ಮಹೇಂದ್ರ ಸಿಂಗ್ ಧೋನಿ ಟೀಂ ಇಂಡಿಯಾದ ನಾಯಕತ್ವಕ್ಕೆ ರಾಜಿನಾಮೆ ನೀಡಿದ ನಂತರ ಅವರು ಅನುಭವಿಸಿದ ನೋವು, ಅವಮಾನ ಅಷ್ಟಿಷ್ಟಲ್ಲ. ಅದರಲ್ಲೂ ಐಪಿಎಲ್ ನಲ್ಲಿ ಪುಣೆ ತಂಡ ಧೋನಿಯನ್ನು ನಡೆಸಿಕೊಂಡ ರೀತಿ ಅಂತೂ ನಿಜಕ್ಕೂ ಶೋಚನೀಯ. ಇದಕ್ಕೆಲ್ಲಾ ಪ್ರತ್ಯುತ್ತರ ನೀಡಲು ಎಂಎಸ್ ಧೋನಿ ರೆಡಿಯಾಗುತ್ತಿದ್ದಾರೆ.
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನ ಫ್ರಾಂಚೈಸಿ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 8 ವರ್ಷಗಳ ಕಾಲ ಮುನ್ನಡೆಸಿದ್ದ ಧೋನಿ ಎರಡು ಬಾರಿ ಐಪಿಎಲ್ ಚಾಂಪಿಯನ್ ಪಟ್ಟ ತಂದುಕೊಟ್ಟಿದ್ದರು. ದೊರೆಯಂತೆ ಮೆರೆದಿದ್ದ ಧೋನಿ ಚೆನ್ನೈ ತಂಡ 2 ವರ್ಷ ನಿಷೇಧಕ್ಕೆ ಒಳಗಾದ ಮೇಲೆ ಪುಣೆ ಸೂಪರ್ ಜೈಂಟ್ಸ್ ತಂಡ ಸೇರಿಕೊಂಡಿದ್ದರು. ಪುಣೆ ತಂಡ ಧೋನಿಯನ್ನು ಕೀಳಾಗಿ ಕಂಡಿದ್ದರು. ಮೊದಲಿಗೆ ನಾಯಕತ್ವದಿಂದ ಕಿತ್ತುಹಾಕಿದ ನಂತರ ಅವರ ವಿರುದ್ಧ ಹೇಳಿಕೆಗಳನ್ನು ನೀಡಿ ಧೋನಿಗೆ ಅಪಮಾನವೆಸಗಿತ್ತು.
ಇದೀಗ 2 ವರ್ಷಗಳ ನಂತರ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮತ್ತೆ ಕಮ್ ಬ್ಯಾಕ್ ಮಾಡುತ್ತಿದ್ದು ಧೋನಿ ಚೆನ್ನೈ ತಂಡವನ್ನು ಸೇರುವುದು ಬಹುತೇಕ ಖಚಿತವಾಗಿದೆ. ತಾವು 8 ವರ್ಷಗಳ ಕಾಲ ಮುನ್ನಡೆಸಿದ್ದ ತಂಡದ ವೆಲ್ ಕಮ್ ಗಾಗಿ ಧೋನಿ ಹಳದಿ ಬಣ್ಣದ ಜರ್ಸಿ ತೊಟ್ಟು ಅದರ ಹಿಂದೆ ತಲಾ ಅಂತ ಬರೆದುಕೊಂಡಿದ್ದಾರೆ. ತಮಿಳಿನಲ್ಲಿ ತಲಾ ಅಂದರೆ ಲೀಡರ್ ಎಂದರ್ಥ. ಈ ಜರ್ಸಿಯಲ್ಲಿ ಫೋಟೋ ತೆಗೆಸಿಕೊಂಡಿರುವ ಧೋನಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ಫೋಟೋ ಇದೀಗ ವೈರಲ್ ಆಗಿದೆ.