ಜಿಲ್ಲಾ ಸುದ್ದಿ

ಕಾಯ್ದೆ ಉಲ್ಲಂಘಿಸಿದ ವಿಬ್‌ಗ್ಯೊರ್‌ಗೆ ನೋಟಿಸ್

ಕಾಯ್ದೆ ಉಲ್ಲಂಘಿಸಿದ ವಿಬ್‌ಗ್ಯೊರ್‌ಗೆ ನೋಟಿಸ್
ಅತ್ಯಾಚಾರ ಪ್ರಕರಣದಿಂದ ರಾಷ್ಟ್ರಾದ್ಯಂತ ಸುದ್ದಿಯಾಗಿದ್ದ ವಿಬ್‌ಗ್ಯೊರ್ ಶಾಲೆ
Published On :

ಕೃಷ್ಣರಾಜಪುರ: ಆರು ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದಿಂದ ರಾಷ್ಟ್ರಾದ್ಯಂತ ಸುದ್ದಿಯಾಗಿದ್ದ ವಿಬ್‌ಗ್ಯೊರ್ ಶಾಲೆ ಆರ್‌ಟಿ ಇ ಕಾಯ್ದೆ ಉಲ್ಲಂಘನೆ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಶಾಲೆಗೆ ಮತ್ತೊಮ್ಮೆ ನೋಟಿಸ್ ಜಾರಿಮಾಡಿದೆ.
ಬಡ ಮಕ್ಕಳಿಗೂ ಉತ್ತಮ ಶಿಕ್ಷಣ ನೀಡುವ ಸದುದ್ದೇಶದಿಂದ ಖಾಸಗಿ ಶಿಕ್ಷಣ ಸಂಸ್ಥೆಗಳಿಗಾಗಿ ಜಾರಿಗೆ ತಂದಿರುವ ಮಹತ್ವಾಕಾಂಕ್ಷಿ ಯೋಜನೆ ಆರ್‌ಟಿಇ ಯೋಜನೆಯನ್ನು ವಿಬ್‌ಗ್ಯೊರ್ ಶಾಲೆ ಉಲ್ಲಂಘಿಸಿದೆ. ಈ ಶಾಲೆ ಅಲ್ಪಸಂಖ್ಯಾತರ ಅನುದಾನಿತ ಪಟ್ಟಿಯಡಿ ಸ್ಥಾಪಿಸಿದ್ದು, ಆರ್‌ಟಿಇ ಕಾಯ್ದೆ ಒಳಪಡುವುದಿಲ್ಲ ಎಂದು ಸುಳ್ಳು ಕಾರಣ ನೀಡಿದೆ. ಬಡವರಿಗೆ ಮೋಸ ಮಾಡಿದ್ದಾರೆಂದು ಸಾರ್ವಜನಿಕರಿಂದ ದೂರುಗಳು ಬಂದಿದ್ದು ಈ ಬಗ್ಗೆ ಬಿಇಒ ಪರಿಶೀಲನೆ ನಡೆಸಿದಾಗ ಆರ್‌ಟಿಇ ಕಾಯ್ದೆ ಸ್ಪಷ್ಟವಾಗಿ ಉಲ್ಲಂಘನೆಯಾಗಿರುವುದು ಕಂಡು ಬಂದಿದೆ. ಹೀಗಾಗಿ ನೋಟಿಸ್ ನೀಡಿರುವುದಾಗಿ ಬೆಂಗಳೂರು ಪೂರ್ವ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ತಿಳಿಸಿದ್ದಾರೆ.

ಮಾರತ್‌ಹಳ್ಳಿ ಬಳಿಯ ತೂಬರಹಳ್ಳಿಯಲ್ಲಿನ ಶಾಲೆಗೆ ಮಾತ್ರ ಅಲ್ಪಸಂಖ್ಯಾತ ಶಾಲೆಯ ಅನುಮೋದನೆ ಸಿಕ್ಕಿದೆ. ಇದಕ್ಕೆ ಆರ್‌ಟಿಇ ಅನ್ವಯಿಸುವುದಿಲ್ಲ. ಇನ್ನುಳಿದ ಎಲ್ಲಾ ಶಾಖೆಗಳಿಗೂ ಆರ್‌ಟಿಇ ಅನ್ವಯವಾಗಲಿದೆ. ವಿಬ್‌ಗ್ಯೋರ್ ಆಡಳಿತಮಂಡಳಿಯು ಭಂಡತನ ಮೆರೆಯುತ್ತಿದ್ದು, ಆರ್‌ಟಿಇ ಅರ್ಜಿಗಳನ್ನೂ ಸಹ ಸ್ವೀಕರಿಸದೆ ಪೋಷಕರಿಗೆ ತಪ್ಪು ಮಾಹಿತಿ ನೀಡಿದೆ. ಒಂದೇ ಹೆಸರಿನಲ್ಲಿ ಹಲವಾರು ಶಾಖೆಗಳನ್ನು ತೆರೆದು ಆರ್‌ಟಿಇ ಕಾಯ್ದೆ ಉಲ್ಲಂಘಿಸಿದೆ. ಈ ಬಗ್ಗೆ ಶಿಕ್ಷಣ ಆಯುಕ್ತರು, ಉಪನಿರ್ದೇಶಕರು ಸೇರಿದಂತೆ ಎಲ್ಲರೂ ನೊಟೀಸ್ ನೀಡಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಿಂದ ಫೆ.19 ಮಾ.1ರಂದು ನೋಟೀಸ್ ನೀಡಿದ್ದು ಈಗ ಮತ್ತೊಮ್ಮೆ ನೋಟೀಸ್ ನೀಡುತ್ತಿದ್ದೇವೆ. ಇದುವರೆಗೆ ಕಳುಹಿಸಿರುವ ಯಾವುದೇ ನೋಟಿಸ್‌ಗೂ ಉತ್ತರ ಬಂದಿಲ್ಲ ಎಂದರು. ಶಾಲೆಯಲ್ಲಿ ಎಷ್ಟು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ, ಅದರಲ್ಲಿ ಎಸ್ಸಿ,ಎಸ್ಟಿ ಅಲ್ಪಸಂಖ್ಯಾರು ಹಾಗೂ ಸಾಮಾನ್ಯ ವರ್ಗದ ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ನೀಡಿಲ್ಲದ ಕಾರಣ ಹೊರಮಾವು ಮತ್ತು ಕಾಟಂನಲ್ಲೂರು ಗೇಟ್‌ನಲ್ಲಿರುವ ವಿಬ್‌ಗ್ಯೊರ್ ಶಾಲೆಗಳಿಗೆ ನೋಟೀಸ್ ನೀಡಲಾಗಿದೆ. ಆರ್‌ಟಿಇ ಕಾಯ್ದೆಯಡಿ ಅರ್ಜಿಗಳನ್ನು ಸಲ್ಲಿಸಿರುವ ಪೋಷಕರೊಂದಿಗೆ ಚರ್ಚಿಸಿ ಈಗ ದಾಖಲಾತಿಗೆ ಅವಕಾಶವಿದ್ದರೆ ಕಾನೂನು ರೀತಿ ಕ್ರಮ ಜರುಗಿಸುತ್ತೇವೆ. ಇದರಿಂದ ಪ್ರತಿಯೊಂದು ಶಾಖೆಯಲ್ಲಿ ಕನಿಷ್ಠ 25 ವಿದ್ಯಾರ್ಥಿಗಳಿಗೆ ಅವಕಾಶ ಸಿಗಲಿದೆ ಎಂದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.