ಇಂಡೋ-ವಿಂಡೀಸ್ ಸೆಮೀಸ್; ಭಾರತವೇ ಗೆಲ್ಲುವ ಫೇವರಿಟ್

ಪ್ರಮುಖ ಟೂರ್ನಿಗಳ ಅಂಕಿ ಅಂಶಗಳು ಭಾರತದ ಪರವಾಗಿದ್ದು, ವೆಸ್ಟ್ ಇಂಡೀಸ್ ಎದುರು ಭಾರತವೇ ಗೆಲ್ಲುವ ಫೇವರಿಟ್ ಎಂದು ಹೇಳಲಾಗುತ್ತಿದೆ.
ಭಾರತ ವರ್ಸಸ್ ವೆಸ್ಟ್ ಇಂಡೀಸ್ (ಸಂಗ್ರಹ ಚಿತ್ರ)
ಭಾರತ ವರ್ಸಸ್ ವೆಸ್ಟ್ ಇಂಡೀಸ್ (ಸಂಗ್ರಹ ಚಿತ್ರ)
Updated on: 

ಮುಂಬೈ: ಐಸಿಸಿ ಟಿ20 ಸರಣಿಯ 2ನೇ ಸೆಮಿ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಗುರುವಾರ ಭಾರತ ಪ್ರವಾಸಿ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಸೆಣಸಲಿದೆ. ಪ್ರಮುಖ ಟೂರ್ನಿಗಳ ಅಂಕಿ ಅಂಶಗಳು ಭಾರತದ ಪರವಾಗಿದ್ದು, ವೆಸ್ಟ್ ಇಂಡೀಸ್ ಎದುರು ಭಾರತವೇ ಗೆಲ್ಲುವ ಫೇವರಿಟ್ ಎಂದು ಹೇಳಲಾಗುತ್ತಿದೆ.

ಟೂರ್ನಿಯಲ್ಲಿ ಉತ್ತಮವಾಗಿ ಆಡಿ ಸೆಮೀಸ್ ಅಡಿ ಇಟ್ಟಿರುವ ವಿಂಡೀಸ್ ತಂಡದ ಪ್ರಮುಖ ಅಸ್ತ್ರವೆಂದರೆ ಅದು ಆ ತಂಡ ಬಲಿಷ್ಠ ಬ್ಯಾಟಿಂಗ್ ಪಡೆ. ಆರಂಭಿಕ ಆಟಗಾರ ಆಂಡ್ರೆ ಫ್ಲೆಚರ್ ರಿಂದ  ಹಿಡಿದು ಚಾರ್ಲ್ಸ್, ಕ್ರಿಸ್ ಗೇಯ್ಲ್, ಸ್ಯಾಮುಯೆಲ್ಸ್, ಡರೆನ್ ಸಾಮಿ, ಡ್ವೇಯ್ನ್ ಬ್ರಾವೋ ಮತ್ತು ದಿನೇಶ್ ರಾಮ್ ದಿನ್ ಸೇರಿದಂತೆ ಎಲ್ಲರೂ ಉತ್ತಮ ಬ್ಯಾಟ್ಸಮನ್ ಗಳೇ ಇನ್ನು ಬ್ರಾತ್ ವೇಟ್  ಮ್ತತು  ರಸೆಲ್ ರಂತಹ ಆಲ್ ರೌಂಡರ್ ಗಳು ಕೂಡ ವಿಂಡೀಸ್ ತಂಡದಲ್ಲಿ ಅಗತ್ಯ ಇವರ ಬ್ಯಾಟ್ ಗಳಿಂದಲೂ ಸಹ ರನ್ ಹೊಳೆ ಹರಿಯಬಲ್ಲದು. ಇದು ವಿಂಡೀಸ್ ತಂಡದ ಶಕ್ತಿ.

ಅಂತೆಯೇ ಭಾರತದ ವಿಚಾರಕ್ಕೆ ಬರುವುದಾದರೆ ಆಸ್ಚ್ರೇಲಿಯಾ ವಿರುದ್ಧದ ದೊಡ್ಡ ಮೊತ್ತದ ಗುರಿಯ ಪಂದ್ಯವನ್ನು ಹೊರತು ಪಡಿಸಿದರೆ ಭಾರತ ಗೆದ್ದ ಉಳಿದೆಲ್ಲಾ ಪಂದ್ಯಗಳಲ್ಲಿ ತನ್ನ ಬೌಲಿಂಗ್  ಸಾಮರ್ಥ್ಯದಿಂದಲೇ ಗೆದ್ದಿದೆ. ಬಾಂಗ್ಲಾದೇಶದ ವಿರುದ್ಧ ಸೋಲುವ ಪಂದ್ಯವನ್ನು ಮತ್ತು ಪಾಕಿಸ್ತಾನದ ವಿರುದ್ಧ ಹೈವೋಲ್ಟೇಜ್ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದು, ಭಾರತೀಯ ಬೌಲರ್ ಗಳು  ಎಂಬುದನ್ನು ಮರೆಯಬಾರದು. ಹೀಗಾಗಿ ಭಾರತದ ಬೌಲಿಂಗ್ ಪಡೆಯನ್ನು ಆ ತಂಡ ಪ್ರಮುಖ ಅಸ್ತ್ರವೆಂದು ಪರಿಗಣಿಸಿದರೂ ತಪ್ಪಿಲ್ಲ. ಅಶ್ವಿನ್, ರವೀಂದ್ರ ಜಡೇಜಾ, ಬಾಂಗ್ಲಾ ಪಂದ್ಯದ ಹೀರೋ  ಪಾಂಡ್ಯಾ, ಯಾರ್ಕರ್ ಸ್ಪೆಷಲಿಸ್ಟ್ ಬುಮ್ರಾಹ್ ಮತ್ತು ಹಿರಿಯ ವೇಗಿ ಆಶೀಶ್ ನೆಹ್ರಾ ತಂಡ ಪ್ರಮುಖ ಬೌಲಿಂಗ್ ಅಸ್ತ್ರಗಳಾದರೆ, ರೈನಾ ಪಾರ್ಟ್ ಟೈಮ್ ಬೌಲರ್ ಆಗಿ ಯಶಸ್ವಿಯಾಗಿರುವುದು  ತಂಡಕ್ಕೆ ಮತ್ತೊಂದು ಪ್ಲಸ್ ಪಾಯಿಂಟ್.

ಕೇವಲ ಬೌಲಿಂಗ್ ಮಾತ್ರವಲ್ಲದೇ ಭಾರತದ ಬಳಿ ವಿಶ್ವಶ್ರೇಷ್ಠ ಬ್ಯಾಟ್ಸಮನ್ ಗಳಿದ್ದಾರೆ. ವಿರಾಟ್ ಕೊಹ್ಲಿ, ನಾಯಕ ಮಹೇಂದ್ರ ಸಿಂಗ್ ಧೋನಿ ಉತ್ತಮ ಫಾರ್ಮ್ ನಲ್ಲಿದ್ದು, ಇತ್ತೀಚೆಗೆ ವೈಫಲ್ಯ  ಅನುಭವಿಸುತ್ತಿರುವ ರೋಹಿತ್ ಶರ್ಮಾ, ಶಿಖರ್ ಧವನ್ ಮತ್ತು ಸುರೇಶ್ ರೈನಾ ಅಬ್ಬರಿಸಿದರೆ ಟಾರ್ಗೆಟ್ ಎಷ್ಟೇ ಇರಲಿ ಅದನ್ನು ನಿರಾಯಾಸವಾಗಿ ಭಾರತ ಮುಟ್ಟಬಲ್ಲದು. ಇನ್ನು ಯುವರಾಜ್  ಸಿಂಗ್ ಅಲಭ್ಯತೆ ಭಾರತಕ್ಕೆ ಹಿನ್ನಡೆಯಾಗುವ ಸಾಧ್ಯತೆ ಕೂಡ ಇದ್ದು, ಇದನ್ನು ತುಂಬಲು ಕರ್ನಾಟಕದ ಮನೀಷ್ ಪಾಂಡೆ ಇದೀಗ ತಂಡ ಸೇರಿಕೊಂಡಿದ್ದಾರೆ. ಆದರೆ ಪಾಂಡೆ ಟೂರ್ನಿಯಲ್ಲಿ ಇದೇ  ಮೊದಲ ಪಂದ್ಯವನ್ನಾಡುತ್ತಿದ್ದು, ಎಷ್ಟರ ಮಟ್ಟಿಗೆ ಅವರು ಎದುರಾಳಿ ಬೌಲರ್ ಗಳನ್ನು ಎದುರಿಸುತ್ತಾರೆ ಎಂಬುದೇ ಈಗಿನ ದೊಡ್ಡ ಪ್ರಶ್ನೆ.

ಇನ್ನು ಭಾರತ ಪಾಲ್ಗೊಂಡ ಪ್ರಮುಖ ಟೂರ್ನಿಗಳ ಅಂಕಿ ಅಂಶಗಳು ಕೂಡ ಭಾರತದ ಪರವಾಗಿದ್ದು, 1983ರ ವಿಶ್ವಕಪ್ ಗೆಲುವಿನ ನ೦ತರದಲ್ಲಿ ಭಾರತ ಒಟ್ಟು 16 ಏಕದಿನ ಟೂನಿ೯ಗಳಲ್ಲಿ  ಸೆಮಿಫೈನಲ್ ಪ೦ದ್ಯವಾಡಿದೆ. ಈ ಪೈಕಿ 10ರಲ್ಲಿ ಗೆದ್ದು 6ರಲ್ಲಿ ಸೋಲು ಕ೦ಡಿದೆ. ಸೆಮೀಸ್ ಗೆದ್ದಿರುವ 10 ಟೂನಿ೯ಗಳ ಪೈಕಿ ಟೀಂ ಇಂಡಿಯಾ 7ರಲ್ಲಿ ಪ್ರಶಸ್ತಿಯನ್ನೂ ಗೆದ್ದುಕೊ೦ಡಿದೆ.  ಅಂತೆಯೇ ವಿವಿಧ ಟೂನಿ೯ಗಳ ಸೆಮಿಫೈನಲ್‍ನಲ್ಲಿ ಭಾರತ 2000ದ ನ೦ತರ 8 ಟೂನಿ೯ಗಳ ಸೆಮಿಫೈನಲ್‍ನಲ್ಲಿ ಆಡಿರುವ ಭಾರತ, ಒಮ್ಮೆ ಮಾತ್ರ ಸೋತಿದೆ. ಅದು 2015ರ ಏಕದಿನ  ವಿಶ್ವಕಪ್.

ವಿ೦ಡೀಸ್ ಎದುರು 3 ಏಕದಿನ ಟೂನಿ೯ಗಳ ಸೆಮೀಸ್‍ನಲ್ಲಿ ಭಾರತ ಆಡಿದ್ದು, 3ರಲ್ಲೂ ಭಾರತ ಸೋಲು ಕ೦ಡಿದೆ. ಅವುಗಳೆ೦ದರೆ 1988ರ ತ್ರಿರಾಷ್ಟ್ರಗಳ ಚಾ೦ಪಿಯನ್ಸ್ ಟ್ರೋಫಿ, 1989ರ  ನೆಹರು ಕಪ್ ಮತ್ತು 1998ರ ಐಸಿಸಿ ಚಾ೦ಪಿಯನ್ಸ್ ಟ್ರೋಫಿ. ಇನ್ನು ಟಿ20 ವಿಶ್ವಕಪ್‍ನಲ್ಲಿ ಭಾರತ 2 ಬಾರಿ ಸೆಮಿಫೈನಲ್ ಆಡಿದ್ದು, ಎರಡೂ ಬಾರಿಯೂ ಫೈನಲ್ ಪ್ರವೇಶಿಸುವಲ್ಲಿ ಸಫಲವಾಗಿದೆ.  2000ದ ನ೦ತರ 8 ಟೂನಿ೯ಗಳ ಸೆಮಿಫೈನಲ್‍ನಲ್ಲಿ ಆಡಿರುವ ಭಾರತ ಒಮ್ಮೆ ಮಾತ್ರ ಸೋತಿದೆ. ಅದು 2015ರ ಏಕದಿನ ವಿಶ್ವಕಪ್.

ಒಟ್ಟಾರೆ ಇಂದಿನ ವೆಸ್ಟ್ ಇಂಡೀಸ್ ವಿರುದ್ಧ ಸೆಮೀಸ್ ಹಣಾಹಣಿಯಲ್ಲಿ ಭಾರತ ಪಾರಮ್ಯ ಮೆರೆದು ಫೈನಲ್ ಪ್ರವೇಶಿಸಿದರೆ ಅಚ್ಚರಿಯೇನಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com