ಭಾರತ ಪ್ರವಾಸ ಮಾಡುವ ಕ್ರಿಕೆಟ್ ತಂಡ ಕಡ್ಡಾಯವಾಗಿ ಆಫ್ಘಾನಿಸ್ತಾನದ ವಿರುದ್ಧ ಆಡಬೇಕು: ಬಿಸಿಸಿಐ

Published On :
ನವದೆಹಲಿ: ಭಾರತ ಪ್ರವಾಸ ಮಾಡುವ ಯಾವುದೇ ಕ್ರಿಕೆಟ್ ತಂಡಗಳು ಕಡ್ಡಾಯವಾಗಿ ಆಫ್ಘಾನಿಸ್ತಾನದೊಂದಿಗೆ ಕನಿಷ್ಠ ಒಂದು ಪಂದ್ಯವನ್ನು ಆಡಲೇಬೇಕು ಎಂದು ಬಿಸಿಸಿಐ ಕಟ್ಟಾಜ್ಞೆ ಹೊರಡಿಸಿದೆ.
ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿ ಗುರುತಿಸಿಕೊಂಡಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ವಿಶ್ವ ಕ್ರಿಕೆಟ್ ಲೋಕದ ಮೇಲೆ ತನ್ನ ಪ್ರಾಬಲ್ಯ ಹೊಂದಿದೆ ಎಂಬುದು ತಿಳಿದಿರುವ ವಿಚಾರವೇ. ಹಣ ಮತ್ತು ಅಧಿಕಾರದ ಬಲದಿಂದಾಗಿ ಈ ಹಿಂದೆ ಸಾಕಷ್ಟು ವಿಚಾರಗಳಲ್ಲಿ ತನ್ನ ಪರವಾಗಿ ತೀರ್ಮಾನುಗಳ ಬರುವಂತೆ ಮಾಡುತ್ತಿದ್ದ ಬಿಸಿಸಿಐ ಸಾಕಷ್ಚು ಕ್ರಿಕೆಟ್ ಆಡುವ ದೇಶಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಅಲ್ಲದೆ ತನ್ನ ಕಠಿಣ ಒಪ್ಪಂದ ಮತ್ತು ಷರತ್ತುಗಳಿಂದ ಇತರೆ ಕ್ರಿಕೆಟ್ ರಾಷ್ಟ್ರಗಳನ್ನು ಕಟ್ಟಿಹಾಕುತ್ತಿತ್ತು.
ಆದರೆ ಇದೀಗ ಇದಕ್ಕೆ ತದ್ವಿರುದ್ಧವೆಂಬಂತೆ ಬಿಸಿಸಿಐ ಈಗ ಹೊರಡಿಸಿರುವ ಕಟ್ಟಾಜ್ಞೆಯೊಂದು ಕ್ರಿಕೆಟ್ ದಿಗ್ಗಜರ ಶ್ಲಾಘನೆಗೆ ಪಾತ್ರವಾಗಿದೆ. ಹೌದು.. ಕ್ರಿಕೆಟ್ ಲೋಕದ ಶಿಶು ಆಫ್ಘಾನಿಸ್ತಾನದಲ್ಲಿ ಕ್ರಿಕೆಟ್ ಬೆಳವಣೆಗೆಗೆ ಕೈಜೋಡಿಸಿರುವ ಬಿಸಿಸಿಐ, ಭಾರತ ಪ್ರವಾಸ ಮಾಡಲಿರುವ ಯಾವುದೇ ತಂಡ ಮೊದಲು ಆಫ್ಘಾನಿಸ್ತಾನ ತಂಡದ ವಿರುದ್ಧ ಕನಿಷ್ಠ ಒಂದು ಪಂದ್ಯವನ್ನು ಆಡಬೇಕು ಎಂಬ ಮಹತ್ವದ ನಿರ್ಣಯ ಕೈಗೊಂಡಿದೆ.
ವಿಶ್ವ ಕ್ರಿಕೆಟ್ ನಲ್ಲಿ ಪ್ರಬಲ ತಂಡಗಳ ಪಟ್ಟಿಯಲ್ಲಿ ಭಾರತ ತಂಡ ಪ್ರಮುಖ ಸ್ಥಾನದಲ್ಲಿದೆ. ವಿಶ್ವದ ಯಾವುದೇ ತಂಡ ಕೂಡ ಭಾರತ ವಿರುದ್ಧ ಕ್ರಿಕೆಟ್ ಆಡಲು ಸದಾ ಉತ್ಸುಕವಾಗಿರುತ್ತವೆ. ಇದರಿಂದ ಆ ದೇಶಗಳ ಕ್ರಿಕೆಟ್ ಮಂಡಳಿಯ ಬೊಕ್ಕಸ ತುಂಬುವುದಷ್ಟೇ ಅಲ್ಲದೇ, ಆ ದೇಶದಲ್ಲಿ ಕ್ರಿಕೆಟ್ ಕೂಡ ಬೆಳವಣಿಗೆಯಾಗುತ್ತದೆ. ಇದೇ ಕಾರಣಕ್ಕೆ ಕ್ರಿಕೆಟ್ ಆಡವು ಪ್ರತೀಯೊಂದು ದೇಶವೂ ಟೀಂ ಇಂಡಿಯಾ ವಿರುದ್ಧ ಕ್ರಿಕೆಟ್ ಆಡಲು ಸದಾ ಸಿದ್ಧವಿರುತ್ತದೆ. ಇದನ್ನೇ ಬಿಸಿಸಿಐ ಉಪಯೋಗಿಸಿಕೊಂಡಿದ್ದು, ಇನ್ನು ಮುಂದೆ ಭಾರತ ಪ್ರವಾಸ ಕೈಗೊಳ್ಳಲಿರುವ ಯಾವುದೇ ತಂಡ ಮೊದಲು ಆಫ್ಘಾನಿಸ್ತಾನ ತಂಡದ ವಿರುದ್ಧ ಕನಿಷ್ಠ ಒಂದು ಅಭ್ಯಾಸ ಪಂದ್ಯ ಅಥವಾ ಸಾಮಾನ್ಯ ಪಂದ್ಯವನ್ನು ಆಡಬೇಕು ಎಂಬ ಹೊಸ ಷರತ್ತು ವಿಧಿಸಿದೆ.
ಇದಕ್ಕೆ ಸಂಬಂಧಿಸಿದಂತೆ ಬಿಸಿಸಿಐನ ಕಾರ್ಯಕಾರಿ ಮುಖ್ಯಸ್ಥ ಅಮಿತಾಭ್ ಚೌಧರಿ ಈ ನಿರ್ಧಾರ ತಿಳಿಸಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್ ಅನ್ನು ನಿರಂತರವಾಗಿ ಆಡುವ ಸಾಮರ್ಥ್ಯವನ್ನು ಅಫ್ಘಾನಿಸ್ತಾನ ಹೊಂದಿದೆ ಎಂದು ತಿಳಿಸಿದ್ದಾರೆ. ಎರಡು ದೇಶಗಳ ನಡುವಿನ ದ್ವಿಪಕ್ಷೀಯ ಕ್ರಿಕೆಟ್ ಸಂಬಂಧದ ಕುರಿತು ಚರ್ಚೆಗೆ ಅಫ್ಘಾನಿಸ್ತಾನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರು ಈ ಮಾಹಿತಿ ಹೊರಹಾಕಿದ್ದಾರೆ. ಇದೇ ವೇಳೆ ಕ್ರಿಕೆಟ್ ಎರಡು ದೇಶಗಳ ನಡುವಿನ ಸಂಬಂಧವನ್ನ ಬಲಪಡಿಸುತ್ತದೆ ಮತ್ತು ಶಾಂತಿ ಸಂದೇಶವನ್ನ ಸಾರಲಿದೆ ಎಂದು ತಿಳಿಸಿದ್ದಾರೆ.
ಇನ್ನು ಇದೇ ಜೂನ್ 14ರಿಂದ 18ರವರೆಗೆ ಅಫ್ಘನ್ ತಂಡ ಟೀಂ ಇಂಡಿಯಾ ವಿರುದ್ಧ ಬೆಂಗಳೂರಿನಲ್ಲಿ ಐತಿಹಾಸಿಕ ಟೆಸ್ಟ್ ಪಂದ್ಯ ಆಡಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


