ಮೂವರು ಬಿಬಿಎಂಪಿ ಸದಸ್ಯರ ಸದಸ್ಯತ್ವಕ್ಕೆ ಕುತ್ತು?

ಬೆಂಗಳೂರು: ರಾಜರಾಜೇಶ್ವರಿನಗರ ಕ್ಷೇತ್ರದ ಶಾಸಕ ಮುನಿರತ್ನ ಸೇರಿದಂತೆ ಬಿಬಿಎಂಪಿಯ ಮೂವರು ಸದಸ್ಯರು ಆಸ್ತಿ ವಿವರ ಸಲ್ಲಿಸದೆ ಸದಸ್ಯತ್ವ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಅಷ್ಟೇ ಅಲ್ಲ. ಬಿಬಿಎಂಪಿಯ 25ಕ್ಕೂ ಹೆಚ್ಚು ಸದಸ್ಯರು ಆಸ್ತಿ ವಿವರ ಸಲ್ಲಿಸದೆ ಕಾನೂನು ಉಲ್ಲಂಘಿಸಿದ್ದು, ಇವರ ಸದಸ್ಯತ್ವಕ್ಕೂ ಕುತ್ತು ಬರುವ ಸಾಧ್ಯತೆ ಗೋಚರವಾಗುತ್ತಿದೆ. ಆದರೆ, ಸದಸ್ಯರ ಆಸ್ತಿ ವಿವರ ಸಂಗ್ರಹಿಸುವ ಹೊಣೆ ಹೊತ್ತ ಮೇಯರ್ ವಿಶೇಷ ಅಧಿಕಾರಿ ಕಚೇರಿ ಸಿಬ್ಬಂದಿ ಮೂವರು ಸದಸ್ಯರ ಸದಸ್ಯತ್ವ ರದ್ದತಿಗೆ ಮಾತ್ರ ಪ್ರಸ್ತಾಪ ಸಿದ್ದಪಡಿಸಿದ್ದು, ಉಳಿದವರನ್ನು ಮರೆಮಾಚಿದ್ದಾರೆ.
ಹೀಗಾಗಿ ಶುಕ್ರವಾರ ನಡೆಯುವ ಬಿಬಿಎಂಪಿ ಸಭೆಯಲ್ಲಿ ಸದಸ್ಯತ್ವ ರದ್ದುಗೊಳಿಸುವ ವಿಚಾರ ಚರ್ಚೆಗೆ ಬರಲಿದ್ದು, ಸದಸ್ಯತ್ವ ರದ್ದುಗೊಳಿಸುವ ವಿಚಾರ ಚರ್ಚೆಗೆ ಬರಲಿದ್ದು, ಸದಸ್ಯರಲ್ಲಿ ಆತಂಕ ಶುರುವಾಗಿದೆ.
ಯಶವಂತಪುರ ವಾರ್ಡ್ ಪಾಲಿಕೆ ಸದಸ್ಯ ಮುನಿರತ್ನ, ಆಜಾದ್ನಗರ ಸದಸ್ಯೆ ಗೌರಮ್ಮ ಹಾಗೂ ಶಿವಾಜಿನಗರ ವಾರ್ಡ್ ಸದಸ್ಯೆ ಫೆರೀದ ಅವರು ಪ್ರತಿ ವರ್ಷ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಆಸ್ತಿ ಮತ್ತು ಋಣಭಾರ ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕಿತ್ತು. ಆದರೆ, ಇವರಲ್ಲಿ ಯಾರೊಬ್ಬರೂ ನಿಗದಿತ ಸಮಯಕ್ಕೆ ಆಸ್ತಿ ವಿವರ ಸಲ್ಲಿಸಿಲ್ಲ.
ಈ ವಿಚಾರ ಇಷ್ಟೂ ದಿನ ಯಾರಿಗೂ ಗೊತ್ತಿರಲಿಲ್ಲ. ಏಕೆಂದರೆ, ಆಸ್ತಿ ವಿವರ ಸಂಗ್ರಹಿಸುವ ಮೇಯರ್ ವಿಶೇಷ ಅಧಿಕಾರಿ ಕಚೇರಿಯ ಸಿಬ್ಬಂದಿ ಇದನ್ನು ಗೌಪ್ಯವಾಗಿ ನೋಡಿಕೊಂಡಿದ್ದರು. ಆದರೆ, ನಗರದ ಜ್ಯುಡಿಷಿಯಲ್ ಬಡಾವಣೆಯ ನಿವಾಸಿಯೊಬ್ಬರು ಮಾಹಿತಿ ಹಕ್ಕು ಕಾಯ್ದೆಯಡಿ ಈ ಸದಸ್ಯರ ಆಸ್ತಿ ವಿವರಗಳನ್ನು ಕೇಳಿದ್ದರು. ಹೀಗಾಗಿ ಅರ್ಜಿದಾರರಿಗೆ ಮಾಹಿತಿ ನೀಡಲಾಗದೆ ಸಿಬ್ಬಂದಿ ಪರದಾಡಿದ್ದರು. ಅನಿವಾರ್ಯವಾಗಿ ಸದಸ್ಯರು ನಿಯಮ ಉಲ್ಲಂಘಿಸಿರುವುದನ್ನು ಕೌನ್ಸಿಲ್ ಗಮನಕ್ಕೆ ತರಲು ತೀರ್ಮಾನಿಸಿದರು.
ನಿಯಮ ಏನು ಹೇಳುತ್ತದೆ?: ಕೆಎಂಸಿ ಕಾಯ್ದೆ ಕಲಂ 19(2) ಪ್ರಕಾರ ಸದಸ್ಯರಾಗಿ ಆಯ್ಕೆಯಾದವರು ಒಂದು ತಿಂಗಳ ಒಳಗಾಗಿ ಆಸ್ತಿ ವಿವರ ಸಲ್ಲಿಸಬೇಕು. ಹಾಗೆಯೇ ಪ್ರತಿವರ್ಷ ಅದೇ ತಿಂಗಳು ಆಸ್ತಿ ವಿವರಗಳನ್ನು ಸಲ್ಲಿಸುತ್ತಿರಬೇಕು. ಇದನ್ನು ಮೀರಿದರೆ ಸದಸ್ಯರು ಸಹಜವಾಗಿಯೇ ಸದಸ್ಯತ್ವ ಕಳೆದುಕೊಳ್ಳುತ್ತಾರೆ. ಅಷ್ಟೇ ಅಲ್ಲ. ಒಂದು ವೇಳೆ ಸದಸ್ಯರು ಸಲ್ಲಿಸಿದ ಆಸ್ತಿ ವಿವರದಲ್ಲಿ ಸುಳ್ಳು ಮಾಹಿತಿಗಳಿದ್ದರೂ ಅವರು ಸದಸ್ಯತ್ವ ಕಳೆದುಕೊಳ್ಳುತ್ತಾರೆ.
ಆದರೆ ಸದಸ್ಯರ ಆಸ್ತಿ ವಿವರ ಸಲ್ಲಿಸದಿರುವ ಬಗ್ಗೆ ಮತ್ತು ಸಲ್ಲಿಸಿದ ವಿವರದಲ್ಲಿ ಸುಳ್ಳು ಮಾಹಿತಿ ಇರುವ ಬಗ್ಗೆ ಪಾಲಿಕೆ ಗುರುತಿಸಬೇಕು. ಇದನ್ನಾಧರಿಸಿ ಸದಸ್ಯರ ಸದಸ್ಯತ್ವ ರದ್ದುಗೊಳಿಸುವ ಬಗ್ಗೆ ಕೌನ್ಸಿಲ್ನಲ್ಲಿ ಚರ್ಚಿಸಬೇಕು. ಆನಂತರ ಅಂತಿಮ ತೀರ್ಮಾನವನ್ನು ಸರ್ಕಾರಕ್ಕೆ ಬಿಡಬೇಕಿದೆ.
ಮುನಿರತ್ನ, ಗೌರಮ್ಮ ಹಾಗೂ ಫರೀದ ಅವರು ನಿಗದಿತ ಅವಧಿಯೊಳಗೆ ಆಸ್ತಿ ವಿವರ ಸಲ್ಲಿಸಿಲ್ಲ. ಆದ್ದರಿಂದ ಅವರ ಸದಸ್ಯತ್ವವನ್ನು ರದ್ದುಗೊಳಿಸಬೇಕಾಗುತ್ತದೆ ಎಂಬ ಪ್ರಸ್ತಾಪವನ್ನು ಮೇಯರ್ ಕಚೇರಿಯ ವಿಶೇಷ ಕರ್ತವ್ಯಾಧಿಕಾರಿ ಕಚೇರಿ ಸಿಬ್ಬಂದಿ ಸಿದ್ಧಪಡಿಸಿದ್ದಾರೆ. ಇದಕ್ಕೂ ಮುನ್ನ ಮೇಯರ್ ಕಟ್ಟೆ ಸತ್ಯನಾರಾಯಣ ಅವರ ಅಭಿಪ್ರಾಯವನ್ನೂ ಪಡೆದಿದ್ದು, ಅದನ್ನೂ ಕೌನ್ಸಿಲ್ನಲ್ಲಿ ಮಂಡಿಸಲು ಮುಂದಾಗಿದ್ದಾರೆ.
ಈ ಪ್ರಸ್ತಾಪದಲ್ಲಿರುವ ಮಾಹಿತಿ ಪ್ರಕಾರ, ಮೇಯರ್ ಈ ವಿಚಾರದಲ್ಲಿ ಕೈ ಚೆಲ್ಲಿರುವುದು ಸ್ಪಷ್ಟವಾಗಿದೆ. ಅಂದರೆ, ಸದಸ್ಯತ್ವ ರದ್ದುಗೊಳಿಸುವ ಸಂಬಂಧ ಬಿಬಿಎಂಪಿ ಆಡಳಿತ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬಹುದು. ಇದನ್ನು ಬಿಟ್ಟು ಬೇರೇನೂ ಮಾಡುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಆದ್ದರಿಂದ ಮೊದಲು ಕೌನ್ಸಿಲ್ನಲ್ಲಿ ಚರ್ಚಿಸಿ ನಂತರ ಅಂತಿಮ ತೀರ್ಮಾನವನ್ನು ಸರ್ಕಾರಕ್ಕೆ ಬಿಡಲಾಗುವುದು ಎಂದು ಮೇಯರ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


