

ಫ್ಲೋರಿಡಾ: ಅಮೆರಿಕ ಫ್ಲೋರಿಡಾದಲ್ಲಿ ಶನಿವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಭಾರತದ ವಿರುದ್ಧ 1 ರನ್ ಗಳ ರೋಚಕ ಜಯ ಸಾಧಿಸಿದೆ.
ವಿಂಡೀಸ್ ನೀಡಿದ 246 ರನ್ ಗಳ ಬೃಹತ್ ಗುರಿ ಬೆನ್ನುಹತ್ತಿದ ಭಾರತ ಆರಂಭಿಕ ಆಟಗಾರ ರೋಹಿತ್ ಶರ್ಮಾ (62 ರನ್, 28 ಎಸೆತ) ಹಾಗೂ ಕನ್ನಡಿಗ ಕೆಎಲ್ ರಾಹುಲ್ (110 ರನ್, 51 ಎಸೆತ) ಅವರ ಅಜೇಯ ಶತಕದ ಹೊರತಾಗಿಯೂ 1 ರನ್ ಗಳ ರೋಚಕ ಸೋಲು ಕಂಡಿದೆ.
ಕೊನೆಯ ಓವರ್ ನ ಕೊನೆಯ ಎಸೆತದವರೆಗೂ ಜಯ ಭಾರತದ್ದೇ ಎಂದು ಭಾವಿಸಿದ್ದ ಕ್ರೀಡಾ ಪ್ರೇಮಿಗಳಿಗೆ "ಚಾಂಪಿಯನ್" ಬ್ರಾವೋ ಭಾರಿ ಆಘಾತ ನೀಡಿದರು. ಕೊನೆಯ ಓವರ್ ನ ಅಂತಿಮ ಎಸೆತದಲ್ಲಿ ಭಾರತಕ್ಕೆ ಗೆಲ್ಲಲು ಕೇವಲ 2 ರನ್ ಗಳ ಅವಶ್ಯಕತೆ ಇದ್ದಾಗ, ಬ್ರಾವೋ ಎಸೆತವನ್ನು ತಪ್ಪಾಗಿ ಅರ್ಥೈಸಿಕೊಂಡ ನಾಯಕ ಧೋನಿ ಸ್ಯಾಮುಯೆಲ್ಸ್ ಗೆ ಕ್ಯಾಚ್ ನೀಡಿದರು. ಆ ಮೂಲಕ ಭಾರತ ಫ್ಲೋರಿಡಾ ಮೊದಲ ಟಿ20 ಪಂದ್ಯದಲ್ಲಿ 1 ರನ್ ಗಳ ರೋಚಕ ಸೋಲು ಕಂಡಿದೆ.
ಇದಕ್ಕೂ ಮೊದಲು ವಿಂಡೀಸ್ ದೈತ್ಯರು ನೀಡಿದ ಬೃಹತ್ ಸವಾಲನ್ನು ಬೆನ್ನು ಹತ್ತಿದ ಭಾರತಕ್ಕೆ ರೋಹಿತ್ ಶರ್ಮಾ ಭರ್ಜರಿ ಆರಂಭ ಒದಗಿಸಿದರು. ಇನ್ನಿಂಗ್ಸ್ ನ 3ನೇ ಓವರ್ ನಲ್ಲಿಯೇ ಅಜಿಂಕ್ಯಾ ರಹಾನೆ ವಿಕೆಟ್ ಪತನವಾದರೂ ದೃತಿಗೆಡದ ರೋಹಿತ್ ಸಮಯೋಚಿತ ಆಟವಾಡಿದರು.
ನಿಧಾನವಾಗಿ ತಮ್ಮ ರನ್ ಹೆಚ್ಚಿಸಿಕೊಂಡ ರೋಹಿತ್ 4 ಸಿಕ್ಸರ್ ಹಾಗೂ 4 ಬೌಂಡರಿ ಗಳ ನೆರವಿನಿಂದ ಕೇವಲ 28 ಎಸೆತಗಳಲ್ಲಿ 62 ರನ್ ಸಿಡಿಸಿದರು. ಇವರಿಗೆ ಕೊಹ್ಲಿ ಉತ್ತಮ ಸಾಥ್ ನೀಡುವ ಭರವಸೆ ನೀಡಿದರಾದರೂ, 5ನೇ ಓವರ್ ನಲ್ಲಿ ಬ್ರಾವೋ ಬೌಲಿಂಗ್ ನಲ್ಲಿ ವಿಕೆಟ್ ಕೈ ಚೆಲ್ಲಿದರು. ಬಳಿಕ ರೋಹಿತ್ ಜೊತೆಗೂಡಿದ ರಾಹುಲ್ ಎಂದಿನ ತಮ್ಮ ನೈಜ ಆಟ ಪ್ರದರ್ಶನ ಮಾಡುತ್ತ ರನ್ ಕದಿಯಲೆತ್ನಿಸಿದರು. ರಾಹುಲ್ ನೋಡ ನೋಡುತ್ತಿದ್ದಂತೆಯೇ ಅರ್ಧ ಶತಕ ದಾಖಲಿಸಿದರು. ಈ ವೇಳೆ ರೋಹಿತ್ ಶರ್ಮಾ ಪೊಲ್ಲಾರ್ಡ್ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು.
ಬಳಿಕ ಬಂದ ನಾಯಕ ಧೋನಿ ನಿಧಾನವಾಗಿ ರನ್ ಗಳನ್ನು ಕದಿಯುತ್ತಲೇ ರಾಹುಲ್ ಜೊತೆಗೂಡಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಅಂತಿಮ ಓವರ್ ನಲ್ಲಿ ಭಾರತಕ್ಕೆ ಗೆಲ್ಲಲು ಕೇವಲ 8 ರನ್ ಗಳ ಅವಶ್ಯಕತೆ ಇತ್ತು, ಈ ವೇಳೆ ದಾಳಿಗಳಿದ ಚಾಂಪಿಯನ್ ಬ್ರಾವೋ ಧೋನಿ ಹಾಗೂ ರಾಹುಲ್ ರನ್ನು ತಮ್ಮ ಲೈನ್ ಅಂಡ್ ಲೆಂತ್ ಮೂಲಕ ಕಟ್ಟಿಹಾಕುವಲ್ಲಿ ಯಶಸ್ವಿಯಾದರು.
ಅಂತಿಮ ಓವರ್ ನ ಮೊದಲ ಐದು ಎಸೆತದಲ್ಲಿ ಬ್ರಾವೋ ಕೇವಲ 6 ರನ್ ನೀಡಿ ಅಂತಿಮ ಎಸೆತದವರೆಗೂ ಪಂದ್ಯ ಮುಂದುವರೆಯುವಂತೆ ಮಾಡಿದರು. ಅಂತಿಮ ಎಸೆತದವರೆಗೂ ಗೆಲುವು ಭಾರತದ್ದೇ ಎಂದು ಭಾವಿಸಲಾಗಿತ್ತಾದರೂ, ಅಂತಿಮ ಎಸೆತದಲ್ಲಿ 2 ರನ್ ಗಳ ಅವಶ್ಯಕತೆ ಇದ್ದಾಗ ಧೋನಿ ಸ್ಯಾಮುಯೆಲ್ಸ್ ಗೆ ವಿಕೆಟ್ ನೀಡುವ ಮೂಲಕ ಭಾರತ 1 ರನ್ ಅಂತರದ ವಿರೋಚಿತ ಸೋಲು ಅನುಭವಿಸಿತು.
ಇನ್ನು ಭಾರತದ ವಿರುದ್ಧ ವಿಂಡೀಸ್ ಬೃಹತ್ ಮೊತ್ತ ಪೇರಿಸಲು ನೆರವಾದ ವಿಂಡೀಸ್ ತಂಡದ ಎವಿನ್ ಲೂಯಿಸ್ ಅರ್ಹವಾಗಿಯೇ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.
ಆ ಮೂಲಕ 2 ಪಂದ್ಯಗಳ ಟಿ20 ಸರಣಿಯಲ್ಲಿ ವೆಸ್ಟ್ ಇಂಡೀಸ್ ತಂಡ 1-0 ಮುನ್ನಡೆ ಪಡೆದಿದೆ.