

ಪೋರ್ಟ್ ಲಾಡರ್ ಡೇಲ್: ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಪಂದ್ಯಾವಳಿಯ ಹಿನ್ನೆಲೆ ಟೀಂ ಇಂಡಿಯಾ ತಂಡವನ್ನು ಸೇರಿಕೊಂಡಿರುವ ಸೀಮಿತ ಓವರ್ ಗಳ ನಾಯಕ ಎಂಎಸ್ ಧೋನಿ ಕ್ರಿಕೆಟ್ ಗೆ ಅಮೆರಿಕ ಒಂದು ವಿಶೇಷ ಮಾರುಕಟ್ಟೆ ಎಂದು ಹೇಳಿದ್ದಾರೆ.
ಅಮೆರಿಕದ ಸೆಂಟ್ರಲ್ ಬ್ರೋವಾರ್ಡ್ ರಿಜಿನಲ್ ಪಾರ್ಕ್ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ಮತ್ತು ಟೀಂ ಇಂಡಿಯಾ ನಡುವಿನ ಮೊದಲ ಅಂತಾರಾಷ್ಟ್ರೀಯ ಟಿ20 ಪಂದ್ಯ ನಡೆಯಲಿದ್ದು ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಅಮೆರಿಕಾ ಕ್ರಿಕೆಟ್ ಗೆ ಒಂದು ವಿಶೇಷ ಮಾರುಕಟ್ಟೆಯಾಗಿದೆ. ಆದರೆ ಅದೇಕೋ ಇಲ್ಲಿ ಕ್ರಿಕೆಟ್ ಯಶಸ್ವಿಯಾಗುತ್ತಿಲ್ಲ ಎಂದು ಹೇಳಿದ್ದಾರೆ.
ಇಲ್ಲಿನ ಸೌಲಭ್ಯ ಕುರಿತಂತೆ ಮಾತನಾಡಿದ ಧೋನಿ, ಕ್ರೀಡಾಂಗಣ ಚಿಕ್ಕದಾಗಿದ್ದು, ಟಿ20 ಪಂದ್ಯಗಳಿಗೆ ಹೇಳಿ ಮಾಡಿದ ಮೈದಾನವಾಗಿದೆ. ಅಮೆರಿಕದಲ್ಲಿ ಭಾರತೀಯ ವಲಸಿಗರು ಸಾಕಷ್ಟು ಪ್ರಮಾಣದಲ್ಲಿದ್ದು, ನಮಗೆ ಅಭಿಮಾನಿಗಳಿಂದ ಉತ್ತಮ ಬೆಂಬಲ ಸಿಗಲಿದೆ ಎಂದರು.
ಈ ಮೈದಾನದಲ್ಲಿ ಹಲವು ಅಂತಾರಾಷ್ಟ್ರೀಯ ಪಂದ್ಯಗಳು ಈ ಹಿಂದೆ ನಡೆದಿವೆ. ಆದರೆ ಪೂರ್ಣ ಪ್ರಮಾಣದ ಶಕ್ತಿಶಾಲಿ ಭಾರತ ತಂಡವೊಂದು ಅಮೆರಿಕ ಪ್ರವಾಸ ಕೈಗೊಂಡಿರುವುದು ಇದೇ ಮೊದಲು. ಹೀಗಾಗಿ ಈ ಐತಿಹಾಸಿಕ ಸೆಣಸಾಟವನ್ನು ಕಣ್ತುಂಬಿಕೊಳ್ಳಲು ಇಲ್ಲಿನ ಭಾರತೀಯ ಕ್ರಿಕೆಟ್ ಪ್ರೇಮಿಗಳಂತೂ ಕಾತರದಲ್ಲಿದ್ದಾರೆ ಎಂದು ಧೋನಿ ಹೇಳಿದ್ದಾರೆ.