

ನವದೆಹಲಿ: ಟೀಂ ಇಂಡಿಯಾ ಮುಖ್ಯ ಕೋಚ್ ಸ್ಥಾನಕ್ಕೆ ಆಯ್ಕೆ ಬಯಸಿ ಕರ್ನಾಟಕದ ವೆಂಕಟೇಶ್ ಪ್ರಸಾದ್ ಅವರು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಅರ್ಜಿ ಸಲ್ಲಿಸಿದ್ದಾರೆ.
ಬಲಗೈ ವೇಗಿ ಪ್ರಸಾದ್ ಕೋಚ್ ಸ್ಥಾನದ ಆಕಾಂಕ್ಷಿಯಾಗಿದ್ದು, ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿರುವ ವಿಷಯವನ್ನು ಅವರು ಖಚಿತಪಡಿಸಿದ್ದಾರೆ.
ಪ್ರಸಾದ್ ಸದ್ಯಕ್ಕೆ ಬಿಸಿಸಿಐ ಜೂನಿಯರ್ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿದ್ದಾರೆ. ಹಿಂದೆ ಭಾರತ ತಂಡದ ಬೌಲಿಂಗ್ ಕೋಚ್ ಆಗಿ ಕೆಲಸ ಮಾಡಿದ್ದರು. ಇವರು ಕೋಚ್ ಆಗಿದ್ದ ಅವಧಿಯಲ್ಲಿ ಮಹೇಂದ್ರ ಸಿಂಗ್ ದೋನಿ ನಾಯಕತ್ವದಲ್ಲಿ ಭಾರತ ತಂಡ 2007ರ ಐಸಿಸಿ ಟ್ವೆಂಟಿ–20 ಟೂರ್ನಿಯಲ್ಲಿ ಚಾಂಪಿಯನ್ ಆಗಿತ್ತು. ಎರಡು ವರ್ಷ ಪ್ರಸಾದ್ ಕೋಚ್ ಆಗಿ ಕೆಲಸ ಮಾಡಿದ್ದರು.
ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಆರ್‌ಸಿಬಿ ತಂಡಗಳಿಗೂ ಕೋಚ್ ಆಗಿದ್ದರು. 46 ವರ್ಷದ ಪ್ರಸಾದ್ ಉತ್ತರ ಪ್ರದೇಶ ರಣಜಿ ತಂಡಕ್ಕೂ ತರಬೇತಿ ನೀಡಿದ ಅನುಭವ ಹೊಂದಿದ್ದಾರೆ.
ವಿಶ್ವದ ಬಲಿಷ್ಠ ತಂಡಗಳಲ್ಲಿ ಒಂದಾದ ಭಾರತ ತಂಡದ ಮುಖ್ಯ ಕೋಚ್ ಆಗಲು ಸಾಕಷ್ಟು ಪೈಪೋಟಿ ನಡೆಯುತ್ತಿದೆ. ಭಾರತ ತಂಡದ ಮಾಜಿ ನಿರ್ದೇಶಕ ರವಿ ಶಾಸ್ತ್ರಿ, ಸೀನಿಯರ್ ಆಯ್ಕೆ ಸಮಿತಿಯ ಮುಖ್ಯಸ್ಥ ಸಂದೀಪ್ ಪಾಟೀಲ್ ಅವರೂ ಕೋಚ್ ಹುದ್ದೆಯ ಆಕಾಂಕ್ಷಿಗಳಾಗಿದ್ದಾರೆ.