

ದಶಕಗಳೇ ಕಳೆದವು! ಮಕ್ಕಳು ಅಜ್ಜ ಅಜ್ಜಿಗಳಿಂದ ದೂಋವಾಗತೊಡಗಿ, ಚಿಕ್ಕಪ್ಪ ಚಿಕ್ಕಮ್ಮಗಳಿಂದ ಸಂಬಂಧಗಳು ಮುಸಕಾಗತೊಡಗಿ, ಮೊದಲ ಬೆಸ್ಟ್ ಫ್ರೆಂಡ್ ಗಳಾದ 'ಕಸಿನ್' ಗಳ ಜೊತೆ ಇಲ್ಲವಾಗತೊಡಗಿ...! ನಾವು ಕಂಡುಕೊಂಡದ್ದು ನಮ್ಮ ಮಕ್ಕಳು ಕಾಣುತ್ತಿಲ್ಲ. "ನಮಗೆ ಸಿಗದ ಸೌಲಭ್ಯಗಳು ಮಕ್ಕಳಿಗೆ ಸಿಗಲಿ" ಎಂಬ ಮಹಾಕ್ಲೀಷೆಯ ವಾಕ್ಯ ಎರಡನೆಯ ತಲೆಮಾರನ್ನು ದಾಟತೊಡಗಿದೆ. ತಂದೆ ತಾಯಿಗಳು ಮಕ್ಕಳನ್ನು ಅಗತ್ಯಕ್ಕಿಂತ ತೀರಾ ಹೆಚ್ಚು ಸುರಕ್ಷತೆಯ ವಾತಾವರಣದಲ್ಲಿ ಬೆಳೆಸತೊಡಗಿದ್ದಾರೆ. ಬದಲಾದ ಕಾಲಮಾನದಲ್ಲಿ ಅನಿವಾರ್ಯವೆಂಬಂತೆ ಈಗಿನ ಮಕ್ಕಳು ನಮ್ಮಂತೆ ಹೊರಗೆ ಆಟವಾಡಲು ಹೋಗುವುದಿಲ್ಲ. ಇತರ ಮಕ್ಕಳೊಡನೆ ಬೆರೆಯದೇ ಭಾಷೆ ಮತ್ತು ಬೌದ್ಧಿಕ ವಿಕಾಸ ಸಾಧ್ಯವಿಲ್ಲ. ಹಾಗಾಗಿ ಈಗ ಅತೀ ಚಿಕ್ಕ ವಯಸ್ಸಿಗೇ ಮಕ್ಕಳನ್ನು ಪ್ರಿ ನರ್ಸರಿ ಅಥವಾ ಪ್ರೇಗ್ರೂಪ್ ಗೆ ಸೇರಿಸಲಾಗುತ್ತಿದೆ. ಒಬ್ಬಂಟಿಯಾಗಿ ಬೆಳೆಯುವ ಮಗುವಿಗಿಂತ ಪ್ಲೇಗ್ರೂಪ್ ನಲ್ಲಿ ಆಡಿ ಬೆಳೆಯುವ ಮಗು ಹಲವು ಪಟ್ಟು ವೇಗವಾಗಿ ಬೌದ್ಧಿಕ ಬೆಳವಣಿಗೆ ಹೊಂದುತ್ತದೆ ಎಂಬುದು ನಿಜ. ಸಣ್ಣ ಕುಟುಂಬಗಳಿಗೆ ವರದಾನವಾಗಿ ಪರಿಣಮಿಸಿರುವ ಈ ಪ್ರೇಹೋಮ್ ಗಳು ಇನ್ನೊಂದು ರೀತಿಯಲ್ಲಿ ಹಣ ಮಾಡುವ ದಂಧೆಯಾಗಿ ಬದಲಾಗುತ್ತಿರುವುದೂ ಹೌದು!
ಮಕ್ಕಳನ್ನು ತಂದೆ ತಾಯಿಗಳು ಪ್ಲೇಹೋಮ್ ಗಳಿಗೆ ಸೇರಿಸುವ ಮೊದಲ ಉದ್ದೇಶವೆಂದರೆ ಮಕ್ಕಳ ಕಿರಿಕಿರಿಯಿಂದ ಬಿಡುಗಡೆಯಾಗಬಯಸುವುದು. ಮೊದಲಾದರೆ ಜೊತೆಗೆ ಆಡಲು ಅಜ್ಜ ಅಜ್ಜಿ ಮತ್ತಿತರೆ ಸಂಬಂಧಿಗಳಿರುತ್ತಿದ್ದರು. ಆಡಲು ಅಕ್ಕಪಕ್ಕದ ಮನೆಯ ಗೆಳೆಯರಿರುತ್ತಿದ್ದರು. ಈಗ ತಂದೆ ತಾಯಿಗಳಿಬ್ಬರೂ ದುಡಿಯುತ್ತಿರುವುದರಿಂದ ಮಕ್ಕಳು ಒಂಟಿಯಾಗಿಬಿಡುತ್ತವೆ. ಶಾಲೆಗೆ ಹೋಗಿಬಂದ ನಂತರ ಸ್ಕೇಟಿಂಗ್ ಟೆನ್ನಿಸ್ ಇತ್ಯಾದಿ ಆಟದ ಕ್ಲಬ್ ಗಳಿಗೆ ಸೇರಿಸುತ್ತಾರೆ. ಅಲ್ಲಿಗೆ ದೈಹಿಕ ಮಾನಸಿಕ ವಿಕಾಸಕ್ಕೇ ತಕ್ಕಷ್ಟು ಕ್ರಮ ಕೈಗೊಂಡಿದ್ದೇವೆ ಎಂದು ನಿರಾಳರಾಗುತ್ತಾರೆ!
ತಂದೆ ತಾಯಿಗಳು ಮಕ್ಕಳಿಗಾಗಿ ಸಾಕಷ್ಟು ಸಮಯ ಕೊಡಬೇಕು. ಮಕ್ಕಳಿಗಾಗಿಯೇ ಹಣ ಗಳಿಸಲು ಶ್ರಮ ಪಡುತ್ತಿದ್ದೇವೆ ಎಂದ ಮೇಲೆ ಒಂದಷ್ಟು ಸಮಯವನ್ನು ಅವರೊಟ್ಟಿಗೆ ಕಳೆಯಲು ಮಾಡಿಕೊಳ್ಳಬಾರದೆ? ಬರೀ ಹಣದಿಂದ ಮಕ್ಕಳ ಭವಿಷ್ಯ ರೂಪುಗೊಳ್ಳುವುದಿಲ್ಲ. ರಜೆ ಬರುತ್ತಿದ್ದಂತೆ ಮಕ್ಕಳನ್ನು ಬೇಸಿಗೆ ಶಿಬಿರಕ್ಕೆ ಸೇರಿಸಲಾಗುತ್ತದೆ. ಶಿಬಿರಗಳು ಒಳ್ಳೆಯವೇ ಆದರೂ ಎರಡು ತಿಂಗಳ ಸಮಯಾವಕಾಶ ಮಕ್ಕಳನ್ನು ಸೋಮಾರಿಗಳಾಗಿಸಲು, ವಿದ್ಯೆಯಿಂದ ದೂರವಿರಿಸಲು ಸಾಕಷ್ಟು ಅವಕಾಶ ಕೊಡುತ್ತದೆ. ಆದ್ದರಿಂದ ಮಕ್ಕಳಲ್ಲಿ ಶಿಸ್ತುಬೆಳೆಸಲು ತಾಯಂದಿರು ಗಮನ ಕೊಡಬೇಕು. ರಜೆ ಇದ್ದರೂ ಇಲ್ಲದಿದ್ದರೂ ಬೆಳಿಗ್ಗೆ ಸರಿಯಾದ ಸಮಯಕ್ಕೆ ಎಬ್ಬಿಸಿ ನಿತ್ಯಕರ್ಮಗಳನ್ನು ಸ್ವತಃ ಮಾಡಿಕೊಳ್ಳುವಂತೆ ನೋಡಿಕೊಳ್ಳಬೇಕು. ಮಕ್ಕಳ ಜೊತೆ ಸಂಜೆ ಒಂದೆರಡು ಗಂಟೆ ಕೂತು ಓದಿಸಬೇಕು. ಓದುವಷ್ಟು ಮಗು ದೊಡ್ಡದಾಗಿರದಿದ್ದರೆ ಮಗ್ಗಿಯನ್ನೋ, ಕಾಗುಣಿತಗಳನ್ನೋ ಹೇಳಿಕೊಡಬೇಕು. ಮಲಗುವ ಮುಂಚೆ ಸಾಕಷ್ಟು ಹೊತ್ತು ಕಥೆ ಹೇಳುವುದರಲ್ಲೋ ಅಥವಾ ಲೌಕಿಕ ವಿಷಯಗಳನ್ನು ಮಾತನಾಡುವುದರಲ್ಲೋ ವ್ಯಯಿಸಬೇಕು. ಮಗುವು ದೈಹಿಕ ಆಟಗಳಲ್ಲಿ ತೊಡಗಿಕೊಂಡರೆ ದಣಿದು ಚೆನ್ನಾಗಿ ನಿದ್ದೆ ಮಾಡುತ್ತವೆ. ನಿದ್ದೆ ಮಗುವಿನ ದೈಹಿಕ ಬೆಳವಣಿಗೆಗೆ ಪೂರಕವಾಗಿರುತ್ತದೆ. ಸಾಧ್ಯವಾದಷ್ಟು ಮಗು ಬೆಳಿಗ್ಗೆ ಏಳುವುದರೊಳಗೆ ಕೆಲಸ ಮುಗಿಸಿಕೊಂಡರೆ ಮಗುವಿನ ಕಲಿಕೆಗೆ ಗಮನ ಕೊಡಬಹುದು. ಮದ್ಯಾಹ್ನದ ಹೊತ್ತು ಮಗು ಮಲಗಿದಾಗ ತಾಯಿಯೂ ಕೊಂಚ ವಿಶ್ರಾಂತಿ ಪಡೆದು ಉಳಿದ ಕೆಲಸಗಳನ್ನು ಮಾಡಿಕೊಳ್ಳಬಹುದು. ಕೆಲಸದ ಬಾಹುಳ್ಯದ ಕಾರಣ ತಂದೆ ತಾಯಿಗಳು ಮಕ್ಕಳಿಗೆ ಕಾರ್ಟೂನನ್ನೋ ಪೋಗೋ ದಂತಹ ಚಾನೆಲ್ಲನ್ನೋ ಹಾಕಿ ಕೂರಿಸಿಬಿಡುತ್ತಾರೆ. ಇದು ಮಗುವಿನ ದೈಹಿಕ ಬೆಳವಣಿಗೆಗೆ ಅಡ್ಡಿ ತರುತ್ತದೆ. ಮಗು ಟಿ ವಿ ಯಿಂದ ದೂರ ಇದ್ದಷ್ಟೂ ಒಳ್ಳೆಯದು.
ಮಗುವಿನ ಬೆಳವಣಿಗೆ ತಂದೆ ತಾಯಿಗಳಿಗೆ ಹಣ ಮತ್ತು ಟಿವಿಗಿಂತ ಹೆಚ್ಚು ಸುಖ ಕೊಡುತ್ತದೆ ಎಂಬುದನ್ನು ಮರೆಯಬಾರದು. ಮಗುವಿನ ತುಂಟಾಟ,ಮುಗ್ಧತೆ, ಮುದ್ದಾದ ಮಾತುಗಳು ಕೊಡುವ ಖುಷಿಯನ್ನು ಜಗತ್ತಿನ ಯಾವ ದೌಲತ್ತೂ ಸಹ ಕೊಡಲಾಗದು. ಇವುಗಳನ್ನು ನೋಡಿ ಜೀವನದ ಸಂಪೂರ್ಣ ಆನಂದವನ್ನು ಪಡೆಯಬೇಕು. ಏಕೆಂದರೆ ಒಮ್ಮೆ ಮಗು ಹದಿಹರೆಯಕ್ಕೆ ಕಾಲಿಟ್ಟರೆ ಹೊಸ ಜಗತ್ತಿಗೆ ತೆರೆದುಕೊಂಡು ವಸ್ತುತವಾಗಿ ತಂದೆತಾಯಿಗಳಿಂದ ದೂರವಾಗತೊಡಗುತ್ತದೆ. ಮಕ್ಕಳ ಪೋಷಣೆಯನ್ನು ಹೊರೆಯೆಂಬಂತೆ ನೋಡದೇ ಆ ಮಗುವಿನ ಜೊತೆ ಆಟದಲ್ಲಿ ಕಳೆಯುವ ಸಮಯ ಕೊಡುವ ದೈವಿಕ ಆನಂದವನ್ನು ಅನುಭವಿವುವುದರಲ್ಲಿ ತಾಯ್ತನದ ಸಾರ್ಥಕ್ಯವಿದೆ ಎಂಬುದನ್ನು ಅರಿಯಬೇಕು.
-ಸಿಂಧು
ಮುಂದಿನ ವಾರ: ಮಕ್ಕಳ ಓದಿಗೆ ಮನೆಯ ವಾತಾವರಣ ಹೇಗಿರಬೇಕು? - ಭಾಗ ಎರಡು.