

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ಕ್ಕೆ ಮುಂಚಿತವಾಗಿ, ಡೆಲ್ಲಿ ಕ್ಯಾಪಿಟಲ್ಸ್‌ನ ಆರಂಭಿಕ ಆಟಗಾರ ಬೆನ್ ಡಕೆಟ್ ಪಂದ್ಯಾವಳಿಯಿಂದ ಹಿಂದೆ ಸರಿದಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್‌ನ ಮೂಲವೊಂದು IANSಗೆ ದೃಢಪಡಿಸಿದ್ದು, ಇಂಗ್ಲೆಂಡ್ ಬ್ಯಾಟ್ಸ್‌ಮನ್ ಡಕೆಟ್ ಐಪಿಎಲ್ 2026ರಿಂದ ಹಿಂದೆ ಸರಿಯುವ ಬಗ್ಗೆ ತಿಳಿಸಿದ್ದಾರೆ ಎಂದಿದೆ.
'ಹೌದು, ಡಕೆಟ್ ಈ ಆವೃತ್ತಿಯಲ್ಲಿ ಆಡಲು ಲಭ್ಯವಿರುವುದಿಲ್ಲ ಎಂದು ನಮಗೆ ಹೇಳಿದರು. ಅವರ ಬದಲಿ ಆಟಗಾರನ ಹುಡುಕಾಟ ನಡೆಯುತ್ತಿದೆ ಮತ್ತು ಸರಿಯಾದ ಸಮಯದಲ್ಲಿ ಈ ಬಗ್ಗೆ ತಿಳಿಸಲಾಗುವುದು' ಎಂದು ಮೂಲಗಳು ತಿಳಿಸಿವೆ.
ಹರಾಜಿನಲ್ಲಿ ಡಕೆಟ್ ಅವರನ್ನು ₹2 ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಖರೀದಿಸಿತ್ತು ಮತ್ತು ಅವರು ಕೆಎಲ್ ರಾಹುಲ್ ಅವರೊಂದಿಗೆ ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ನಿರೀಕ್ಷೆಯಿತ್ತು. ಆದಾಗ್ಯೂ, ಅವರು ಇಂಗ್ಲೆಂಡ್‌ನೊಂದಿಗಿನ ತಮ್ಮ ಅಂತರರಾಷ್ಟ್ರೀಯ ಬದ್ಧತೆಗಳ ಮೇಲೆ ಗಮನ ಕೇಂದ್ರೀಕರಿಸಲು ನಿರ್ಧರಿಸಿದ್ದಾರೆ. ಎಡಗೈ ಬ್ಯಾಟರ್ ಪಂದ್ಯಾವಳಿ ಪ್ರಾರಂಭವಾಗುವ ಕೆಲವೇ ದಿನಗಳ ಮೊದಲು ಈ ಘೋಷಣೆ ಮಾಡಿದ್ದಾರೆ. ಇದೀಗ ಇದು ಡೆಲ್ಲಿಯ ಸಿದ್ಧತೆಗಳಿಗೆ ಹಿನ್ನಡೆಯಾಗಿದೆ.
ಐಪಿಎಲ್‌ನಿಂದ ಹೊರಗುಳಿಯುವ ಆಯ್ಕೆಯು ನಿರಾಶಾದಾಯಕ ಎಂದು ಡಕೆಟ್ ವಿವರಿಸಿದರು. ಆಶಸ್ ಸಮಯದಲ್ಲಿ ಅವರು 20.2ರ ಸರಾಸರಿಯಲ್ಲಿ 221 ರನ್ ಗಳಿಸಿದರು. ಅವರು 2026ರ ಟಿ20 ವಿಶ್ವಕಪ್ ತಂಡದಲ್ಲಿದ್ದರೂ, ಯಾವುದೇ ಪಂದ್ಯಗಳಲ್ಲಿ ಆಡಲಿಲ್ಲ.
'ಇದು ತುಂಬಾ ಕಷ್ಟದ ನಿರ್ಧಾರವಾಗಿತ್ತು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರತಿಯೊಬ್ಬರಲ್ಲೂ ಕ್ಷಮೆಯಾಚಿಸಲು ಬಯಸುತ್ತೇನೆ. ಹರಾಜಿನಲ್ಲಿ ಹೆಸರು ನೋಂದಾಯಿಸಿಕೊಂಡಾಗ ಇದೊಂದು ಉತ್ತಮ ಅವಕಾಶ ಎಂದು ನಾನು ಭಾವಿಸಿದೆ ಮತ್ತು ದೆಹಲಿಯಂತಹ ಫ್ರಾಂಚೈಸಿ ನನ್ನನ್ನು ಆಯ್ಕೆ ಮಾಡಿಕೊಳ್ಳುವುದು ಅದ್ಭುತವಾಗಿತ್ತು. ಇದು ಅತ್ಯುತ್ತಮ ಆಟಗಾರರೊಂದಿಗೆ ವಿಶ್ವದ ಅತ್ಯುತ್ತಮ ಸ್ಪರ್ಧೆಯಾಗಿದೆ ಮತ್ತು ಅದ್ಭುತ ಅನುಭವವಾಗುತ್ತಿತ್ತು' ಎಂದು ಡಕೆಟ್ ಟೆಲಿಗ್ರಾಫ್ ಸ್ಪೋರ್ಟ್‌ಗೆ ತಿಳಿಸಿದ್ದಾರೆ.
31 ವರ್ಷದ ಆಟಗಾರ, 'ಐಪಿಎಲ್‌ನಲ್ಲಿ ಎಂದಿಗೂ ಆಡದೆಯೇ ನಾನು ಅದಕ್ಕೆ ವಿದಾಯ ಹೇಳುತ್ತೇನೋ ಇಲ್ಲವೋ ಗೊತ್ತಿಲ್ಲ. ಈ ವಯಸ್ಸಿನಲ್ಲಿ, ನನಗೆ ಇದು ಕಠಿಣವಾಗಬಹುದು. ಆದರೆ, ಒಂದು ದಿನ ನಾನು ಡೆಲ್ಲಿ ತಂಡವನ್ನು ಪ್ರತಿನಿಧಿಸಲು ಸಾಧ್ಯವಾಗುತ್ತದೆ ಎಂದು ಭಾವಿಸುತ್ತೇನೆ. ಆದರೆ, ಇದರ ಬಗ್ಗೆ ಸಾಕಷ್ಟು ಯೋಚಿಸಿದ್ದೇನೆ ಮತ್ತು ಇದು ನನ್ನ ವೃತ್ತಿಜೀವನಕ್ಕೆ ಸರಿಯಾದ ನಿರ್ಧಾರ ಎಂದು ನನಗೆ ತಿಳಿದಿದೆ' ಎಂದು ಅವರು ಹೇಳಿದರು.
ಡೆಲ್ಲಿ ಕ್ಯಾಪಿಟಲ್ಸ್ ತಂಡವು ಏಪ್ರಿಲ್ 1 ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ತಮ್ಮ ಐಪಿಎಲ್ 2026ರ ಅಭಿಯಾನವನ್ನು ಪ್ರಾರಂಭಿಸಲಿದೆ. ಈ ಪಂದ್ಯವು ಲಕ್ನೋದ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.
Advertisement