#OpentoWork: ಭಾರತಕ್ಕೆ ಆಘಾತ ನೀಡಿದ್ದ ಐರ್ಲೆಂಡ್ ವೇಗಿ ಲಿಂಕ್ಡ್‌ಇನ್ ಪೋಸ್ಟ್ ವೈರಲ್, Jai Moondraಗೆ ಕೆಲ್ಸ ಇಲ್ವಾ?

ಎರಡು ಪಂದ್ಯಗಳ ಸರಣಿಯಲ್ಲಿ ಐದು ವಿಕೆಟ್ ಕಬಳಿಸಿದ ಜೈ ಮೂಂದ್ರ, ಸರಣಿಯ ಜಂಟಿ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು.
Jai Moondra-Ireland Star Who Rattled India
ಐರ್ಲೆಂಡ್ ವೇಗಿ ಜೈ ಮೂಂದ್ರ
Updated on

ಬೆಲ್ ಫಾಸ್ಟ್: ಟಿ20 ಸರಣಿಯಲ್ಲಿ ಭಾರತಕ್ಕೆ ಮರ್ಮಾಘಾತ ನೀಡಿ ಸರಣಿಯನ್ನೇ ಕಸಿದ ಐರ್ಲೆಂಡ್ ವೇಗಿ ಜೈ ಮೂಂದ್ರ ಅವರ ಲಿಂಕ್ಡ್ ಇನ್ ಪೋಸ್ಟ್ ವ್ಯಾಪಕ ವೈರಲ್ ಆಗುತ್ತಿದೆ.

ಇತ್ತೀಚೆಗೆ ಭಾರತ ವಿರುದ್ಧ ನಡೆದ ಎರಡು ಪಂದ್ಯಗಳ ಟಿ20 ಸರಣಿಯಲ್ಲಿ 'ಪ್ಲೇಯರ್ ಆಫ್ ದ ಸಿರೀಸ್' ಪ್ರಶಸ್ತಿ ಗೆದ್ದ ಐರ್ಲೆಂಡ್ ವೇಗದ ಬೌಲರ್ ಜೈ ಮೂಂದ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಂದು ಕಾರಣಕ್ಕೆ ಭಾರೀ ಚರ್ಚೆಗೆ ಗ್ರಾಸರಾಗಿದ್ದಾರೆ.

ಎರಡು ಪಂದ್ಯಗಳ ಸರಣಿಯಲ್ಲಿ ಐದು ವಿಕೆಟ್ ಕಬಳಿಸಿದ ಜೈ ಮೂಂದ್ರ, ಸರಣಿಯ ಜಂಟಿ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು.

ಎರಡನೇ ಟಿ20 ಪಂದ್ಯದಲ್ಲಿ ಅವರು ಭಾರತದ ಆರಂಭಿಕ ಬ್ಯಾಟರ್‌ಗಳಾದ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಅವರನ್ನು ಗೋಲ್ಡನ್ ಡಕ್‌ಗೆ ಔಟ್ ಮಾಡಿ ಆರಂಭದಲ್ಲೇ ಆಘಾತ ನೀಡಿದರು. ನಂತರ ನೂತನ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಕೇವಲ 10 ರನ್‌ಗಳಿಗೆ ಪೆವಿಲಿಯನ್‌ಗೆ ಕಳುಹಿಸಿ ಭಾರತದ ಬ್ಯಾಟಿಂಗ್ ಕ್ರಮವನ್ನು ಅಸ್ತವ್ಯಸ್ತಗೊಳಿಸಿದರು.

Jai Moondra-Ireland Star Who Rattled India
ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ವೈಭವ್ ಸೂರ್ಯವಂಶಿಗೆ ಸ್ಥಾನ ನಿರಾಕರಿಸಿದ ಟೀಂ ಇಂಡಿಯಾ; ಸುನೀಲ್ ಗವಾಸ್ಕರ್ ಟೀಕೆ

ಮೂಂದ್ರಗೆ ಕೆಲ್ಸಾ ಇಲ್ವಾ?

ಭಾರತದ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಕಂಗೆಡಿಸಿದ್ದ ಈ ಬೌಲರ್, ಇದೀಗ ತಮ್ಮ ಲಿಂಕ್ಡ್ ಇನ್ ಪೋಸ್ಟ್ ವ್ಯಾಪಕ ವೈರಲ್ ಆಗುತ್ತಿದೆ. ಲಿಂಕ್ಡ್‌ಇನ್‌ನಲ್ಲಿ ಪೂರ್ಣಾವಧಿ ಐಟಿ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿರುವುದು ವೈರಲ್ ಆಗಿದೆ.

ರಾಜಸ್ಥಾನ ಮೂಲದ 29 ವರ್ಷದ ಜೈ ಮೂಂದ್ರ 2021ರಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಐರ್ಲೆಂಡ್‌ಗೆ ತೆರಳಿದ್ದರು. ಅವರು ಐರ್ಲೆಂಡ್ ಪರ ಅಂತರರಾಷ್ಟ್ರೀಯ ಕ್ರಿಕೆಟ್ ಆಡುತ್ತಿದ್ದರೂ, ಇನ್ನೂ ಭಾರತೀಯ ಪಾಸ್‌ಪೋರ್ಟ್ ಹೊಂದಿದ್ದಾರೆ. 2022ರ ಸೆಪ್ಟೆಂಬರ್‌ನಲ್ಲಿ ಎಂಎಸ್‌ಸಿ ಪದವಿ ಪೂರ್ಣಗೊಳಿಸಿದ ಬಳಿಕ ಅವರು ಇಂಟೆಲ್ ಸಂಸ್ಥೆಯಲ್ಲಿ ಪ್ರಾಡಕ್ಟ್ ಡೆವಲಪ್‌ಮೆಂಟ್ ಎಂಜಿನಿಯರ್ ಆಗಿ ಕೆಲಸ ಆರಂಭಿಸಿದ್ದರು.

ಆದರೆ ಅವರ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, 2025ರ ಜೂನ್‌ನಲ್ಲಿ ಇಂಟೆಲ್‌ನಿಂದ ಹೊರಬಂದ ಬಳಿಕ ಅವರು ಇನ್ನೂ ಹೊಸ ಉದ್ಯೋಗ ಸೇರಿಲ್ಲ. ಪ್ರಸ್ತುತ ಅವರ ಲಿಂಕ್ಡ್‌ಇನ್ ಖಾತೆಯಲ್ಲಿ #OpenToWork ಬ್ಯಾಡ್ಜ್ ಕಾಣಿಸುತ್ತಿದ್ದು, ಐರ್ಲೆಂಡ್ ಹಾಗೂ ಯುರೋಪಿನ ವಿವಿಧ ಭಾಗಗಳಲ್ಲಿ ಪೂರ್ಣಾವಧಿ ಎಂಜಿನಿಯರಿಂಗ್ ಉದ್ಯೋಗಕ್ಕಾಗಿ ಸಕ್ರಿಯವಾಗಿ ಹುಡುಕಾಟ ನಡೆಸುತ್ತಿರುವುದಾಗಿ ತಿಳಿದುಬಂದಿದೆ.

ಸುಮಾರು ಆರು ತಿಂಗಳ ಹಿಂದೆ ಐರ್ಲೆಂಡ್ ಹಾಗೂ ಯುರೋಪಿನಲ್ಲಿ ತಂತ್ರಜ್ಞಾನ ಕ್ಷೇತ್ರದ ವಿವಿಧ ಹುದ್ದೆಗಳ ನೇಮಕಾತಿ ಕುರಿತ ಪೋಸ್ಟ್‌ಗೆ ಜೈ ಮೂಂದ್ರ ಆಸಕ್ತಿ ವ್ಯಕ್ತಪಡಿಸಿದ್ದರು. ಅದಕ್ಕೂ ಒಂದು ತಿಂಗಳ ಮೊದಲು, "ನಾನು 2025ರಿಂದ ಇಂಟೆಲ್‌ನ ಮಾಜಿ ಉದ್ಯೋಗಿಯಾಗಿದ್ದು, ಹೊಸ ಉದ್ಯೋಗಕ್ಕಾಗಿ ಹುಡುಕುತ್ತಿದ್ದೇನೆ" ಎಂದು ಮತ್ತೊಂದು ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿದ್ದರು.

ಕೆಲವೇ ತಿಂಗಳುಗಳ ನಂತರ ತಾವು ಭಾರತದ ವಿಶ್ವದರ್ಜೆಯ ಬ್ಯಾಟಿಂಗ್ ಪಡೆಯನ್ನು ಕಂಗೆಡಿಸಿ, ಟಿ20 ಸರಣಿಯ ಅತ್ಯುತ್ತಮ ಆಟಗಾರ ಪ್ರಶಸ್ತಿ ಗೆಲ್ಲುವ ಮಟ್ಟಕ್ಕೆ ಏರಿಬರುತ್ತೇನೆ ಎಂಬುದನ್ನು ಜೈ ಮೂಂದ್ರ ಅಥವಾ ಅವರ ಆಪ್ತರು ಕೂಡ ಊಹಿಸಿರಲಿಲ್ಲ. ಇದೀಗ ಉದ್ಯೋಗ ಹುಡುಕಾಟ ಮತ್ತು ಕ್ರಿಕೆಟ್ ಸಾಧನೆ ಎರಡೂ ಕಾರಣಗಳಿಂದ ಜೈ ಮೂಂದ್ರ ಹೆಸರು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com