

ನವದೆಹಲಿ: ಭಾರತದ ಉದಯೋನ್ಮುಖ ಕ್ರಿಕೆಟ್ ಆಟಗಾರನೋರ್ವ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡುವ ಮೊದಲೇ ಟಿ20 ಮಾದರಿಯಲ್ಲಿ ತ್ರಿಶತಕ ಸಿಡಿಸಿ ವಿಶ್ವದಾಖಲೆ ನಿರ್ಮಿಸಿದ್ದಾನೆ.
72 ಎಸೆತ, 39 ಸಿಕ್ಸರ್ ಮತ್ತು 300ರನ್...ಇದು ಯಾವುದೋ ಒಂದು ತಂಡದ ಮೊತ್ತವಲ್ಲ. ಬದಲಿಗೆ ಓರ್ವ ಉದಯೋನ್ಮುಖ ಕ್ರಿಕೆಟಿಗನ ಸ್ಕೋರ್ ಕಾರ್ಡ್.. ಅದೂ ಕೂಡ ಟಿ20 ಪಂದ್ಯದಲ್ಲಿ..ನಂಬಲಸಾಧ್ಯವಾದರೂ ಇದು ಸತ್ಯ. ದೆಹಲಿಯ ಕ್ರಿಕೆಟಿಗ ಮೋಹಿತ್ ಅಹ್ಲಾವತ್ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡುವ ವಿಶ್ವದಾಖಲೆ ನಿರ್ಮಿಸಿದ್ದಾರೆ. ಕ್ರಿಕೆಟ್ ರಂಗದ ಘಟಾನುಘಟಿ ಆಟಗಾರರಿಂದಲೇ ಸಾಧ್ಯವಾಗದ ಅಪರೂಪದ ದಾಖಲೆಯೊಂದನ್ನು ಮೋಹಿತ್ ಅಹ್ಲಾವತ್ ನಿರ್ಮಿಸಿದ್ದು, ಟಿ20 ಪಂದ್ಯದಲ್ಲಿ ತ್ರಿಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ.
ದೆಹಲಿಯಲ್ಲಿ ನಡೆದ ಫ್ರೆಂಡ್ಸ್ ಪ್ರೀಮಿಯರ್ ಲೀಗ್ ನಲ್ಲಿ ಮಾವಿ ಇಲೆವನ್ ತಂಡವನ್ನು ಪ್ರತಿನಿಧಿಸಿದ್ದ ಮೋಹಿತ್ ಅಹ್ಲಾವತ್, ಫ್ರೆಂಡ್ಸ್ ಇಲೆವೆನ್ ತಂಡದ ವಿರುದ್ಧ ಅಜೇಯ ಭರ್ಜರಿ ತ್ರಿಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದಾರೆ. ಈ ಪಂದ್ಯದಲ್ಲಿ ಕೇವಲ 72 ಎಸೆತಗಳನ್ನು ಎದುರಿಸಿದ ಮೋಹಿತ್ ಅಹ್ಲಾವತ್ ಬರೊಬ್ಬರಿ 300 ರನ್ ಸಿಡಿಸಿದ್ದಾರೆ. ಅವರ ಈ ಅದ್ಭುತ ಇನ್ನಿಂಗ್ಸ್ ನಲ್ಲಿ ಬರೊಬ್ಬರಿ 39 ಸಿಕ್ಸರ್ ಗಳು ಮತ್ತು 14 ಬೌಂಡರಿಗಳು ಸೇರಿದ್ದವು. ಈ ಮೂಲಕ ಟಿ20 ಪಂದ್ಯವೊಂದರಲ್ಲಿ ತ್ರಿಶತಕ ಸಿಡಿಸಿದ ವಿಶ್ವದ ಮೊದಲ ಆಟಗಾರ ಎಂಬ ಕೀರ್ತಿಗೆ ಮೋಹಿತ್ ಅಹ್ಲಾವತ್ ಪಾತ್ರರಾಗಿದ್ದಾರೆ.
ಈ ಪಂದ್ಯದಲ್ಲಿ ಮೋಹಿತ್ ಅಹ್ಲಾವತ್ ತಂಡ 416 ರನ್ ಗಳನ್ನು ಗಳಿಸಿ ಎದುರಾಳಿ ತಂಡವನ್ನು 200 ರನ್ ಗಳಿಗೆ ಆಲ್ ಔಟ್ ಮಾಡಿತು. ಆ ಮೂಲಕ ಬರೊಬ್ಬರಿ 216 ರನ್ ಗಳ ಅಂತರದಿಂದ ಮಣಿಸಿತು.
ಕೇವಲ 2 ಓವರ್ ನಲ್ಲಿ 50 ರನ್ ಸೇರಿಸಿದ ಮೋಹಿತ್ ಅಹ್ಲಾವತ್
ಇನ್ನೂ ಕುತೂಹಲಕಾರಿ ಅಂಶವೆಂದರೆ ಈ ಪಂದ್ಯದ 18ನೇ ಓವರ್ ನಲ್ಲಿ ಮೋಹಿತ್ ಅಹ್ಲಾವತ್ 250 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದ. ಆದರೆ ಬಳಿಕ 2 ಓವರ್ ಗಳಲ್ಲಿ ಮತ್ತೆ 50 ರನ್ ಸಿಡಿಸುವ ಮೂಲಕ ಅಹ್ಲಾವತ್ ವಿಶ್ವ ದಾಖಲೆ ಬರೆದಿದ್ದಾನೆ. ಈ ಎರಡು ಓವರ್ ಗಳ ಪೈಕಿ ಅಂತಿಮ ಓವರ್ ನಲ್ಲಿ ಮೋಹಿತ್ 34 ರನ್ ಗಳನ್ನು ಸಿಡಿಸಿದ್ದು, ಆತನ ಬ್ಯಾಟಿಂಗ್ ಅಬ್ಬರಕ್ಕೆ ಸಾಕ್ಷಿಯಾಗಿತ್ತು. ಮತ್ತೊಂದು ಪ್ರಮುಖ ಅಂಶವೆಂದರೆ ಈತ ವಿಕೆಟ್ ಕೀಪರ್ ಬ್ಯಾಟ್ಸಮನ್ ಎಂಬುದು.
ಮೋಹಿತ್ ಅಹ್ಲಾವತ್ ಆಟಕ್ಕೆ ಬೆರಗಾದ "ಬಾಹುಬಲಿ" ಛಾಯಾಗ್ರಾಹಕ
ದೆಹಲಿ ಕ್ರಿಕೆಟಿಗನ ಸ್ಫೋಟಕ ಬ್ಯಾಟಿಂಗ್ ಗೆ "ಬಾಹುಬಲಿ" ಚಿತ್ರದ ಛಾಯಾಗ್ರಾಹಕ ಕೆಕೆ ಸೆಂಥಿಲ್ ಕುಮಾರ್ ಕೂಡ ಬೆರಗಾಗಿದ್ದು, ಈ ಬಗ್ಗೆ ಟ್ವೀಟ್ ಮಾಡಿ ಕ್ರಿಕೆಟಿಗನ ಸಾಧನೆ ನಿಜಕ್ಕೂ ನಂಬಲಸಾಧ್ಯ ಎಂದು ಹೇಳಿದ್ದಾರೆ.
This is unbelievable !!! #MohitAhlawat hits an incredible 300 off just 72 balls with 39 sixes and 14 fours in a #T20 match on Delhi