ನಿನ್ನೆ ತವರು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪ್ರಬಲ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಬೆಂಗಳೂರು ತಂಡ 14 ರನ್ ಗಳ ಅಂತರದಲ್ಲಿ ರೋಚಕವಾಗಿ ಮಣಿಸಿದೆ. ಆ ಮೂಲಕ ತನ್ನ ಪ್ಲೇ ಆಫ್ ಆಸೆಯನ್ನು ಕೊಹ್ಲಿ ಪಡೆ ಇನ್ನೂ ಜೀವಂತವಾಗಿರಿಸಿಕೊಂಡಿದೆ. ಆರ್ ಸಿಬಿ ನೀಡಿದ 219 ರನ್ ಗಳ ಗುರಿಯನ್ನು ಬೆನ್ನ ಹತ್ತಿದ ಹೈದರಾಬಾದ್ ತಂಡ ನಾಯಕ ವಿಲಿಯಮ್ಸನ್ (81 ರನ್) ಮತ್ತು ಕನ್ನಡಿಗ ಮನೀಷ್ ಪಾಂಡೆ (62 ರನ್ ಅಜೇಯ) ನೆರವಿನಿಂದ ಇನ್ನೇನು ಗೆದ್ದೇ ಬಿಟ್ಟಿತು ಎನ್ನುವಾಗಲೇ 14 ರನ್ ಗಳ ಅಂತರದಲ್ಲಿ ಸೋಲು ಕಂಡಿತು. ಗೆಲ್ಲಲು ಅಂತಿಮ ಓವರ್ ನಲ್ಲಿ 20 ರನ್ ಗಳ ಅಗತ್ಯವಿದ್ದಾಗ ಹೈದರಾಬಾದ್ ತಂಡ ಕೇವಲ 5 ರನ್ ಗಳಿಸಲು ಮಾತ್ರ ಶಕ್ತವಾಯಿತು. ಆಮೂಲಕ ಆರ್ ಸಿಬಿ 14 ರನ್ ಗಳ ಅಂತರದಲ್ಲಿ ರೋಚಕ ಗೆಲುವು ಸಾದಿಸಿತು.