ಅಂತೂ ನೆಗೆಯಲಿದೆ ಹುಬ್ಬಳ್ಳಿ ವಿಮಾನ

ಹುಬ್ಬಳ್ಳಿಯಿಂದ ವಿಮಾನ ಬಾನಿಗೆ ನೆಗೆಯುವ ಕಾಲ ಅಂತೂ ಕೂಡಿ ಬಂದಿದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ...
ಸ್ಪೈಸ್ ಜೆಟ್
ಸ್ಪೈಸ್ ಜೆಟ್
Updated on: 

ಹುಬ್ಬಳ್ಳಿ: ಹುಬ್ಬಳ್ಳಿಯಿಂದ ವಿಮಾನ ಬಾನಿಗೆ ನೆಗೆಯುವ ಕಾಲ ಅಂತೂ ಕೂಡಿ ಬಂದಿದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಕೋರಿಕೆಗೆ ಖಾಸಗಿ ವಿಮಾನಯಾನ  ಸಂಸ್ಥೆ ಸ್ಪೈಸ್ ಜೆಟ್ ಸಕಾರಾತ್ಮಕವಾಗಿ ಸ್ಪಂದಿಸಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಈ ಮಾಸಾಂತ್ಯ ಅಥವಾ ಜನವರಿ ಮೊದಲ ವಾರದಲ್ಲಿ ವಿಮಾನ ಹಾರಾಟ ಆರಂಭವಾಗಲಿದೆ.

ಸಣ್ಣ ವಿಮಾನ ಹಾರಾಟಕ್ಕೆ ಯಾವುದೇ ತೊಂದರೆಯಿಲ್ಲ. ರನ್ ವೇ ವಿಸ್ತರಣೆ ಬಾಕಿ ಕಾಮಗಾಗಿ ತನ್ನಷ್ಟಕ್ಕೆ ನಡೆಯುತ್ತಿರುತ್ತದೆ. ಸಣ್ಣ ವಿಮಾನ ಹಾರಾಟಕ್ಕೆ ಅಗತ್ಯ ರನ್‌ವೇ ಅಡೆತಡೆಗಳಿಂದ ಮುಕ್ತವಾಗಿದ್ದು, ವಿಮಾನ ಯಾನ ಆರಂಭಿಸಿ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಕೆಲ ದಿನಗಳ ಹಿಂದೆಯಷ್ಟೇ ಸ್ಪೈಸ್‌ಜೆಟ್ ಅನ್ನು ಕೋರಿತ್ತು. ಇದಕ್ಕೆ ಸಂಸ್ಥೆ ಹಸಿರು ನಿಶಾನೆ ತೋರಿಸಿದ್ದಾಗಿ ಪ್ರಾಧಿಕಾರದ ಅಧಿಕಾರಿಗಳು ಖಚಿತ ಪಡಿಸಿದ್ದಾರೆ.  ಹೀಗಾಗಿ ಬಹುದಿನಗಳಿಂದ ರೆಕ್ಕೆ ಮುದುರಿ ಕುಳಿತಿದ್ದ ಲೋಹದ ಹಕ್ಕಿಗಳು ಇದೀಗ ಹುಬ್ಬಳ್ಳಿ ಅಂಗಳದಿಂದ ಮತ್ತೆ ಬಾನಿಗೆ ನೆಗೆಯಲಿವೆ.
ಹುಬ್ಬಳ್ಳಿಯಿಂದ ವಿಮಾನಸೇವೆ ಆರಂಭವಾಗಲಿದೆ  ಎನ್ನುವ ಸುದ್ದಿ ಪ್ರಯಾಣಿಕರಿಗೆ ಖುಷಿ ತಂದಿದೆ. ವಿಮಾನ ಪ್ರಯಾಣಕ್ಕೆ ಈ ಭಾಗದ ಪ್ರಯಾಣಿಕರು ಬೆಳಗಾವಿಯನ್ನು ಆಶ್ರಯಿಸಬೇಕಿತ್ತು. ಇದಕ್ಕೀಗ ಮುಕ್ತಿ ಸಿಗಲಿದೆ. ಹುಬ್ಬಳ್ಳಿ-ಬೆಂಗಳೂರು, ಹುಬ್ಬಳ್ಳಿ- ಮುಂಬೈ, ಹುಬ್ಬಳ್ಳಿ-ಜಬಲ್ಪುರ್, ಹುಬ್ಬಳ್ಳಿ-ದೆಹಲಿ ಮಧ್ಯೆ ವಿಮಾನಯಾನ ಆರಂಭವಾಗಲಿದೆ.

ಆ. 1ರಿಂದ ಸ್ಥಗಿತ: ಹುಬ್ಬಳ್ಳಿ ವಿಮಾನ ನಿಲ್ದಾಣ ಸಣ್ಣ ವಿಮಾನ ಹಾರಾಟಕ್ಕೆ ಮಾತ್ರ ಸೀಮಿತವಾಗಿತ್ತು. ಹೀಗಾಗಿ ಇದನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸಲು ನಿರ್ಧರಿಸಲಾಗಿತ್ತು, ಈ ನಿಟ್ಟಿನಲ್ಲಿ ನಾಗರಿಕ ವಿಮಾನಯಾನ ನಿರ್ದೇಶನಾಲಯದ ಸೂಚನೆ ಮೇರೆಗೆ ಕಳೆದ ಜೂನ್‌ನಲ್ಲಿ ರನ್ ವೇ ವಿಸ್ತರಣೆ ಕಾರ್ಯವನ್ನು ರು.60 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿತ್ತು. ಏತನ್ಮಧ್ಯೆ, ರನ್ ವೇ ವಿಸ್ತರಣೆ ಕಾಮಗಾರಿಯಿಂದ ಹಾರಾಟಕ್ಕೆ ತೊಂದರೆಯಾಗಲಿದೆ. ವಿಮಾನ ನಿಲ್ದಾಣದ ಅಕ್ಕಪಕ್ಕದಲ್ಲಿರುವ ಮೊಬೈಲ್ ಟವರ್, ಕಟ್ಟಡ ತೆರವುಗೊಳಿಸಬೇಕು. ಇಂಥ ಸ್ಥಿತಿಯಲ್ಲಿ ವಿಮಾನ ಹಾರಾಟ ಮಾಡುವುದು ಅಪಾಯಕಾರಿ ಎನ್ನುವ ಕಾರಣಕೊಟ್ಟು ಸ್ಪೈಸ್‌ಜೆಟ್ ಆಗಸ್ಟ್ 1ರಿಂದ ಸಂಚಾರ ಸ್ಥಗಿತಗೊಳಿಸಿತ್ತು,

ಈ ವೇಳೆ  ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ, ತಾವು ಕೈಗೊಳ್ಳುವ  ಕಾಮಗಾರಿಯಿಂದ ಸಣ್ಣ ವಿಮಾನ ಸಂಚಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಹೀಗಾಗಿ ವಿಮಾನ ಹಾರಾಟ ಸ್ಥಗಿತಗೊಳಿಸುವುದು ಬೇಡ  ಎಂದು ಮನವಿ ಮಾಡಿಕೊಂಡಿದ್ದರೂ ಸ್ಪೈಸ್‌ಜೆಟ್ ಸಂಸ್ಥೆ ಯಾವುದೇ ಅಪಾಯ ತಂದುಕೊಳ್ಳಲು ಸಿದ್ಧವಿರಲಿಲ್ಲ. ಹೀಗಾಗಿ ಆಗಸ್ಟ್ 1ರಿಂದ ಹುಬ್ಬಳ್ಳಿಯಿಂದ ವಿಮಾನಸೇವೆ  ಸಂಪೂರ್ಣವಾಗಿ ಬಂದ್ ಆಗಿತ್ತು.

-ಪ್ರಕಾಶ.ಎಸ್.ಶೇಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com