ಮೊದಲ ಬಾರಿಗೆ ಪ್ರಬಲ ಆಸ್ಟ್ರೇಲಿಯಾ ತಂಡ ಕ್ರಿಕೆಟ್ ಶಿಶುಗಳೇನೋ ಎನ್ನಿಸಿತು: ಶೊಯೆಬ್ ಅಖ್ತರ್

ಇದು ಹೊಸ ಭಾರತ ತಂಡ, ವಿರಾಟ್ ಕೊಹ್ಲಿ ಆಡಿದ ಪರಿ ನೋಡಿ ನನಗೆ ಮೊದಲ ಬಾರಿಗೆ ಪ್ರಬಲ ಆಸ್ಟ್ರೇಲಿಯಾ ತಂಡ ಕ್ರಿಕೆಟ್ ಶಿಶುಗಳೇನೋ ಎನ್ನಿಸಿತು ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೊಯೆಬ್ ಅಖ್ತರ್ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ರೋಹಿತ್, ರಾಹುಲ್, ಕೊಹ್ಲಿ ಮತ್ತು ಶಮಿ ಆಸ್ಟ್ರೇಲಿಯನ್ನರ ಜಂಘಾಬಲವನ್ನೇ ಉಡುಗಿಸುವಂತೆ ಆಡಿದರು 

ಬೆಂಗಳೂರು: ಇದು ಹೊಸ ಭಾರತ ತಂಡ, ವಿರಾಟ್ ಕೊಹ್ಲಿ ಆಡಿದ ಪರಿ ನೋಡಿ ನನಗೆ ಮೊದಲ ಬಾರಿಗೆ ಪ್ರಬಲ ಆಸ್ಟ್ರೇಲಿಯಾ ತಂಡ ಕ್ರಿಕೆಟ್ ಶಿಶುಗಳೇನೋ ಎನ್ನಿಸಿತು ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೊಯೆಬ್ ಅಖ್ತರ್ ಹೇಳಿದ್ದಾರೆ.

ನಿನ್ನೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ವಿಕೆಟ್ ಗಳ ಅಂತರದಲ್ಲಿ ಪ್ರಬಲ ಆಸ್ಚ್ರೇಲಿಯಾ ತಂಡವನ್ನು ಮಣಿಸಿ ಏಕದಿನ ಸರಣಿಯನ್ನು ಭಾರತ ತಂಡ ಕೈವಶ ಮಾಡಿಕೊಂಡಿತು. ರೋಹಿತ್ ಶರ್ಮಾ ಶತಕ ಹಾಗೂ ವಿರಾಟ್ ಕೊಹ್ಲಿ ಅರ್ಧಶತಕದ ಬಲದಿಂದ ಮೂರನೇ ಹಾಗೂ ಸರಣಿ ನಿರ್ಣಾಯಕ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ್ದ 287 ರನ್ ಗುರಿಯನ್ನು ಟೀಮ್ ಇಂಡಿಯಾ ಯಶಸ್ವಿಯಾಗಿ ಮುಟ್ಟಿತ್ತು. ಏಳು ವಿಕೆಟ್ ಹಾಗೂ ಇನ್ನೂ 15 ಎಸೆತಗಳು ಬಾಕಿ ಇರುವಾಗಲೇ ಭಾರತ ಗೆದ್ದು ಬಿಗಿತ್ತು. ಆ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಕೊಹ್ಲಿ ಪಡೆ 2-1` ಅಂತರದಲ್ಲಿ ತನ್ನದಾಗಿಸಿಕೊಂಡಿತು.

ಪಂದ್ಯದ ಕುರಿತು ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ಪಾಕಿಸ್ತಾನದ ಮಾಜಿ ವೇಗಿ ಶೊಯೆಬ್ ಅಖ್ತರ್, ವಿರಾಟ್ ಬಳಗವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಇದು ನಾನು ಆಡುತ್ತಿದ್ದ ವೇಳೆ ಇದ್ದ ಭಾರತ ತಂಡವಂತೂ ಅಲ್ಲ. ಇದು ಹೊಸ ಭಾರತ ತಂಡ. ಆಸಿಸ್ ಬೌಲರ್ ಗಳ ವಿರುದ್ಧ ರೋಹಿತ್ ಶರ್ಮಾ ಅಕ್ಷರಶಃ ನಿರ್ದಯಿಯಾಗಿದ್ದರು. ಅವರ ಆಕ್ರಮಣಕಾರಿ ಆಟಕ್ಕೆ ನಿಜಕ್ಕೂ ಆಸಿಸ್ ವೇಗಿಗಳು ಕಂಗಾಲಾಗಿದ್ದರು. ಅವರ ಆಟದ ಪರಿ ಹೇಗಿತ್ತು ಎಂದರೆ ರೋಹಿತ್, ಒಳ್ಳೆಯ ಮತ್ತು ಕೆಟ್ಟ ಎಸೆತಗಳ ನಡುವೆ ವ್ಯತ್ಯಾಸವನ್ನೇ ನೋಡುತ್ತಿರಲಿಲ್ಲ. ಮನಸೋ ಇಚ್ಛೆ ದಂಡಿಸುತ್ತಿದ್ದರು. 

ಅವರಿಗೆ ಕೆಎಲ್ ರಾಹುಲ್ ಕೂಡ ಉತ್ತಮ ಸಾಥ್ ನೀಡಿದರು. ಇನ್ನು ವಿರಾಟ್ ಕೊಹ್ಲಿ ಆಕ್ರಮಣ ಶೀಲ ಆಟ ಇಂದೂ ಕೂಡ ಮುಂದುವರೆಯಿಂತು. ಇದಕ್ಕೆ ಜೊತೆ ಎಂಬಂತೆ ಶ್ರೇಯಸ್ ಅಯ್ಯರ್ ಕೂಡ ಆಸಿಸ್ ವೇಗಿಗಳನ್ನು ದಂಡಿಸಿದರು. ಕೊಹ್ಲಿ ನಿಜಕ್ಕೂ ಉತ್ತಮ ನಾಯಕ. ಮೊದಲ ಪಂದ್ಯದ ಹೀನಾಯ ಸೋಲಿನ ಬಳಿಕ ತಂಡವನ್ನು ಮತ್ತೆ ಫಾರ್ಮ್ ಗೆ ತಂದ ಪರಿ ಹಾಗೂ ಸರಣಿ ಜಯಿಸಿದ ಸಂಪೂರ್ಣ ಶ್ರೇಯ ಅವರ ನಾಯಕತ್ವಕ್ಕೇ ಸಲ್ಲಬೇಕು. ಮನೀಶ್ ಪಾಂಡೆ ಆಟ ಕೂಡ ಉತ್ತಮವಾಗಿತ್ತು ಎಂದು ಶೊಯೆಬ್ ಅಖ್ತರ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com