

2026ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಹೀನಾಯ ಸೋಲಿನ ನಂತರ ಭಾರತೀಯ ಕ್ರಿಕೆಟ್ ತಂಡದ ಮಾಜಿ ಸ್ಪಿನ್ನರ್ ಆರ್. ಅಶ್ವಿನ್ ಇದೀಗ ಪಾಕಿಸ್ತಾನದ ಗಾಯದ ಮೇಲೆ ಉಪ್ಪು ಸವರಿದ್ದಾರೆ. ಭಾನುವಾರ ಕೊಲಂಬೊದಲ್ಲಿ ನಡೆದ ಗುಂಪು ಹಂತದ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನದ ವಿರುದ್ಧ 61 ರನ್‌ಗಳ ಜಯ ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ಒಟ್ಟು 175 ರನ್ ಗಳಿಸಿತು ಮತ್ತು ಫಾಲೋ-ಆನ್ ಹೇರಲು ಅಷ್ಟು ಸ್ಕೋರ್ ಸಾಕು ಎಂದು ಅಶ್ವಿನ್ ಟೀಕಿಸಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ, ಮೊದಲು ಬ್ಯಾಟ್ ಮಾಡಿದ ತಂಡ ದೊಡ್ಡ ಮೊತ್ತ ಗಳಿಸಿದರೆ ಮತ್ತು ಎರಡನೇ ತಂಡ ತನ್ನ ಮೊದಲ ಇನಿಂಗ್ಸ್‌ನಲ್ಲಿ ಮೊದಲ ತಂಡಕ್ಕಿಂತ 200 ಅಥವಾ ಅದಕ್ಕಿಂತ ಹೆಚ್ಚು ಕಡಿಮೆ ರನ್ ಗಳಿಸಿದರೆ, ಮೊದಲ ತಂಡವು ಫಾಲೋ-ಆನ್ ಹೇರಬಹುದು. ಆರ್ ಪ್ರೇಮದಾಸ ಕ್ರೀಡಾಂಗಣದ ಪಿಚ್‌ನ ಸ್ವರೂಪವನ್ನು ಗಮನಿಸಿದರೆ, ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 175 ರನ್‌ಗಳು ಸಾಕಾಗುತ್ತದೆ ಎಂದು ರವಿಚಂದ್ರನ್ ಅಶ್ವಿನ್ ಹೇಳಿದರು.
'ಈ ಪಿಚ್‌ನಲ್ಲಿ 175 ಎಂದರೆ 250 ರನ್‌ಗಳಂತೆ. 175 ಕಡಿಮೆ ಸ್ಕೋರ್ ಅಲ್ಲ. ಈ ಪಿಚ್‌ನಲ್ಲಿ ನೀವು ಫಾಲೋ-ಆನ್ ಹೇರಬಹುದು. ನಾಲ್ಕು ದಿನಗಳ ಪಂದ್ಯದಲ್ಲಿ, ಫಾಲೋ-ಆನ್ ಅನ್ನು 150 ರನ್‌ಗಳಿಂದ ಜಾರಿಗೊಳಿಸಲಾಗುತ್ತದೆ. ಐದು ದಿನಗಳ ಪಂದ್ಯದಲ್ಲಿ, ಇದು 200 ಆಗಿದೆ. ಟಿ20ಐಗಳಲ್ಲಿ, ಈ ಸ್ಕೋರ್ ಅರ್ಥಪೂರ್ಣವಾಗಿದೆ. ಭಾರತ ಇನ್ನೂ 20 ರನ್ ಗಳಿಸಿದ್ದರೆ, ನಾವು ಅದನ್ನು ಮಾಡಬಹುದಿತ್ತು' ಎಂದು ಅವರು ತಮ್ಮ ಯೂಟ್ಯೂಬ್ ಚಾನೆಲ್ ವಿಡಿಯೋದಲ್ಲಿ ಹೇಳಿದರು.
'ಆ ಕ್ರೀಡಾಂಗಣದಲ್ಲಿ ನಾವು ಆಸ್ಟ್ರೇಲಿಯಾ ಮತ್ತು ಜಿಂಬಾಬ್ವೆ ನಡುವಿನ ಪಂದ್ಯವನ್ನು ನೋಡಿದ್ದೆವು. ಹೀಗಾಗಿ ಟಾಸ್ ಗೆದ್ದ ನಂತರ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಾಗಲೇ ಪಾಕಿಸ್ತಾನ ಪಂದ್ಯವನ್ನು ಸೋತಿತು. ಆಸ್ಟ್ರೇಲಿಯಾ 170 ರನ್ ಗಳಿಸಲು ಹೆಣಗಾಡಿತು. ನಾವು ಐಪಿಎಲ್ ಪಂದ್ಯಗಳನ್ನು ನೋಡಿದಾಗ, ಕೊನೆಯ 10 ಓವರ್‌ಗಳಲ್ಲಿ 100 ರನ್‌ಗಳ ಅಗತ್ಯವಿದ್ದರೆ ತಂಡಗಳು ಸುಲಭವಾಗಿ ಗೆಲ್ಲುತ್ತವೆ. ಆದರೆ, ಈ ವಿಶ್ವಕಪ್‌ನಲ್ಲಿ ಅದು ನಡೆಯುತ್ತಿಲ್ಲ. ಪ್ರೇಮದಾಸ ಕ್ರೀಡಾಂಗಣದಲ್ಲಿ, ನೀವು ಹತ್ತು ಓವರ್‌ಗಳಲ್ಲಿ 100 ರನ್‌ಗಳನ್ನು ಬೆನ್ನಟ್ಟಲು ಸಾಧ್ಯವಿಲ್ಲ. ಪಾಕಿಸ್ತಾನ ಒತ್ತಡ ನಿಭಾಯಿಸುವ ರೀತಿಗೆ ಹೋಲಿಸಿದರೆ ಭಾರತ 100 ಪಟ್ಟು ಉತ್ತಮವಾಗಿದೆ. ಪಾಕಿಸ್ತಾನ ಅಲ್ಲಿ ಇದೆ ಎಂದು ನಾನು ಭಾವಿಸುವುದಿಲ್ಲ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಸಲ್ಮಾನ್ ಅಲಿ ಆಘಾ ಮತ್ತು ಮೈಕ್ ಹೆಸ್ಸನ್ ನೇತೃತ್ವದಲ್ಲಿ ಪಾಕಿಸ್ತಾನ ಯುದ್ಧತಂತ್ರದ ದೃಷ್ಟಿಯಿಂದ ಉತ್ತಮವಾಗಿದೆ. ಆದರೆ, ಆಘಾ ಅವರ ಮೊದಲ ಓವರ್ ನಂತರ ಅವರು ಶಾಹೀನ್ ಅಫ್ರಿದಿಯನ್ನು ಕರೆತಂದ ರೀತಿ ಭಯಾನಕ ತಪ್ಪು' ಎಂದು ಅಶ್ವಿನ್ ಹೇಳಿದರು.
ಪವರ್‌ಪ್ಲೇನಲ್ಲಿ ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಅಘಾ ಅವರು ತಮ್ಮ ಬೌಲರ್‌ಗಳನ್ನು ನಿಭಾಯಿಸಿದ ರೀತಿಯನ್ನು, ವಿಶೇಷವಾಗಿ ಶಾಹೀನ್ ಅಫ್ರಿದಿ ಅವರನ್ನು ಆರಂಭದಲ್ಲಿಯೇ ಕರೆತಂದಿದ್ದನ್ನು ಅಶ್ವಿನ್ ಪ್ರಶ್ನಿಸಿದರು.
'ನೀವು ಅಭಿಷೇಕ್ ಶರ್ಮಾ ವಿಕೆಟ್ ಕಬಳಿಸಿದ್ದೀರಿ, ಆದರೆ ಅವರು ಎಡ, ಬಲ ಮತ್ತು ಮಧ್ಯದಿಂದ ರನ್ ಸೋರಿಕೆ ಮಾಡುತ್ತಿದ್ದಾರೆ. ಎಡಗೈ ಸೀಮ್‌ಗೆ ಇಶಾನ್ ಕಿಶಾನ್ ಎಷ್ಟು ಅಪಾಯಕಾರಿ ಎಂದು ನಾವು ಪೂರ್ವವೀಕ್ಷಣೆಯಲ್ಲಿ ಗಮನಿಸಿದ್ದೇವೆ. ಕ್ರಿಕೆಟಿಗರಿಗೆ ಇದನ್ನು ವಿವರಿಸಬೇಕು ಎಂದು ನಾನು ಭಾವಿಸುತ್ತೇನೆ. ಡೇಟಾ ಸತ್ಯವನ್ನು ಹೇಳುತ್ತದೆ. ಇಶಾನ್ ಎಡಗೈ ಬೌಲರ್‌ಗೆ ಭರ್ಜರಿಯಾಗಿ ಪ್ರದರ್ಶನ ನೀಡುತ್ತಿದ್ದಾರೆ. ಎಡಗೌ ಬೌಲರ್ ಕೈಯಿಂದ ಬೌಲಿಂಗ್ ಮಾಡಿಸಬೇಡಿ ಎಂದು ನಾನು ಹೇಳುತ್ತಿಲ್ಲ. ಆದರೆ, ಅವರು ಬೇರೆಯದೇ ರೀತಿಯಲ್ಲಿ ಮಾಡಬೇಕು. ಶಾಹೀನ್ ಪೆಟ್ಟು ತಿಂದಿದ್ದರೆ, ಅವರು ವಿಕೆಟ್ ಮೇಲೆ ಬೌಲಿಂಗ್ ಮಾಡುವುದನ್ನು ನೋಡಲು ನಾನು ಇಷ್ಟಪಡುತ್ತಿದ್ದೆ. ಆದರೆ, ಅವರು ಅದನ್ನು ಮಾಡಲಿಲ್ಲ ಮತ್ತು ಎರಡನೇ ಓವರ್ ಸೈಮ್ ಅಯೂಬ್ ಬೌಲಿಂಗ್ ಮಾಡಬೇಕಿತ್ತು' ಎಂದರು.
Advertisement