

ಬೆಂಗಳೂರು: ಅತ್ಯಾಚಾರ ಆರೋಪ ಎದುರಿಸುತ್ತಿರುವ ಶ್ರೀ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳು ವೈದ್ಯಕೀಯ ಪರೀಕ್ಷೆಗಾಗಿ ಶುಕ್ರವಾರ ವಿಕ್ಟೋರಿಯಾ ಆಸ್ಪತ್ರೆಗೆ ಆಗಮಿಸಿದ್ದಾರೆ.
ಹೈಕೋರ್ಟ್ ಆದೇಶದ ಹಿನ್ನಲೆಯಲ್ಲಿ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಿಐಡಿ ಅಧಿಕಾರಿಗಳು ಆಯೋಜಿಸಿದ್ದ ವೈದ್ಯಕೀಯ ಪರೀಕ್ಷೆಗೆ ನಿನ್ನೆ ರಾಘವೇಶ್ವರ ಶ್ರೀಗಳು ಗೈರು ಹಾಜರಾಗಿದ್ದರು. ಈ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಶ್ರೀಗಳಿಗೆ ನೋಟಿಸ್ ನೀಡಿದ್ದರು.
ಸಿಐಡಿ ಅಧಿಕಾರಿಗಳು ನೋಟಿಸ್ ಹಿನ್ನೆಲೆಯಲ್ಲಿ ಇಂದು ನಗರದ ವಿಕ್ಟೋರಿಯಾ ಆಸ್ಪತ್ರೆಗೆ ರಾಘವೇಶ್ವರ ಶ್ರೀಗಳು ಹಾಜರಾಗಿದ್ದಾರೆ. ವೈದ್ಯಕೀಯ ಪರೀಕ್ಷೆಯಲ್ಲಿ ಶ್ರೀಗಳ ರಕ್ತ, ಮೂತ್ರ ಹಾಗೂ ಡಿಎನ್‌ಎ ಪರೀಕ್ಷೆಗಳನ್ನು ವೈದ್ಯರು ನಡೆಸಲಿದ್ದಾರೆ.
ರಾಮಕಥಾ ಕಲಾವಿದೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಪರೀಕ್ಷೆಗೆ ಹಾಜರಾಗಬೇಕು ಎಂದು ಹೈಕೋರ್ಟ್ ಆದೇಶಿಸಿತ್ತು.
ವೈದ್ಯ ದುಗ್ಗಪ್ಪ ನೇತೃತ್ವದಲ್ಲಿ ವೈದ್ಯಕೀಯ ಪರೀಕ್ಷೆ
ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ದುಗ್ಗಪ್ಪ ಅವರ ನೇತೃತ್ವದಲ್ಲಿ ರಾಘವೇಶ್ವರ ಶ್ರೀಗಳ ವೈದ್ಯಕೀಯ ಪರೀಕ್ಷೆ ನಡೆಯುತ್ತಿದೆ.