ಅಂಕಣಗಳು

ಕಾಂಗ್ರೆಸ್ಸೋತ್ತರ ಭಾರತಕ್ಕೆ ಮುನ್ನುಡಿ ಬರೆದ ಮೋದಿ

ಕಾಂಗ್ರೆಸ್ಸೋತ್ತರ ಭಾರತಕ್ಕೆ ಮುನ್ನುಡಿ ಬರೆದ ಮೋದಿ
Published On :

ಇತ್ತೀಚೆಗೆ ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಅರುಣ್ ಶೌರಿಯವರು ಮೋದಿ ನೇತೃತ್ವದ ಹೊಸ ಸರ್ಕಾರದ ಅಜೆಂಡಾ ಹೇಗಿರಲಿದೆ ಎನ್ನುವುದನ್ನು ಅದ್ಭುತವಾಗಿ ಕಟ್ಟಿಕೊಟ್ಟರು. ಅವರು ಹೇಳಿದರು "ಮೋದಿ ಆಧುನಿಕ ಭಾರತದ ನಿರ್ಮಾತೃವಾಗಿ ಸಫಲವಾಗಲು ಬಯಸುತ್ತಾರೆ". ಎಲ್ಲರನ್ನೂ ಒಳಗೊಂಡ, ಭರವಸೆ ಮತ್ತು ಸಾಧನೆಗಳೆಲ್ಲವೂ, ಗುಜರಾತ್ ಮುಖ್ಯಮಂತ್ರಿಯಾಗಿ ಸತತ ಮೂರು ಅವಧಿಯವರೆಗಿನ ನರೇಂದ್ರ ಮೋದಿಯವರ ದೋಷರಹಿತ ಆಡಳಿತದ ಮೇಲೆ ನಿಂತಿವೆ.
ನನಗನ್ನಿಸಿದಂತೆ ಒಂದು ವೇಳೆ ಅರುಣ್ ಶೌರಿ ಅವರ ವಿವರಣೆಗೆ ತಕ್ಕಂತೆ ಮೋದಿ ಭವಿಷ್ಯದಲ್ಲಿ ಗುರುತಿಸಿಕೊಂಡರೆ ನಿಸ್ಸಂಶಯವಾಗಿಯೂ ಅವರು 'ಕಾಂಗ್ರೆಸ್ ನಂತರ ಭಾರತದ' ಇತಿಹಾಸಕ್ಕೆ ಮುನ್ನುಡಿ ಬರೆದ ಅದ್ಭುತ ಕಾರ್ಯವನ್ನು ಸಾಧಿಸಿದಂತಾಗುತ್ತದೆ. ಹೇಗೆ ಜರ್ಮನಿ ಹಿಟ್ಲರ್‌ನ ಆಡಳಿತವನ್ನು ನೆನಪು ಮಾಡಿಕೊಳ್ಳುತ್ತದೋ ಹಾಗೆ ಆರು ದಶಕಗಳ ಕಾಂಗ್ರೆಸ್ ಆಡಳಿತವನ್ನು ನೆನಪುಮಾಡಿಕೊಳ್ಳುವ ಇತಿಹಾಸವಾಗಲಿದೆ ಆ ಹೆಜ್ಜೆ. ಹಾಗೆಂದು ನರೇಂದ್ರ ಮೋದಿಯವರಿಗೆ 100 ವರ್ಷಗಳಾಗಿದ್ದಾಗಲೂ ಅವರು ಭಾರತದ ಪ್ರಧಾನ ಮಂತ್ರಿಯಾಗಿರುತ್ತಾರೋ ಇಲ್ಲವೋ ಎನ್ನುವುದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಇದು ಕಾಂಗ್ರೆಸ್ಸೋತ್ತರ ಭಾರತದಲ್ಲಿ ಪ್ರವೇಶ ಮಾಡಿಸಿದ ಅವರ ಕೊಡುಗೆಗೆ ಸಂಬಂಧಪಟ್ಟದ್ದಷ್ಟೆ.
ಕಾಂಗ್ರೆಸ್ ಪಕ್ಷ ಮತ್ತು ರಾಜಕುಟುಂಬ ಅಸ್ತಿತ್ವಕ್ಕಾಗಿ ಹೆಣಗುತ್ತಿರುವುದರಲ್ಲಿ ಸಂಶಯವಿಲ್ಲ. ಆದರೂ ಒಡೆದು ಆಳುವ, ಸಂವಿಧಾನ ಮತ್ತು ಕಾನೂನುಗಳನ್ನು ಅಳುಕಿಲ್ಲದೇ ಧಿಕ್ಕರಿಸುವ, ನಿತ್ಯ ಲೂಟಿಯಲ್ಲಿ ತೊಡಗಿರುವ ಪ್ರಾದೇಶಿಕ ಪಕ್ಷಗಳ ರೂಪದಲ್ಲಿ ಕಾಂಗ್ರೆಸ್ ಸಂಸ್ಕೃತಿ ಮಾತ್ರ ಇಂದಿಗೂ ಜೀವಂತವಾಗಿದೆ ಮತ್ತು ಪ್ರವರ್ಧಿಸುತ್ತಲೇ ಇದೆ. ಅಲ್ಲದೆ ಆ ಸಂಸ್ಕೃತಿ ಆಮ್ ಆದ್ಮಿ ಪಕ್ಷವೆಂಬ ಹೊಸ ರೂಪ ಧರಿಸಿಯೂ ಎದುರಾಗಿದೆ.
ಆದರೆ, ಅತ್ಯದ್ಭುತ ಗೆಲುವು ಸಾಧಿಸಿದ ನಂತರ ನರೇಂದ್ರ ಮೋದಿಯವರು ತೋರಿಸಿದ ಮೂರು ಮುಖ್ಯ ಸಂಕೇತಗಳು ನನ್ನ ದೃಷ್ಟಿಯಲ್ಲಿ ಕಾಂಗ್ರೆಸ್ಸೋತರ ಭಾರತದ ಘೋಷಣೆಯನ್ನು ಮಾಡಿವೆ.
1)ಮೊದಲನೆಯದು ಗಂಗಾ ಆರತಿ. ಯಾವ ಸಾಂಸ್ಕೃತಿಕ ವಂಶವಾಹಿ ಭಾರತವನ್ನು ಶತಮಾನಗಳಿಂದ ಒಗ್ಗೂಡಿಸಿದೆಯೋ, ಮತ್ತು ಅದನ್ನು  ಕಾಂಗ್ರೆಸ್ ಭಾರತೀಯರ ಮನಸ್ಸಿನಿಂದ ಮರೆಸಲು ಸರ್ವ ಪ್ರಯತ್ನ ಮಾಡಿತ್ತೋ, ಆ ಭಾರತೀಯತೆಯ ಡಿಎನ್‌ಎ ಅನ್ನು ಸಂಪೂರ್ಣವಾಗಿ ಮತ್ತು ಸ್ಪಷ್ಟವಾಗಿ ಅರ್ಥಮಾಡಿಕೊಂಡಿದ್ದೇನೆಂದು ದೇಶಕ್ಕೆ ಮುಕ್ತವಾಗಿ ತೋರಿಸಿದ ಸ್ವಾತಂತ್ರ್ಯೋತ್ತರ ಭಾರತದ ಏಕೈಕ ಪ್ರಧಾನಿ ನರೇಂದ್ರ ಮೋದಿ. ಅದನ್ನು ಅವರು ಕೇವಲ ಬೌದ್ಧಿಕ ಸ್ತರದಲ್ಲಿ ಅರ್ಥಮಾಡಿಕೊಂಡಿಲ್ಲ, ಬದಲಾಗಿ ಈ ನಾಗರಿಕ ಪ್ರಜ್ಞೆಯನ್ನು, ನಮ್ಮೆಲ್ಲರನ್ನೂ ಒಗ್ಗೂಡಿಸುವ ಈ ಏಕೈಕ ವಂಶವಾಹಿಯನ್ನು ಅಂತರ್ಗತ ಮಾಡಿಕೊಂಡಿದ್ದಾರೆ. ಹಾಗಾಗೇ ಗಂಗೆಗೆ ಆರತಿ ಎತ್ತುವಾಗ ಕೇವಲ ಸಾಂಕೇತಿಕವಾಗಿ ಕೈ ಮುಗಿದೋ ಅಥವಾ ಫೋಟೋಗಳಿಗೆ ಮುಖವೊಡ್ಡಿ ಕೆಲವೇ ನಿಮಿಷಗಳಲ್ಲಿ ಅವರು ಎದ್ದು ಹೋಗಲಿಲ್ಲ, ಬದಲಾಗಿ ಇಡೀ ಪೂಜಾ ಪ್ರಕ್ರಿಯೆಯಲ್ಲಿ ಮೌನವಾಗಿ ಪಾಲ್ಗೊಂಡಿದ್ದರು. ಆ ಇಡೀ ಘಟನೆಯನ್ನು ನೇರಪ್ರಸಾರ ಮಾಡುವ ಅನಿವಾರ್ಯತೆಗೆ ಬಿದ್ದ ಮಾಧ್ಯಮಗಳಿಗೆ ಅದನ್ನೆಲ್ಲ 'ಕೋಮುವಾದಿ' ಕೆಲಸ ಎಂದು ಕರೆಯುವ ಧೈರ್ಯ ಬರಲಿಲ್ಲ.
2) ಸಂಸತ್ತಿನ ಮೆಟ್ಟಿಲುಗಳಿಗೆ ನಮಸ್ಕರಿಸಿದ್ದು: ಈ ಕೆಲಸ ಮಾಡಿದ ಮೊದಲ ಪ್ರಧಾನಿಯೂ ಅವರೇ. ಇದುವರೆಗಿನ ಬಹುತೇಕ ಎಲ್ಲಾ ಪ್ರಧಾನಿಗಳೂ ಆ ಪವಿತ್ರ ಮೆಟ್ಟಿಲುಗಳನ್ನು ತುಳಿದುಕೊಂಡೇ ಸಂಸತ್ತಿನಲ್ಲಿ ಪ್ರವೇಶ ಮಾಡಿದ್ದಾರೆ. ತಮ್ಮ ಇಮೇಜ್‌ಗೆ ಕಟ್ಟುಬೀಳದೆ ಅಥವಾ ಯಾವುದೇ ಆಧುನಿಕತೆಯ ಕಟ್ಟುಪಾಡುಗಳಿಗೆ ಕೇರ್ ಮಾಡದೇ ಇಡೀ ದೇಶಕ್ಕೆ ಕಾಣುವ ಹಾಗೆ ಅವರು ಸಂಸತ್ತಿನ ಪಾವಟಿಗೆಗಳಿಗೆ ಹಣೆ ಹಚ್ಚಿದ ಪರಿ, ಹಿಂದೆ ನಮ್ಮ ಎಲ್ಲಾ ಮನೆಗಳಲ್ಲೂ ನಸುಕಿನ ಜಾವ ವ್ಯಕ್ತಿಯೊಬ್ಬ ಎದ್ದಾಗ ಮೊದಲು ಪಠಿಸುತ್ತಿದ್ದ ಮಂತ್ರವನ್ನು ನೆನಪಿಸುತ್ತಿತ್ತು:
"ಸಮುದ್ರವಸನೇ ದೇವಿ ಪರ್ವತಸ್ತನಮಂಡಲೇ/ ವಿಷ್ಣುಪತ್ನಿ ನಮಃಸ್ತುಭ್ಯಂ ಪಾದಸ್ಪರ್ಷಂ ಕ್ಷಮಸ್ವಮೆ" (ಸಾಗರವನ್ನು ವಸ್ತ್ರವನ್ನಾಗಿಸಿಕೊಂಡ, ಪರ್ವತಗಳು ಮತ್ತು ಕಾನನಗಳನ್ನು ತನ್ನ ದೇಹದ ಮೇಲೆ ಹೊತ್ತ, ವಿಷ್ಣುವಿನ ಪತ್ನಿಯಾದ ಓ ಭೂಮಾತೆಯೇ ನಾನು ನಿನಗೆ ನಮಿಸುತ್ತೇನೆ. ನಿನ್ನನ್ನು ನನ್ನ ಪಾದಗಳಿಂದ ಸ್ಪರ್ಷಿಸುತ್ತಿರುವುದಕ್ಕೆ ಕ್ಷಮಿಸು) ಹಾಗಂತ ಇದೆಲ್ಲ ಕೇವಲ ಆಂಗಿಕ ಅಭಿನಯವಾಗಿರಲಿಲ್ಲ, ಮುಂದಿನ ತಮ್ಮ ಭಾಷಣದಲ್ಲೂ ಅವರು ತಮ್ಮ ಭಾವನೆಗಳನ್ನು ಒತ್ತಿ ಹೇಳಿದರು: ಸಂಸತ್ತನ್ನು "ಮಂದಿರ" ಎಂದು ಕರೆದರು.
3)ಸೆಂಟ್ರಲ್ ಹಾಲ್‌ನಲ್ಲಿ ಅವರ ಭಾಷಣ: ವೈದಿಕ ಸಂಪ್ರದಾಯದಲ್ಲಿ ಹಾಸುಹೊಕ್ಕಿರುವ 'ಕೃಪೆ' ಎನ್ನುವ ಪದದ ಕುರಿತು ಅವರು ಆಡಿತ ಮಾತು. ಅತ್ಯುನ್ನತ ಪ್ರಧಾನಿ ಹುದ್ದೆಯನ್ನು ಏರಿದ ವ್ಯಕ್ತಿ 'ಮಾತೃಭೂಮಿಯ ಸೇವೆಗೆ ಅವಕಾಶ ಮಾಡಿಕೊಟ್ಟ ಜನರ ದಾಸನಾಗಿರುತ್ತಾನೆಯೇ ಹೊರತು ಆಳುವುದನ್ನೇ ತನ್ನ ಹಕ್ಕಾಗಿಸಿಕೊಂಡಿರುವುದಿಲ್ಲ' ಎನ್ನುವುದನ್ನು ಅವರು ನೆನಪು ಮಾಡಿಕೊಟ್ಟರು.
1952ರ ನಂತರ ಇದೇ ಮೊದಲ ಬಾರಿಗೆ, ಭಾರತೀಯರು ಮತ್ತು ಭಾರತೀಯ ಸಮಾಜದ ಎಲ್ಲಾ ಸ್ತರಗಳನ್ನು ನಿಜವಾಗಿಯೂ ತಲುಪಿದ ನಾಯಕ ಮೋದಿ. ಇದರ ಬಗ್ಗೆ ವಿಸ್ತಾರವಾಗಿ ನೋಡೋಣ: ಚುನಾವಣೆಯೆಂಬುದು ಯುದ್ಧವಿದ್ದಂತೆ. ಬುದ್ಧಿ ಸರಿಯಿರುವವರು ಸೋಲುವ ಅಥವಾ ಎರಡನೆಯ ಸ್ಥಾನ ಪಡೆಯುವ ಉದ್ದೇಶದಿಂದ ಯುದ್ಧರಂಗಕ್ಕಿಳಿಯುವುದಿಲ್ಲ. ಇನ್ನು ಯುದ್ಧವನ್ನು ಗೆಲ್ಲಲು ಇರುವ ಮಾರ್ಗವೆಂದರೆ ಶತ್ರುವನ್ನು 'ನುಚ್ಚುನೂರು' ಮಾಡುವ ಏಕೈಕ ಗುರಿ ಹೊಂದಿರುವುದು. ಈ ಗುರಿ ಮುಟ್ಟಲು 'ಅಗಾಧ ಶಕ್ತಿ'ಯನ್ನು ಬಳಸುವುದರಿಂದಲೂ ಸಾಧ್ಯ.
ನರೇಂದ್ರ ಮೋದಿಯವರ ಚುನಾವಣಾ ಪ್ರಚಾರಗಳಲ್ಲಿ ಈ ಎರಡೂ ಗುಣಗಳು ಸ್ಪಷ್ಟವಾಗಿ ವ್ಯಕ್ತವಾದವು. ಹೋದಲ್ಲೆಲ್ಲ ಲಕ್ಷಾಂತರ ಜನರನ್ನು ಆಕರ್ಷಿದ ಅವರ ರಾಕ್‌ಸ್ಟಾರ್ ಮಾದರಿಯ ರ್ಯಾಲಿಗಳು ಕಾಂಗ್ರೆಸ್ ಅನ್ನು ಧೂಳಿಪಟ ಮಾಡಿ 'ಅಗಾಧ ಶಕ್ತಿಗೆ' ಉದಾಹರಣೆಯಾದರೆ, ಚುನಾವಣೆಯಲ್ಲಿ ಅತ್ಯಲ್ಪ ಮೊತ್ತಕ್ಕೆ ಕುಸಿದ ಕಾಂಗ್ರೆಸ್‌ನ ಸ್ಥಾನಗಳು 'ನುಚ್ಚುನೂರಾದ' ಅದರ ಪರಿಸ್ಥಿತಿಗೆ ಕೈಗನ್ನಡಿಯಾಯಿತು.
ಯುದ್ಧದ ಅತ್ಯದ್ಭುತ ಒಳನೋಟವನ್ನು ಡಾ. ಎಸ್.ಎಲ್. ಭೈರಪ್ಪನವರ ಪರ್ವ ಕಾದಂಬರಿಯಲ್ಲಿ ಕಾಣಬಹುದು. ಅದರ ಒಟ್ಟಾರೆ ಸಾರ ಹೀಗಿದೆ: ದುಯೋರ್ಧನನೊಂದಿಗೆ ಮಾತನಾಡುತ್ತಾ ಭೀಷ್ಮ ಹೇಳುತ್ತಾನೆ, "ಯುದ್ಧರಂಗಕ್ಕೆ ಹೋಗುವ ಮುನ್ನ, ಯುದ್ಧ ಮಾಡಲು ನಿನ್ನನ್ನು ಪ್ರೇರೇಪಿಸಿದ ಉದ್ದೇಶದೆಡೆಗಿನ ನಿನ್ನ ಮನೋನಿಶ್ಚಯ ಅಚಲವಾಗಿರಬೇಕು. ಅಂಥ ಮನೋನಿಶ್ಚಯ ಪಾಂಡವರಲ್ಲಿದೆ, ಆದರೆ ನಿನ್ನ ದಳಗಳತ್ತ ನೋಡು? ನಿನ್ನನ್ನು ಹೊರತುಪಡಿಸಿ ನಿನ್ನೊಡನಿರುವ ಯಾರಿಗಾದರೂ ಈ ಯುದ್ಧ ಅನಿವಾರ್ಯವೇ? ಒಂದು ರಾಜ್ಯವನ್ನು ಯುದ್ಧರಂಗದಲ್ಲಿ ಸೆಣಸಿ ಗೆಲ್ಲಬೇಕೇ ಹೊರತು, ಅನ್ಯಾಯದ ದಾಳಗಳಾಟದಿಂದ ಕದಿಯುವ ಮೂಲಕವಲ್ಲ" ಮಹಾಭಾರತದ ಆ ಮಾತುಕತೆ ಕಾಂಗ್ರೆಸ್‌ನ ಆರು ದಶಕಗಳ ಆಡಳಿತಕ್ಕೆ ಸರಿಯಾಗಿ ಹೊಂದುತ್ತದೆ. ಸ್ವಾತಂತ್ರ್ಯ ಕಾಲದಲ್ಲಿ ತಾನು ಸಂಪಾದಿಸಿದ್ದ ಒಳ್ಳೆಯ ಹೆಸರನ್ನು ದಾಳವಾಗಿ ಬಳಸಿಕೊಂಡು ದೇಶವನ್ನು ಬೃಹತ್ ಮಟ್ಟದಲ್ಲಿ ಅಶಕ್ತಗೊಳಿಸಿದ್ದಷ್ಟೇ ಅಲ್ಲದೆ, ಕನಿಷ್ಠ ನಾಲ್ಕು ತಲೆಮಾರುಗಳನ್ನಂತೂ ಅದು ಧ್ವಂಸ ಮಾಡಿದೆ.
ನರೇಂದ್ರ ಮೋದಿ ಬರುವವರೆಗೂ ಭಾರತ ಕಾಂಗ್ರೆಸ್‌ನ ಬೃಹದಾಕಾರದ ಆಲದ ಮರದ ಕೆಳಗಡೆಯಿಂದ ಬೆಳದಿರಲೇ ಇಲ್ಲ. ಕಾಂಗ್ರೆಸ್‌ನ ಈ ಮರದ ಭಯಾನಕ ಬಿಳಿಲುಗಳು ಚಿಕ್ಕ ಕಿರಣವನ್ನೂ ತನ್ನೊಳಗಿಂದ ಬಿಟ್ಟು ಯಾರನ್ನೂ ಬೆಳೆಯಲು ಬಿಡಲಿಲ್ಲ, ಅದರ ಬಲಿಷ್ಠ ದಬ್ಬಾಳಿಕೆಯ ಬೇರುಗಳೂ ಸುತ್ತಮುತ್ತಲೂ ಮತ್ತೇನೂ ಉದ್ಭವವಾಗದಂತೆ ಮಾಡಿದ್ದವು.  1998-2004ರಲ್ಲಿದ್ದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಆರ್ಥಿಕ ರಂಗದಲ್ಲಿ ಮುಂದಿತ್ತಾದರೂ, ಭಾರತದ ಸಹಸ್ರಾರು ವರ್ಷಗಳ ಧ್ಯಾನ, ತತ್ವಶಾಸ್ತ್ರ, ರಾಜತಾಂತ್ರಿಕತೆ, ಕಲೆ, ಸಂಗೀತ, ಸಾಹಿತ್ಯ ಮತ್ತು ಜ್ಞಾನದಿಂದ ಹುಟ್ಟಿಕೊಂಡ ಶಕ್ತಿಯುತ ಪರ್ಯಾಯ ನಿರೂಪಣೆಯನ್ನು ರೂಪಿಸುವ ಕೆಲಸವನ್ನು ಅದು ಮಾಡಲಿಲ್ಲ.
ಎನ್‌ಡಿಎ ಆರ್ಥಿಕ ಉದಾರೀಕರಣವನ್ನು ಮತ್ತೊಂದು ಮಟ್ಟಕ್ಕೆ ಕೊಂಡೊಯ್ದದ್ದು ನಿಜವಾದರೂ  ಅದು ಕೂಡ ನೆಹರುರ 'ಸಮಾಜವಾದಿ ವಿನ್ಯಾಸದ" ಪರಿಯಲ್ಲಿಯೇ ನಡೆಯಿತು. ಎಲ್ಲಕ್ಕಿಂತಲೂ ದುರ್ದೈವದ ಸಂಗತಿಯೆಂದರೆ, ಸೀತಾ ರಾಮ್ ಗೋಯಲ್, ರಾಮ್ ಸ್ವರೂಪ್, ಕಾನ್ರಾಡ್ ಎಲ್ಸ್ಟ್, ಅರುಣ್ ಶೌರಿ ಮತ್ತು ಇನ್ನಿತರರು ರೂಪಿಸಿದ, ಅಸ್ತಿತ್ವದಲ್ಲಿದ್ದ ಪರ್ಯಾಯ ನಿರೂಪಣೆಯನ್ನು ಅನುಷ್ಠಾನಕ್ಕೆ ತರಲು ಕೂಡ ಆಗ ಅದು ಸೋತಿತು.ನಿಜವೇನೆಂದರೆ, ಕಾಂಗ್ರೆಸ್‌ನ ವಿನ್ಯಾಸಗಳನ್ನೇ ಉಳಿಸಿಕೊಂಡು ಅದಕ್ಕೆ ಹೊಸ ಪೇಂಟ್ ಬಳಿಯಲಾಗಿತ್ತಷ್ಟೆ.
ಬೃಹತ್ ಆಲದಮರವನ್ನು ಬೇರು ಸಮೇತ ಕಿತ್ತೆಸೆಯುವುದು ಎನ್‌ಡಿಎ ಒಕ್ಕೂಟದ ಮುಂದಿದ್ದ ಏಕೈಕ ಪರಿಹಾರವಾಗಿತ್ತು. ನರೇಂದ್ರ ಮೋದಿ ಚುನಾವಣಾ ಪ್ರಚಾರಕ್ಕೆ ಇಳಿಯುವವರೆಗೂ, ಬಿಜೆಪಿಯ ಬಹುತೇಕ ಹಿರಿಯ ನಾಯಕರು ಅಖಾಡಕ್ಕಿಳಿದು ಮೈಮಣ್ಣು ಮಾಡಿಕೊಂಡು ಅಧಿಕಾರಕ್ಕೇರುವ ಬದಲು, ಶಾಶ್ವತವಾಗಿ ವಿರೋಧಪಕ್ಷದ ಸ್ಥಾನದಲ್ಲೇ ಠಿಕಾಣಿ ಹೂಡುವ ಮನಸ್ಸು ಮಾಡಿದ್ದಾರೇನೋ ಎನ್ನುವಂತೆ ಭಾಸವಾಗುತ್ತಿತ್ತು. ಅಷ್ಟಕ್ಕೇ ಅವರು ನಿಲ್ಲಲಿಲ್ಲ. ಫಲಿತಾಂಶ ಬರುವವರೆಗೂ ಇವರೆಲ್ಲ "ನಾವು ಹೆಚ್ಚೆಂದರೆ 180 ಅಥವಾ 212 ಸ್ಥಾನಗಳನ್ನು ತಲುಪಬಲ್ಲೆವಷ್ಟೆ" ಎಂದು ವಿರೋಧಿಗಳ ಧಾಟಿಯಲ್ಲೇ ಮಾತನಾಡುತ್ತಿದ್ದರು.
282ರ ಸುನಾಮಿ ಕಾಂಗ್ರೆಸ್ಸಿಗರಿಗಷ್ಟೇ ಅಲ್ಲದೆ, ಋಣಾತ್ಮಕ ಮನಸ್ಥಿತಿಯ ಬಿಜೆಪಿ ನಾಯಕರಿಗೂ ಅಚ್ಚರಿ, ಆಘಾತವುಂಟುಮಾಡಿತ್ತು. ನೆಹರೂ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಅಂದಿನ ಪತ್ರಿಕಾ ವರದಿಗಳು ಹೇಗಿರುತ್ತಿದ್ದವು ಎನ್ನುವುದನ್ನು ಒಮ್ಮೆ ತಿಳಿದುಕೊಳ್ಳುವುದು ಇಲ್ಲಿ ಸಮಂಜಸವೆನಿಸುತ್ತಿದೆ. ಬಹುತೇಕ ಎಲ್ಲಾ ಪತ್ರಿಕೆಗಳೂ ಯಾವ ಸಂಗತಿಗಳು ಭಾರತೀಯರನ್ನು ನಾಚಿಕೆಗೆ ದೂಡಬೇಕಿತ್ತೋ ಅವೆಲ್ಲವನ್ನೂ ಸಾಧನೆ ಎಂಬಂತೆ ಬಿಂಬಿಸಿದ್ದವು. ಪಶ್ಚಿಮ ರಾಷ್ಟ್ರಗಳೆದುರು ಭಿಕ್ಷೆ ಬೇಡಿ ದೇಣಿಗೆ ಸಂಗ್ರಹಿಸುವುದೂ "ನೆಹರು ಅವರ ಭಾರೀ ಸಾಧನೆ"ಯಾಯಿತು. ಸತ್ಯವೇನೆಂದರೆ, ನೆಹರೂರಿಂದ ಹಿಡಿದು ಪಿ.ವಿ. ನರಸಿಂಹರಾಯರ ತನಕ ಭಾರತದ ಆರ್ಥಿಕತೆ ಛ್ಝಜ ಜ್ಛ್ಟಟ್ಟಿಟಣಯೇ ಆಗಿತ್ತು.
ವಸಾಹತುಶಾಹಿಗಳು ಎಂದೋ ಹೋದರು, ಆದರೆ ವಸಾಹತು ಪೀಳಿಗೆಯಿಂದ ಪೀಳಿಗೆಗೆ ಬೆಳೆಯುತ್ತಾ ವ್ಯಾಪಿಸುತ್ತಾ ಸಾಗಿತು. ಇಲ್ಲಿ ನಾವು ಮೋದಿಯವರ ಚುನಾವಣಾ ರ್ಯಾಲಿಯ ಕೇಂದ್ರಬಿಂದುವಾಗಿದ್ದ ಸಂದೇಶವನ್ನು ನಾವು ಗಮನಿಸಬೇಕು: ಸ್ಥಳೀಯ ಯೋಚನೆಗಳು ಮತ್ತು ಪ್ರತಿಭೆಯನ್ನು ಬಳಸಿ ಭಾರತೀಯರೇ ನಿರ್ಮಿಸಿದ ಸದೃಢ ಆರ್ಥಿಕತೆ."(ಭಾರತೀಯ ಸಂಸ್ಕೃತಿಯನ್ನು ಅಪ್ಪಿಕೊಳ್ಳುವ ಮತ್ತು ಭಾರತದ ಹಿರಿಮೆಯನ್ನು ಪುನಃಸ್ಥಾಪಿಸುವ" ಕರೆಯಾಗಿತ್ತದು.
ಸತ್ಯವೇನೆಂದರೆ, ನರೇಂದ್ರ ಮೋದಿಯವರ ಕಾಂಗ್ರೆಸ್ ಮುಕ್ತ ಭಾರತದ ಘೋಷಣೆ 'ನಿರ್ವಸಾಹತೀಕರಣದ' ಶಕ್ತಿಯುತ ಕರೆಯೇ ಆಗಿದೆ. ಕಾಂಗ್ರೆಸ್ಸೋತರ ಭಾರತದ ಬಗ್ಗೆ ನಾನು ಹೇಳಿದ್ದೂ ಇದನ್ನೇ. "ನರೇಂದ್ರ ಮೋದಿ ಆಧುನಿಕ ಭಾರತದ ನಿರ್ಮಾತೃವಾಗಿ ಯಶಸ್ವಿಯಾಗಬಲ್ಲರು" ಎನ್ನುವ ಅರುಣ್ ಶೌರಿಯವರ ಹೇಳಿಕೆಯ ಅರ್ಥವೂ ಇದೇ ಆಗಿದೆ!

- ಸಂದೀಪ್ ಬಾಲಕೃಷ್ಣ
deepu.sandeep@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.