಇದಕ್ಕೆ ಕಾರಣ.
- ಈ ಚುನಾವಣೆಯಲ್ಲಿ ಕಾಂಗ್ರೆಸ್ನದ್ದು ನಕಾರಾತ್ಮಕ ಪ್ರಚಾರ. ಇದೇ ಅವರ ಪಾಲಿಗೆ ಮುಳವಾಗಿದ್ದು. ಅದು ಕಾಂಗ್ರೆಸ್ ಕಾರ್ಯಕಾರಿಣಿಯಲ್ಲಿ ತಲೆಮಾಸಿದ ಮಣಿಶಂಕರ್ ಅಯ್ಯರ್ರಿಂದಲೇ ಆರಂಭವಾಯಿತು. ಚಹಾ ಮಾರುವ ವ್ಯಕ್ತಿ ಪ್ರಧಾನಿಯಾಗಲ್ಲ ಎಂಬ ನಕಾರಾತ್ಮಕ ಟೀಕೆ, ಬಿಜೆಪಿಯ ಸಕಾರಾತ್ಮಕ ಪ್ರಚಾರದ ಮತ್ತೊಂದು ಮಜಲನ್ನು ವಿಸ್ತರಿಸಿತು. ತಮಗೆ ಎದುರಾಗುವ ಪ್ರತಿ ಟೀಕೆಯನ್ನು ಲಾಭ ಮಾಡಿಕೊಂಡ ಮೋದಿ ಅವರು ಇಂಥ ಅಸ್ತ್ರ ಕೈಬಿಟ್ಟಾರೆಯೇ? ಏನು ಆಗಬೇಕಿತ್ತೋ ಅದೇ ಆಯಿತು. ಇನ್ನು ಕಾಂಗ್ರೆಸ್ನಲ್ಲಿ ಭರವಸೆದಾಯಕ ನಾಯಕತ್ವ ಕಾಣಲಿಲ್ಲ. 10 ವರ್ಷಗಳ ಕಾಲ ದೇಶವನ್ನು ಮುನ್ನಡೆಸಿದ ಪ್ರಧಾನಿ ಸಿಂಗ್ ಚುನಾವಣೆ ಪ್ರಚಾರಗಳಲ್ಲೂ ಮಾತನಾಡಲಿಲ್ಲ ಎಂದರೆ, ಅದೆಂಥ ನಾಯಕತ್ವ ಅಲ್ಲವೇ? ರಾಹುಲ್ ಗಾಂಧಿಯನ್ನು ಎಷ್ಟೇ ನಾಯಕನನ್ನಾಗಿ ಬಿಂಬಿಸಲು ಯತ್ನಿಸಿದರೂ ಜನ ನಂಬಲು ತಯಾರಿರಲಿಲ್ಲ. ಟೈಮ್ಸ್ ನೌ ವಾಹಿನಿಯ ಅರ್ನಬ್ ಗೋಸ್ವಾಮಿ ಜತೆ ರಾಹುಲ್ 'ಫ್ರ್ಯಾಂಕ್' ಆಗಿ ಮಾತನಾಡಿದಾಗಲೇ ಅವನತಿ ಶುರುವಾಗಿತ್ತು. ಅದು ಗೊತ್ತಾಗಿದ್ದು ಫಲಿತಾಂಶ ಬಂದ ಮೇಲೆ ಅಷ್ಟೇ! ಯುಪಿಎ ಸರ್ಕಾರದ ಸಾಲು ಸಾಲು ಹಗರಣಗಳ ಹೊರತಾಗಿಯೂ ಕೆಲವೊಂದಿಷ್ಟು ಒಳ್ಳೆಯ ಕೆಲಸಗಳಾಗಿದ್ದವು. ಆದರೆ, ಅವುಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಕಾಂಗ್ರೆಸ್ ಮಾಡಲೇ ಇಲ್ಲ.
- ಸಮ್ಮಿಶ್ರ ಸರ್ಕಾರದ ಯುಗದಲ್ಲಿ 'ಬಾರ್ಗೇನಿಂಗ್' ರಾಜಕಾರಣ ಮಾಡುತ್ತಾ ಬಂದಿದ್ದ ಪ್ರಾದೇಶಿಕ ನಾಯಕರಿಗೂ ಈ ಚುನಾವಣೆ ತಕ್ಕಪಾಠ ಕಲಿಸಿದೆ. ಮಮತಾ ಬ್ಯಾನರ್ಜಿ, ಜಯಲಲಿತಾರಂಥ ನಾಯಕಿಯರು ಯಾವತ್ತೂ ಸೆರಗಿನಲ್ಲಿರುವ ಕೆಂಡ. ಇವರಿಬ್ಬರೂ ತಮ್ಮ ರಾಜ್ಯಗಳಲ್ಲಿ ತಾವೇ 'ಕ್ವೀನ್' ಅನ್ನೋದನ್ನು ಸಾಬೀತುಪಡಿಸಿದರು. ನಿಜ, ಆದರೆ ರಾಷ್ಟ್ರಮಟ್ಟದಲ್ಲಿ 'ಕಿಂಗ್ ಮೇಕರ್'ಗಳಾಗುವ ಅವಕಾಶವನ್ನು ಮತದಾರರು ನೀಡಲಿಲ್ಲ. ಇನ್ನು ಕೆಲವರು ಜಾಣ ನಡೆ ಪ್ರದರ್ಶಿಸಿದರು. ಅವರಲ್ಲಿ ಮುಂಚೂಣಿಯಲ್ಲಿರುವವರು ಬಿಹಾರದ ರಾಮ್ ವಿಲಾಸ್ ಪಾಸ್ವಾನ್. ವಿಚಿತ್ರ ಎಂದರೆ, ಗೋಧ್ರಾ ಹಿಂಸಾಚಾರ ಬಳಿಕ ಎನ್ಡಿಎದಿಂದ ಹೊರ ಬಂದ ಮೊದಲ ನಾಯಕ ಮತ್ತು ಈ ಚುನಾವಣೆಯಲ್ಲಿ ಎಲ್ಲರಿಗಿಂತ ಮೊದಲು ಎನ್ಡಿಎ ಜತೆ ಗುರುತಿಸಿಕೊಂಡವರು ಇವರೇ! ಟಿಡಿಪಿ ಚಂದ್ರಬಾಬು ನಾಯ್ಡು ಕೂಡಾ ಕೊನೆ ಗಳಿಗೆಯಲ್ಲಿ ಎನ್ಡಿಎ ತೆಕ್ಕೆಗೆ ಸೇರುವ ಮೂಲಕ ಸೀಮಾಂಧ್ರದ ಮುಖ್ಯಮಂತ್ರಿಯಾಗುತ್ತಿದ್ದಾರೆ. ಜೆಡಿಯುನ ನಿತೀಶ್ಕುಮಾರ್, ಬಿಎಸ್ಪಿಯ ಮಾಯಾವತಿ, ಎಸ್ಪಿಯ ಮುಲಾಯಸಿಂಗ್ ಯಾದವ್ ಅವರಂತೂ ಸದ್ಯಕ್ಕೆ ಎದ್ದೇಳುವ ಸ್ಥಿತಿಯಲ್ಲಿ ಇಲ್ಲ. ಚುನಾವಣೆಯ ಆರು ತಿಂಗಳ ಮುಂಚೆ ನಡೆಸಿದ ಸಮೀಕ್ಷೆಗಳ ಆಧಾರವಾಗಿಟ್ಟು ತೃತೀಯ ರಂಗದ ಕನಸು ಕಟ್ಟಿಕೊಂಡಿದ್ದ ಎಡಪಕ್ಷಗಳ ನಾಯಕರು, ಮಾಜಿ ಪ್ರಧಾನಿ ದೇವೇಗೌಡರ ಲೆಕ್ಕಾಚಾರಗಳಿಗೂ ಬೆಲೆ ಬರಲಿಲ್ಲ. ಇನ್ನೂ ಹೊಸ ಕನಸುಗಳನ್ನು ಹುಟ್ಟು ಹಾಕಿ, ಅಷ್ಟೇ ಬೇಗ ಅವುಗಳನ್ನು ನುಚ್ಚು ನೂರು ಮಾಡಿದ ಕೇಜ್ರಿವಾಲ್ ಅವರ ಆಪ್ ಬಗ್ಗೆ ಹೇಳುವುದಕ್ಕೆ ಈ ಚುನಾವಣೆ ಏನೂ ಉಳಿಸಲಿಲ್ಲ!
- ಮಲ್ಲಿಕಾರ್ಜುನ ತಿಪ್ಪಾರ
ಒಲಿದ ಒಬಾಮ ಶೈಲಿ ಅಧಿಕಾರ ಮೋದಿ ಕೈಲಿ
ಈ ಬಾರಿಯ ಚುನಾವಣೆ ನೆನಪಿಸಿದ್ದು ಅಮೆರಿಕವನ್ನು. ನಮ್ಮ ದೇಶದಲ್ಲೂ ಚುನಾವಣಾ ಪ್ರಚಾರವು ಅಮೆರಿಕದ ಅಧ್ಯಕ್ಷೀಯ ಮಾದರಿಯಲ್ಲೇ ನಡೆದಿತ್ತು. ಅಲ್ಲಿ ಬರಾಕ್ ಒಬಾಮ ಹಾಗೂ ಅವರ ಪ್ರತಿಸ್ಪರ್ಧಿಗಳು ನಡೆಸಿದ ತಂತ್ರಗಳನ್ನೇ ಇಲ್ಲೂ ಹಲವು ನಾಯಕರು ಬಳಸಿದರು. ಅದರಲ್ಲೂ ವಿಶೇಷವಾಗಿ ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ ಅವರು 'ಒಬಾಮ ಶೈಲಿ'ಯನ್ನು ಬಹಳ ಚೆನ್ನಾಗಿಯೇ ಬಳಸಿಕೊಂಡರು. ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಅವರೂ ಈ ನಿಟ್ಟಿನಲ್ಲಿ ಪ್ರಯತ್ನ ಪಟ್ಟರು.
ಚುನಾವಣೆ ಆರಂಭವಾಗುವುದಕ್ಕೆ ಕೆಲ ತಿಂಗಳ ಮೊದಲೇ ಬಿಜೆಪಿ ಕಾರ್ಯಕರ್ತರು ದೆಹಲಿಯಲ್ಲಿ ಮನೆ ಮನೆಗಳ ಬಾಗಿಲು ತಟ್ಟತೊಡಗಿದ್ದರು. 'ನೀವು ಫೇಸ್ಬುಕ್ನಲ್ಲಿದ್ದೀರಾ? ನಿಮ್ಮಲ್ಲಿ ಟ್ವಿಟರ್ ಖಾತೆ ಇದೆಯಾ? ನೀವು ವಾಟ್ಸ್ಆ್ಯಪ್ ಬಳಸುತ್ತಿದ್ದೀರಾ? ಇ-ಮೇಲ್ ಖಾತೆ ಹೊಂದಿದ್ದೀರಾ?' ಎಂಬೆಲ್ಲ ಪ್ರಶ್ನೆಗಳ ಸರಮಾಲೆಯೇ ಅವರಲ್ಲಿತ್ತು. ಇಂತಹ ಸಾಮಾಜಿಕ ತಾಣಗಳ ಮೂಲಕ ತಮ್ಮ ಪಕ್ಷದ ಬಗ್ಗೆ ಪ್ರಚಾರ ಮಾಡುವುದು, ಆ ಮೂಲಕ ಆ ಮಾಹಿತಿಗಳನ್ನು ವ್ಯಾಪಿಸುವಂತೆ ಮಾಡುವುದೇ ಅವರ ಉದ್ದೇಶವಾಗಿತ್ತು. ಅಷ್ಟೇ ಅಲ್ಲ, ಮಿಸ್ಡ್ ಕಾಲ್ ಅಭಿಯಾನವನ್ನೂ ನಡೆಸಲಾಯಿತು. ನಿರ್ದಿಷ್ಟ ಸಂಖ್ಯೆಗೆ ಮಿಸ್ ಕಾಲ್ ಕೊಡುವಂತೆ ಹೇಳಿ, ಮತದಾರರ ದೂರವಾಣಿ ಸಂಖ್ಯೆ, ಮಾಹಿತಿಗಳನ್ನು ಸಂಗ್ರಹಿಸಲಾಗಿತ್ತು. ಈ ಎಲ್ಲ ಕಾರ್ಯತಂತ್ರಗಳನ್ನು ಚುನಾವಣೆಗೆ ಮೊದಲೇ ಆರಂಭಿಸಿದ್ದು ಬಿಜೆಪಿಗೆ ಹೆಚ್ಚಿನ ಲಾಭ ತಂದುಕೊಟ್ಟಿತು. ಮೋದಿ ಅವರಿಗೆ ಇತರೆ ಪಕ್ಷಗಳೂ ಆನ್ಲೈನ್ ಅಸ್ತಿತ್ವದಲ್ಲಿ ತಕ್ಕಮಟ್ಟಿನ ಸ್ಪರ್ಧೆ ನೀಡಿದವು. ಚುನಾವಣೆ ದಿನಾಂಕ ಪ್ರಕಟವಾದ ದಿನದಿಂದ ಫಲಿತಾಂಶ ಬರುವವರೆಗೂ ರಾಜಕೀಯ ಪಕ್ಷಗಳು ಸಾಮಾಜಿಕ ತಾಣಗಳಲ್ಲಿ ಸಕ್ರಿಯವಾಗಿದ್ದವು. ಟೆಕ್ ಸ್ಯಾವಿ ರಾಜಕಾರಣಿಯಾಗಿರುವ ನರೇಂದ್ರ ಮೋದಿ ಅವರು ಗೂಗಲ್ ಹ್ಯಾಂಗ್ಔಟ್ ಮೂಲಕ ಹಲವರ ಪ್ರಶ್ನೆಗಳಿಗೆ ಉತ್ತರಿಸಿದರು. ಂಕಉಐಏಆಃಎಕ್ಖಖಿ ದೇಶದಲ್ಲೇ ಟಾಪ್ ಟ್ರೆಂಡಿಂಗ್ ಟಾಪಿಕ್ ಆಗಿತ್ತು. ಈ ಕಾರ್ಯಕ್ರಮಕ್ಕೆ ಎಷ್ಟೊಂದು ಪ್ರತಿಕ್ರಿಯೆ ವ್ಯಕ್ತವಾಯಿತೆಂದರೆ, ಕಾರ್ಯಕ್ರಮ ಆರಂಭವಾಗುತ್ತಿದ್ದಂತೆಯೇ ಸೈಟ್ ಕ್ರ್ಯಾಷ್ ಆಗಿ ಹೋಗಿತ್ತು. ಅಮೆರಿಕ ಮಾದರಿ ಎನ್ನುವುದಕ್ಕೆ ಮತ್ತೊಂದು ಕಾರಣವೆಂದರೆ, ಪಕ್ಷಗಳ ನಿಧಿ ಸಂಗ್ರಹ. ಇತ್ತೀಚೆಗಷ್ಟೇ ಹುಟ್ಟಿಕೊಂಡ ಆಮ್ ಆದ್ಮಿ ಪಕ್ಷವು ಅಮೆರಿಕದ ಮಾದರಿಯಲ್ಲೇ ತನ್ನ ಪಕ್ಷದ ಪರ ಪ್ರಚಾರಕ್ಕಾಗಿ ನಿಧಿ ಸಂಗ್ರಹ ಮಾಡಿತು. 1 ರುಪಾಯಿಯನ್ನು ನೀಡಿದರೂ ಅದನ್ನು ಪಡೆದು, ಟ್ವಿಟರ್ನಲ್ಲಿ ವಿವರ ಪ್ರಕಟಿಸುತ್ತಿತ್ತು. ಒಟ್ಟಾರೆಯಾಗಿ ಮೋದಿ ಹಾಗೂ ಕೇಜ್ರಿ ಈ ಚುನಾವಣೆಯಲ್ಲಿ ಒಬಾಮ ಶೈಲಿಯನ್ನು ಹೆಚ್ಚಾಗಿ ನೆಚ್ಚಿಕೊಂಡಿದ್ದರು. ಆನ್ಲೈನ್ನ ಜತೆಗೇ ಆಫ್ಲೈನ್ನಲ್ಲೂ ಮೋದಿ ಅವರು ತೋರಿದ ಉತ್ಸಾಹ, ಪಟ್ಟ ಶ್ರಮ ವ್ಯರ್ಥವಾಗಲಿಲ್ಲ. ಮತದಾರರು ಅವರ ಕೈ ಬಿಡಲಿಲ್ಲ. ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಚುಕ್ಕಾಣಿ ಹಿಡಿಯುವಲ್ಲಿ ಅವರು ಯಶಸ್ವಿಯಾದರು.
- ಹಲೀಮತ್ ಸಅದಿಯಾ
ಸಿದ್ಧಾಂತ ರಹಿತ ಚುನಾವಣೆ
ಒಂದು ರೀತಿಯಲ್ಲಿ ಈ ಬಾರಿಯದ್ದು ಸಿದ್ಧಾಂತ ರಹಿತ ಚುನಾವಣೆ. ಜಾತಿ, ಕೋಮುವಾದ, ಧರ್ಮವಾದಗಳಿಗಿಂತ ಹೆಚ್ಚಾಗಿ ವ್ಯಕ್ತಿಗಳೇ ಚರ್ಚೆಯಾದರು. ಹೀಗಾಗಿ ವ್ಯಕ್ತಿಯಾಧಾರಿತ ಚುನಾವಣೆ ಎಂಬುದರಲ್ಲಿ ಯಾವುದೇ ತಪ್ಪೇನಿಲ್ಲ. ಎದುರಾಳಿಯ ದೌರ್ಬಲ್ಯವನ್ನು ಬಯಲು ಮಾಡಿದರೆ ಲಾಭವಾದೀತು ಎಂಬ ಆಶಯ ಕಂಡು ಬಂತು. 2009ರ ಚುನಾವಣೆಗಾದರೂ ಒಂದು ವಿಷಯವಿತ್ತು. ಕಪ್ಪುಹಣ ವಾಪಸ್ ತರುವುದೇ ಬಿಜೆಪಿ ಕರ್ತವ್ಯ ಎಂಬ ಟ್ಯಾಗ್ಲೈನ್ನೊಂದಿಗೆ ಚುನಾವಣೆಗೆ ಹೋಗಲಾಗಿತ್ತು. ಆದರೆ ಇದು ಠುಸ್ ಆಗಿದ್ದೇ ಈ ಬಾರಿ ವ್ಯಕ್ತಿಯಾಧಾರಿತ ಚುನಾವಣೆಗೆ ಕಾರಣವಾಯಿತು ಎನ್ನಬಹುದು. ಚುನಾವಣೆ ಆರಂಭಕ್ಕೂ ಮುನ್ನ ಭ್ರಷ್ಟಾಚಾರ ವಿಚಾರವೇ ಈ ಬಾರಿ ಮೇಳೈಸಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಮೋದಿ ಮತ್ತು ರಾಹುಲ್ ಅವರ ನಡುವಿನ ಹಣಾಹಣಿಯಲ್ಲಿ ಇದು ಕೂಡ ಮಂಕಾಯಿತು. ಹೀಗಾಗಿ ಚುನಾವಣೆ ಆರಂಭವಾದಾಗಿನಿಂದಲೂ ಮೋದಿ ಮತ್ತು ರಾಹುಲ್ ಇವರಿಬ್ಬರೇ ಸಿದ್ಧಾಂತವಾದರು, ಚುನಾವಣಾ ವಿಷಯಗಳೂ ಆಗಿಬಿಟ್ಟರು. ಮೋದಿ ವಿರುದ್ಧ ರಾಹುಲ್ ಏನು ಮಾತನಾಡುತ್ತಾರೆ ಎಂಬುದು ಒಂದು ಕಡೆಯಾದರೆ, ಇನ್ನೊಂದು ಕಡೆಯಲ್ಲಿ ರಾಹುಲ್ ವಿರುದ್ಧ ಮೋದಿ ಏನು ಮಾತನಾಡುತ್ತಾರೆ ಎಂಬ ವಿಚಾರ ಹೆಚ್ಚು ಬಾರಿ ಪ್ರಸ್ತಾಪವಾದವು. ಹೀಗಾಗಿ ಇದನ್ನು ಮಾತಿನಾಧಾರಿತ ಚುನಾವಣೆ ಎಂದೇ ಕರೆಯಬಹುದು. ಈ ವ್ಯಕ್ತಿಯಾಧಾರಿತ ಚುನಾವಣೆಗೆ ಸಾಮಾಜಿಕ ಜಾಲ ತಾಣಗಳೂ ಕಾರಣ ಎಂದೂ ಹೇಳಬಹುದು. ಟ್ವಿಟರ್ ಮತ್ತು ಫೇಸ್ಬುಕ್ನಲ್ಲಿ ಚುನಾವಣಾ ವಿಚಾರಗಳು ಹೆಚ್ಚು ಹೆಚ್ಚು ಚರ್ಚೆಯಾದವು. ಹೆಚ್ಚು ಕಡಿಮೆ ಟ್ವಿಟರ್ ಒಂದೇ ಈ ಬಾರಿಯ ಫಲಿತಾಂಶವನ್ನು ನಿರ್ಧರಿಸಿತು ಎಂದರೆ ತಪ್ಪೇನಿಲ್ಲ. ಮೋದಿ ಮತ್ತು ರಾಹುಲ್ ನಡುವಿನ ಟ್ವಿಟರ್ ಯುದ್ಧದಲ್ಲಿ ಮೋದಿಯೇ ಗೆದ್ದದ್ದು ಕೂಡ ಸುಳ್ಳಲ್ಲ.
-ಸೋಮಶೇಖರ ಸಿ.ಜೆ.
ಅಭಿವೃದ್ಧಿಯೇ ಮಂತ್ರ ಎನ್ನುತ್ತಲೇ ಜಾತಿ ಆಟವೂ ಜೋರಾಗಿ ನಡೆದಿದೆ
ಈ ಬಾರಿ ಮತದಾರ 'ಅಭಿವೃದ್ಧಿ ರಾಜಕಾರಣ'ದ ಕೈ ಹಿಡಿದಿದ್ದಾನೆ ಎಂದು ಬಿಜೆಪಿ ಮುಖಂಡರು ಹೇಳಿಕೊಂಡು ತಿರುಗುತ್ತಿದ್ದಾರೆ. ಬಿಜೆಪಿ ಪ್ರಚಾರಾಂದೋಲನ ನೋಡಿದವರಿಗೆ ಇದರಲ್ಲಿ ವಿಶೇಷವೇನೂ ಕಾಣಿಸದು. ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಿದ್ದು ಅಭಿವೃದ್ಧಿಯ ವಿಚಾರವನ್ನೆ. ಹಾಗಂತ ಅಭಿವೃದ್ಧಿಯೊಂದೇ ಬಿಜೆಪಿ ಗೆಲವಿಗೆ ಶ್ರೀರಕ್ಷೆಯಾಯಿತೇ?
ಬಿಜೆಪಿ ಮುಖಂಡರು ಎಷ್ಟೇ ಬಾಯಿ ಬಡಿದುಕೊಂಡರೂ ಈ ಚುನಾವಣೆಯಲ್ಲಿ ಜಾತಿ ಮತ್ತು ಧರ್ಮ ಸಮೀಕರಣಕ್ಕೂ ಪಕ್ಷ ಕೈ ಹಾಕಿದ್ದನ್ನು ತಳ್ಳಿಹಾಕುವಂತಿಲ್ಲ. ಮೋದಿಯ ಗುಜರಾತ್ ಅಭಿವೃದ್ಧಿಯ ಮಾದರಿಯೊಂದಿಗೆ ರಾಮಜನ್ಮಭೂಮಿ, ಅನಿವಾರ್ಯವಾದಲ್ಲೆಲ್ಲ(ಉತ್ತರಪ್ರದೇಶ, ಮಹಾರಾಷ್ಟ್ರ, ಬಿಹಾರ, ಗುಜರಾತ್) ಧ್ರುವೀಕರಣದ ಹೇಳಿಕೆ ಮೂಲಕವೂ ಬಿಜೆಪಿ ಮತಬೇಟೆ ಮಾಡಿದೆ.
ದೇಶದೆಲ್ಲೆಡೆ ಮೋದಿ ಅಲೆ ಇದ್ದದ್ದು ನಿಜ. ಇದನ್ನು ಕಾಂಗ್ರೆಸ್ ಮುಖಂಡರೂ ಒಪ್ಪಿಕೊಳ್ಳುತ್ತಾರೆ. ಆದರೆ, ಬಿಹಾರ ಮತ್ತು ಉತ್ತರಪ್ರದೇಶದಂಥ ರಾಜ್ಯಗಳಲ್ಲಿ ಈ ಅಲೆಯೊಂದರಿಂದಲೇ ಗೆಲ್ಲುವುದು ಅಸಾಧ್ಯ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಜಾತಿ, ಧರ್ಮದ ವೈಷಮ್ಯಕ್ಕೆ ಹೆಸರುವಾಸಿಯಾದ ಈ ರಾಜ್ಯಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವಾಗ ಇರಿಸಿದ ಎಚ್ಚರಿಕೆಯ ನಡೆ ಬಿಜೆಪಿಯ ಯಶಸ್ಸಿನ ಹಿಂದಿನ ಪ್ರಮುಖ ಗುಟ್ಟು.
ಹೇಳಿ ಕೇಳಿ ಉತ್ತರಪ್ರದೇಶ ಮತ್ತು ಬಿಹಾರದಲ್ಲಿ ಮುಸ್ಲಿಮರು, ಯಾದವರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಬಹುತೇಕ ಕ್ಷೇತ್ರಗಳಲ್ಲಿ ಮುಸ್ಲಿಮರೇ ನಿರ್ಣಾಯಕರು ಅನ್ನುವ ಸ್ಥಿತಿ ಇದೆ. ಹಾಗಾಗಿ ಅಪ್ನಾದಳ, ರಾಷ್ಟ್ರೀಯ ಲೋಕ ಸಮತಾ ಪಾರ್ಟಿ ಮತ್ತು ಎಲ್ಜೆಪಿಯಂಥ ಜಾತಿಯಾಧಾರಿತ ಪಕ್ಷಗಳ ಜತೆಗೆ ಮೈತ್ರಿ ಮಾಡಿಕೊಂಡು ಬಿಜೆಪಿ ಅಖಾಡಕ್ಕಿಳಿದಿತ್ತು. ಮೋದಿ ಹಿಂದುಳಿದ ಜಾತಿಗೆ ಸೇರಿದವರು ಎನ್ನುವ ಮಾತನ್ನೂ ಮತದಾರರಿಗೆ ಮುಟ್ಟಿಸಿತ್ತು. ಈ ಮೂಲಕ ಇತರೆ ಹಿಂದುಳಿದ ಮತಗಳನ್ನು ಸೆಳೆಯುವ ಪ್ರಯತ್ನದಲ್ಲಿ ಪಕ್ಷ ಯಶಸ್ವಿಯಾಗಿತ್ತು. ಇನ್ನು ಬಹುಸಂಖ್ಯಾತ ಜಾಟ್ಮತಗಳನ್ನೇ ನಂಬಿಕೊಂಡಿರುವ ಅಜಿತ್ ಸಿಂಗ್ರ ಲೋಕದಳದಂಥ ಪಕ್ಷಗಳ ಹೆಡೆ ಮುರಿಕಟ್ಟಲು ಮುಜಾಫರನಗರ ಗಲಭೆಯನ್ನು ಲಾಭದಾಯಕವಾಗಿ ಬಳಸಿಕೊಳ್ಳಲಾಯಿತು. ಜಾಟ್ ಮತ್ತು ಮುಸ್ಲಿಮರ ನಡುವಿನ ಅಸಮಾಧಾನದ ನಿಜವಾದ ಲಾಭ ಎಸ್ಪಿಗೆ ಆಗಲಿದೆ ಎಂದು ಅಂದುಕೊಂಡಿದ್ದರು.
ಆದರೆ, ನಿಜವಾದ ಲಾಭ ಆದದ್ದು ಬಿಜೆಪಿಗೆ. ಮೋದಿ ಬಂಟ ಅಮಿತ್ ಷಾ ಕೂಡ ದ್ವೇಷದ ಹೇಳಿಕೆ ನೀಡಿದ್ದೂ ಜಾಟರ ಮತ ಸೆಳೆಯಲೆಂದೇ. ಹೀಗಾಗಿಯೇ ಜಾಟ್ ಜನಾಂಗದವರು ಬಹುಸಂಖ್ಯಾತ ಪ್ರಮಾಣದಲ್ಲಿದ್ದರೂ ಲೋಕದಳದ ಮುಖ್ಯಸ್ಥ ಅಜಿತ್ಸಿಂಗ್ ಸೋಲುಣ್ಣಬೇಕಾಯಿತು.
- ಚುನಾವಣೆ ಸಿದ್ಧತೆಯ ವಿಚಾರಕ್ಕೆ ಬಂದರೆ ಮೋದಿ ಪ್ರಧಾನಿ ಗಾದಿಯತ್ತ ನೋಟ ಹರಿಸಿದ್ದು ಇಂದು, ನಿನ್ನೆಯಲ್ಲ ಎನ್ನುವುದನ್ನು ಮರೆಯುವಂತಿಲ್ಲ. ಪಕ್ಷದೊಳಗೆ, ದೇಶದೊಳಗೆ ಅದಕ್ಕೆ ಎದುರಾಗಬಹುದಾದ ಪ್ರತಿರೋಧಗಳನ್ನು ಅವರು ಹಂತಹಂತವಾಗಿಯೇ ನಿವಾರಿಸಿಕೊಂಡು ಮೇಲೆದ್ದವರು. ಅಂದರೆ ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆಯಾಗುವ ಮುನ್ನವೇ ತನ್ನನ್ನು ತಾನು ಸಮರ್ಥ ವ್ಯಕ್ತಿ ಎಂದು ಬಿಂಬಿಸಿಕೊಳ್ಳಲು ಸಾಧ್ಯವಾದ ಎಲ್ಲ ಪೂರ್ವ ತಯಾರಿಯನ್ನು ಅವರು ಮಾಡಿಕೊಂಡಿದ್ದರು. ಕಾಂಗ್ರೆಸ್ನಲ್ಲಿ ಅಂಥ ತಯಾರಿಯೇ ಇರಲಿಲ್ಲ. ರಾಹುಲ್ ನಾಯಕತ್ವದ ಮೇಲೆ ಹಿರಿಯ ಕಾಂಗ್ರೆಸಿಗರಲ್ಲೇ ಅಸಮಾಧಾನವಿತ್ತು. ಮೋದಿಗೆ ಹೇಳಿಕೊಳ್ಳಲಾದರೂ ಗುಜರಾತ್ ಮಾದರಿ ಇತ್ತು. ಆದರೆ, ರಾಹುಲ್ ಬಳಿ ಇದ್ದದ್ದು ಕೇವಲ ಅನನುಭವ! ಇದೇ ಅನನುಭವ ಕಾಂಗ್ರೆಸ್ ಪಾಲಿಗೆ ಮುಳುವಾದದ್ದು.
- ಬೃಹತ್ ಯುವ ಮತದಾರ ಸಮೂಹ ಮತಕೇಂದ್ರದತ್ತ ಹೆಜ್ಜೆ ಹಾಕಲಿದೆ ಎನ್ನುವುದನ್ನು ನಿಜವಾಗಿ ಅರ್ಥ ಮಾಡಿಕೊಂಡದ್ದು ಎರಡೇ ರಾಷ್ಟ್ರೀಯ ಪಕ್ಷಗಳು. ಒಂದು ಬಿಜೆಪಿ ಮತ್ತೊಂದು ಆಮ್ ಆದ್ಮಿ. ಇದೇ ಕಾರಣಕ್ಕೆ ನವ ಮತದಾರರನ್ನು ಸೆಳೆಯಲು ಚುನಾವಣೆಗೆ ಸಾಕಷ್ಟು ಮೊದಲೇ ಬಿಜೆಪಿ ಅಂತರ್ಜಾಲ ಸೈನ್ಯವೊಂದನ್ನೂ ಕಟ್ಟಿಕೊಂಡಿತ್ತು. ತಮಾಷೆಯೆಂದರೆ ಬಿಜೆಪಿಯ ಈ ಸೇನೆಗೆ ನಿಜವಾದ ಪ್ರತಿರೋಧ ಎದುರಿಸಿದ್ದು ಕಾಂಗ್ರೆಸ್ ಅಲ್ಲ, ಆಮ್ ಆದ್ಮಿ ಪಕ್ಷ! ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿರುವ ನಕಲಿ ಖಾತೆಗಳ ಮೂಲಕ ಮೋದಿ ವಿರೋಧಿಗಳ ಸದ್ದಡಗಿಸುವ, ಅಪಹಾಸ್ಯ ಮಾಡುವ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಿದೆ ಎನ್ನುವುದು ಅಧಿಕಾರದಲ್ಲಿದ್ದ ಕಾಂಗ್ರೆಸ್ಗೆ ಗೊತ್ತಿರದ ವಿಚಾರವೇನೂ ಅಲ್ಲ. ಆದರೆ, ಇದನ್ನು ಅದು ನಿರ್ಲಕ್ಷಿಸಿದ್ದೇ ಜಾಸ್ತಿ. ಇದೇ ಕಾರಣಕ್ಕೆ ಹೊಸ ಮತದಾರರು ಕಾಂಗ್ರೆಸ್ನಿಂದ ದೂರವಾದರು.
- ಪ್ರಚಾರದ ವಿಚಾರಕ್ಕೆ ಬಂದರೆ ಇಲ್ಲೂ ಕಾಂಗ್ರೆಸ್ನದು ಸಪ್ಪೆ ಪ್ರದರ್ಶನ. ಇನ್ನೊಂದು ಕಡೆ ಬೆಲೆ ಏರಿಕೆಯಿಂದ ಬೇಸತ್ತಿದ್ದ ಜನರಿಗೆ ಮೋದಿ ಮಾತಿನಲ್ಲೇ ಮೋಡಿ ಮಾಡಿದ್ದರು. 'ಅಬ್ ಕಿ ಬಾರ್ ಮೋದಿ ಸರ್ಕಾರ್' ಕಾಂಗ್ರೆಸ್ ಹಟಾವೋ ದೇಶ್ ಬಚಾವೋ, ಹರ್ ಹರ್ ಮೋದಿ ಘರ್ ಘರ್ ಮೋದಿ... ಉದ್ಘೋಷಗಳು ಮತ ಮಾರುಕಟ್ಟೆಯಲ್ಲಿ ಸುಲಭವಾಗಿ ಬಿಕರಿಯಾದವು.
- ಅಜಿತ್ ಮಠದಬೆಟ್ಟು
ಯುವಜನೋತ್ಸವ!
- ಮೊದಲ ಬಾರಿಗೆ ಮತ ಹಾಕುವ ಯುವ ಜನತೆ ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿಭಾಯಿಸಿತು. ಡ್ರೈವಿಂಗ್ ಲೈಸೆನ್ಸ್ ಪಡೆಯಲು ಅದೆಷ್ಟು ಆತುರ ಇರುತ್ತದೋ ಅಷ್ಟೇ ಆತುರ ದೇಶದ ಪ್ರಧಾನಿಯನ್ನು ಆಯ್ಕೆ ಮಾಡುವಲ್ಲಿ ತೋರಿದರು ಯುವಕ-ಯುವತಿಯರು. ಯಾವ ಪಕ್ಷ ಅಥವಾ ಯಾವ ಅಭ್ಯರ್ಥಿಗೆ ಮತ ಹಾಕಬೇಕು, ಲೋಕಸಭಾ ಚುನಾವಣೆಯ ಇತಿಹಾಸ- ಪ್ರಕ್ರಿಯೆ ಎಲ್ಲದರ ಮಾಹಿತಿಯೂ ಅಂತರ್ಜಾಲದಲ್ಲಿ ಲಭ್ಯವಿದ್ದ ಕಾರಣ, ಯುವಕರ ಗೊಂದಲಕ್ಕೆ ಪರಿಹಾರ ಸಿಕ್ಕಂತೆ ಆಯಿತು. ದಿನಪತ್ರಿಕೆ, ದೂರದರ್ಶನ, ಆಕಾಶವಾಣಿ, ಫೇಸ್ಬುಕ್, ಟ್ವಿಟರ್, ಯಾಹೂ, ಗೂಗಲ್ ಎಲ್ಲೆಡೆ ಈ ಬಾರಿಯ ಚುನಾವಣೆಯ ಮೇಲಿನ ಅನಿಸಿಕೆ, ಟಿಪ್ಪಣಿ, ಲೇಖನ ರಾರಾಜಿಸುತ್ತಿದ್ದವು. ಆದ್ದರಿಂದ ಚುನಾವಣೆ ಬಗ್ಗೆ ಯುವಕರಲ್ಲಿ ಕುತೂಹಲ ಇನ್ನೂ ಹೆಚ್ಚಿತು. ಅಷ್ಟೇ ಅಲ್ಲ, ಮೊದಲ ಬಾರಿಗೆ ಮತ ಚಲಾಯಿಸಿದವರಿಗೆ ಉಚಿತ ಕೊಡುಗೆ, ರಿಯಾಯಿತಿ ಎಂದೆಲ್ಲ ಉತ್ತೇಜನವೂ ನೀಡಿದವು ಹಲವು ಸಂಸ್ಥೆಗಳು. ಮತದಾನದ ಗುರುತಿನ ಚೀಟಿಯಾಗಲಿ, ಶಾಯಿ ಹಾಕಿದ್ದ ಹೆಬ್ಬೆರಳಾಗಲಿ, ಯುವಕರು ಅವುಗಳ ಚಿತ್ರಗಳನ್ನು ಜಾಲತಾಣಗಳಲ್ಲಿ ಹಾಕಿ ಸಂಭ್ರಮಿಸಿದರು. 'ನನ್ನ ಜೀವನದ ಮೊಟ್ಟ ಮೊದಲ ಮತ' ಎಂಬ ಉತ್ಸಾಹ ಅವರಲ್ಲಿ ಕಂಡು ಬಂದಿತು. ಹಬ್ಬದಂತೆ ಈ ಬಾರಿಯ ಚುನಾವಣೆಯನ್ನು ಆಚರಿಸಲಾಯಿತು. ಮತದಾನಕ್ಕೆಂದು ಸಿಕ್ಕ ರಜಾ ದಿನವನ್ನು ದುರುಪಯೋಗ ಮಾಡದೆ ತಾವು ಜವಾಬ್ದಾರಿಯುಳ್ಳ ಯುವಕರು ಎಂದು ಹೆಮ್ಮೆಯಿಂದ ತೋರಿಸಿಕೊಟ್ಟರು. 'ನನ್ನ ಒಂದು ಮತ ಸರ್ಕಾರವನ್ನೇ ಬದಲಾಯಿಸಬಲ್ಲದು' ಎಂದು ತಿಳಿದ ಯುವಕರು ತಮ್ಮ ಹಕ್ಕನ್ನು ಒಳ್ಳೆ ರೀತಿಯಲ್ಲಿ ಬಳಸಿ ಮುಂದಿನ ಪೀಳಿಗೆಗೂ ಮಾದರಿಯಾದರು. ಇದು ಈ ಚುನಾವಣೆಯಲ್ಲಿ ತುಂಬ ಕಾಡಿದ ಅಂಶ.
- ಚುನಾವಣೆಯ ಫಲಿತಾಂಶ ವಿವರಿಸುವಾಗ ರಾಜಕೀಯ ಉದ್ಘೋಷಗಳಾಗುತ್ತಿವೆ. ಇವು ಜನಪ್ರಿಯವಾದರೂ ಪೊಳ್ಳೆಂಬುದು ವಿಶ್ಲೇಷಣೆಗೆ ಇಳಿದರೆ ತಿಳಿಯುತ್ತದೆ. ವಂಶಪಾರಂಪರ್ಯ ರಾಜಕಾರಣವನ್ನು ಜನ ಸಾರಾಸಗಟಾಗಿ ತಿರಸ್ಕರಿಸಿದ್ದಾರೆ ಎಂಬುದು ಅಂಥದೊಂದು ವ್ಯಾಖ್ಯಾನ. ಹಾಗಿದ್ದರೆ ಅಮೇಠಿ ಮತ್ತು ರಾಯ್ಬರೇಲಿಗಳಲ್ಲಿ ಕ್ರಮವಾಗಿ ರಾಹುಲ್ ಮತ್ತು ಸೋನಿಯಾ ಸೋಲಬೇಕಿತ್ತಲ್ಲವೇ? ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಗಳಿಸಿದ ಐದು ಸ್ಥಾನಗಳೂ ಮುಲಾಯಂ ಕುಟುಂಬದ್ದೇ ಏಕಾಗಬೇಕಿತ್ತು? ಇದ್ದಿದ್ದರಲ್ಲಿ ಲಾಲು ಪ್ರಸಾದರ ಹೆಂಡತಿ-ಮಗಳು ಇಬ್ಬರೂ ಸೋತಿದ್ದಾರೆಂಬುದು ಸಮಾಧಾನಪಡಬಹುದಾದ ಸಂಗತಿ. ನಿಖರವಾಗಿ ವಂಶಾಡಳಿತದ ವಿರೋಧಿ ಮತ ಎಂದೇನೂ ತಮ್ಮ ಭವಿಷ್ಯ ಭದ್ರ ಮಾಡುವ ಭರವಸೆ ಇತ್ತವರನ್ನು ಜನ ಆಯ್ಕೆ ಮಾಡಿದರು ಎಂದರೆ ಸರಿಹೋಗಬಹುದೇನೋ.
- ಅದಿತಿ ಮಾನಸ ಟಿ. ಎಸ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

