

ನವದೆಹಲಿ: ನಿನ್ನೆ ನಡೆದ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲೂ 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿಗೆ ಭಾರತ ತಂಡದಲ್ಲಿ ಅವಕಾಶ ಸಿಗದ ಕುರಿತು ಮತ್ತೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.
2026ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ 16 ಇನ್ನಿಂಗ್ಸ್‌ಗಳಲ್ಲಿ 776 ರನ್‌ಗಳನ್ನು ಸಿಡಿಸಿ ಟೂರ್ನಿಯ ಅತ್ಯುತ್ತಮ ಆಟಗಾರ (MVP) ಪ್ರಶಸ್ತಿಗೆ ಭಾಜನರಾಗಿದ್ದ ಸೂರ್ಯವಂಶಿ, ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು.
ಆರಂಭಿಕ ಬ್ಯಾಟರ್ ಆಗಿ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಇದ್ದರೂ, ಐರ್ಲೆಂಡ್ ಸರಣಿಯಲ್ಲಿ ಅವಕಾಶವಂಚಿತರಾಗಿದ್ದರು. ಬಳಿಕ ಇದೀಗ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲೂ ಸೂರ್ಯವಂಶಿಗೆ ಅವಕಾಶ ದೊರೆಯಲಿಲ್ಲ. ಹೀಗಾಗಿ ಅವರ ಅಂತರರಾಷ್ಟ್ರೀಯ ಪದಾರ್ಪಣೆಗಾಗಿ ಕಾಯುವಿಕೆ ಮತ್ತಷ್ಟು ಮುಂದುವರಿದಿದೆ.
ಇದು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಹುಬ್ಬೇರುವಂತೆ ಮಾಡಿದ್ದು, ಕ್ರಿಕೆಟ್ ಪ್ರೇಮಿಗಳು ಮಾತ್ರವಲ್ಲದೇ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಕೂಡ ಈ ಕುರಿತು ಅಚ್ಚರಿ ಮತ್ತು ಆಘಾತ ವ್ಯಕ್ತಪಡಿಸಿದ್ದಾರೆ. 'ಪದಾರ್ಪಣೆಗೆ ವಿಳಂಬವಾಗುವುದು ಯುವ ಆಟಗಾರನ ಮೇಲೆ ಹೆಚ್ಚುವರಿ ಒತ್ತಡ ಉಂಟುಮಾಡಬಹುದು' ಎಂದು ಅಭಿಪ್ರಾಯಪಟ್ಟಿದ್ದಾರೆ.
"ಅವರಿಗೆ ಯಾವಾಗ ಅವಕಾಶ ಸಿಕ್ಕರೂ ಹೆಚ್ಚು ಒತ್ತಡ ಎದುರಾಗಬಹುದು. ಆದರೆ 15 ವರ್ಷದ ವಯಸ್ಸಿನಲ್ಲಿ ಆಟಗಾರರು ಒತ್ತಡದ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ಎರಡನೇ ಅಥವಾ ಮೂರನೇ ಪಂದ್ಯದಲ್ಲಿ ಅವಕಾಶ ಸಿಕ್ಕರೆ ತಕ್ಷಣವೇ ಉತ್ತಮ ಪ್ರದರ್ಶನ ನೀಡಬೇಕಾಗುತ್ತದೆ ಎಂಬ ಅರಿವು ಅವರಿಗೆ ಇರುತ್ತದೆ. ಆದರೂ ಭಾರತೀಯ ತಂಡದಲ್ಲಿರುವ ಶ್ರೇಷ್ಠ ಆಟಗಾರರೊಂದಿಗೆ ಸಮಯ ಕಳೆಯುವುದು ಮತ್ತು ಅವರಿಂದ ಕಲಿಯುವುದು ವೈಭವ್‌ಗೆ ದೊಡ್ಡ ಅನುಭವವಾಗಲಿದೆ," ಎಂದು ಸೋನಿ ಸ್ಪೋರ್ಟ್ಸ್‌ಗೆ ನೀಡಿದ ಸಂದರ್ಶನದಲ್ಲಿ ಗವಾಸ್ಕರ್ ಹೇಳಿದ್ದಾರೆ.
ದಾಖಲೆಯ ಹೊಸ್ತಿಲಲ್ಲಿ ವೈಭವ್ ಸೂರ್ಯವಂಶಿ
ಇನ್ನು ಈ ಸರಣಿಯ ಮುಂದಿನ ಪಂದ್ಯಗಳಲ್ಲಿ ಸೂರ್ಯವಂಶಿ ಪದಾರ್ಪಣೆ ಮಾಡಿದರೆ, 15 ವರ್ಷ 96 ದಿನಗಳ ವಯಸ್ಸಿನಲ್ಲಿ ಪ್ರಮುಖ ಪುರುಷರ ಟಿ20 ಅಂತರರಾಷ್ಟ್ರೀಯ ಪಂದ್ಯವಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆ ನಿರ್ಮಿಸಲಿದ್ದಾರೆ. ಈ ದಾಖಲೆಯು ಪ್ರಸ್ತುತ ಐರ್ಲೆಂಡ್‌ನ ಜೋಶುವಾ ಲಿಟಲ್ ಹೆಸರಿನಲ್ಲಿದ್ದು, ಅವರು 16 ವರ್ಷ 309 ದಿನಗಳ ವಯಸ್ಸಿನಲ್ಲಿ ಟಿ20 ಪದಾರ್ಪಣೆ ಮಾಡಿದ್ದರು.
ಇದರೊಂದಿಗೆ, ಭಾರತ ಪುರುಷರ ಹಿರಿಯ ತಂಡಕ್ಕೆ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಯೂ ವೈಭವ್ ಪಾಲಾಗಲಿದೆ. ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ 1989ರಲ್ಲಿ 16 ವರ್ಷ 205 ದಿನಗಳ ವಯಸ್ಸಿನಲ್ಲಿ ಟೆಸ್ಟ್ ಪದಾರ್ಪಣೆ ಮಾಡಿದ್ದು, 33 ದಿನಗಳ ಬಳಿಕ ಏಕದಿನ ಕ್ರಿಕೆಟ್‌ಗೆ ಕಾಲಿಟ್ಟಿದ್ದರು.
ಇನ್ನು ಪುರುಷರ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಂತ ಕಿರಿಯ ವಯಸ್ಸಿನಲ್ಲಿ ಪದಾರ್ಪಣೆ ಮಾಡಿದ ದಾಖಲೆ ಪಾಕಿಸ್ತಾನದ ಹಸನ್ ರಾಜಾ ಹೆಸರಿನಲ್ಲಿದೆ. ಅವರು 1996ರಲ್ಲಿ ಕೇವಲ 14 ವರ್ಷ 227 ದಿನಗಳ ವಯಸ್ಸಿನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.