

ಮೊಹಾಲಿ: ಮೊಹಾಲಿಯಲ್ಲಿ ನಡೆದ ಇಂಡೋ-ಆಸಿಸ್ ಪಂದ್ಯಕ್ಕೆ ತಿರುವು ಕೊಟ್ಟಿದ್ದ ಭಾರತದ ಸ್ಫೋಟಕ ಬ್ಯಾಟ್ಸಮನ್ ವಿರಾಟ್ ಕೊಹ್ಲಿ ಎಂದು ಹೇಳಬಹುದು. ಪಂದ್ಯ ಮುಗಿಯುವ ಅಂತಿಮ 2 ಓವರ್ ಗಳಲ್ಲಿ ಮ್ಯಾಜಿಕ್ ಮಾಡಿದ್ದ ಕೊಹ್ಲಿ ಭಾರತ ತಂಡವನ್ನು ಸೆಮಿ ಫೈನಲ್ ಗೆ ಯಶಸ್ವಿಯಾಗಿ ನಡೆಸಿದ್ದರು.
ಆಸ್ಟ್ರೇಲಿಯಾದ ಸವಾಲಿನ ಗುರಿಯನ್ನು ಬೆನ್ನುಹತ್ತುವಲ್ಲಿ ಭಾನುವಾರ ಟೀಂ ಇಂಡಿಯಾ ಯಶಸ್ವಿಯಾಗಿದ್ದು, 6 ವಿಕೆಟ್ ಗಳ ಮೂಲಕ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಸೆಮಿಫೈನಲ್ ಗೆ ಅರ್ಹತೆ ಗಿಟ್ಟಿಸಿದೆ. ಆದರೆ ಒಂದು ಹಂತದಲ್ಲಿ ಪಂದ್ಯ ಕೈಜಾರುವ ಭೀತಿ ಶುರುವಾಗಿತ್ತಾದರೂ, ಭಾರತ ತಂಡದ ಸ್ಫೋಟಕ ಬ್ಯಾಟ್ಸಮನ್ ವಿರಾಟ್ ಕೊಹ್ಲಿ ಅದಕ್ಕೆ ಆಸ್ಪದ ನೀಡದೆ ಅಂದುಕೊಂಡದ್ದಿಕ್ಕಿಂತಲೂ ಮುಂಚಿತವಾಗಿಯೇ ಭಾರತಕ್ಕೆ ಜಯ ತಂದಿತ್ತಿದ್ದರು.
18ನೇ ಓವರ್ ನಲ್ಲಿ ಪಂದ್ಯ ಗೆಲ್ಲಲು ಭಾರತಕ್ಕೆ 18 ಎಸೆತಗಳಲ್ಲಿ ಬರೊಬ್ಬರಿ 38 ರನ್ ಗಳ ಅವಶ್ಯಕತೆ ಇತ್ತು. ಈ ಹಂತದಲ್ಲಿ ಆಸ್ಟ್ರೇಲಿಯಾದ ಘಾತಕ ವೇಗಿ ಫಾಲ್ಕನರ್ ಅವರ ಕೈಗೆ ನಾಯಕ ಸ್ಮಿತ್ ಬಾಲ್ ನೀಡಿದ್ದರು. ಫಾಲ್ಕನರ್ ಮೊದಲ ಎಸೆತ ಹಾಕುತ್ತಿದ್ದಂತೆಯೇ ಕ್ರೀಸ್ ನಲ್ಲಿದ ಕೊಹ್ಲಿ ಫ್ರಂಟ್ ಫುಟ್ ನಲ್ಲಿ ಸ್ಕ್ವೇರ್ ಲೆಗ್ ನತ್ತ ಪುಲ್ ಮಾಡುವುದರೊಂದಿಗೆ ನಾಲ್ಕು ರನ್ ಸಿಡಿಸಿದರು. ಬಳಿಕ ಎರಡನೇ ಎಸೆತದ ವೇಳೆ ಫಾಲ್ಕನರ್ ಯಾರ್ಕರ್ ಅನ್ನು ಸ್ಕ್ವೇರ್ ಡ್ರೈವ್ ನತ್ತ ಭಾರಿಸುವ ಮೂಲಕ ಮತ್ತೆ ಕೊಹ್ಲಿ ನಾಲ್ಕು ರನ್ ಪಡೆದರು. 3ನೇ ಎಸೆತದಲ್ಲಿ ಫಾಲ್ಕನ್ ರೆ ಎಸೆದ ಎಸೆತವನ್ನು ಲಾಂಗ್ ಆಫ್ ನಲ್ಲಿ ಸಿಕ್ಸರ್ ಎತ್ತಿದ ಕೊಹ್ಲಿ ಬಹುತೇಕ ಪಂದ್ಯವನ್ನು ಆಸ್ಟ್ರೇಲಿಯಾ ಕೈಯಿಂದ ಕಿತ್ತು ಕೊಂಡಿದ್ದರು.
4, 5 ಮತ್ತು 6ನೇ ಎಸೆತಗಳಲ್ಲಿ 5 ರನ್ ಸಿಡಿಸುವ ಮೂಲಕ 17ನೇ ಓವರ್ ನಲ್ಲಿ ಭಾರತ ಒಟ್ಟು 19 ರನ್ ಸಿಡಿಸಿ ಬಹುತೇಕ ಗೆಲುವು ಖಚಿತ ಪಡಿಸಿಕೊಂಡಿತ್ತು.
19ನೇ ಓವರ್ ನಲ್ಲಿ ಭಾರತಕ್ಕೆ ಗೆಲ್ಲಲು 12 ಎಸೆತಗಳಲ್ಲಿ 20 ರನ್ ಗಳ ಅವಶ್ಯಕತೆ ಇತ್ತು. ಆಗ ಆಸಿಸ್ ತಂಡದ ನಾಯಕ ಬಾಲ್ ಅನ್ನು ಕಲ್ಟರ್ ನೈಲ್ ಗೆ ನೀಡಿದರು. ನೈಲ್ ಎಸೆದ 19 ನೇ ಓವರ್ ಎದುರಿಸಿದ ಕೊಹ್ಲಿ ಓವರ್ ನ 2, 3, 4 ಮತ್ತು 6ನೇ ಎಸೆತಗಳಲ್ಲಿ ಸತತ 4 ಬೌಂಡರಿ ಭಾರಿಸುವ ಮೂಲಕ ಭಾರತವನ್ನು ಬಹುತೇಕ ಗೆಲುವಿನ ಸಮೀಪಕ್ಕೆ ಕರೆದೊಯ್ದಿದ್ದರು. ಬಳಿಕ 20ನೇ ಓವರ್ ಎಸೆದ ಫಾಲ್ಕನ್ ರ ಅವರ ಮೊದಲ ಎಸೆತವನ್ನೇ ನಾಯಕ ಧೋನಿ ಲಾಂಗ್ ಆನ್ ನತ್ತ ಬೌಂಡರಿ ಸಿಡಿಸಿದ ಧೋನಿ ವಿಜಯದ ರನ್ ಗಳನ್ನು ಸಿಡಿಸಿ ಭಾರತಕ್ಕೆ 6 ವಿಕೆಟ್ ಗಳ ಭರ್ಜರಿ ಜಯ ತಂದಿತ್ತರು.
ಒಟ್ಟಾರೆ ಇಡೀ ಪಂದ್ಯಕ್ಕೆ 18 ಮತ್ತು 19ನೇ ಓವರ್ ನಲ್ಲಿ ಕೊಹ್ಲಿ ನೀಡಿದ ರನ್ ಹೊಳೆಯ ಟ್ವಿಸ್ಟ್ ಭಾರತ ತಂಡಕ್ಕೆ ಭರ್ಜರಿ ಜಯವನ್ನು ತಂದಿತ್ತಿತ್ತು.