

ಗದಗ: ಉತ್ತರ ಕರ್ನಾಟಕದಿಂದ ಆಯ್ಕೆಯಾದ ಶಾಸಕರು ಮನಸ್ಸು ಮಾಡಿದ್ದರೆ ಈ ಭಾಗದ ಬದುಕೂ ಸಹ್ಯವಾಗುವಂತೆ ಮಾಡಬಹುದಿತ್ತು. ಆದರೆ, ಜನಪ್ರತಿನಿಧಿಗಳ ಸಾಂಘಿಕ ಶಕ್ತಿಯ ಕೊರತೆ, ತಮ್ಮ ಪ್ರದೇಶದ ಬರಡಾಗಿಯೇ ಉಳಿದಿದೆ ಎಂದು ಗದಗ-ಡಂಬಳ ತೋಂಟದಾರ್ಯ ಮಠದ ಡಾ.ಸಿದ್ಧಲಿಂಗ ಸ್ವಾಮೀಜಿ ವಿಷಾದಿಸಿದ್ದಾರೆ.
ಉತ್ತರ ಕರ್ನಾಟಕದ 92 ಶಾಸಕರು, 12 ಸಂಸದರ ಪೈಕಿ ಹಲವರಿಗೆ 2007ರಲ್ಲಿ ಸರ್ಕಾರಕ್ಕೆ ಸಲ್ಲಿಕೆಯಾದ 953 ಪುಟಗಳ ನಂಜುಂಡಪ್ಪ ವರದಿಯ ಅರಿವಿಲ್ಲ. ಗೊತ್ತಿದ್ದವರು ಅನುಷ್ಠಾನದ ಬಗ್ಗೆ ಚಕಾರವೆತ್ತಿಲ್ಲ, ಆಗಲೇ 114 ತಾಲೂಕುಗಳು ಹಿಂದುಳಿದಿವೆ ಎಂದು ಸಾರಿದ್ದ ಈ ವರದಿಯನ್ನು ಹಕ್ಕೊತ್ತಾಯಾದಂತೆ ಪರಿಗಣಿಸಿ, ಒಗ್ಗೂಡಿ ಪ್ರಯತ್ನಿಸಿದ್ದರೆ ಇಲ್ಲಿಯ ಜನ ಒಂದಿಷ್ಟು ಘನತೆಯಿಂದ ಬದುಕಬಹುದಿತ್ತು ಎಂದು ಹೇಳಿದ್ದಾರೆ.
ಉತ್ತರ ಕರ್ನಾಟಕ ಎಂದೊಡನೆ ನೆನಪಾಗುವುದು ಬರಗಾಲದಿಂದ ಬಸವಳಿದು, ಗುಳೆ ಹೋಗುವ ಜನ. ಇಲ್ಲವೇ ಭಯಂಕರ ನೆರೆ ಹಾವಳಿಗೆ ತುತ್ತಾಗಿ ನಿರ್ಗತಿಕರಾಗುವ, ಕುಸಿದ ಮನೆಗಳ ಅಡಿಯಲ್ಲಿ ಹಾಗೂ ಹರಿವ ನದಿಗಳಲ್ಲಿ ಹೆಣವಾಗುವ ನಿಷ್ಪಾಪಿ ಜನತೆ, ಹಳ್ಳಿಗಳಿರಲಿ, ಪಟ್ಟಣಗಳಲ್ಲೂ ಹಾಳುಬಿದ್ದ ರಸ್ತೆಗಳು, ಬಯಲು ಶೌಚಾಲಯದ ನಿರ್ಲಜ್ಜ ವ್ಯವಸ್ಥೆ, ಶಿಕ್ಷಕರಿಲ್ಲದ ಶಾಲೆಗಳು, ವಿದ್ಯುತ್ತಿಲ್ಲದ ಗ್ರಾಮಗಳು, ಮನುಕುಲಕ್ಕೆ ಕಳಂಕವಾದ ದೇವದಾಸಿ ಪದ್ಧತಿ, ಕಾಗದದಲ್ಲಿ ಮಾತ್ರ ಕಾಣುವ ಯೋಜನೆಗಳು, ವಿದೇಶ ಪ್ರವಾಸಕ್ಕೆ ಹೋಗುವ ಶಾಸಕರು, ಸ್ವದೇಶದಲ್ಲೇ ಪರದೇಶಿಗಳಾದ ಪ್ರಜೆಗಳು, ಬಂದೂಕಿನ ನಳಿಕೆಗೆ ಗುರಿಯಾಗುವ ಅನ್ನದಾತರು, ಭಾರತದ ಗಡಿಯಂಚಿನಿಂದ ಬರುವ ಯುವ ಸೈನಿಕರ ಶವಗಳು, ಅವುಗಳೆದುರಿಗೆ ಕಣ್ಣೀರಾಗಿ ಮರುದಿನ ವೃತ್ತಪತ್ರಿಕೆಗಳಲ್ಲಿ ಸುದ್ದಿಯಾಗಿ ಬೀಗುವ ಮುಖಂಡರು.
ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಅಲ್ಲದೇ ಇಲ್ಲಿ ಸ್ಥಾಪಿತವಾಗುವ ವಿಶ್ವವಿದ್ಯಾಲಯಗಳ ಕುಲಪತಿಗಳಲ್ಲಿ ಶೇ.5ರಷ್ಟು ಉತ್ತರ ಕರ್ನಾಟಕದವರಿಲ್ಲ ಎಂಬುದು ಐತಿಹಾಸಿಕ ವ್ಯಂಗ್ಯ ಎಂದು ಶ್ರೀಗಳು ಖೇದ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಜನರಿಗೆ ಅನ್ಯಾಯವಾಗಿದ್ದರಿಂದಲೇ ಪ್ರತ್ಯೇಕ ರಾಜ್ಯದ ಕೂಗು ಎದ್ದಿದೆ. ಹೈ-ಕ ಭಾಗದ ವೈಜನಾಥ ಪಾಟೀಲರೂ ಇದೇ ಬೇಡಿಕೆ ಇಟ್ಟಿದ್ದರು. 1990ರ ದಶಕದಲ್ಲಿ ವಿಪಕ್ಷ ನಾಯಕರಾಗಿದ್ದ ಎಚ್ಕೆ ಪಾಟೀಲರೂ ಈ ಭಾಗಕ್ಕೆ ಆದ ಅನ್ಯಾಯ ವಿವರಿಸುವ ಹೊತ್ತಗೆ ಪ್ರಕಟಿಸಿದ್ದರು. ನಮ್ಮ ಜನಪ್ರತಿನಿಧಿಗಳು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಉತ್ತರ ಕರ್ನಾಟಕ ಸರ್ವಾಂಗೀಣ ಪ್ರಗತಿಗಾಗಿ ಪಕ್ಷಭೇದ ಮರೆತು ಸಂಕಲ್ಪ ಮಾಡಬೇಕು.
ಮುಗ್ಧ ಹಾಗೂ ಶ್ರಮಿಕ ಜನತೆಯ ಬದುಕು ಸ್ವಚ್ಛ, ಸುಂದರ, ಆರೋಗ್ಯ ಪೂರ್ಣವಾಗಲು ಶ್ರಮಿಸಬೇಕು. ಬೆಳಗಾವಿಯ ಸುವರ್ಣಸೌಧ ನಿರ್ಮಾಣಗೊಳ್ಳಲು 450 ಕೋಟಿ ಖರ್ಚಾಗಿದೆ. ವರ್ಷದಲ್ಲೊಮ್ಮೆ ಅಧಿವೇಶನ ನಡೆಸಲು ಇಷ್ಟೊಂದು ಖರ್ಚು ಅಗತ್ಯವೇ?.
ನಂಜುಂಡಪ್ಪ ವರದಿಯನ್ನು ಅನುಲಕ್ಷಿಸಿ, ಉತ್ತರ ಕರ್ನಾಟಕ ಅಭಿವೃದ್ಧಿ ಮಾಡುವ ಇಚ್ಛಾಶತಕ್ತಿ ಇದ್ದರೆ, ಕೆಲವು ಇಲಾಖೆಗಳನ್ನಾದರೂ ಸುವರ್ಣಸೌಧಕ್ಕೆ ಸ್ಥಳಾಂತರಿಸಬೇಕು ಎಂದು ಸ್ವಾಮೀಜಿ ಒತ್ತಾಯಿಸಿದ್ದಾರೆ.