ಜಿಲ್ಲಾ ಸುದ್ದಿ

ಆಧಾರ್ ಅನಿವಾರ್ಯ, ಕೇಂದ್ರಗಳೇ ನಾಪತ್ತೆ!

ಆಧಾರ್ ಅನಿವಾರ್ಯ, ಕೇಂದ್ರಗಳೇ ನಾಪತ್ತೆ!
Published On :

ರಾಮನಗರ: ಮತ್ತೆ ಆಧಾರ್ ಕಾರ್ಡ್‌ಗೆ ಮನ್ನಣೆ ಬಂದಿದೆ. ಅದರ ಅನಿವಾರ್ಯತೆ ಹಂತ ಹಂತವಾಗಿ ಎದುರಾಗುತ್ತಿದೆ. ಆದರೆ ಆಧಾರ್ ಕೇಂದ್ರಗಳೇ ಪತ್ತೆ ಇಲ್ಲದ ಪರಿಣಾಮ ಕಾರ್ಡ್ ರಹಿತರು ಪರದಾಡುತ್ತಿದ್ದಾರೆ.

ಯುಪಿಎ ಅಧಿಕಾರಾವಧಿಯಲ್ಲಿ ಪ್ರಾರಂಭಿಸಲಾಗಿದ್ದ ಆಧಾರ್ ಕಾರ್ಡ್ ಯೋಜನೆ ವಿವಾದಕ್ಕೀಡಾಗಿತ್ತು. ಇದೀಗ ಎನ್‌ಡಿಎ ಸರ್ಕಾರ ಆಧಾರ್ ಮುಂದುವರಿಕೆಗೆ ನಿರ್ಧರಿಸಿದ್ದು, ಪ್ರಸಕ್ತ ಆಯವ್ಯಯದಲ್ಲೂ ಯೋಜನೆಗೆ ಅನುದಾನ ಮೀಸಲಿಟ್ಟಿದೆ.

ಕದ ಮುಚ್ಚಿವೆ: ಅಡುಗೆ ಅನಿಲ ಸಂಪರ್ಕ ಸಹಿತ ಯಾವುದೇ ಉದ್ದೇಶಕ್ಕೂ ಆಧಾರ್ ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟ ಬೆನ್ನಲ್ಲೇ ಆಧಾರ್ ಕಾರ್ಡ್ ಬಗ್ಗೆ ಜನರಲ್ಲಿ ನಿರಾಸಕ್ತಿ ಮೂಡಿತು. ಜನರು ಬಾರದ ಪರಿಣಾಮ ಆಧಾರ್ ಕೇಂದ್ರಗಳು ಕದ ಮುಚ್ಚಿದವು. ಮೂರು ತಿಂಗಳ ಹಿಂದೆ ರಾಮನಗರ ಜಿಲ್ಲೆ ಒಂದರಲ್ಲೇ 144 ಆಧಾರ್ ಕೇಂದ್ರಗಳಿದ್ದವು. ಆ ಪೈಕಿ ಈಗ ಒಂದೂ ಕೇಂದ್ರ ಬಾಗಿಲು ತೆರೆದಿಲ್ಲ. ಅಂಚೆ ಕಚೇರಿಗಳಲ್ಲಿ ಆಧಾರ್ ಕಾರ್ಡ್ ಮಾಡಿಕೊಡುವ ಪ್ರಕ್ರಿಯೆಯನ್ನೂ ಸ್ಥಗಿತಗೊಳಿಸಲಾಗಿದೆ. ಇದೇ ಪರಿಸ್ಥಿತಿ ಇತರೆ ಜಿಲ್ಲೆಗಳಲ್ಲೂ ಇದೆ.

ಮತ್ತೆ ಅನಿವಾರ್ಯ: ಅಡುಗೆ ಅನಿಲ ಸಂಪರ್ಕದ ಸಬ್ಸಿಡಿ ಪಡೆಯಲು ಆಧಾರ್ ಕಡ್ಡಾಯ ಎನ್ನುವ ಆದೇಶ ಹೊರ ಬಿದ್ದಾಗ ಕಾರ್ಡ್ ಮಾಡಿಸಿಕೊಳ್ಳಲು ಕೇಂದ್ರಗಳ ಬಲಿ ಜನರು ಮುಗಿ ಬಿದ್ದರು. ಶೇಕಡ 80ಕ್ಕೂ ಹೆಚ್ಚು ಫಲಾನುಭವಿಗಳು ಕಾರ್ಡ್ ಮಾಡಿಸಿಕೊಂಡಿದ್ದರು. ತದನಂತರ ಆಧಾರ್ ಕಡ್ಡಾಯವಲ್ಲ ಎಂದಾದಾಗ ಉಳಿದವರು ಆಸಕ್ತಿ ತೋರಲಿಲ್ಲ. ಇದೀಗ ಆಧಾರ್ ಅನಿವಾರ್ಯತೆಯು ಹಂತ ಹಂತವಾಗಿ ಎದುರಾಗುತ್ತಿದ್ದು, ಆಧಾರ್ ಕಾರ್ಡ್ ರಹಿತರು ಎಚ್ಚೆತ್ತಿದ್ದಾರಾದರೂ ಕಾರ್ಡ್ ಮಾಡಿಕೊಡಲು ಕೇಂದ್ರಗಳೇ ಇಲ್ಲ.

ಆಧಾರ್‌ಗೆ ಮನ್ನಣೆ: ಪಡಿತರ ಚೀಟಿಗಳನ್ನು ಹೊಂದಿರುವ ಕುಟುಂಬದ 21 ವರ್ಷ ಮೇಲ್ಪಟ್ಟ ಎಲ್ಲ ಸದಸ್ಯರು ಚುನಾವಣಾ ಗುರುತಿನ ಚೀಟಿ, ಆಧಾರ್ ಸಂಖ್ಯೆ ನೀಡಬೇಕಿದೆ. ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಬ್ಯಾಂಕ್ ಖಾತೆ ತೆರೆಯುವುದು ಸೇರಿದಂತೆ ಪ್ರಮುಖ ಉದ್ದೇಶಗಳಿಗೂ ಆಧಾರ್‌ಗೆ ಒತ್ತು ನೀಡಲಾಗಿದೆ. ಬ್ಯಾಂಕ್ ಖಾತೆ ತೆರೆಯಲು ಈ ಮೊದಲು ಪಡಿತರ ಚೀಟಿ ಇದ್ದರೆ ಸಾಕಿತ್ತು. ಆದರೆ ಈಗ ಅದನ್ನು ದಾಖಲೆಯಾಗಿ ಪರಿಗಣಿಸುವಂತಿಲ್ಲ ಎಂದು ಸುತ್ತೋಲೆ ಹೊರಡಿಸಿರುವ ಕೇಂದ್ರ ಸರ್ಕಾರವು ಆಧಾರ್ ಸಹಿತ 6 ದಾಖಲೆಗಳಿಗಷ್ಟೆ ಮನ್ನಣೆ ನೀಡಿದೆ. ಭಾವಚಿತ್ರ ಸಹಿತ ಮತದಾರರ ಚೀಟಿ ಇದ್ದರೂ ಅದನ್ನು ವಾಸಸ್ಥಳದ ದೃಢೀಕರಣವೆಂದು ಪರಿಗಣಿಸುವಂತಿಲ್ಲ. ಸರ್ಕಾರ ಸೂಚಿಸಿದ ಇತರೆ 5 ದಾಖಲೆಗಳು ಸಾಮಾನ್ಯವಾಗಿ ಹಳ್ಲಿಗಾಡಿನ ಜನರ ಬಳಿ ಲಭ್ಯವಿಲ್ಲ. ಈಗ ಅವರು ನಿವಾರ್ಯವಾಗಿ ಆಧಾರ್ ಮೊರೆ ಹೋಗುವಂತಾಗಿದೆ.
-ಮತ್ತೀಕೆರೆ ಜಯರಾಮ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.