

ನವದೆಹಲಿ: ಭಾರತ ಕ್ರಿಕೆಟ್ ತಂಡದ ವೆಸ್ಟ್ ಇಂಡೀಸ್ ಪ್ರವಾಸದ ವೇಳಾ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಸತತ 49 ದಿನಗಳ ಪ್ರವಾಸ ಇದೇ ಜುಲೈ 6ರಿಂದ ಆರಂಭಗೊಳ್ಳಲಿದೆ.
ವೆಸ್ಟ್ ಇಂಡೀಸ್ ಪ್ರವಾಸದ ಒಟ್ಟು 7 ವಾರಗಳಲ್ಲಿ ಅವಧಿಯಲ್ಲಿ ಟೀಂ ಇಂಡಿಯಾ ಎರಡು ಅಭ್ಯಾಸ ಪಂದ್ಯ ಹಾಗೂ ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಜುಲೈ 6ರಂದು ವೆಸ್ಟ್ ಇಂಡೀಸ್ ನೆಲಕ್ಕೆ ಕಾಲಿಡಲಿರುವ ಭಾರತ ತಂಡ 2 ಅಭ್ಯಾಸ ಪಂದ್ಯಗಳನ್ನು ಆಡಿದ ನಂತರ ಜುಲೈ 21ರಿಂದ 4 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಆತಿಥೇಯ ತಂಡವನ್ನು ಎದುರಿಸಲಿದೆ ಎಂದು ಬಿಸಿಸಿಐ ತಿಳಿಸಿದೆ.
ಆಗಸ್ಟ್ 23ರಂದು ವಿರಾಟ್ ಕೊಹ್ಲಿ ನೇತೃತ್ವದ ತಂಡ 7 ವಾರಗಳ ಪ್ರವಾಸ ಮುಗಿಸಿ ಭಾರತಕ್ಕೆ ಮರಳಲಿದೆ. 2014ರಲ್ಲಿ ವೆಸ್ಟ್ ಇಂಡೀಸ್ ತಂಡ ಆಂತರಿಕ ಬಿಕ್ಕಟ್ಟಿನಿಂದಾಗಿ ಭಾರತ ಪ್ರವಾಸವನ್ನು ಮೊಟಕುಗೊಳಿಸಿ ತವರಿಗೆ ವಾಪಸಾಗಿದ್ದ ವಿವಾದದ ಬಳಿಕ ಇದು ಉಭಯ ದೇಶಗಳ ನಡುವಿನ ಮೊದಲ ದ್ವಿಪಕ್ಷೀಯ ಸರಣಿಯಾಗಿದೆ. ಭಾರತ ತಂಡ ವಿಂಡೀಸ್ ಪ್ರವಾಸಕ್ಕೆ ಹೊಸ ಕೋಚ್ ಮತ್ತು ತರಬೇತಿ ಸಿಬ್ಬಂದಿ ಬಳಗದ ಜತೆಗೆ ತೆರಳುವ ನಿರೀಕ್ಷೆ ಇದೆ. ಈಗಾಗಲೆ ಆಯ್ಕೆ ಪ್ರಕ್ರಿಯೆ ಆರಂಭಿಸಿರುವ ಬಿಸಿಸಿಐ, ಜೂನ್ 25ರೊಳಗೆ ಹೊಸ ಕೋಚ್ ಹೆಸರು ಪ್ರಕಟಿಸುವ ಸಾಧ್ಯತೆ ಇದೆ.
ಕೆರಿಬಿಯನ್ ಪ್ರವಾಸ ವೇಳಾಪಟ್ಟಿ
ಜುಲೈ 9-10: ಅಭ್ಯಾಸ ಪಂದ್ಯ, ಸೇಂಟ್ ಕಿಟ್ಸ್
ಜುಲೈ 14-16: ಅಭ್ಯಾಸ ಪಂದ್ಯ, ಸೇಂಟ್ ಕಿಟ್ಸ್
ಜುಲೈ 21-25: ಮೊದಲ ಟೆಸ್ಟ್, ಆಂಟಿಗಾ
ಜು-30-ಆಗಸ್ಟ್ 3: 2ನೇ ಟೆಸ್ಟ್, ಜಮೈಕಾ
ಆಗಸ್ಟ್ 9-13: 3ನೇ ಟೆಸ್ಟ್, ಗ್ರಾಸ್ ಐಲೆಟ್
ಆಗಸ್ಟ್ 8-22: 4ನೇ ಟೆಸ್ಟ್, ಟ್ರಿನಿಡಾಡ್