ಆಸಿಸ್ ವಿರುದ್ಧ ಹ್ಯಾಟ್ರಿಕ್ ಗೆಲುವು, ಏಕದಿನ ರ‍್ಯಾಂಕಿಂಗ್ ನಲ್ಲಿ ಟೀಂ ಇಂಡಿಯಾಗೆ ಅಗ್ರ ಸ್ಥಾನ

ಪ್ರಸಕ್ತ ಸಾಲಿನ ಕ್ರಿಕೆಟ್ ನಲ್ಲಿ ಯಶಸ್ಸಿನ ಉತ್ತುಂಗದಲ್ಲಿರುವ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಇದೀಗ ಏಕದಿನ ಕ್ರಿಕೆಟ್ ತಂಡಗಳಲ್ಲಿ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ನವದೆಹಲಿ: ಪ್ರಸಕ್ತ ಸಾಲಿನ ಕ್ರಿಕೆಟ್ ನಲ್ಲಿ ಯಶಸ್ಸಿನ ಉತ್ತುಂಗದಲ್ಲಿರುವ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಇದೀಗ ಏಕದಿನ ಕ್ರಿಕೆಟ್ ತಂಡಗಳಲ್ಲಿ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ.
ಭಾನುವಾರ ಇಂದೋರ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲೂ ಭರ್ಜರಿ ಗೆಲುವು ದಾಖಲಿಸುವ ಮೂಲಕ ಭಾರತ ಕ್ರಿಕೆಟ್ ತಂಡ ಐದು ಪಂದ್ಯಗಳ ಸರಣಿಯನ್ನು ತನ್ನ ಕೈ ವಶ ಮಾಡಿಕೊಂಡಿತು.  ಇದರ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಐಸಿಸಿ ಏಕದಿನ ರ‍್ಯಾಂಕಿಂಗ್ ಪಟ್ಟಿಯನ್ನು ಪರಿಷ್ಕರಿಸಿದ್ದು, ಪಟ್ಟಿಯಲ್ಲಿ ಭಾರತ ತಂಡ ಅಗ್ರ ಸ್ಥಾನಕ್ಕೇರಿದೆ. ಆಸ್ಟ್ರೇಲಿಯಾ ವಿರುದ್ಧದ 3ನೇ ಏಕದಿನ ಪಂದ್ಯದ ಗೆಲುವಿನ ಮೂಲಕ  ಭಾರತ ತಂಡದ ಅಂಕಗಳ ಗಳಿಕೆ 120ಕ್ಕೆ ಏರಿಕೆಯಾಗಿದ್ದು, ಆ ಮೂಲಕ ಟೀಂ ಇಂಡಿಯಾ ಏಕದಿನದಿನದಲ್ಲಿ ಅಗ್ರ ಸ್ಥಾನಕ್ಕೇರಿದೆ.

ಇನ್ನು ಈ ಹಿಂದೆ ಅಗ್ರ ಸ್ಥಾನದಲ್ಲಿದ್ದ ದಕ್ಷಿಣ ಆಫ್ರಿಕಾ ತಂಡ 119 ಅಂಕಗಳೊಂದಿಗೆ 2ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದು, ಭಾರತದ ವಿರುದ್ಧ ಹ್ಯಾಟ್ರಿಕ್ ಸೋಲು ಕಂಡಿರುವ ಆಸ್ಟ್ರೇಲಿಯಾ ತಂಡ ಮೂರನೇ ಸ್ಥಾನದಲ್ಲಿ ಮುಂದುವರೆದಿದೆ.

ಆಸ್ಟ್ರೇಲಿಯಾ ವಿರುದ್ಧದ ತವರಿನ ಸರಣಿ ಆರಂಭಕ್ಕೆ ಮೊದಲು ಭಾರತ ತಂಡ ನಂ.1 ಸ್ಥಾನದಲ್ಲಿದ್ದ ದಕ್ಷಿಣ ಆಫ್ರಿಕಾಗಿಂತ 2 ಕಡಿಮೆ ಅಂಕಗಳಿಂದ ಹಿಂದಿತ್ತು. ಆದರೆ ಪ್ರಸ್ತುತ ಆಸೀಸ್ ವಿರುದ್ಧ ಸರಣಿಯಲ್ಲಿ ಹ್ಯಾಟ್ರಿಕ್ ಜಯ ಸಾಧಿಸಿರುವ  ಕೊಹ್ಲಿ ಪಡೆ ದಕ್ಷಿಣ ಆಫ್ರಿಕಾವನ್ನು ಹಿಂದಿಕ್ಕಿ ನಂ.1 ಸ್ಥಾನ ವಶಪಡಿಸಿಕೊಂಡಿದೆ. ಒಂದು ವೇಳೆ ದಕ್ಷಿಣ ಆಫ್ರಿಕಾ ತಂಡ ಬಾಂಗ್ಲಾದೇಶ ವಿರುದ್ಧ ನಡೆಯಲಿರುವ 3 ಪಂದ್ಯಗಳ ಏಕದಿನ ಸರಣಿ ಜಯಿಸಿದರೆ ಮತ್ತೆ  ನಂ.1 ಸ್ಥಾನಕ್ಕೆ  ವಾಪಸಾಗುತ್ತದೆ. ಹೀಗಾಗಿ ಏಕದಿನ ಮಾದರಿಯಲ್ಲಿ ಅಗ್ರ ಸ್ಥಾನಕ್ಕಾಗಿ ದಕ್ಷಿಣ ಆಫ್ರಿಕಾ ಮತ್ತು ಭಾರತ ತಂಡ ತೀವ್ರ ಪೈಪೋಟಿ ನಡೆಸುತ್ತಿವೆ.

ಟೆಸ್ಟ್ ರ‍್ಯಾಂಕಿಂಗ್ ನಲ್ಲೂ ಭಾರತಕ್ಕೆ ಅಗ್ರ ಸ್ಥಾನ
ಇನ್ನು ಟೆಸ್ಟ್ ರ‍್ಯಾಂಕಿಂಗ್ ನಲ್ಲೂ ಟೀಂ ಇಂಡಿಯಾದ ಅಗ್ರ ಸ್ಥಾನ ಅಬಾಧಿತವಾಗಿದ್ದು, ಒಟ್ಟು 125 ಅಂಕಗಳನ್ನು ಗಳಿಸಿರುವ ಕೊಹ್ಲಿ ಪಡೆ ಅಗ್ರ ಸ್ಥಾನದಲ್ಲಿ ಮುಂದುವರೆದಿದೆ. ಇಲ್ಲೂ ಭಾರತಕ್ಕೆ ದಕ್ಷಿಣ ಆಫ್ರಿಕಾ ತಂಡವೇ ಪೈಪೋಟಿ  ನೀಡುತ್ತಿದ್ದು, ಒಟ್ಟು 110 ಅಂಕಗಳನ್ನು ಹೊಂದಿರುವ ದಕ್ಷಿಣ ಆಫ್ರಿಕಾ ತಂಡ 2ನೇ ಸ್ಥಾನದಲ್ಲಿದೆ. 97 ಅಂಕಗಳಿಸಿರುವ ಆಸ್ಟ್ರೇಲಿಯಾ 5ನೇ ಸ್ಥಾನದಲ್ಲಿದ್ದರೆ, ಇಷ್ಟೇ ಅಂಕಗಳೊಂದಿಗೆ ನ್ಯೂಜಿಲೆಂಡ್ ನಾಲ್ಕನೇ ಸ್ಥಾನದಲ್ಲಿದೆ. 105 ಅಂಕ ಗಳಿಸಿರುವ ಇಂಗ್ಲೆಂಡ್ 3 ಮತ್ತು 93 ಅಂಕಗಳೊಂದಿಗೆ ಪಾಕಿಸ್ತಾನ 6ನೇ ಸ್ಥಾನದಲ್ಲಿದೆ.

ಇನ್ನು ಟಿ20ಯಲ್ಲಿ ನ್ಯೂಜಿಲೆಂಡ್ ಅಗ್ರ ಸ್ಥಾನದಲ್ಲಿದ್ದು, ಕಿವೀಸ್ ಪಡೆ 125 ಅಂಕಗಳೊಂದಿಗೆ ನಂಬರ್ 1 ಸ್ಥಾನದಲ್ಲಿದೆ, 115 ಅಂಕಗಳನ್ನು ಹೊಂದಿರುವ ಭಾರತ ಐದನೇ ಸ್ಥಾನದಲ್ಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com