ಮಹಿಳಾ ವಿಶ್ವಕಪ್ ಕ್ರಿಕೆಟ್: ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಐಸಿಸಿ ಮಹಿಳಾ ವಿಶ್ವಕಪ್ ನಲ್ಲೂ ಭಾರತದ ಪಾರಮ್ಯ ಮುಂದುವರೆದಿದ್ದು, ಭಾನುವಾರ ಡರ್ಬಿಯಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತದ ವನಿತೆಯರ ತಂಡ ಪಾಕಿಸ್ತಾನದ ವನಿತೆಯರನ್ನು 95 ರನ್ ಗಳ ಅಂತರದಲ್ಲಿ ಮಣಿಸಿದ್ದಾರೆ.
ಗೆದ್ದ ಸಂಭ್ರಮದಲ್ಲಿ ಟೀಂ ಇಂಡಿಯಾ
ಗೆದ್ದ ಸಂಭ್ರಮದಲ್ಲಿ ಟೀಂ ಇಂಡಿಯಾ
Updated on: 

ಲಂಡನ್: ಐಸಿಸಿ ಮಹಿಳಾ ವಿಶ್ವಕಪ್ ನಲ್ಲೂ ಭಾರತದ ಪಾರಮ್ಯ ಮುಂದುವರೆದಿದ್ದು, ಭಾನುವಾರ ಡರ್ಬಿಯಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತದ ವನಿತೆಯರ ತಂಡ ಪಾಕಿಸ್ತಾನದ ವನಿತೆಯರನ್ನು 95 ರನ್ ಗಳ ಅಂತರದಲ್ಲಿ ಮಣಿಸಿದ್ದಾರೆ.

ಪಾಕಿಸ್ತಾನದ ವಿರುದ್ಧ ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಗೆದ್ದ ಮಿಥಾಲಿ ರಾಜ್ ಪಡೆ ಮೊದಲು ಬ್ಯಾಟಿಂಗ್ ನಡೆಸಿತು. ಈ ಹಿಂದೆ ಇಂಗ್ಲೆಂಡ್ ವಿರುದ್ಧದ ಆರಂಭಿಕ ಪಂದ್ಯದಂತೆಯೇ ಉತ್ತಮ ಬ್ಯಾಟಿಂಗ್ ನಡೆಸುವ ವಿಶ್ವಾಸದೊಂದಿಗೆ ಕಣಕ್ಕಿಳಿದ ಭಾರತ ತಂಡಕ್ಕೆ ಪಾಕಿಸ್ತಾನದ ನಶ್ರಾ ಸಂಧು  ಅಡ್ಡಿಯಾದರು, ಭಾರತದ ಬಲಿಷ್ಠ ಬ್ಯಾಟಿಂಗ್ ಪಡೆಯನ್ನೇ ಕೇವಲ 169 ರನ್ ಗಳಿಗೆ ಕಟ್ಟಿಹಾಕುವ ಮೂಲಕ ಪಾಕಿಸ್ತಾನ ಮೇಲುಗೈ ಸಾಧಿಸಿತ್ತು. ಭಾರತದ ಪರ ಆರಂಭಿಕ ಆಟಗಾರ್ತಿ ರೌತ್ ಗಳಿಸಿದ 47 ರನ್ ಗಳೇ ತಂಡದ ಪರ ಆಟಗಾರ್ತಿಯೊಬ್ಬರು ಗಳಿಸಿದ ವೈಯುಕ್ತಿಕ ಗರಿಷ್ಠ  ಮೊತ್ತವಾಗಿತ್ತು. ಕಳೆದ ಪಂದ್ಯದಲ್ಲಿ ಶತಕ ವಂಚಿತರಾಗಿದ್ದ ಮಿಥಾಲಿ ರಾಜ್ ಕೂಡ ಕೇವಲ 8 ರನ್ ಗಳಿಗೆ ಔಟ್ ಆಗಿದ್ದು, ತಂಡಕ್ಕೆ ದುಬಾರಿಯಾಗಿ ಪರಿಣಮಿಸಿತು.

ಮಧ್ಯಮ ಕ್ರಮಾಂಕದಲ್ಲಿ ಸುಷ್ಮಾ ಶರ್ಮಾ ಕೊಂಚ ಪ್ರತಿರೋಧ ಒಡ್ಡಿದ ಪರಿಣಾಮ ಭಾರತದ ಮೊತ್ತ 150ರ ಗಡಿದಾಟಿತು. ಸುಷ್ಮಾಶರ್ಮಾ 33 ರನ್ ಗಳ ಅಮೂಲ್ಯ ಕಾಣಿಕೆ ನೀಡಿದರು. ಅಂತಿಮವಾಗಿ ಭಾರತ ತಂಡ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿತು.  ಪಾಕಿಸ್ತಾನದ ಪರ ಅಸ್ಮವಿಯಾ ಇಕ್ಬಾಲ್, ಡಯಾನಾಬೇಗ್ ತಲಾ ಒಂದು ವಿಕೆಟ್ ಗಳಿಸಿದರೆ, ಸಾದಿಯಾ ಯೂಸುಫ್ 2 ಮತ್ತು ನಶ್ರಾ ಸಂಧು 4 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿದರು.

ಭಾರತ ನೀಡಿದ 170 ರನ್ ಗಳ ಗುರಿ ಬೆನ್ನು ಹತ್ತಿದ ಪಾಕಿಸ್ತಾನ ಅಲ್ಪ ಮೊತ್ತವನ್ನು ಯಶಸ್ವಿಯಾಗಿ ಮೆಟ್ಟುವ ವಿಶ್ವಾಸದಲ್ಲೇ ಕಣಕ್ಕಿಳಿಯಿತು. ಆದರೆ ಪಾಕಿಸ್ತಾನ ತಂಡದ ಪಾಲಿಗೆ ಭಾರತದ ಬೌಲರ್ ಏಕ್ತಾ ಬಿಷ್ತ್ ಅಕ್ಷರಶಃ ಮಾರಕವಾಗಿ ಪರಿಣಮಿಸಿದ್ದರು. ಪಂದ್ಯದ 2ನೇ ಓವರ್ ನಿಂದಲೇ  ಪಾಕಿಸ್ತಾನದ ಮೇಲೆ ಸವಾರಿ ಮಾಡಿದ ಬಿಷ್ತ್ ಬರೊಬ್ಬರಿ 5 ವಿಕೆಟ್ ಪಡೆದರು. ಬಿಷ್ತ್ ಅವರ ಮಾರಕ ಬೌಲಿಂಗ್ ಗೆ ತತ್ತರಿಸಿದ ಪಾಕಿಸ್ತಾನ ಕೇವಲ 74 ರನ್ ಗಳಿಗೆ ಆಲೌಟ್ ಆಯಿತು. ಪಾಕಿಸ್ತಾನದ ಪರ ಆರಂಭಿಕ ಆಟಗಾರ್ತಿ ನಹಿದಾ ಖಾನ್ 23 ರನ್ ಮತ್ತು ಮಧ್ಯಮ ಕ್ರಮಾಂಕದ  ಆಟಗಾರ್ತಿ ಸನಾ ಮಿರ್ 29 ರನ್ ಅವರನ್ನು ಹೊರತು ಪಡಿಸಿ ಇನ್ನಾವುದೇ ಆಟಗಾರ್ತಿ ಕೂಡ ಕ್ರೀಸ್ ನಲ್ಲಿ ಗಟ್ಟಿಯಾಗಿ ನೆಲೆಯೂರುವ ಪ್ರಯತ್ನ ಮಾಡಲಿಲ್ಲ. ಪಾಕಿಸ್ತಾನದ ನಾಲ್ಕು ಆಟಗಾರ್ತಿಯರು ಶೂನ್ಯಕ್ಕೆ ಔಟ್ ಆಗಿದ್ದರೆ, 5 ಮಂದಿ ಆಟಗಾರ್ತಿಯರು ಎರಡಂಕಿ ಕೂಡ ದಾಟಿಲ್ಲ. ಇದು  ಪಾಕಿಸ್ತಾನದ ಕಳಪೆ ಬ್ಯಾಟಿಂಗ್ ಹಾಗೂ ಭಾರತ ಬಲಿಷ್ಠ ಬ್ಯಾಟಿಂಗ್ ಗೆ ಉದಾಹರಣೆಯಾಗಿತ್ತು.

ಅಂತಿಮವಾಗಿ ಪಾಕಿಸ್ತಾನ 38.1 ಓವರ್ ನಲ್ಲಿ 74 ರನ್ ಗಳಿಸಿ ಆಲ್ ಔಟ್ ಆಯಿತು. ಭಾರತದ ಪರ ಬಿಷ್ತ್ 5 ವಿಕೆಟ್ ಕಬಳಿಸಿದರೆ, ಮನಿಷಾ ಜೋಷಿ 2 ವಿಕೆಟ್ ಮತ್ತು ಜೂಲನ್ ಗೋಸ್ವಾಮಿ, ಡಿಬಿ ಶರ್ಮಾ ಹಾಗೂ ಕೌರ್ ತಲಾ 1 ವಿಕೆಟ್ ಗಳಿಸಿದರು.

ಭಾರತದ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿ ಪಾಕಿಸ್ತಾನದ ಪತನಕ್ಕೆ ಕಾರಣರಾದ ಬಿಷ್ತ್ ಪಂದ್ಯ ಶ್ರೇಷ್ಟ ಪ್ರಶಸ್ತಿಗೆ ಭಾಜನರಾದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com